ಶಬರಿಮಲೆ ದೇಗುಲದಲ್ಲಿ ಕತ್ತೆಗಳ ಸೇವೆಗೆ ಮುಕ್ತಿ

7

ಶಬರಿಮಲೆ ದೇಗುಲದಲ್ಲಿ ಕತ್ತೆಗಳ ಸೇವೆಗೆ ಮುಕ್ತಿ

Published:
Updated:

ತಿರುವನಂತಪುರ: ಪ್ರಸಿದ್ಧ ಶಬರಿಮಲೆ ದೇವಸ್ಥಾನದ ಪರಿಸರದಲ್ಲಿ ಪರಂಪರಾನುಗತವಾಗಿ ನಡೆದುಕೊಂಡು ಬಂದಿರುವ ಕತ್ತೆಗಳ ಸೇವೆಗಿನ್ನು ಮುಕ್ತಿ ಸಿಗಲಿದೆ.ಶಬರಿಮಲೆಯ ವಾರ್ಷಿಕ ಉತ್ಸವ ಮತ್ತಿತರ ಸಮಾರಂಭಗಳ ಸಂದರ್ಭದಲ್ಲಿ ಸಾಮಾನು ಸರಂಜಾಮುಗಳನ್ನು ಹೊತ್ತುಕೊಂಡು ಹೋಗಲು ಬೆಟ್ಟದ ಕೆಳಗಿನ ಪಂಪಾದಿಂದ ದೇಗುಲಕ್ಕೆ ಸಾಗುವ ಕಿರಿದಾದ ರಸ್ತೆಯಲ್ಲಿ ಕತ್ತೆಗಳನ್ನು ಬಳಸಲಾಗುತ್ತಿದ್ದು, ಇನ್ನುಮುಂದೆ ಇಂತಹ ಸೇವೆಯನ್ನು ನಿಲ್ಲಿಸುವಂತೆ ರಾಜ್ಯ ಸರ್ಕಾರ ದೇವಸ್ಥಾನದ ಆಡಳಿತ ಮಂಡಳಿಯಾದ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಗೆ ಸೂಚನೆ ನೀಡಿದೆ.ದೇವಸ್ಥಾನದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸ್ವಾಮಿ ಅಯ್ಯಪ್ಪನ್ ರಸ್ತೆಯನ್ನು ವಾಹನಗಳನ್ನು ಓಡಿಸುವ ರೀತಿ ಸಿದ್ಧಪಡಿಸಲಾಗಿದ್ದು, ಸಾಮಾನುಗಳನ್ನು ಹೊತ್ತೊಯ್ಯಲು ಟ್ರ್ಯಾಕ್ಟರ್‌ಗಳನ್ನು ಬಳಸಬಹುದಾಗಿದ್ದು, ಯಾವುದೇ ಕಾರಣಕ್ಕೂ ಇನ್ನು ಮುಂದೆ ಈ ರಸ್ತೆಯಲ್ಲಿ ಕತ್ತೆಗಳನ್ನು ಬಳಸುವಂತಿಲ್ಲ ಎಂದು ತಿಳಿಸಲಾಗಿದೆ.ಶಬರಿಮಲೆಯಲ್ಲಿ ವಾರ್ಷಿಕವಾಗಿ ನಡೆಯುವ ಸಂಕ್ರಾಂತಿ ಮತ್ತಿತರ ಉತ್ಸವದಲ್ಲಿ ಸುಮಾರು ಐದು ಕಿಮೀ ಉದ್ದದ ದುರ್ಗಮ ದಾರಿಯಲ್ಲಿ ಸಾಮಾನುಗಳನ್ನು ಸಾಗಿಸಲು ಕತ್ತೆಗಳ ಸೇವೆಯನ್ನು ಪಡೆಯಲಾಗುತ್ತಿತ್ತು. ಈ ಸೇವೆ ಒದಗಿಸಲು ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದ್ದು ಹರಾಜಿನಲ್ಲಿ ಗೆದ್ದ ಗುತ್ತಿಗೆದಾರ ಪಕ್ಕದ ತಮಿಳುನಾಡಿನಿಂದ ಎರಡರಿಂದ ಎರಡೂವರೆ ಸಾವಿರ ಕತ್ತೆಗಳನ್ನು ಕರೆತರುತ್ತಿದ್ದ.ಹೀಗೆ ತರಿಸಲಾದ ಕತ್ತೆಗಳನ್ನು 25ರಿಂದ 30 ಸಂಖ್ಯೆಯ ಒಂದೊಂದು ಹಿಂಡನ್ನಾಗಿ ಪ್ರತ್ಯೇಕಿಸಿ ಸರಿಯಾದ ಆಹಾರ, ವಿಶ್ರಾಂತಿ ನೀಡದೆ ಉತ್ಸವ ಪೂರ್ಣಗೊಳ್ಳುವತನಕ ಅವುಗಳನ್ನು ಹಗಲು ರಾತ್ರಿ ಎನ್ನದೆ ದುಡಿಸಿಕೊಳ್ಳಲಾಗುತ್ತಿತ್ತು. ಮೇಲಾಗಿ ಮಿತಿಮೀರಿದ ಹೊಡೆತದಿಂದಾಗಿ ಅವುಗಳ ಸ್ಥಿತಿ ದಯನೀಯ ಎನ್ನುವಂತಾಗಿ ಕೆಲವು ಸತ್ತುಹೋಗುತ್ತಿದ್ದವು.ಕತ್ತೆಗಳ ಶೋಚನೀಯ ಸ್ಥಿತಿ ಕಂಡ ಅನೇಕ ಪ್ರಾಣಿಪ್ರಿಯ ಸಂಘಟನೆಗಳು ಟಿಡಿಬಿಗೆ ಅವುಗಳ ಸೇವೆ ನಿಲ್ಲಿಸಲು ಮನವಿ ಮಾಡಿಕೊಂಡಿದ್ದವು. ಈ ವಿಷಯದಲ್ಲಿ ಕೇರಳ ಹೈಕೋರ್ಟ್ ಸಹ ಕತ್ತೆಗಳ ಸೇವೆಯನ್ನು ಕನಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಈ ಹಿಂದೆ ಸೂಚನೆ ನೀಡಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry