ಶತಮಾನದ ಇತಿಹಾಸ ಹೇಳುವ `ಅರಳಿಹಳ್ಳಿ'

7

ಶತಮಾನದ ಇತಿಹಾಸ ಹೇಳುವ `ಅರಳಿಹಳ್ಳಿ'

Published:
Updated:

ಎರಡು ಶತಮಾನಕ್ಕೂ ಅಧಿಕ ಇತಿಹಾಸ ಹೇಳುವ ಭದ್ರಾವತಿ ತಾಲ್ಲೂಕು ಅರಳಿಹಳ್ಳಿ ಗ್ರಾಮ ಅಭಿವೃದ್ಧಿಯ ನಾಗಾಲೋಟದಲ್ಲಿ ತನ್ನ ಐತಿಹ್ಯದ ಬದುಕನ್ನು ಮರೆ ಮಾಚುತ್ತಾ ಸಾಗಿದೆ.ನಗರದ ಚನ್ನಗಿರಿ ರಸ್ತೆಯಲ್ಲಿ 8  ಕಿ.ಮೀ. ಸಾಗಿದರೆ ಮುಖ್ಯರಸ್ತೆಯ ಎರಡು ಬದಿಯಲ್ಲಿ ಅವರಿಸಿರುವ `ಅರಳಿಹಳ್ಳಿ' ಕೃಷಿ ಆಧಾರಿತ ಚಟುವಟಿಕೆ ಮೂಲಕ ಪ್ರಗತಿಪಥದಲ್ಲಿ ಸಾಗಿದೆ.ಗ್ರಾಮದಲ್ಲಿ ಒಟ್ಟು 900 ಕುಟುಂಬದ, 4,000ಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. 300ರಿಂದ 400 ಸಂಖ್ಯೆಯಲ್ಲಿ ಹಿಂದುಳಿದ ಜಾತಿ, ವರ್ಗಕ್ಕೆ ಸೇರಿದ ಜನರಿದ್ದು, 500 ಕುಟುಂಬಗಳು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಪಟ್ಟಿಯಲ್ಲಿದ್ದಾರೆ.15 ಮಂದಿ ಸರ್ಕಾರಿ ನೌಕರರು ಗ್ರಾಮದಲ್ಲಿದ್ದು, ಶೇ 60ಮಂದಿ ವಿದ್ಯಾವಂತರಿದ್ದಾರೆ. 20ಕ್ಕೂ ಅಧಿಕ ಮಂದಿ ಪದವೀಧರರಿದ್ದು, 25ಮಂದಿ ಅಂಗವಿಕಲರಿದ್ದಾರೆ. ಲಿಂಗಾಯಿತ, ಮಡಿವಾಳ, ದೇವಾಂಗ, ಉಪ್ಪಾರ, ಮುಸಲ್ಮಾನ, ತಮಿಳರು, ಕೊರಮರು, ಬೋವಿ ಸಮುದಾಯ ಬಂಧುಗಳು ಸಾಮರಸ್ಯದಿಂದ ಬದುಕು ನಡೆಸಿರುವ ಗ್ರಾಮ ಅರಳಿಹಳ್ಳಿ.ಹೆಸರಿಗೊಂದು ಇತಿಹಾಸ

ವಲಸಿಗರಿಂದ ಬೆಳೆದ ಈ ಗ್ರಾಮ ಸುಮಾರು 200 ವರ್ಷಕ್ಕೂ ಅಧಿಕ ಇತಿಹಾಸ ಹೊತ್ತಿದೆ. ಗ್ರಾಮದ ಸುತ್ತಾ ಅವರಿಸಿದ್ದ ಅರಳಿಮರ, ಅರಳಿಮರದ ಊರು ಎಂದು ಜನಜನಿತವಾಗಿ ಕ್ರಮೇಣ `ಅರಳಿಹಳ್ಳಿ' ಎಂದಾಗಿದೆ ಎನ್ನುತ್ತಾರೆ ಕೆ.ಎನ್. ಚಂದ್ರಪ್ಪ.ಗ್ರಾಮದಲ್ಲಿ ಮೊದಲು ನೆಲೆಕಂಡ ಕುಟುಂಬಗಳಾದ ಗೌಡರ ವಠಾರ, ಕರಡೆಯವರ ವಠಾರ... ಈಗಲೂ ತಮ್ಮ ಮನೆತನದ ಹೆಸರನ್ನು ಉಳಿಸಿಕೊಂಡು ಬಂದಿವೆ. ಇಲ್ಲಿನ ಮೊದಲ ನಿವಾಸಿಗಳು ಹೊನ್ನಾಳಿ ತಾಲ್ಲೂಕು ಕ್ಯಾಸಿನಕೆರೆ ಗ್ರಾಮದಿಂದ ಬಂದು ನೆಲೆಸಿದ್ದಾರೆ ಎನ್ನುವ ನಂಜುಂಡಪ್ಪ, ಈಗಲೂ ಅರಳಿಮರ ಕಾಣಬಹುದು ಎನ್ನುತ್ತಾರೆ.ಬಳಸಕೆರೆ: ಗ್ರಾಮದ ಆರಂಭದಲ್ಲೇ ಸಿಗುವ ಬಳಸಕೆರೆ ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿದ್ದರೂ ಸಹ, ಅದು ತನ್ನ ಒಡಲಲ್ಲಿ ಐತಿಹ್ಯ ಹೊಂದಿದೆ. ಹಿಂದೆ ಇದೇ ಕೆರೆ ಇಲ್ಲಿನ ನಾಗರಿಕರ ಬದುಕಿಗೆ ಬಹುಪಯೋಗಿ ನೆಲೆಯನ್ನು ನೀಡಿತ್ತು. ಸರ್ಕಾರ ಹೂಳೆತ್ತಲು ಕ್ರಮ ಜರುಗಿಸಿದರು ಕೆಲಸ ಮಾತ್ರ ಸಮರ್ಪಕವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.ಈ ಗ್ರಾಮಕ್ಕೆ ಸೇರಿದಂತೆ ಬೆಕ್ಕಿನಕಟ್ಟೆ, ಬಳಸಕೆರೆ, ಮಳಕಟ್ಟೆ ಎಂಬ ಕೆರೆಗಳಿದ್ದವು. ಆದರೆ, ಈಗ ಎಲ್ಲವೂ ಅಷ್ಟು ಪ್ರಮಾಣದ ನೆರವನ್ನು ನೀಡುತ್ತಿಲ್ಲವಾದರೂ, ಗ್ರಾಮದ ಗಡಿಯಲ್ಲಿ ಸಾಗುವ ಮಂತ್ರಿಕೆರೆ ಇಲ್ಲಿನ ಜನರ ಜಮೀನಿನ ಹಾಯುವರಿಗೆ ನೆರವು ನೀಡಿದೆ ಎನ್ನುತ್ತಾರೆ ನಂಜುಂಡಪ್ಪ.ದೇವಾಲಯಗಳ ಗ್ರಾಮ: ಗ್ರಾಮದಲ್ಲಿ ಪ್ರತಿ ಸಮುದಾಯ, ಜನಾಂಗಕ್ಕೆ ಸೀಮಿತವಾದ ಹಲವು ದೇವಾಲಯ, ಗುಡಿ, ಪ್ರಾರ್ಥನಾ ಮಂದಿರವಿದೆ. ಊರ ಒಟ್ಟೂರಿಗೆ ಕೆಂಚಮ್ಮ, ಬಸವೇಶ್ವರ ದೇವಾಲಯವಿದೆ. ಇದರೊಟ್ಟಿಗೆ ದೊಡ್ಡಮ್ಮ, ಕೆಂಚಮ್ಮ, ಬನಶಂಕರಿ, ಅಂತರಘಟ್ಟಮ್ಮ, ವಿನಾಯಕ, ಮಾರಿಯಮ್ಮ ದೇವಸ್ಥಾನ ಹಾಗೂ ಮಸೀದಿ ಇದೆ.ಊರ ಎಲ್ಲಾ ಸಮುದಾಯದವರು ಒಂದೆಡೆ ಕಲೆತು ಮಾಡುವ ಜಾತ್ರೆ ಎರಡು ದಿನಗಳ ಕಾಲ ಪ್ರತಿವರ್ಷದ ಏಪ್ರಿಲ್, ಮೇ ತಿಂಗಳಿನಲ್ಲಿ ನಡೆಯಲಿದೆ. ಇದರ ನಡುವೆ ಶಿವರಾತ್ರಿ ದಿನದಂದು ಬಯಲಿನಲ್ಲಿರುವ ತೇರು ಮಲ್ಲೇಶ್ವರ ಉತ್ಸವದ ಆಚರಣೆ ನಡೆಯುವುದು.

ಒಂದೆಡೆ ನೆಲೆ ನಿಂತಿರುವ ಶಾಲೆ: ಕನ್ನಡ, ತಮಿಳು, ಉರ್ದು ಪ್ರಾಥಮಿಕ ಶಾಲೆ ಒಂದೆಡೆ ವಿಶಾಲವಾದ ಜಾಗದಲ್ಲಿ ನೆಲೆ ನಿಂತಿರುವುದು ಈ ಗ್ರಾಮದ ವೈಶಿಷ್ಟ್ಯ. ಇದಕ್ಕಾಗಿ ಇರುವ ಸುಮಾರು 10 ಎಕರೆ ವಿಶಾಲ ಜಾಗದಲ್ಲಿ ಪ್ರೌಢಶಾಲೆ ಸಹ ಅಚ್ಚುಕಟ್ಟಾಗಿ ನೆಲೆ ನಿಂತಿದೆ.ಇದೇ ಜಾಗದಲ್ಲಿ ಪದವಿಪೂರ್ವ ಕಾಲೇಜು ತರಬೇಕೆಂಬ ಪ್ರಯತ್ನ ನಡೆದಿದೆ. ಇದಕ್ಕಾಗಿ ಗ್ರಾಮದ ಮುಖಂಡರು, ಯುವಕರು ಚಿತ್ತ ಹರಿಸಿದ್ದಾರೆ. ಈ ಗ್ರಾಮಕ್ಕೆ ಪ್ರಾಥಮಿಕ ಶಾಲೆ 1955-56ನೇ ಸಾಲಿನಲ್ಲಿ, 1980-81ನೇ ಸಾಲಿನಲ್ಲಿ ಹೈಸ್ಕೂಲ್ ಸೌಲಭ್ಯ ದೊರೆತಿದೆ.

ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿಕೊಂಡು ಬಂದಿರುವ ಈ ಶಾಲೆ ಗ್ರಾಮಾಂತರ ಭಾಗದ ಸರ್ಕಾರಿ ಶಾಲೆಯಲ್ಲಿ ಮುಂಚೂಣಿಯಲ್ಲಿದೆ. ಇದಲ್ಲದೆ ಗ್ರಾಮದಲ್ಲಿ 3ಅಂಗನವಾಡಿ ಕೇಂದ್ರವಿದೆ.ಹಲವು ಪ್ರತಿಭೆಗಳು: ಗ್ರಾಮದ ಆರ್. ಕೇಶವನ್ ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಷ್ಟ್ರಮಟ್ಟದ ಹೆಗ್ಗಳಿಕೆ ಪಡೆದಿದ್ದರೆ. ಪಿ. ಪ್ರತಿಭಾ ಕಬಡ್ಡಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿರುವ ಪ್ರತಿಭೆ. ಇವರೊಂದಿಗೆ ಯೋಧರಾಗಿ ತಿಪ್ಪೇಶ್, ಕೃಷ್ಣಮೂರ್ತಿ, ಅಶ್ರಫ್‌ಉಲ್ಲಾ, ನಿವೃತ್ತ ಯೋಧ ಹನುಮಂತಪ್ಪ ಕಾರ್ಯ ಮಾಡಿದ್ದಾರೆ.ಸಿದ್ದರಾಮಣ್ಣ ಗ್ರಾಮದ ಸ್ವಾತಂತ್ರ್ಯ ಯೋಧ, ಅವರು ಗ್ರಾಮದಲ್ಲಿ ನೆಲೆಸಿದ್ದಷ್ಟು ದಿನ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಮನೆ ಮುಂದೆ ಧ್ವಜಾರೋಹಣ ನೆರವೇರಿಸಿ, ಸಭೆ ನಡೆಸುತ್ತಿದ್ದರು ಎನ್ನುತ್ತಾರೆ ಗ್ರಾಮದ ಹಿರಿಕರು.ಉದ್ಯಮಗಳು: ಗ್ರಾಮ ಬೆಳೆದಂತೆ 25 ಆಲೆಮನೆ, 4 ಹಿಟ್ಟಿನ ಗಿರಣಿ, 2 ಅಡಿಕೆ ಹಾಳೆ ತಯಾರಿಸುವ ಘಟಕ, 1 ಹಾಲೋಬ್ಲಾಕ್ ಇಟ್ಟಿಗೆ ಮಾಡುವ ಘಟಕ ಗ್ರಾಮದಲ್ಲಿ ನೆಲೆ ನಿಂತಿದೆ. ಪ್ರಗತಿ ಗ್ರಾಮೀಣ ಬ್ಯಾಂಕ್, ಹಾಲು ಉತ್ಪಾದಕರ ಸಹಕಾರ ಸಂಘ ಗ್ರಾಮದಲ್ಲಿ ನೆಲೆ ಕಂಡಿವೆ.ಇಲ್ಲಿನ ನಿವಾಸಿ ಕೆ. ಬಸಪ್ಪ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ. ಗ್ರಾಮದ ಎಲ್ಲಾ ಜನರ ಪಡಿತರ ವಿತರಣಾ ವ್ಯವಸ್ಥೆಗೆ ಬಳಕೆದಾರರ ಸಹಕಾರ ಸಂಘ ಇದೆ. 3ಸಮುದಾಯ ಭವನ, 1 ಗ್ರಂಥಾಲಯ ಕಟ್ಟಡವಿದೆ. ಪ್ರತಿ ಗುರುವಾರ ನಡೆಯುವ ಸಂತೆಗೆ ಸುತ್ತೂರಿನ 60ಕ್ಕೂ ಅಧಿಕ ವ್ಯಾಪಾರಿಗಳು ಆಗಮಿಸುತ್ತಾರೆ.ಇಷ್ಟೊಂದು ವ್ಯವಸ್ಥಿತ ರೀತಿಯಲ್ಲಿ ಪ್ರಗತಿ ಕಾಣುತ್ತಿರುವ ಗ್ರಾಮಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ನ ಶಾಖೆಯೊಂದನ್ನು ತರಬೇಕೆಂಬ ಪ್ರಯತ್ನ ನಡೆದಿದೆ.ಸಾವಯವ ಕೃಷಿ ಚಟುವಟಿಕೆ: ಗ್ರಾಮದಲ್ಲಿ ವ್ಯವಸ್ಥಿತವಾಗಿ ಸಾವಯವ ಕೃಷಿ ಚಟುವಟಿಕೆ ನಡೆಸಲು ಸುಮಾರು 50ಕ್ಕೂ ಅಧಿಕ ಮಂದಿಯ ಯುವಪಡೆ ಸಿದ್ಧವಾಗಿದೆ. ಇದರ ಮೊದಲ ಹಂತವಾಗಿ ಎರೇಹುಳು ಗೊಬ್ಬರ ತಯಾರಿಕಾ ಘಟಕವನ್ನು ಪ್ರತಿ ಯುವಕರು ಸ್ಥಾಪಿಸಲು 50 ತೊಟ್ಟಿಗಳ ನಿರ್ಮಾಣ ಕಾರ್ಯ ನಡೆದಿದೆ.ಈ ಕ್ಷೇತ್ರದಲ್ಲಿ ಒಂದಿಷ್ಟು ಪ್ರಾರಂಭಿಕ ಸಾಧನೆ ಮಾಡಿರುವ ಕೆ.ಸಿ. ರೇಣುಕಾಂತ ಅವರಿಗೆ ಈಚೆಗೆ ಬೆಂಗಳೂರಿನ ಸಂಪೂರ್ಣ ಸಾವಯವ ಕೇಂದ್ರ ತಾಲ್ಲೂಕು ಮಟ್ಟದ ಪ್ರಗತಿಶೀಲ ಯುವ ರೈತ ಪ್ರಶಸ್ತಿ ಪ್ರದಾನ ಮಾಡಿದೆ.ಈಗಾಗಲೇ ಗ್ರಾಮದ ನಲ್ಲಸ್ವಾಮಿ, ಯುಧಿಷ್ಟಿರ, ವೈಯಾಪುರಿ ಗೌಂಡರ್ ಎರೇಹುಳು ಗೊಬ್ಬರ ತಯಾರಿಕಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಈಗ 50 ಜನರ ತಂಡ ಪ್ರತಿ ತಿಂಗಳು ಸಭೆ ನಡೆಸಿ ಸಾವಯವ ಕೃಷಿ ಬೆಳವಣಿಗೆಗೆ ಶ್ರಮಿಸುತ್ತಿದೆ. ಇನ್ನು ಕೆಲವೇ ದಿನದಲ್ಲಿ ಸಂಪೂರ್ಣ ಸಾವಯವ ಕೃಷಿ ಗ್ರಾಮವನ್ನಾಗಿ ಮಾಡುವ ಕನಸನ್ನು ಈ ತಂಡ ಹೊಂದಿದೆ.  ಗ್ರಾಮದಲ್ಲಿ ಎರಡು ಭಜನಾ ತಂಡವಿದೆ. 50ಕ್ಕೂ ಅಧಿಕ ವಿವಿಧ ಸ್ತ್ರೀಶಕ್ತಿ ಸಂಘವಿದೆ. 50ಕ್ಕೂ ಅಧಿಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ತಂಡವಿದೆ.ಹಲವು ಶತಮಾನದ ಇತಿಹಾಸ ಹೊತ್ತಿರುವ ಅರಳಿಹಳ್ಳಿ ಗ್ರಾಮ ಆಧುನಿಕ ಅಭಿವೃದ್ಧಿಯ ಭರದಲ್ಲಿ ತನ್ನ ಒಡಲಲ್ಲಿ ಹೊತ್ತಿರುವ ಅನೇಕ ಐತಿಹ್ಯದ ಸಂಗತಿಯನ್ನು ಮರೆ ಮಾಚಿಕೊಂಡು ಸಾಮರಸ್ಯದ ಬದುಕಿನಲ್ಲಿ ಬೆಳವಣಿಗೆ ಹೊಂದುತ್ತಿದೆ. ಇವೆಲ್ಲದರ ನಡುವೆ ಒಂದಿಷ್ಟು ಇತಿಹಾಸ ಸಂರಕ್ಷಿಸುವ ಕೆಲಸ ಸಹ ನಡೆಯುವ ಅಗತ್ಯವಿದೆ ಎಂಬುದು ಗ್ರಾಮದ ಹಿರಿಕರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry