ಭಾನುವಾರ, ನವೆಂಬರ್ 17, 2019
28 °C

ಶನಿವಾರಸಂತೆ: ಬೇಕಿದೆ ಬಸ್‌ನಿಲ್ದಾಣ

Published:
Updated:

ಶನಿವಾರಸಂತೆ: ಶನಿವಾರಸಂತೆ ಪುಟ್ಟ ಗ್ರಾಮವಾದರೂ ಜನಸಂಖ್ಯೆಯ ಏರಿಕೆಯೊಂದಿಗೆ ದಿನದಿಂದ ದಿನಕ್ಕೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಶೈಕ್ಷಣಿಕ ಕೇಂದ್ರವಾಗಿ, ವಾಣಿಜ್ಯನಗರಿಯಾಗಿ ಬೆಳೆಯುತ್ತಿದೆ.

ಆದರೆ, ಇಲ್ಲಿ ಸರ್ಕಾರಿ ಬಸ್‌ನಿಲ್ದಾಣವೇ ಇಲ್ಲ.ಇಲ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತವೇ ತಾತ್ಕಾಲಿಕ ಬಸ್‌ನಿಲ್ದಾಣವಾಗಿದೆ. ಶನಿವಾರಸಂತೆ ಗ್ರಾಮ ಪಂಚಾಯಿತಿ ಕೊಡಗು ಹಾಗೂ ಹಾಸನ ಜಿಲ್ಲೆಗಳ ಗಡಿ ಪ್ರದೇಶದಲ್ಲಿದೆ. ಪ್ರತಿದಿನ ಜಿಲ್ಲೆಯಿಂದ ಹಾಗೂ ಬೆಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ಮಂಗಳೂರು, ಧರ್ಮಸ್ಥಳ, ಸುಬ್ರಹ್ಮಣ್ಯ ಮೊದಲಾದ ನಗರ ಪ್ರದೇಶಗಳಿಂದ ಸರ್ಕಾರಿ ಬಸ್ಸುಗಳು ಬರುತ್ತಿರುತ್ತವೆ. ಅರ್ಧ ಗಂಟೆಗೊಂದು ಖಾಸಗಿ ಬಸ್ಸುಗಳು ಬರುತ್ತಿರುತ್ತವೆ. ವಿವಿಧೆಡೆಯಿಂದ ಬರುವ ಬಸ್ಸುಗಳು ಶನಿವಾರಸಂತೆ ಊರೊಳಗೆ ಬಂದು ಕಿತ್ತೂರು ರಾಣಿ ಚೆನ್ನಮ್ಮ ವೃತ್ತವನ್ನು ಪ್ರದಕ್ಷಿಣೆ ಹಾಕಿಯೇ ಹೋಗಬೇಕು. ಆದ್ದರಿಂದ ಕಿತ್ತೂರು ಚೆನ್ನಮ್ಮ ವೃತ್ತವೆಂದರೆ ಸದಾ ಗಿಜಿಗುಡುತ್ತಿರುತ್ತದೆ.60 ಗ್ರಾಮಗಳ ಜನರು ಇಲ್ಲಿಯ ಸಂತೆ ಮಾರುಕಟ್ಟೆಗೆ ಬರುತ್ತಾರೆ. ಸುತ್ತಲಿನ ತಾಲ್ಲೂಕುಗಳಿಂದ ಹಾಗೂ ಪಕ್ಕದ ಹಾಸನ ಜಿಲ್ಲೆಯಿಂದ ಸಾವಿರಾರು ವ್ಯಾಪಾರಿಗಳು ಹಾಗೂ ಗ್ರಾಹಕರು ಶನಿವಾರ ದಿನ ನಡೆಯುವ ಸಂತೆಗೆ ಬರುತ್ತಾರೆ. ಆ ದಿನ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುವುದು ಸಾಮಾನ್ಯವಾಗಿದೆ.ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲದೇ ಸರ್ಕಾರಿ ಹಾಗೂ ಖಾಸಗಿ ವಾಹನಗಳು ಎಲ್ಲೆಂದರಲ್ಲ ಅಡ್ಡಾದಿಡ್ಡಿಯಾಗಿ ನಿಂತಿರುತ್ತವೆ. ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ನಿಲ್ಲುವ ಸ್ಥಳವೂ ಈ ವೃತ್ತವೇ ಆಗಿದ್ದು ಸದಾ ಜನಸಂದಣಿ ಇರುತ್ತದೆ. ಬಸ್‌ಗಳಿಗೆ ಕಾಯುವವರು ಅನಿವಾರ್ಯವಾಗಿ ಅಂಗಡಿಗಳನ್ನು ಆಶ್ರಯಿಸಬೇಕಾಗಿ ಬಂದಿದೆ. ಪಟ್ಟಣದ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ರಸ್ತೆಯಂತೂ ಅತ್ಯಂತ ಕಿರಿದಾಗಿದ್ದು ವಾಹನಗಳ ಸಂಚಾರ ಬಲು ತ್ರಾಸದಾಯಕವಾಗಿರುತ್ತದೆ. ಅಸ್ತವ್ಯಸ್ತವಾಗಿ ನಿಲ್ಲುವ ವಾಹನಗಳಿಂದಾಗಿ ಪಾದಚಾರಿಗಳು ಭಯಭೀತರಾಗಿಯೇ ತಿರುಗಾಡುವಂತಾಗಿದೆ.`ಶನಿವಾರಸಂತೆಯಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು ಒಂದು ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ. ಶೈಕ್ಷಣಿಕ ಕೇಂದ್ರವೂ ಆಗಿದೆ. ಪ್ರವಾಸಿ ಮಂದಿರಕ್ಕೆ ಒಳಪಟ್ಟಿರುವ 600 ಎಕರೆ ಪ್ರದೇಶದಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಸರ್ಕಾರಿ ಸ್ವಾಮ್ಯದ ಬಸ್‌ನಿಲ್ದಾಣ ಮಾಡಿದರೆ ಜನರಿಗೆ ಸಹಾಯವಾಗುತ್ತದೆ' ಎನ್ನುತ್ತಾರೆ ಕೆಲ ನಾಗರಿಕರು.

ಈ ಊರಿನ ಪ್ರಮುಖ ಸಮಸ್ಯೆ ಎಂದರೆ ವ್ಯವಸ್ಥಿತ ಸರ್ಕಾರಿ ಬಸ್‌ನಿಲ್ದಾಣ ಇಲ್ಲದಿರುವುದು. ಸುವರ್ಣ ಗ್ರಾಮ ಯೋಜನೆಯಲ್ಲಾದರೂ ಒಂದು ಸರ್ಕಾರಿ ಬಸ್ ನಿಲ್ದಾಣ ಸ್ಥಾಪನೆಯಾಗುವುದೇ ಎಂಬುದು ಸಾರ್ವಜನಿಕರೆಲ್ಲರ ಬಹುದಿನಗಳ ನಿರೀಕ್ಷೆಯಾಗಿದೆ.ಶ.ಗ.ನಯನತಾರಾ

ಪ್ರತಿಕ್ರಿಯಿಸಿ (+)