ಶತಮಾನದ ಜೀವವೈವಿಧ್ಯ ಮಾಹಿತಿ ನಕಾಶೆ ಪರಿಷ್ಕರಣೆ

7

ಶತಮಾನದ ಜೀವವೈವಿಧ್ಯ ಮಾಹಿತಿ ನಕಾಶೆ ಪರಿಷ್ಕರಣೆ

Published:
Updated:

ಲಂಡನ್ (ಪಿಟಿಐ): ಭೂಮಂಡಲದ ಮೇಲಿನ ಜೀವವೈವಿಧ್ಯ ಕುರಿತು ವಿಸ್ತೃತ ಮಾಹಿತಿ ಒಳಗೊಂಡ ನಕಾಶೆಯನ್ನು ಒಂದು ಶತಮಾನದ ಬಳಿಕ ಪರಿಷ್ಕರಿಸಲಾಗಿದೆ. ಮೂಲ ನಕಾಶೆಯನ್ನು ಬ್ರಿಟನ್ ಪರಿಸರ ತಜ್ಞ ಅಲ್‌ಫ್ರೆಡ್ ರಸೆಲ್ ವಾಲೆಸ್ 1876ರಲ್ಲಿ ರಚಿಸಿದ್ದರು.ಭೂಮಿ ಮೇಲಿರುವ ಜೀವ ವೈವಿಧ್ಯದ ಸಂರಚನೆ ಕುರಿತ ಹೊಸ ತಲೆಮಾರಿನ ನಕಾಶೆಯನ್ನು ಕೋಪನ್‌ಹೇಗನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಯಾರಿಸಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿ ಸಿದ್ಧಪಡಿಸಿರುವ ಈ ನಕಾಶೆಯಲ್ಲಿ ಪಕ್ಷಿಗಳು, ಸಸ್ತನಿಗಳು ಸೇರಿ ಪೃಥ್ವಿ ಮೇಲಿನ 20 ಸಾವಿರ ಜೀವಿಗಳ ಬಗ್ಗೆ ವಿವರ ಇದೆ.ಈ ಹೊಸ ಜಾಗತಿಕ ನಕಾಶೆಯಲ್ಲಿ ಪರಿಸರವನ್ನು 11 ಜೈವಿಕ ಬೃಹತ್ ಭೂಪ್ರದೇಶಗಳಾಗಿ ವಿಂಗಡಿಸಲಾಗಿದೆ. ಈ ಪ್ರದೇಶಗಳು ಒಂದಕ್ಕೊಂದು ಯಾವ ರೀತಿಯಲ್ಲಿ ಸಂಬಂಧಿಸಿವೆ ಎನ್ನುವುದನ್ನು ವಿವರಿಸಲಾಗಿದೆ. ಅಲ್ಲದೇ ಜೀವ ವಿಕಾಸ ಮತ್ತು ಭೌಗೋಳಿಕ ಮಾಹಿತಿಯನ್ನು ಒಳಗೊಂಡು ಅಧ್ಯಯನ ನಡೆಸಲಾಗಿದೆ.`ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವ ಈ ನಕಾಶೆ ಪರಿಷ್ಕರಿಸುವುದಕ್ಕಾಗಿ ದೀರ್ಘ ಸಮಯದಿಂದ ಅಧ್ಯಯನದಲ್ಲಿ ತೊಡಗಿದ್ದೆವು. ವಾಲೆಸ್ ಬಳಿಕ ಅಂತಿಮವಾಗಿ ವಿಸ್ತೃತ ಮಾಹಿತಿ ಒಳಗೊಂಡ ನಕಾಶೆಯನ್ನು ಸಿದ್ಧಪಡಿಸಲಾಗಿದೆ' ಎಂದು ಸಂಶೋಧಕ ಬೆನ್ ಹಾಲ್ಟ್ ತಿಳಿಸಿದ್ದಾರೆ.`ಈ ಹೊಸ ನಕಾಶೆಯಿಂದ ಭವಿಷ್ಯದಲ್ಲಿ ಪರಿಸರ ಮತ್ತು ವಿಕಾಸವಾದದ ಬಗ್ಗೆ ಸಂಶೋಧನೆ ಮಾಡಲು ಸಹಾಯಕವಾಗಲಿದೆ. ಜಾಗತಿಕ ತಾಪಮಾನದಲ್ಲಿ ಆಗುತ್ತಿರುವ ಬದಲಾವಣೆ ಸಂದರ್ಭದಲ್ಲಿ ಹೊಸ ನಕಾಶೆಯ ಮಹತ್ವ ಹೆಚ್ಚಲಿದೆ' ಎಂದು ಇನ್ನೊಬ್ಬ ಸಂಶೋಧಕ ಜೀನ್ ಫಿಲಿಪ್ ಲೆಸ್ಸಾರ್ಡ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry