ಶಬರಿಮಲೆ ದುರಂತ ವರದಿ ಸಲ್ಲಿಕೆ: ಇಲಾಖೆಗಳ ನಡುವೆ ಸಹಕಾರದ ಕೊರತೆ

7

ಶಬರಿಮಲೆ ದುರಂತ ವರದಿ ಸಲ್ಲಿಕೆ: ಇಲಾಖೆಗಳ ನಡುವೆ ಸಹಕಾರದ ಕೊರತೆ

Published:
Updated:

ಕೊಚ್ಚಿ (ಪಿಟಿಐ): ಶಬರಿಮಲೆ ಕಾಲ್ತುಳಿತ ದುರಂತ ಸಂಭವಿಸಿಲು ವಿವಿಧ ಇಲಾಖೆಗಳ ಮಧ್ಯೆ ಸಹಕಾರದ ಕೊರತೆಯೇ ಕಾರಣ ಎಂದು ಹೈ ಕೋರ್ಟ್‌ನ ವಿಭಾಗೀಯ ಪೀಠ ಗುರುವಾರ ಅಭಿಪ್ರಾಯಪಟ್ಟಿದೆ.

ದುರಂತದ ಬಗ್ಗೆ ಪ್ರತ್ಯೇಕವಾಗಿ ವರದಿ ಸಲ್ಲಿಸಿರುವ ಪೊಲೀಸ್, ಅರಣ್ಯ ಮತ್ತು ತಿರುವಾಂಕೂರು ದೇವಸ್ಥಾನ ಮಂಡಳಿ (ಟಿಡಿಬಿ)ಗಳು, ಈ ಕುರಿತು ಪರಸ್ಪರ ದೋಷಾರೋಪಣೆ ಮಾಡಿಕೊಂಡಿವೆ ಎಂದು ಪೀಠದ ನ್ಯಾಯಮೂರ್ತಿಗಳಾದ ತೊಟ್ಟತ್ತಿಲ್ ರಾಧಾಕೃಷ್ಣನ್ ಮತ್ತು ಪಿ.ಎಸ್. ಗೋಪಿನಾಥನ್ ಹೇಳಿದ್ದಾರೆ.

ಪೊಲೀಸ್ ಇಲಾಖೆ ಪರವಾಗಿ ಡಿಜಿಪಿ ಜೇಕಬ್ ಪುನ್ನೂಸ್, ಟಿಡಿಬಿ ಆಯುಕ್ತ ಎನ್. ವಾಸು ಮತ್ತು ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಎಂ. ಮನೋಹರನ್ ಅವರು ಪೀಠಕ್ಕೆ ವರದಿ ಸಲ್ಲಿಸಿದರು. ಈ ವರದಿಯ ಬಗ್ಗೆ ವಿಚಾರಣೆ ನಡೆಸಿದ ಪೀಠವು, ಪುಲ್‌ಮೇಡು ಪ್ರದೇಶದಲ್ಲಿ ಭಕ್ತರಿಗೆ ಏಕೆ ಹೆಚ್ಚಿನ ಭದ್ರತೆ ಒದಗಿಸಿರಲಿಲ್ಲ ಎಂದು ಕಾರಣ ಕೇಳಿತು.

ಕೇಂದ್ರಕ್ಕೆ ಸೂಚನೆ: ಈ ಕುರಿತು ಪೆರಿಯಾರ್ ಅಭಯಾರಣ್ಯಕ್ಕೆ (ಹುಲಿ ಯೋಜನೆ) ಒಳಪಡುವ ಪುಲ್‌ಮೇಡುವಿನಲ್ಲಿ ಅಯ್ಯಪ್ಪ ಭಕ್ತರಿಗೆ ಸಂಚರಿಸಲು ಅನುಮತಿ ನೀಡುವ ಬಗ್ಗೆ ಕೇಂದ್ರ ಸರ್ಕಾರದ ಧೋರಣೆ ಏನು ಎಂದು ಪೀಠವು ಕೇಳಿದೆ.

ಸಹಾಯಕ ಸಾಲಿಸಿಟರ್ ಜನರಲ್ ಟಿ.ಪಿ. ಇಬ್ರಾಹಿಂ ಖಾನ್ ಅವರಿಗೆ ಈ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿರುವ ಪೀಠವು, ‘ಮಕರ ವಿಳಕ್ಕು’ ಯಾತ್ರೆಗೆ ಅಗತ್ಯವಾದ ಭೂಮಿಯನ್ನು ಅಭಯಾರಣ್ಯದಲ್ಲಿ ತಾತ್ಕಾಲಿಕವಾಗಿ ನೀಡುವ ಸಾಧ್ಯತೆಗಳ ಬಗ್ಗೆಯೂ ತಿಳಿಸುವಂತೆ ಹೇಳಿದೆ.

ಅಡ್ವೊಕೇಟ್ ಜನರಲ್ ಸಿ.ಪಿ. ಸುಧಾಕರ ಪ್ರಸಾದ್, ‘ಈ ಬಗ್ಗೆ ಗೃಹ ಇಲಾಖೆಯ ಕಾರ್ಯದರ್ಶಿಗಳು ಶುಕ್ರವಾರ ವರದಿಯನ್ನು ಸಲ್ಲಿಸಲಿದ್ದಾರೆ’ ಎಂದು ಪೀಠಕ್ಕೆ ವಿವರಣೆ ನೀಡಿದ್ದಾರೆ.

ಕಾಲ್ತುಳಿತ ದುರಂತದ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ಕೈಗೊಂಡಿರುವ ಪೀಠವು ಅಯ್ಯಪ್ಪಸ್ವಾಮಿ ಭಕ್ತರ ಸುರಕ್ಷತೆ ಬಗ್ಗೆ ಬೇಜವಾಬ್ದಾರಿ ತನ ತೋರಿರುವ ಸರ್ಕಾರವನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿತ್ತು. ಈ ದುರಂತ ಸಂಭವಿಸಲು ಕಾರಣವೇನು ಎಂದು ಗುರುವಾರದೊಳಗೆ ವಿವರಣೆ ನೀಡುವಂತೆ ಪೊಲೀಸ್, ಅರಣ್ಯ ಇಲಾಖೆಗಳಿಗೆ ಮತ್ತು ಟಿಡಿಬಿಗೆ ತಾಕೀತು ಮಾಡಿತ್ತು.

ವಿದ್ಯುದ್ದೀಪ ಇರಲಿಲ್ಲ: ಪೊಲೀಸ್ ಇಲಾಖೆ ಸಲ್ಲಿಸಿದ ವರದಿಯಲ್ಲಿ ಅಗತ್ಯ ಸಂಖ್ಯೆಯಲ್ಲಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ ವಿದ್ಯುದ್ದೀಪ ಇಲ್ಲದ ಕಾರಣ ದೊಡ್ಡ ಸಂಖ್ಯೆಯಲ್ಲಿದ್ದ ಭಕ್ತರನ್ನು ನಿರ್ವಹಿಸಲು ಆಗಲಿಲ್ಲ ಎಂದಿದೆ.

ಅರಣ್ಯ ಇಲಾಖೆಯು ಪುಲ್‌ಮೇಡು ಪ್ರದೇಶಕ್ಕೆ ಪ್ರವೇಶಿಸಲು ಮೂರು ಚಕ್ರ ಮತ್ತು ಚತುಷ್ಚಕ್ರ ವಾಹನಗಳಿಗೆ ಒಟ್ಟು 1400 ಪಾಸ್‌ಗಳನ್ನು ನೀಡಲಾಗಿತ್ತು. ಆದರೆ ಈ ವಾಹನಗಳನ್ನು ನಿಲ್ಲಿಸಲು ಸ್ಥಳ ಗುರುತಿಸಿರಲಿಲ್ಲ. 1.25 ಲಕ್ಷ ಭಕ್ತರು ಜಮಾಯಿಸಿದ್ದರು ಎಂದಿದೆ.

ಅಂದು ಅಲ್ಲಿ ಅಟೊ ಮತ್ತು ಜೀಪ್ ನಡುವೆ ಅಪಘಾತ ಸಂಭವಿಸಿ, ಅಟೊ, ನಿಲ್ಲಿಸಿದ್ದ ಜೀಪ್ ಮೇಲೆ ಉರುಳಿ ಬಿತ್ತು. ಆಗ ಉಂಟಾದ ಗದ್ದಲ ಮತ್ತು ಗೊಂದಲದಿಂದ ಕಾಲ್ತುಳಿತ ಉಂಟಾಯಿತು ಎಂದು ಹೇಳಿದೆ.

ಭದ್ರತೆಯ ಕೊರತೆ: ಟಿಡಿಬಿ ಸಲ್ಲಿಸಿರುವ ವರದಿಯಲ್ಲಿ ಪುಲ್‌ಮೇಡು ಪ್ರದೇಶದಲ್ಲಿ ಯಾತ್ರೆ ಕೈಗೊಳ್ಳುವ ಭಕ್ತರಿಗೆ ಸೌಕರ್ಯ ಕಲ್ಪಿಸಲು ಟಿಡಿಬಿ ಯಾವತ್ತೂ ಅನುಮತಿ ನೀಡಿಲ್ಲ. ಈ ಮಾರ್ಗ ಭಕ್ತರಿಗೆ ತಂಗಲು ಅನುಮತಿಸಿದ ಅಧಿಕೃತ ಸ್ಥಳವೂ ಅಲ್ಲ ಎಂದಿದೆ.

 ಘಟನಾ ಸ್ಥಳದಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಕೊರತೆ ಇತ್ತು ಎಂದಿದೆ. ಅರಣ್ಯ ಇಲಾಖೆಯು ಎಲ್ಲಾ ಸುರಕ್ಷಾ ಕ್ರಮಗಳನ್ನು ಅನುಸರಿಸಿತ್ತು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ವರದಿಯಲ್ಲಿ ಹೇಳಿದ್ದಾರೆ.

 ‘ಪರಿಹಾರದ ಹಣ ವಿತರಣೆಗೆ ವಿಶೇಷ ತಂಡ’

ಶಬರಿಮಲೆ ಕಾಲ್ತುಳಿತ ದುರಂತದಲ್ಲಿ ಸತ್ತವರ ಕುಟುಂಬಕ್ಕೆ ಘೋಷಿಸಿರುವ 6 ಲಕ್ಷ ರೂಪಾಯಿಗಳ ಪರಿಹಾರವನ್ನು ವಿತರಿಸಲು ಅಧಿಕಾರಿಗಳ ವಿಶೇಷ ತಂಡವೊಂದನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಹೇಳಿದ್ದಾರೆ.

ಪರಿಹಾರದ ಮೊತ್ತದಲ್ಲಿ 5 ಲಕ್ಷ ರೂಪಾಯಿಯನ್ನು  ರಾಜ್ಯ ಸರ್ಕಾರ ಮತ್ತು ತಿರುವಾಂಕೂರು ದೇವಸ್ಥಾನ ಮಂಡಳಿಯಿಂದ ನೀಡಲಾಗುತ್ತದೆ. ಉಳಿದ ಒಂದು ಲಕ್ಷ ರೂಪಾಯಿಯನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಯಿಂದ ಕೊಡಲಾಗುತ್ತದೆ ಎಂದು ಅವರು ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ದುರಂತದಲ್ಲಿ ಗಾಯಗೊಂಡವರಿಗೆ  ರೂ. 75 ಸಾವಿರ ದೊರಕಲಿದ್ದು, ಇದರಲ್ಲಿ ರಾಜ್ಯ ಸರ್ಕಾರದ ಪಾಲು ರೂ. 50 ಸಾವಿರ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry