ಶತಾಯುಷಿಗಳ ಮರು ಮದುವೆ ಸಡಗರ

7

ಶತಾಯುಷಿಗಳ ಮರು ಮದುವೆ ಸಡಗರ

Published:
Updated:

ತೋವಿನಕೆರೆ: ಇಡೀ ಹಳ್ಳಿಯೇ ತಳಿರು ತೋರಣಗಳಿಂದ ಶೃಂಗಾರಗೊಂಡಿತ್ತು. ಗ್ರಾಮದ ಹೆಣ್ಣುಮಕ್ಕಳು, ಮಹಿಳೆಯರು ಹೊಸ ಬಟ್ಟೆ ತೊಟ್ಟು, ಸಿಂಗಾರದ ಝಲಕ್‌ನೊಂದಿಗೆ ಅಪರೂಪದ ಮದುವೆಗೆ ಸಾಕ್ಷಿಯಾಗಲು ಹವಣಿಸುತ್ತಿದ್ದರು.  ಎಲ್ಲರಲ್ಲೂ ಊಹಿಸಲಾರದ ಉತ್ಸಾಹ.- ಇದು ತುಮಕೂರು ಜಿಲ್ಲೆಯ ತೋವಿನಕೆರೆ ಸಮೀಪದ ಬೋರಪ್ಪನಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ಕಂಡ ದೃಶ್ಯ.

ಹಳ್ಳಿಯ ಶತಾಯುಷಿಗಳಾದ ಪೂಜಾರ್ ಹನುಮಂತಯ್ಯ, ಪತ್ನಿ ದಾಸಮ್ಮ ಅವರಿಗೆ ದೇವಸ್ಥಾನದಲ್ಲಿ ಮರು ಮದುವೆಯ ಸಂಭ್ರಮ. 60 ಕುಟುಂಬಗಳ ಈ ಗ್ರಾಮ ಬೋವಿ ಜನಾಂಗದ ಗ್ರಾಮ. ಶ್ರಮಜೀವಿಗಳ ಊರಿನಲ್ಲಿ ಶತಾಯುಷಿ ಕಂಡ ದಂಪತಿಗಳ ಮರು ಮದುವೆಗೆ ಇಡೀ ಊರೆ ಟೊಂಕಕಟ್ಟಿ ನಿಂತಿತ್ತು.ಅದರಂತೆ ಭಾನುವಾರ ಬೆಳಿಗ್ಗೆ 9 ರಿಂದ 10 ಗಂಟೆಯವರೆಗೂ ಮುಹೂರ್ತ ನಿಗದಿಪಡಿಸಿ, ವ್ಯವಸ್ಥಿತವಾಗಿ ಸಿಹಿ ಊಟ, ಶಾಮಿಯಾನ, ಅತಿಥಿಗಳಿಗೆ ಆಸನ ವ್ಯವಸ್ಥೆ, ಬಂದ ಎಲ್ಲರಿಗೂ ಫಲ ತಾಂಬೂಲ, ಹೆಣ್ಣು ಮಕ್ಕಳಿಗೆ ಅರಿಶಿಣ ಕುಂಕುಮ ನೀಡಲಾಯಿತು. ಸಂಪ್ರದಾಯದಂತೆ ಮದುವೆ ನಡೆಯಿತು.ಸಿದ್ದಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಅವರಿಗಿಂತಲೂ ವಯಸ್ಸಿನಲ್ಲಿ ದೊಡ್ಡವನು ಎಂದು ಹೇಳುವ ಪೂಜಾರ್ ಹನುಮಂತಯ್ಯ ಅವರ ವಯಸ್ಸಿನ ಬಗ್ಗೆ ನಿಖರ ದಾಖಲೆ ಇಲ್ಲವಾದರೂ ಅವರು ದಾಸಮ್ಮ ಅವರನ್ನು ಮದುವೆಯಾಗಿ  85 ವರ್ಷಕ್ಕೂ ಹೆಚ್ಚು ಆಗಿದೆ ಎಂದೇ ಹೇಳಲಾಗುತ್ತಿದೆ. ತಾತನ ನೆನಪಿನಲ್ಲಿ ಅನೇಕ ಘಟನೆಗಳು ಇಂದಿಗೂ ನೆನಪಿರುವುದು ಅಚ್ಚರಿಯಾಗಿದೆ.  ದಾಸಮ್ಮ ಅವರ ತವರೂರು ತುಮಕೂರು ತಾಲ್ಲೂಕು ಕೋರಾ ಹೋಬಳಿ ಕಳ್ಸಂಟ್‌ಕುಂಟೆ ಗ್ರಾಮ.8 ದಶಕಕ್ಕೂ ಹೆಚ್ಚು ಕಾಲ ದಾಂಪತ್ಯ ಈ ಕಾಲದ ಅಚ್ಚರಿಯಾಗಿದೆ. ಈ ದಂಪತಿಗೆ ಮರು ಮದುವೆ ಇಡೀ ಗ್ರಾಮದ ನಿರ್ಧಾರವಾಗಿತ್ತು. ದಂಪತಿ ಅನೂನ್ಯತೆಯೇ ಇದಕ್ಕೆ ಕಾರಣ. ಈಗಲೂ ನವ ದಂಪತಿಗಳಂತೆ ಬದುಕಿರುವ ಇವರು ಇಲ್ಲಿನ ಎಲ್ಲರಿಗೂ  ಮಾದರಿ.ಇಡೀ ಗ್ರಾಮದ ಜನರು ಹಣ ಹಾಕಿ ಹೊಸ ಮದುವೆಯಂತೆ ಇವರ ಮದುವೆ ನೆರವೇರಿಸಿದರು. ಈಗಲೂ ಪೂಜಾರ್ ಪ್ರತಿ ದಿನ ಹಸು ಮೇಯಿಸುವ ಕಾಯಕ ಮಾಡುತ್ತಾರೆ. ಅಕ್ಕಪಕ್ಕದ ಹಳ್ಳಿಗಳಿಗೂ ಊರಿನ ಜನರೆ ಲಗ್ನ ಪತ್ರಿಕೆ ಹಂಚಿದ್ದರು. ಜನ ನಿರೀಕ್ಷಿಸಿಕ್ಕಿಂತ ಜೋರಾಗಿಯೇ ಮದುವೆ ನಡೆಯಿತು.  ಇಡೀ ಮದುವೆ ಹೊಸ ಮದುವೆಗಿಂತಲೂ ಹೆಚ್ಚಿನ ಸಂಭ್ರಮದಿಂದ ಕೂಡಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry