ಬುಧವಾರ, ಮೇ 12, 2021
18 °C

ಶತಮಾನೋತ್ಸವಕ್ಕೆ ಮಕ್ಕಳ ಮೆರುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ಸಮೀಪದ ಪೊನ್ನಂಪೇಟೆ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಬುಧವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರಿಗೆ ಮುದ ನೀಡಿತು.ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕ ಕಲಾವಿದರು ಸಂಗೀತ, ನಾಟಕ, ಹಾಸ್ಯ ಮೊದಲಾದ ಮನರಂಜನಾ ಕಾರ್ಯಕ್ರಮ ನೀಡಿ ಶತಮಾನೋತ್ಸವಕ್ಕೆ ಮೆರುಗು ತಂದರು. ವಿದ್ಯಾರ್ಥಿಗಳು ಕೋಲಾಟ,  ಜಾನಪದ ನೃತ್ಯ, ಚಲನಚಿತ್ರ ಗೀತೆಗಳ ನೃತ್ಯ ಮೊದಲಾದವುಗಳ ಮೂಲಕ ಗಮನ ಸೆಳೆದರು.ನಿವೃತ್ತ ಶಿಕ್ಷಕಿ ಪೆಮ್ಮಂಡ ಮಾಯಮ್ಮ ಮತ್ತು ಶಿಕ್ಷಕಿ ಸಾವಿತ್ರಿ ಅವರ ಎರವರ ಕುಣಿತ, ಕೊಡವ ಹಾಡು ಹಾಗೂ ಹಾಸ್ಯ ಸಭಿಕರ ಮೆಚ್ಚುಗೆ ಗಳಿಸಿತು. ಸ್ಥಳೀಯ ಬಸವೇಶ್ವರ ಯುವಕ ಸಂಘದ ಕಲಾವಿದರಾದ ಎಸ್.ಟಿ. ಗಿರೀಶ್ ಹಾಗೂ ತಂಡದ ಜನಪದ ಗೀತೆ, ಕೋಲಾಟ ಉತ್ತಮವಾಗಿತ್ತು. ಎರಡು ದಿನ ನಡೆದ ಶತಮಾನೋತ್ಸವ  ಪೊನ್ನಂಪೇಟೆ ಪಟ್ಟಣದ ಜನತೆಗೆ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಇಡೀ ಪಟ್ಟಣದ ಜನತೆ ಸಡಗರ ಸಂಭ್ರಮದಿಂದ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಿದರು.ಶಿಕ್ಷಕರಾದ ರೋಜಿ, ಶಕೀಲಾಭಾನು, ಮಹೇಶ್, ಮುಖ್ಯ ಶಿಕ್ಷಕಿ ಪದ್ಮ ಕಾರ್ಯಕ್ರಮ ನಿರೂಪಿಸಿದರು.ಸೇನಾ ನೇಮಕಾತಿ ರ‌್ಯಾಲಿ

ಮಡಿಕೇರಿ: ಸೇನೆಯಲ್ಲಿ ಭರ್ತಿಗಾಗಿ ಚಿಕ್ಕಮಗಳೂರು ಜ್ಯೋತಿ ನಗರದ ಸೆಂಟನರಿ ಸ್ಟೇಡಿಯಂನಲ್ಲಿ ಕೊಡಗು ಜಿಲ್ಲೆಯ ಅಭ್ಯರ್ಥಿಗಳಿಗೆ ಜುಲೈ 4ರಂದು ಸೈನಿಕ ತಾಂತ್ರಿಕ, ನರ್ಸಿಂಗ್ ಅಸಿಸ್ಟಂಟ್, ಲಿಪಿಕ/ಉಗ್ರಾಣ ಪಾಲಕ ಹಾಗೂ ಜುಲೈ 5ರಂದು ಟ್ರೇಡ್ಸ್ ಮ್ಯೋನ್ ಮತ್ತು ಜುಲೈ 9ರಂದು ಸೈನಿಕ ಜಿಡಿ ಹುದ್ದೆಗಳಿಗೆ ಸೇನಾ ನೇಮಕಾತಿ ರ‌್ಯಾಲಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಸೇನಾ ನೇಮಕಾತಿ ಭರ್ತಿಗಾಗಿ ಟೋಕನ್ ಪಡೆಯಲು ಒಂದು ದಿನ ಮೊದಲು ಆಗಮಿಸಿ ಟೋಕನ್  ಪಡೆಯಬೇಕು. ಹೆಚ್ಚಿನ ಮಾಹಿತಿಗೆ `ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಡಿಕೇರಿ ಕಚೇರಿ' ಇಲ್ಲಿ ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.