ಸೋಮವಾರ, ಮೇ 25, 2020
27 °C

ಶಬರಿ ಮಲೆ ದುರಂತ: ಕಾಲ್ತುಳಿತಕ್ಕೆ 100 ಭಕ್ತರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ/ಇಡುಕ್ಕಿ (ಪಿಟಿಐ): ಪ್ರಸಿದ್ಧ ಶಬರಿಮಲೆ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಮಕರಜ್ಯೋತಿ ದರ್ಶನ ಪಡೆದು ಹಿಂತಿರುಗುತ್ತಿದ್ದ ಅಯ್ಯಪ್ಪ ಭಕ್ತರಲ್ಲಿ ಉಂಟಾದ ನೂಕು ನುಗ್ಗಲು, ಕಾಲ್ತುಳಿತದಿಂದ ಕನಿಷ್ಠ ನೂರು ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.ಭಕ್ತರು ಸಾಂಪ್ರದಾಯಿಕವಾಗಿ ಬಳಸುತ್ತಿದ್ದ ಇಡುಕ್ಕಿ ಜಿಲ್ಲೆಯ ಪುಲ್‌ಮೇಡು ಅರಣ್ಯ ಪ್ರದೇಶದ ಕಿರಿದಾದ ರಸ್ತೆಯಲ್ಲಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಭಕ್ತರ ಸಮೂಹದತ್ತ ಜೀಪೊಂದು ನುಗ್ಗಿದ ಕಾರಣ ನೂಕುನುಗ್ಗಲು ಉಂಟಾಯಿತು. ಹಲವರು ಕೆಳಗೆ ಬಿದ್ದರು. ಬಿದ್ದವರ ಮೇಲೆ ಉಳಿದವರು ಓಡತೊಡಗಿದರು. ಗಾಯಗೊಂಡವರ ಆರ್ತನಾದ ಮುಗಿಲು ಮುಟ್ಟಿತ್ತು.  ಇದುವರೆಗೆ 55 ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವ ಎಂ.ಎ.ಬೇಬಿ ತಿಳಿಸಿರುವ ಅವರು, ಘಟನೆಯಲ್ಲಿ ಸತ್ತವರ ಸಂಖ್ಯೆಯ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.ಅಪಘಾತ ಪ್ರದೇಶ ತಮಿಳುನಾಡು ಗಡಿಗೆ ಹೊಂದಿಕೊಂಡಿದ್ದು, ಕರ್ನಾಟಕ ಮತ್ತು ತಮಿಳುನಾಡಿನ ಭಕ್ತರು ಪುಲ್‌ಮೇಡು ತಲುಪಲು ಥೇಣಿ, ಕಂಬಮ್ ಮತ್ತು ಉಪ್ಪುಪರ ಭಾಗಗಳಿಂದ ಸದಾ ಈ ಮಾರ್ಗವನ್ನು ಬಳಸುತ್ತಾರೆ. ಸತ್ತವರಲ್ಲಿ ಹೆಚ್ಚಿನ ಭಕ್ತರು ತಮಿಳುನಾಡಿನವರು. ಅಲ್ಲದೆ ಕೇರಳ, ಕರ್ನಾಟಕದವರೂ ಸೇರಿದ್ದಾರೆ. ಈ ಎಲ್ಲಾ ಭಕ್ತರೂ ಮಕರ ಜ್ಯೋತಿ ದರ್ಶನ ಪಡೆದ ನಂತರ ತಮ್ಮ ತಮ್ಮ ಊರುಗಳಲ್ಲಿ ಸಂಕ್ರಾಂತಿ ಆಚರಣೆ ಸಲುವಾಗಿ ಹಿಂತಿರುಗುತ್ತಿದ್ದರು.ಶಬರಿಮಲೆ ದೇವಸ್ಥಾನದಿಂದ ಸುಮಾರು ಐದು ಕಿ.ಮೀ. ದೂರದ ದಟ್ಟ ಅರಣ್ಯದ ಕಿರಿದಾದ ರಸ್ತೆಯಾಗಿತ್ತು. ಪ್ರಾಥಮಿಕ ಅಂದಾಜಿನ ಪ್ರಕಾರ ಈ ಮಾರ್ಗದಲ್ಲಿ ಸುಮಾರು ಒಂದೂವರೆ ಲಕ್ಷ ಭಕ್ತರು ತಮ್ಮ ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದರು ಎನ್ನಲಾಗಿದೆ. ಪೆರಿಯಾರ್ ಹುಲಿಧಾಮ ದಟ್ಟ ಅರಣ್ಯ ಪ್ರದೇಶದ ಬಳಿ ಈ ಘಟನೆ ನಡೆದಿದೆ.

ಅಯ್ಯಪ್ಪ ಭಕ್ತರು ತೆರಳುವ ಮುಖ್ಯ ಮಾರ್ಗಕ್ಕೆ ಪರ್ಯಾಯವಾಗಿ ಈ ಮಾರ್ಗ ಇದ್ದು, ಇಲ್ಲಿ ಸಂಚಾರ ನಿಯಂತ್ರಣ ಇರಲಿಲ್ಲ. ಜತೆಗೆ ದೇವಸ್ಥಾನದಿಂದಲೂ ಈ ಮಾರ್ಗವನ್ನು ನಿರ್ವಹಿಸುತ್ತಿರಲಿಲ್ಲ. ಹಾಗಾಗಿ ಇಲ್ಲಿ ಸಂಚಾರ ಪೊಲೀಸರ ನಿಯೋಜನೆ ಇರಲಿಲ್ಲ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.ಶಬರಿಮಲೆ ದೇವಸ್ಥಾನ ವಿಶೇಷ ಆಯುಕ್ತ ರಾಜೇಂದ್ರ ನಾಯರ್ ಪ್ರಕಾರ ರಾತ್ರಿ 8.15ರ ವೇಳೆಯಲ್ಲಿ ಈ ಘಟನೆ ನಡೆದಿದೆ. ಭಕ್ತರಿಂದ ತುಂಬಿದ್ದ ಎರಡು ಬಸ್‌ಗಳು ಮತ್ತು ಒಂದು ಜೀಪ್ ಒಂದನ್ನೊಂದು ಹಿಂದಿಕ್ಕುವ ಪೈಪೋಟಿ ನಡೆಸಿದ್ದು, ಬಸ್ಸು ಕಂದಕಕ್ಕೆ ಉರುಳಿತು. ನಂತರ ಜೀಪ್ ಭಕ್ತರ ಸಮೂಹದತ್ತ ನುಗ್ಗಿತು. ಹಾಗಾಗಿ ಕಾಲ್ತುಳಿತ ಉಂಟಾಯಿತು ಎಂದು ತಿಳಿಸಿದ್ದಾರೆ.ಗಾಯಗೊಂಡವರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಮತ್ತು ವಂಡಿಪೆರಿಯಾರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ರಾಜೇಂದ್ರ ನಾಯರ್ ಪ್ರಕಾರ ಬಸ್‌ಗಳ ಡಿಕ್ಕಿ ಮತ್ತು ಜೀಪ್ ಭಕ್ತರತ್ತ ನುಗ್ಗಿದ್ದರಿಂದ ಕಾಲ್ತುಳಿತ ಉಂಟಾಗಿದೆ.ತೀವ್ರ ಸಂಚಾರ ದಟ್ಟಣೆಯ ಹೊರತಾಗಿಯೂ ಪೊಲೀಸರು ಹಾಗೂ ಸ್ಥಳಿಯರು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಅವರು  ಗಾಯಾಳುಗಳಿಗೆ ಶೀಘ್ರ ಪರಿಹಾರ ಮತ್ತು ಅಗತ್ಯ ನೆರವು ನೀಡುವಂತೆ ಇಡುಕ್ಕಿ ಜಿಲ್ಲಾ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.ಶುಕ್ರವಾರದ ಘಟನೆಯಲ್ಲಿ ಗಾಯಗೊಂಡಿರುವವರು ಮತ್ತು ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಎಲ್ಲಾ ಕ್ರಮಗಳನ್ನು ಕೈಗೊಂಡಿರುವುದಾಗಿ ಆರೋಗ್ಯ ಸಚಿವೆ ಪಿ.ಕೆ.ಶ್ರೀಮತಿ ತಿಳಿಸಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ವೈದ್ಯರನ್ನು ಕಳುಹಿಸಲಾಗಿದೆ. ಕೇರಳ ರಾಜ್ಯಪಾಲ ಆರ್.ಎಸ್.ಗವಾಯ್ ಸಂತಾಪ ಸೂಚಿಸಿದ್ದಾರೆ.ಶಬರಿಮಲೆ ಯಾತ್ರೆ ಸಂದರ್ಭದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನಡೆದ ಅತ್ಯಂತ ದೊಡ್ಡ ದುರಂತ ಇದಾಗಿದ್ದು, ಬೆಳಕಿನ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಘಟನಾ ಸ್ಥಳದಲ್ಲಿ ಪರಿಹಾರ ಕಾರ್ಯಗಳಿಗೆ ಹಲವು ಅಡ್ಡಿಗಳಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಬಹುದು ಎಂದು ಶಂಕಿಸಲಾಗಿದೆ. ಬಸ್ಸು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಕೇಂದ್ರ ಸರ್ಕಾರ ಈ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದೆ. ಘಟನಾ ಸ್ಥಳಕ್ಕೆ ವಿಪತ್ತು ನಿರ್ವಹಣಾ ತಂಡವನ್ನು ಕಳುಹಿಸಿದೆ. ಜತೆಗೆ ರಕ್ಷಣಾ ಕಾರ್ಯದಲ್ಲಿ ಸೇನಾ ಸಿಬ್ಬಂದಿಯನ್ನು ಬಳಸಲಾಗುವುದು ಎಂದೂ ರಕ್ಷಣಾ ಸಚಿವ ಎ ಕೆ ಆಂಟನಿ ತಿಳಿಸಿದ್ದಾರೆ. ಸತ್ತವರಲ್ಲಿ ತಮಿಳುನಾಡಿನ ಭಕ್ತಾದಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆನ್ನಲಾಗಿದೆ.

ವಂಡಿಪೆರಿಯಾರ್ ಪೊಲೀಸ್ ಠಾಣೆಯಲ್ಲೂ ನಿಯಂತ್ರಣ ಕೊಠಡಿ ತೆರೆಯಲಾಗಿದ್ದು, 04869-252244 ಸಂಪರ್ಕಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.