ಶತಕೋಟಿ ಚೀನೀಯರು ಕುಪ್ಪಳಿಸಿದಾಗ...

7

ಶತಕೋಟಿ ಚೀನೀಯರು ಕುಪ್ಪಳಿಸಿದಾಗ...

Published:
Updated:

ಇದು ಉಲ್ಕಾವೃಷ್ಟಿಯ ವಾರ. ಇಂದು ರಾತ್ರಿ ಹತ್ತರ ನಂತರ ಪೂರ್ವ ದಿಕ್ಕಿನ ಆಕಾಶದತ್ತ ನೋಡಿ. ಪ್ರತಿ ಒಂದೆರಡು ನಿಮಿಷಗಳಿಗೊಮ್ಮೆ ಬಂಗಾರದ ಬಾಣದಂತೆ ಉಲ್ಕೆಯೊಂದು ಉದ್ದ ಗೀರು ಮಾಡಿ ಮಾಯವಾಗುತ್ತದೆ. ಒಂದರ ನಂತರ ಒಂದರಂತೆ ಗಂಟೆಗೆ 30-40 ಉಲ್ಕೆಗಳು ರಾತ್ರಿಯಿಡೀ ಉದುರುತ್ತಿರುತ್ತವೆ.ಕಳೆದ ಐದಾರು ರಾತ್ರಿಗಳಿಂದ ಈ ಅಚ್ಚರಿ ಘಟಿಸುತ್ತಿದೆ. ಮೊನ್ನೆ ಮಂಗಳವಾರ ರಾತ್ರಿ ಗರಿಷ್ಠ, ಅಂದರೆ ಗಂಟೆಗೆ ನೂರು ಉಲ್ಕೆಗಳು ಕಾಣಿಸುತ್ತಿದ್ದವು. ನಾಳೆ, ನಾಡಿದ್ದು ಅವು ಕಮ್ಮಿಯಾಗುತ್ತ ಹೋಗುತ್ತವೆ. ಮತ್ತೆ ಮುಂದಿನ ವರ್ಷ ಡಿಸೆಂಬರ್‌ನಲ್ಲೇ ಅವು ಅಷ್ಟೊಂದು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತವೆ. ಜೆಮಿನಿ (ಮಿಥುನ) ನಕ್ಷತ್ರಪುಂಜದಿಂದ ಬಂದಂತೆ ಕಾಣುವುದರಿಂದ ಇವಕ್ಕೆ ‘ಜೆಮಿನಿಡ್’ ಉಲ್ಕಾಪಾತ ಎನ್ನುತ್ತಾರೆ. ಹೀಗೇ ಆಗಸ್ಟ್‌ನಲ್ಲಿ ಪರ್ಸೀಸ್ ಪುಂಜದಿಂದ ‘ಪರ್ಸೀಡ್’ ಹಾಗೂ ನವೆಂಬರ್‌ನಲ್ಲಿ ಲಿಯೊ (ಸಿಂಹ) ರಾಶಿಯಿಂದ ‘ಲಿಯೊನಿಡ್’ ಉಲ್ಕಾವೃಷ್ಟಿ ಆಗುತ್ತದೆ. ಆದರೆ ಎಲ್ಲಕ್ಕಿಂತ ತೇಜದ್ದು ಮತ್ತು ಕೌತುಕದ್ದು ಈಗಿನ ಈ ಜೆಮಿನಿಡ್.ಉಲ್ಕೆಗಳು ದೂರದ ನಕ್ಷತ್ರಗಳಿಂದ ಬರುವುದಿಲ್ಲ. ನಮ್ಮ ಸೌರಮಂಡಲದಲ್ಲೇ ಅಲ್ಲಲ್ಲಿ ಪುಡಿಚೆಂಡುಗಳು ಭೂಮಿಗಿಂತ ಬೇರೆ ಕಕ್ಷೆಯಲ್ಲಿ, ವಿಭಿನ್ನ ವೇಗದಲ್ಲಿ ಸೂರ್ಯನನ್ನು ಸುತ್ತುತ್ತಿರುತ್ತವೆ. ಭೂಮಿ ತನ್ನ ಕಕ್ಷೆಯಲ್ಲಿ ಸಾಗುವಾಗ ಈ ಪುಡಿರಾಶಿ ಅಡ್ಡಬರುತ್ತದೆ. ಭೂಮಿ ಅದನ್ನು ಸೀಳಿಕೊಂಡು ಸಾಗುವಾಗ ಕೋಟ್ಯಂತರ ಪುಡಿಗಳು ವಾತಾವರಣದ ಘರ್ಷಣಕ್ಕೆ ಸಿಕ್ಕು ಉಲ್ಕೆಗಳಾಗಿ ಉರಿದು ಬಾಣದಂತೆ ಚಲಿಸಿ ಕರಕಲಾಗಿ ಚದುರುತ್ತವೆ. ಅಪರೂಪಕ್ಕೆ ಮುಷ್ಟಿಗಾತ್ರದ ಬಂಡೆಗಲ್ಲು ಸಿಕ್ಕರಂತೂ ಬೆಂಕಿಯ ಚೆಂಡಿನಂತೆ ಜಾಸ್ತಿ ಉರಿದು ಸುಂದರ ಶೋ ಕೊಡುತ್ತವೆ. ನೆಲದ ಮೇಲಿದ್ದ ನಮಗೆ ಈ ಉಲ್ಕೆಗಳು ದೂರದ ತಾರಾಪುಂಜದಿಂದ ಬಂದಂತೆ ಕಾಣುವುದರಿಂದ ಆಯಾ ತಾರಾಪುಂಜಗಳ ಹೆಸರನ್ನೇ ಅವಕ್ಕೆ ಇಡಲಾಗಿದೆ.ದೂಳಿನ ಪುಡಿರಾಶಿ ಹೇಗೆ ಬಂದವು, ಸೂರ್ಯನ ಸುತ್ತ ಏಕೆ ಸುತ್ತುತ್ತವೆ ಎಂಬುದಕ್ಕೆ ಎರಡು ಮುಖ್ಯ ಕಾರಣ ಇವೆ: ಹಿಂದೆಂದೋ ಇಡಿಯಾಗಿದ್ದ ಕ್ಷುದ್ರಗ್ರಹವೊಂದು ಯಾವುದೋ ಕಾರಣದಿಂದ ಸಿಡಿದು ಪುಡಿಯಾಗಿರಬಹುದು. ಸಿಡಿದರೂ ದೂರ ಹೋಗಲಾರದೆ, ಹಿಂದೀ ಚಿತ್ರರಂಗದ ಕಪೂರ್ ಮನೆತನದವರ ಹಾಗೆ ಪರಸ್ಪರ ಸನಿಹದಲ್ಲೇ  ವಾಸಿಸುತ್ತವೆ. ಇವರು ಬಾಲಿವುಡ್ ಸುತ್ತ ಸುತ್ತುವ ಹಾಗೆ ಅವೂ ಅಭ್ಯಾಸಬಲದಿಂದ ಸೂರ್ಯನ ಪ್ರದಕ್ಷಿಣೆ ಹಾಕುತ್ತಿರುತ್ತವೆ. ಎರಡನೆಯ ಕಾರಣವೆಂದರೆ, ಧೂಮಕೇತುವೊಂದು ಸೂರ್ಯನ ಸಮೀಪ ಬಂದಾಗ ಅದರ ತಲೆಯ ಹಿಮಶಿಲೆ ಕರಗಿ ಅದರಲ್ಲಿದ್ದ ತಾರಾಪುಡಿಯೆಲ್ಲ ಭೂಮಿಯ ಪಥಕ್ಕೆ ಅಡ್ಡ ಬಂದಾಗ ಉಲ್ಕಾಬಾಣ ಸುರಿಸುತ್ತವೆ.ಜೆಮಿನಿಡ್ ಉಲ್ಕಾಪಾತಕ್ಕೆ ಇವೆರಡೂ ಕಾರಣವಲ್ಲ. ಏಕೆಂದರೆ ಈ ಉಲ್ಕೆಗಳೆಲ್ಲ ಒಂದು ಇಡಿಯಾದ ಕ್ಷುದ್ರಗ್ರಹದಿಂದ ಬರುತ್ತಿವೆ ಎಂಬುದು 1983ರಲ್ಲಿ ಪತ್ತೆಯಾಯಿತು. ಪುಟ್ಟ, ಐದು ಕಿಲೊಮೀಟರ್ ದಪ್ಪದ ಅದಕ್ಕೆ ‘ಫೇಥಿಯಾನ್’ ಎಂದು ಹೆಸರಿಡಲಾಯಿತು. ಮುಂದಿನ ಕೌತುಕದ ಪ್ರಶ್ನೆ ಏನೆಂದರೆ ಇದು ಯಾಕೆ, ಬಳ್ಳಾರಿ-ಹೊಸಪೇಟೆಯ ಗಣಿ ಲಾರಿಗಳ ಹಾಗೆ ದೂಳನ್ನು ಕೊಡವುತ್ತ ಸಾಗುತ್ತದೆ?ಕಳೆದ ವರ್ಷ ಫೇಥಿಯಾನ್ ಇನ್ನೊಂದು ಚಮತ್ಕಾರವನ್ನು ಪ್ರದರ್ಶಿಸಿತು. ಸೂರ್ಯನ ಬಳಿ ಸಾಗುವಾಗ ಅದು ಥೇಟ್ ಧೂಮಕೇತುವಿನ ಹಾಗೆ ಕಿಡಿಗಳನ್ನು ಸಿಡಿಸಿ ಮತ್ತೆ ಇಡಿಯಾಗಿ ಈಚೆ ಬಂತು. ಹಾಗಿದ್ದರೆ ಇದೊಂದು ಶಿಲಾಧೂಮಕೇತು ಎಂದು ಕೆಲವರು ತರ್ಕಿಸಿದರು. ಈಚಿನ ಶೋಧದ ಪ್ರಕಾರ ಮಂಗಳ ಮತ್ತು ಗುರುವಿನ ನಡುವೆ ತಂಡ ಕಟ್ಟಿಕೊಂಡು ಸುತ್ತುವ ನೂರಾರು ಕ್ಷುದ್ರಗ್ರಹಗಳ ಪೈಕಿ 340 ಕಿಮೀ ಅಗಲದ ‘ಪಲ್ಲಾಸ್’ ಎಂಬ ಕ್ಷುದ್ರಗ್ರಹದ ಒಂಬತ್ತು ತುಣುಕುಗಳಲ್ಲಿ ಇದೂ ಒಂದು. ಆದರೆ ಇದು ಮಾತ್ರ ಅರಳು ಹುರಿದಂತೆ ಕಲ್ಲುಗಳನ್ನೇಕೆ ಸಿಡಿಸುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.  ಆಕಾಶದ ಉಲ್ಕೆಗಳನ್ನು ಬಿಟ್ಟು ಈಚೆ ಬರೋಣ. ಈಚೀಚೆಗೆ ಮಾಧ್ಯಮಗಳಲ್ಲೂ ಉಲ್ಕೆಗಳ ಸುರಿಮಳೆ ಆಗುತ್ತಿದೆ. ಒಂದೆಡೆ ವಿಕಿಲೀಕ್ಸ್ ಉಲ್ಕಾವರ್ಷ, ಇನ್ನೊಂದೆಡೆ ಟೂಜಿ- ರಾಡಿಯಾ ಉಲ್ಕಾಪಾತ. ಈ ಮಧ್ಯೆ ಕಣ್ಣು ಕೋರೈಸುವಂತೆ ಒಮ್ಮೆ ಒಬಾಮಾ, ಇನ್ನೊಮ್ಮೆ ಸಾರ್ಕೋಝಿ, ಇಂದು ಚೀನಾದ ವೆನ್ ಜಿಯಾಬೊ, ಅವರ ನಂತರ ರಷ್ಯದ ಪುತಿನ್ ಹೀಗೆ ಸಾಲುಸಾಲು ಛಮಕ್.ಉಲ್ಕೆಗಳನ್ನು ಕಂಡಾಕ್ಷಣ ಏನನ್ನೇ ಬಯಸಿದರೂ ಬಯಕೆ ಈಡೇರುತ್ತದೆ ಎಂಬ ನಂಬಿಕೆ ಉತ್ತರ ಭಾರತದಲ್ಲಿ ಪ್ರಚಲಿತದಲ್ಲಿದೆ. ದಿಲ್ಲಿಯಲ್ಲಿದ್ದವರು ಬಾಣ ಬಿರುಸುಗಳನ್ನೇ ಬಯಸುತ್ತಿರಬೇಕು. ಒಬಾಮಾ ಪರಮಾಣು ತಂತ್ರ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುವ ಭರವಸೆ ನೀಡಿದರೆ, ಸಾರ್ಕೋಝಿ ಅಣುಸ್ಥಾವರಗಳನ್ನೂ ಫೈಟರ್ ಜೆಟ್‌ಗಳನ್ನೂ ಪೂರೈಸಲು ವಾಗ್ದಾನ ಮಾಡಿ ಹೋಗಿದ್ದಾರೆ. ಎಲ್ಲವೂ ಬಹು ಬಿಲಿಯನ್ ಲೆಕ್ಕಾಚಾರ. ಈಗ ಚೀನಾದ ವೆನ್ ಅದೆಂಥ ಶತಕೋಟಿ ಪ್ರಸ್ತಾವನೆ ತಂದಾರು?ಪತ್ರಕರ್ತ ಜೊನಾಥಾನ್ ವ್ಯಾಟ್ಸ್ ಎಂಬಾತ ಈಚೆಗೆ ‘ಶತಕೋಟಿ ಚೀನೀಯರು ಕುಪ್ಪಳಿಸಿದಾಗ’ ಎಂಬ ಕೌತುಕದ ಶಿರೋನಾಮೆಯ ಗ್ರಂಥ ಬರೆದು ಭಾರೀ ಚರ್ಚೆಯ, ಆತಂಕದ, ಆಶಾವಾದದ ಅಲೆಗಳನ್ನು ಹಬ್ಬಿಸಿದ್ದಾನೆ. ಈತ ಬ್ರಿಟನ್ನಿನ ‘ಗಾರ್ಡಿಯನ್’ ಪತ್ರಿಕೆಯ ಪರಿಸರ ಬಾತ್ಮೀದಾರನಾಗಿ ಚೀನಾದಲ್ಲಿ 12 ವರ್ಷಗಳಿಂದ ಇದ್ದು, ಇಡೀ ದೇಶವನ್ನು ಸುತ್ತಾಡಿ ಅಲ್ಲಿನ ಅಭಿವೃದ್ಧಿಯ ವಿರಾಟ್ ರೂಪವನ್ನೂ ಅದರಿಂದಾದ ಅನರ್ಥಗಳನ್ನೂ ದಾಖಲಿಸಿದ್ದಾನೆ. ಚೀನಾದ ನೂರು ಕೋಟಿ ಪ್ರಜೆಗಳು ಒಮ್ಮೆಲೇ ಕುಪ್ಪಳಿಸಿದರೆ ಇಡೀ ಭೂಮಿಯೇ ಹೊಯ್ದಾಡಿ, ತನ್ನ ಅಕ್ಷದಿಂದ ಪಲ್ಟಿ ಹೊಡೆಯುತ್ತದೆ ಎಂದು ಅಮೆರಿಕ, ಯುರೋಪ್‌ನವರು ತಮ್ಮ ಮಕ್ಕಳಲ್ಲಿ ಭಯಬಿಂಬ ಮೂಡಿಸುತ್ತಾರೆ. ಗ್ರಂಥಕರ್ತ ವ್ಯಾಟ್ಸ್ ಚಿಕ್ಕವನಿದ್ದಾಗ ದಿನಾಲೂ ಮಲಗುವ ಮುನ್ನ ‘ದೇವರೇ, ನಮ್ಮನ್ನೆಲ್ಲ ಕಾಪಾಡು, ಚೀನೀಯರು ಏಕತ್ರವಾಗಿ ಕುಪ್ಪಳಿಸದ ಹಾಗೆ ಮಾಡು’ ಎಂದು ಪ್ರಾರ್ಥನೆ ಮಾಡುತ್ತಿದ್ದನಂತೆ.ಎಂಥವರನ್ನೂ ತಲ್ಲಣಗೊಳಿಸುವ ಅನೇಕ ಅಂಕಿ ಅಂಶಗಳು ಈ ಗ್ರಂಥದಲ್ಲಿವೆ: ಇನ್ನು ಹದಿನೈದು ವರ್ಷಗಳಲ್ಲಿ ಜಗತ್ತಿನ ಒಟ್ಟೂ ಕಟ್ಟಡಗಳಲ್ಲಿ ಅರ್ಧಪಾಲು ಚೀನಾದಲ್ಲೇ ಇರುತ್ತವೆ. ಅವುಗಳಲ್ಲಿ 50 ಸಾವಿರ ಕಟ್ಟಡಗಳು, ಅಂದರೆ ಹತ್ತು ನ್ಯೂಯಾರ್ಕ್‌ಗಳಲ್ಲಿರುವಷ್ಟು ವಸತಿ- ಕಚೇರಿಗಳು ಗಗನಚುಂಬಿಗಳೇ ಆಗಿರುತ್ತವೆ. ಅಭಿವೃದ್ಧಿಯ ಹುಚ್ಚು ಹಿಡಿಸಿಕೊಂಡಂತೆ ಚೀನೀಯರು ಕಳೆದ ಮೂವತ್ತು ವರ್ಷಗಳಲ್ಲಿ 87 ಸಾವಿರ ಅಣೆಕಟ್ಟು ಕಟ್ಟಿದ್ದಾರೆ. ಕಲ್ಲಿದ್ದಲು ಗಣಿಗಳಲ್ಲಿ 176 ಸಾವಿರ ಕಾರ್ಮಿಕರು ಜೀವ ತೆತ್ತಿದ್ದಾರೆ; ವಾರಕ್ಕೊಂದು ಹೊಸ ಉಷ್ಣ ವಿದ್ಯುತ್ ಸ್ಥಾವರ ತಲೆ ಎತ್ತುತ್ತಿದೆ; ಉದ್ಯಮಗಳ ಕಿಷ್ಕಿಂಧೆ ಎನಿಸಿದ ಗ್ವಾಂಗ್‌ಡೋಂಗ್ ಮತ್ತು ಫ್ಯುಜಿಯನ್ ಪ್ರಾಂತಗಳಿಂದ 830 ಕೋಟಿ ಟನ್ ಕಚಡಾ ದ್ರವ್ಯಗಳನ್ನು ಸಮುದ್ರಕ್ಕೆ ಬಿಟ್ಟಿದ್ದಾರೆ.1997ರಲ್ಲಿ ಇಡೀ ಜಗತ್ತು ಉತ್ಪಾದಿಸಿದಷ್ಟು ಕಚಡಾ ತಿಪ್ಪೆಗಳನ್ನು ಅದೊಂದೇ ದೇಶ 2006ರಲ್ಲಿ ಬಿಸಾಕಿದೆ. ಅಲ್ಲಿ ಕಾರು, ಲಾರಿ, ಹಡಗು, ರೈಲು, ವಿಮಾನಗಳ ಸಂಖ್ಯೆ ಅದೆಷ್ಟು ಹೆಚ್ಚಾಗಿದೆ ಎಂದರೆ ಇಡೀ ಪೃಥ್ವಿಯ ವಾಯುಮಂಡಲದಲ್ಲಿನ ಮಲಿನ ಕಣಗಳಲ್ಲಿ ಅರ್ಧ ಪಾಲು ಚೀನಾದಿಂದಲೇ ಹೊಮ್ಮಿದ್ದಾಗಿದೆ.ಈ ಮೂರು ದಶಕಗಳಲ್ಲಿ ಅಲ್ಲಿ ಧ್ವಂಸವಾದ ಅರಣ್ಯಗಳನ್ನೂ ಬತ್ತಿ ಹೋದ ನದಿಗಳನ್ನೂ ಕೆಂದೂಳಿನ ಮರುಭೂಮಿಯಾದ ಸರೋವರಗಳನ್ನೂ ಈತ ಪಟ್ಟಿ ಮಾಡುತ್ತ ಹೋಗುತ್ತಾನೆ. ಮೃಗಾಲಯಗಳಲ್ಲಿ ಪಂಜರಗಳ ಎದುರು, ಆಯಾ ಪ್ರಾಣಿಯನ್ನು ಹೆಸರಿಸಿ, ಅದರ ಯಾವ ಯಾವ ಅಂಗಗಳು ತಿನ್ನಲು ಹಾಗೂ ಔಷಧಕ್ಕೆ ಯೋಗ್ಯ ಎಂಬ ಫಲಕವನ್ನು ಹಾಕುವ ಪರಿಪಾಠ 1993ರವರೆಗೂ ಇತ್ತೆಂಬುದನ್ನು ಮನಕಲಕುವಂತೆ ವಿವರಿಸುತ್ತಾನೆ. ಕ್ಯಾನ್ಸರ್‌ನಿಂದ ನರಳುತ್ತಿರುವ ಗ್ರಾಮಗಳ ಕರುಣಾಜನಕ ಚಿತ್ರಣ ನೀಡುತ್ತಾನೆ. ಪ್ರತಿವರ್ಷ ಬಳಸಿ ಬಿಸಾಕುವ 120 ಶತಕೋಟಿ ಊಟದ ಕಡ್ಡಿಗಳಿಗೆಂದು ನೆಲಸಮವಾಗುವ ಅರಣ್ಯಗಳ ಬಗ್ಗೆ ಹೇಳುತ್ತಾನೆ. ಜೀವದ್ರವ್ಯ ಅನ್ನಿ, ತಾಂತ್ರಿಕ ಸಾಮಗ್ರಿ ಅನ್ನಿ, ಶೋಕಿವಸ್ತು ಅನ್ನಿ, ಶಸ್ತ್ರಾಸ್ತ್ರ ಅನ್ನಿ, ಸಂಶೋಧನೆ ಅನ್ನಿ, ನಿರ್ಮಾಣ ಅನ್ನಿ, ಜಗತ್ತಿನ ಎಲ್ಲೇ ಯಾರೇ ಏನೇ ಮಾಡಿದರೂ ಅದಕ್ಕಿಂತ ಶೀಘ್ರವಾಗಿ, ಉತ್ತಮವಾಗಿ, ಎಗ್ಗಿಲ್ಲದೆ ಮಾಡಿ ಬಿಸಾಕುವ ಅವರು ಈಗೀಗ ತಮ್ಮ ನೆಲ ಸಾಲದೆಂದು ಬೇರೆ ದೇಶಗಳ ನಿಸರ್ಗ ಸಂಪತ್ತುಗಳಿಗೆ ಲಗ್ಗೆ ಹಾಕುತ್ತಿರುವ ಪರಿಯನ್ನು ವರ್ಣಿಸುತ್ತಾನೆ. ಖಚಿತ, ನಿರ್ವಿವಾದದ ಅಂಕಿ-ಅಂಶಗಳನ್ನು ಮುಂದಿಡುತ್ತಾನೆ.ಚೀನಾದ ಈ ಪರಿಯ ಅಭಿವೃದ್ಧಿಯ ದಾಂಗುಡಿ ನಮ್ಮ ಕಾಲ ಬಳಿಯೂ ಬಂದಿದೆ. ಗೋವಾ, ಬಳ್ಳಾರಿಗಳೆಲ್ಲ ಅದುರಿನ ಉರಿ ಬಾಣಲೆಯಾಗಿದ್ದು, ಬಂದರುಗಳಲ್ಲೆಲ್ಲ ದೂಳಿನ ರಾಡಿ ರಾಚಿದ್ದು, ಜನನಾಯಕರ ನೈತಿಕತೆ ನೆಲಕಚ್ಚಿದ್ದು, ಊರೂರೂ ಪ್ಲಾಸ್ಟಿಕ್ ತಿಪ್ಪೆಗುಂಡಿಯಾಗಿದ್ದು ಎಲ್ಲದರಲ್ಲೂ ಚೀನೀ ಹೆಜ್ಜೆಗುರುತು ಢಾಳಾಗಿ ಕಾಣುತ್ತದೆ. ಅವಸರದ ಅಭಿವೃದ್ಧಿಯ ಫಲಶ್ರುತಿಗಳು ನಮ್ಮಲ್ಲೂ ಕಾಣುತ್ತಿವೆ.ನಮ್ಮಲ್ಲಿ ಕಾಣದ ಅನೇಕ ಸಂಗತಿಗಳು ಅಲ್ಲಿ ಕಾಣುತ್ತಿವೆ. ಚೀನೀಯರು ತಮ್ಮ ತಪ್ಪನ್ನು ತ್ವರಿತವಾಗಿ ತಿದ್ದಿಕೊಳ್ಳುತ್ತಿದ್ದಾರೆ. ಇಂದು ಜಗತ್ತಿನ ಅತಿ ಹೆಚ್ಚು ಸೌರ ವಿದ್ಯುತ್ ಫಲಕಗಳು, ಗಾಳಿಯಂತ್ರಗಳು ಅಲ್ಲಿ ಕಾಣುತ್ತಿವೆ. ಪೋಪ್ಲಾರ್ ವೃಕ್ಷಗಳ ಸೂಪರ್ ತಳಿಗಳನ್ನು ಉತ್ತರ ಚೀನಾದಲ್ಲಿ ಕೋಟಿಗಟ್ಟಲೆ ಬೆಳೆಸುತ್ತಿದ್ದಾರೆ. ಸಮುದ್ರಬೇಟೆಗಿಂತ ಜಾಸ್ತಿ ಮೀನನ್ನು ಒಳನಾಡಿನಲ್ಲೇ ಪಡೆದ ಮೊದಲ ದೇಶವೆಂಬ ಅಗ್ಗಳಿಕೆ ಗಳಿಸಿದ್ದಾರೆ. ಕಲ್ಲಿದ್ದಲನ್ನು ದ್ರವೀಕರಿಸಿ ಉರಿಸುವ ಶುದ್ಧ ಉಷ್ಣಸ್ಥಾವರಗಳು ತಲೆ ಎತ್ತುತ್ತಿವೆ. ಕಡುಭ್ರಷ್ಟರನ್ನು ಕಚಕ್ಕೆಂದು ಮುಗಿಸಬಲ್ಲ ಸಂಚಾರಿ ಶವಗಾಡಿಗಳನ್ನು ನ್ಯಾಯಾಲಯದ ಬಳಿಯೇ ನಿಲ್ಲಿಸಿರುತ್ತಾರೆ.ನಮ್ಮಲ್ಲಿದ್ದಷ್ಟು ಶತಕೋಟ್ಯಧೀಶರೂ ಅಲ್ಲಿಲ್ಲ. ನಮ್ಮಲ್ಲಿದ್ದಷ್ಟು ಕಡುಬಡವರೂ ಅಲ್ಲಿಲ್ಲ. ನಮ್ಮಂತೆ ಅಲ್ಲಿನ  ಹೆಚ್ಚಿನ ಶತಕೋಟ್ಯಧೀಶರು ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿಲ್ಲ; ಬದಲಿಗೆ ದಕ್ಷ ಉತ್ಪಾದನೆಯಲ್ಲಿ, ಉಪಯುಕ್ತ ತಂತ್ರಜ್ಞಾನದಲ್ಲಿ ಶತಕೋಟಿ ಗಳಿಸುತ್ತಿದ್ದಾರೆ. ನಮ್ಮಲ್ಲಿ ಪ್ರತಿ ಲಕ್ಷ ಪ್ರಜೆಗೆ 14 ಸಂಶೋಧಕರಿದ್ದರೆ ಅಲ್ಲಿ 465 ಜನರಿದ್ದಾರೆ; ನಾವು ವಿಜ್ಞಾನಕ್ಕೆ ಸುರಿಯುವ ನಾಲ್ಕು ಪಟ್ಟು ಹೆಚ್ಚು ಹಣವನ್ನು ಅವರು ಅದಕ್ಕೆ ವಿನಿಯೋಗಿಸುತ್ತಾರೆ. ನಮ್ಮಂತೆ ಅವರು ಎಂಜಿನಿಯರ್‌ಗಳನ್ನು ವಿಜ್ಞಾನಿಗಳನ್ನು ರಫ್ತು ಮಾಡುತ್ತಿಲ್ಲ; ಬದಲಿಗೆ ಸ್ವದೇಶದಲ್ಲೇ ಬಳಸಿಕೊಳ್ಳುತ್ತಿದ್ದಾರೆ.ಏಕೆಂದರೆ ಅಲ್ಲಿ ಹೈಡ್ರಾಲಿಕ್ ಎಂಜಿನಿಯರ್ ಒಬ್ಬರು ರಾಷ್ಟ್ರಪತಿ ಆಗಿದ್ದಾರೆ; ಭೂವಿಜ್ಞಾನಿಯೊಬ್ಬರು ಪ್ರಧಾನಿಯಾಗಿದ್ದಾರೆ. ಆ ಪ್ರಧಾನಿ ಈ ಪ್ರಧಾನಿಗೆ ಎಂಥ ಸುಖಾಕ್ರಮಣದ ಸಂದೇಶ ತಂದಿದ್ದಾರೊ, ಎರಡೂ ದೇಶಗಳ ಶತಕೋಟಿ ಪ್ರಜೆಗಳು ಒಟ್ಟಾಗಿ ಕುಪ್ಪಳಿಸುವ ಪ್ರಸ್ತಾವನೆ ಇಡುತ್ತಾರೊ ಅಥವಾ ಸುಸ್ಥಿರ ಅಭಿವೃದ್ಧಿಗಾಗಿ ನಾವೆಲ್ಲ ಪಶ್ಚಿಮಕ್ಕಲ್ಲ, ಪೂರ್ವಕ್ಕೆ ನೋಡುವಂತೆ ಮಾಡುತ್ತಾರೊ ನೋಡಬೇಕು.ಅಭಿವೃದ್ಧಿಯ ಈ ವಿಚಾರ- ವಿಕಾರಗಳನ್ನೆಲ್ಲ ಬದಿಗಿಡಿ. ನಗರದ ಬೆಳಕಿನ ಮಾಲಿನ್ಯದಿಂದ ದೂರವಾಗಿ, ಮಿಥುನರಾಶಿಯಿಂದ ಬರುವ ಮನ್ಮಥಬಾಣಗಳನ್ನು ನೋಡಿ ಚಕಿತರಾಗೋಣ. ಉಲ್ಕಾಪಾತ ನೋಡಲು ಹೈಟೆಕ್ ತಂತ್ರಜ್ಞಾನ ಬೇಕಿಲ್ಲ. ಹಳ್ಳಿಯ ನಿಚ್ಚಳ ಆಕಾಶ ಸಾಕು; ಸ್ವೆಟರ್ ತೊಟ್ಟು ಸಂಗಾತಿಯೊಂದಿಗೆ ರಾತ್ರಿ ಅಂಗಳಕ್ಕಿಳಿದು ಬರಿಗಣ್ಣಿನಲ್ಲಿ ಆಕಾಶ ನೋಡೋಣ. ಪಶ್ಚಿಮಕ್ಕಲ್ಲ, ಪೂರ್ವಕ್ಕೆ ಮುಖ ಮಾಡಿ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry