ಶತಸಂಭ್ರಮ: ಖ್ಯಾತನಾಮರಿಲ್ಲದೆ ಕಳಾಹೀನ

7

ಶತಸಂಭ್ರಮ: ಖ್ಯಾತನಾಮರಿಲ್ಲದೆ ಕಳಾಹೀನ

Published:
Updated:
ಶತಸಂಭ್ರಮ: ಖ್ಯಾತನಾಮರಿಲ್ಲದೆ ಕಳಾಹೀನ

ಚೆನ್ನೈ: ಅದು ಅಪರೂಪದ ಕ್ಷಣ. ಭಾರತೀಯ ಚಿತ್ರರಂಗಕ್ಕೆ ನೂರು ವರ್ಷ ತುಂಬಿದ ಗಳಿಗೆಯನ್ನು ದಕ್ಷಿಣ ಭಾರತದ ನಾಲ್ಕು ಭಾಷೆಗಳ ಚಿತ್ರರಂಗಗಳು ಸೇರಿ ನಡೆಸುತ್ತಿರುವ ಹಬ್ಬ.ಸಂಭ್ರಮದ ಎರಡನೇ ದಿನವಾದ ಇಲ್ಲಿ ಭಾನುವಾರದ ಮೊದಲ ಅವಧಿ ಸೀಮಿತವಾಗಿದ್ದು ಕನ್ನಡ ಚಿತ್ರರಂಗಕ್ಕೆ. ಕನ್ನಡ ಚಿತ್ರರಂಗ ಹುಟ್ಟಿದ ಊರಿನಲ್ಲಿ ಚಿತ್ರರಂಗದ ಹಿರಿಮೆಯನ್ನು ಸಾರುವ ಅಪೂರ್ವ ಅವಕಾಶ ಲಭಿಸಿತ್ತು. ಆದರೆ, ಸಮಾರಂಭದಲ್ಲಿ ಎದ್ದುಕಂಡದ್ದು ಖ್ಯಾತ ನಟ ನಟಿಯರು, ನಿರ್ದೇಶಕರು ಮತ್ತು ತಂತ್ರಜ್ಞರ ಗೈರು, ಸುಮಾರು ಎಂಟು ಸಾವಿರಕ್ಕೂ ಅಧಿಕ ಮಂದಿ ಕುಳಿತುಕೊಳ್ಳ ಬಹುದಾದಷ್ಟು ವಿಶಾಲವಾದ ಒಳಾಂಗಣ ಕ್ರೀಡಾಂಗಣದಲ್ಲಿ ಖಾಲಿ ಕುರ್ಚಿಗಳು. ಕಾರ್ಯಕ್ರಮದುದ್ದಕ್ಕೂ ತಾಂತ್ರಿಕ ಸಮಸ್ಯೆ, ಚಿತ್ರರಂಗದ ಇತಿಹಾಸದ ಕುರಿತು ನೀಡುತ್ತಿದ್ದ ಮಾಹಿತಿಗಳಲ್ಲಿ ದೋಷಗಳು.ಸಾಮಾಜಿಕ ಮೌಲ್ಯ ಮತ್ತು ಕಾಳಜಿಯನ್ನು ಬಿಂಬಿಸಿದ ಕಲಾತ್ಮಕ ಮತ್ತು ವ್ಯಾಪಾರಿ ಚಿತ್ರಗಳ ಪರಿಚಯದ ಸಾಲಿನಲ್ಲಿ ರೀಮೇಕ್ ಚಿತ್ರಗಳನ್ನು ನಮ್ಮ ಯಶಸ್ವಿ ಚಿತ್ರಗಳೆಂದು ಹೇಳಿಕೊಂಡಿದ್ದು, ಮಾಹಿತಿ ಸಿದ್ಧಪಡಿಸಿದವರ ತಿಳಿವಳಿಕೆ ಕೊರತೆಗೆ ಸಾಕ್ಷಿಯಾಗಿತ್ತು. ಶತಮಾನೋತ್ಸವ ಆಚರಣೆಯ ಸಿದ್ಧತೆಗಳು ಶುರುವಾದ ದಿನದಿಂದಲೇ ಅಪಸ್ವರಗಳು ಕೇಳಿಬಂದಿದ್ದವು. ‘ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ’ ಎಂದು ಕೆಲವು ಹಿರಿಯ ನಟರು ಅಸಮಾಧಾನ ವ್ಯಕ್ತಪಡಿಸಿದ್ದರು. ಅದಕ್ಕೆ ಪೂರಕವೆಂಬಂತೆ ಹಬ್ಬದ ಸಂಭ್ರಮದಲ್ಲಿ ರಮೇಶ್ ಅರವಿಂದ್, ವಿಜಯ್ ರಾಘವೇಂದ್ರ, ಶ್ರೀಮುರಳಿ, ಯೋಗೀಶ್ ಮತ್ತು ಶ್ರೀನಗರ ಕಿಟ್ಟಿ ಹೊರತುಪಡಿಸಿ ಯಾವ ಪ್ರಮುಖ ನಟರೂ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಅಂಬರೀಷ್, ರವಿಚಂದ್ರನ್, ಜಗ್ಗೇಶ್, ಪುನೀತ್, ದರ್ಶನ್, ಸುದೀಪ್, ಶಿವರಾಜಕುಮಾರ್, ಗಣೇಶ್, ಯಶ್, ವಿಜಯ್, ನಟಿಯರಾದ ರಾಧಿಕಾ ಪಂಡಿತ್, ಐಂದ್ರಿತಾ ರೇ, ಪೂಜಾ ಗಾಂಧಿ ಮುಂತಾದವರ ಗೈರು ಎದ್ದುಕಾಣುತ್ತಿತ್ತು.‘ಸ್ಟಾರ್ ನಟರೆಲ್ಲರೂ ಕೊನೆಯ ದಿನವಾದ ಸೆ. 24ರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ’ ಎಂಬ ಹಾರಿಕೆಯ ಉತ್ತರಗಳು ಕೇಳಿಬಂದವು. ಚಿತ್ರರಂಗದ ಕಲಾವಿದರಂತೆಯೇ ಪ್ರೇಕ್ಷಕರೂ ಕಾರ್ಯಕ್ರಮದ ಬಗ್ಗೆ ನಿರುತ್ಸಾಹ ತೋರಿದ್ದು ಕಂಡುಬಂತು.  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಒಪ್ಪಿಕೊಂಡು ಸಿದ್ಧತೆ ನಡೆಸಿದ್ದ ಕೆಲವರೂ ಬಾರದೆ ತಪ್ಪಿಸಿಕೊಂಡಿದ್ದರು.ಪ್ರೇಕ್ಷಕರ ಹಾಜರಾತಿಯ ಕೊರತೆ ಬಗ್ಗೆ ಪತ್ರಕರ್ತರ ಬಳಿ ಬೇಸರ ಹಂಚಿಕೊಂಡ ಹಿರಿಯ ನಟಿ ಹರಿಣಿ, ‘5 ಲಕ್ಷ ಕನ್ನಡಿಗರು ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಕನಿಷ್ಠ 15 ಸಾವಿರ ಮಂದಿಯಾದರೂ ಕಾರ್ಯಕ್ರಮಕ್ಕೆ ಬರಬಹುದಿತ್ತು. ಭಾನುವಾರ ರಜಾ ದಿನವಾದರೂ ಜನ ಬಂದಿಲ್ಲ. ತಮಿಳು ಅಥವಾ ಹಿಂದಿ ಚಿತ್ರ ನೋಡಲೋ ಚಲನಚಿತ್ರ ಮಂದಿರಕ್ಕೆ ಹೋಗಿರುತ್ತಾರೆ. ಕನ್ನಡಿಗರಿಗೆ ನಮ್ಮ ಕಾರ್ಯಕ್ರಮದ ಬಗ್ಗೆ ಇರುವ ಅಭಿಮಾನದ ಬಗೆಯಿದು' ಎಂದರು.‘ನಾನು ಈ ಕುಟುಂಬದ ಒಬ್ಬ ಸದಸ್ಯ. ನನಗೆ ಆಹ್ವಾನ ನೀಡದೇ ಇದ್ದರೂ ಬರುತ್ತಿದ್ದೆ. ಬಂಗಾಳಿ ಸಿನಿಮಾಗಳನ್ನು ಬಿಟ್ಟರೆ ಕನ್ನಡ ಚಿತ್ರಗಳಲ್ಲೇ ಪ್ರಯೋಗಗಳು ನಡೆಯುತ್ತಿರುವುದು ಎಂದು ಗುರುಗಳಾದ ಕೆ. ಬಾಲಚಂದರ್ ಹೇಳುತ್ತಿದ್ದರು. ಅಂಥ ದಿನಗಳು ಕನ್ನಡದಲ್ಲಿ ಮತ್ತೆ ಬರಲಿ' ಎಂಬ ನಟ ಕಮಲಹಾಸನ್ ಮಾತು ಚಿತ್ರೋದ್ಯಮದ ಕಿವಿಹಿಂಡುವಂತಿತ್ತು.ಹಿರಿಯ ನಟೀಮಣಿಯರ ನೃತ್ಯದ ರಂಗು: ಒಂದು ಕಡೆ ಹಿರಿಯ ನಟರ ಗೈರು ಕಾಣುತ್ತಿದ್ದರೆ, ಹಿರಿಯ ನಟಿಯರಾದ ಲೀಲಾವತಿ, ಭಾರತಿ, ಜಯಂತಿ, ಭವ್ಯಾ, ತಾರಾ, ಶ್ರುತಿ ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷ. ಗಿರೀಶ್ ಕಾಸರವಳ್ಳಿ, ಕೆ.ಎಸ್.ಎಲ್. ಸ್ವಾಮಿ, ಸುದರ್ಶನ್, ಬಿ. ಸರೋಜಾದೇವಿ,  ಭಾರ್ಗವ, ಭಗವಾನ್, ವಿಜಯ ರೆಡ್ಡಿ ಸನ್ಮಾನಿತರಾದ ಪ್ರಮುಖರು.ಅನುಪ್ರಭಾಕರ್ ಮತ್ತು ಮೈತ್ರೇಯಿ ಅವರ `ತೆರೆದಿದೆ ಮನೆ ಓ ಬಾ ಅತಿಥಿ...' ಹಾಡಿನ ನೃತ್ಯದ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಚಿತ್ರರಂಗ ಬೆಳೆದುಬಂದ ಹಾದಿ ಸ್ಮರಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry