ಶಬರಿಮಲೆ: ಉಪಗ್ರಹಾಧಾರಿತ ಚಿತ್ರ- ಇಸ್ರೊ ಪ್ರಸ್ತಾವ

7

ಶಬರಿಮಲೆ: ಉಪಗ್ರಹಾಧಾರಿತ ಚಿತ್ರ- ಇಸ್ರೊ ಪ್ರಸ್ತಾವ

Published:
Updated:

ತಿರುವನಂತಪುರ (ಪಿಟಿಐ): ಶಬರಿಮಲೆಯಲ್ಲಿ ಸಂಭವಿಸಿದ ಕಾಲ್ತುಳಿತದಂತಹ ದುರಂತಗಳನ್ನು ತಪ್ಪಿಸಲು ಈ ಗಿರಿಶ್ರೇಣಿಯ ಉಪಗ್ರಹಾಧಾರಿತ ಚಿತ್ರಗಳನ್ನು ನೀಡುವುದಾಗಿ ಇಸ್ರೊ ಕೇರಳ ಸರ್ಕಾರಕ್ಕೆ ಹೇಳಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್, ‘ಕಳೆದ ವಾರ ಶಬರಿಮಲೆ ಸಂಭವಿಸಿದ ಕಾಲ್ತುಳಿತದಿಂದ 102 ಮಂದಿ ಅಸುನೀಗಿದ್ದಾರೆ. ಮುಂದೆ ಇಂತಹ ದುರಂತಗಳಾಗದಂತೆ  ಎಚ್ಚರ ವಹಿಸಲು ಮತ್ತು ಅಗತ್ಯವಾದ ಮಾರ್ಗೋಪಾಯ ಕಂಡುಹಿಡಿಯಲು ಈ ಗಿರಿಶ್ರೇಣಿಯ ಮೂರು ಆಯಾಮದ ಚಿತ್ರ (3 ಡಿ)ಗಳನ್ನು ಒದಗಿಸುವ ಪ್ರಸ್ತಾವವನ್ನು ಕೇರಳ ಸರ್ಕಾರದ ಮುಂದಿಡಲಾಗಿದೆ’ ಎಂದಿದ್ದಾರೆ.

‘ಅಪ್ಟಿಕ್ಸ್ ಮತ್ತು ಅಪ್ಟೋ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಸಮಕಾಲೀನ ಧೋರಣೆ’ ಕುರಿತು ಇಲ್ಲಿ ನಡೆದ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘3ಡಿ ಚಿತ್ರಗಳಲ್ಲಿ ಭೂ ವಿನ್ಯಾಸದ ಎಲ್ಲಾ ಸೂಕ್ಷ್ಮಗಳು ಸ್ಪಷ್ಟವಾಗಿ ಕಾಣುತ್ತವೆ. ಅದನ್ನು ಬಳಸಿಕೊಂಡು ಮೂಲ ಸೌಕರ್ಯಗಳನ್ನು  ಅಭಿವೃದ್ಧಿ ಪಡಿಸಬಹುದು’ ಎಂದರು.

ಕೇಂದ್ರ ಸರ್ಕಾರದ ನೆರವಿನೊಂದಿಗೆ ಇಸ್ರೊ ದೇಶದ 200 ಜಿಲ್ಲೆಗಳ ಗಡಿ ನಕ್ಷೆಗಳುಳ್ಳ ಉಪಗ್ರಹಾಧಾರಿತ ಚಿತ್ರಗಳ ಮಾಹಿತಿ ಸಂಗ್ರಹವನ್ನು ಈಗಾಗಲೇ  ಹೊಂದಿದೆ. ಈ ಕಾರ್ಯವನ್ನು ದೇಶದ ಉಳಿದ ಜಿಲ್ಲೆಗಳಿಗೂ ಶೀಘ್ರದಲ್ಲೆ ವಿಸ್ತರಿಸಲಾಗುವುದು ಎಂದು ರಾಧಾಕೃಷ್ಣನ್ ಹೇಳಿದರು.

ಇಸ್ರೊ ಬಾಹ್ಯಾಕಾಶ ಕೇಂದ್ರ(ಐಎಸ್‌ಎಸಿ)ದ ನಿರ್ದೇಶಕ ಡಾ. ಟಿ.ಕೆ. ಅಲೆಕ್ಸ್, ‘ಇಸ್ರೊ ಸಿದ್ಧ ಪಡಿಸಿರುವ ಬಾಹ್ಯಾಕಾಶ ನಕ್ಷೆಗೆ ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಬಾರಿ ಬೇಡಿಕೆ ಇದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry