ಶಬರಿಮಲೆ ಕಾಲ್ತುಳಿತ ದುರಂತ: ಹೈಕೋರ್ಟ್‌ಗೆ ನಾಳೆ ವರದಿ ಸಲ್ಲಿಕೆ

7

ಶಬರಿಮಲೆ ಕಾಲ್ತುಳಿತ ದುರಂತ: ಹೈಕೋರ್ಟ್‌ಗೆ ನಾಳೆ ವರದಿ ಸಲ್ಲಿಕೆ

Published:
Updated:

ತಿರುವನಂತಪುರ (ಪಿಟಿಐ): ಶಬರಿಮಲೆಯ ಪುಲ್‌ಮೇಡುವಿನಲ್ಲಿ ನಡೆದ ಕಾಲ್ತುಳಿತ ದುರಂತದ ಬಗ್ಗೆ ಕೇರಳ ಪೊಲೀಸ್ ಜ. 20ರಂದು ಹೈಕೋರ್ಟ್‌ಗೆ ವರದಿ ಸಲ್ಲಿಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

‘ಹೈಕೋರ್ಟ್ ನಿರ್ದೇಶನದಂತೆ ಪೊಲೀಸ್ ಇಲಾಖೆಯು ಜ. 20ರಂದು ದುರಂತದ ಬಗ್ಗೆ ವರದಿಯನ್ನು ಸಲ್ಲಿಸಲಿದೆ’ ಎಂದು ಡಿಜಿಪಿ ಜೇಕಬ್ ಪುನ್ನೂಸ್ ತ್ರಿಶ್ಶೂರ್‌ನಲ್ಲಿ ಸುದ್ದಿಗಾರರಿಗೆ ಹೇಳಿದ್ದಾರೆ.

ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ವಿಚಾರಣೆ ಕೈಗೊಂಡಿರುವ ಹೈಕೋರ್ಟ್‌ನ ದ್ವಿಸದಸ್ಯ ಪೀಠವು, ಸೋಮವಾರವಷ್ಟೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಗುರುವಾರದೊಳಗೆ ದುರಂತಕ್ಕೆ ಕಾರಣವೇನು ಎಂಬ ಬಗ್ಗೆ ವಿವರಣೆ ನೀಡುವಂತೆ ಅರಣ್ಯ, ಪೊಲೀಸ್ ಇಲಾಖೆ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಗೆ ಸೂಚಿಸಿತ್ತು.

ನ್ಯಾಯಮೂರ್ತಿಗಳಾದ ತೋಟತ್ತಿಲ್ ರಾಧಾಕೃಷ್ಣನ್ ಮತ್ತು ಪಿ.ಎಸ್. ಗೋಪಿನಾಥನ್ ಅವರನ್ನೊಳಗೊಂಡ ಈ ದ್ವಿಸದಸ್ಯ ಪೀಠವು ಶಬರಿಮಲೆ ಅಯ್ಯಪ್ಪಸ್ವಾಮಿ ಭಕ್ತರ ಸಂಬಂಧಿಸಿದ ವ್ಯವಹಾರಗಳನ್ನು ನಿರ್ವಹಿಸುತ್ತಿದೆ.

ಹೈ ಕೋರ್ಟ್‌ನ ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್, ದುರಂತದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಇದರಿಂದ ಪ್ರಕರಣದ ಸಮಗ್ರ ತನಿಖೆ ನಡೆಯುತ್ತದೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದಿದ್ದಾರೆ.

ಏತನ್ಮಧ್ಯೆ ಅಪರಾಧ ವಿಭಾಗದ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದು, ಇನ್ನೆರಡು ದಿನಗಳಲ್ಲಿ ಪ್ರಾಥಮಿಕ ವರದಿಯನ್ನು ಸಿದ್ಧಪಡಿಸುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry