ಗುರುವಾರ , ಮೇ 28, 2020
27 °C

ಶಬ್ದಮಣಿ: ಯೋಧ ದನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರಕತೆ ಬರೆಯುವಾಗಲೇ ರೇಣುಕುಮಾರ್ ತಲೆಯಲ್ಲಿದ್ದದ್ದು ಗಿರೀಶ ಕಾರ್ನಾಡರು. ಪ್ರಮುಖ ಪಾತ್ರವೊಂದನ್ನು ಕಡೆದದ್ದೇ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡು. ಆದರೆ, ಕಾಲ್‌ಷೀಟ್ ಕೇಳಲು ಹೊರಟಾಗ ಶುರುವಾದದ್ದು ಆತಂಕ. ಕಾರ್ನಾಡರು ಒಪ್ಪುವರೋ ಇಲ್ಲವೋ ಎಂಬ ಪ್ರಶ್ನೆಯನ್ನು ಮನಸ್ಸಿನಲ್ಲಿಟ್ಟುಕೊಂಡೇ ರೇಣುಕುಮಾರ್ ಐದು ಪುಟಗಳ ಕಥಾ ಸಾರಾಂಶವನ್ನು ಕೊಟ್ಟುಬಂದರು.ಮನೆಗೆ ತಲುಪುವಷ್ಟರಲ್ಲೇ ಕಾರ್ನಾಡರು ಫೋನ್ ಮಾಡಿ ನಟಿಸಲು ಅನುಮತಿ ಕೊಟ್ಟರು. ಇದ್ದ ಸಣ್ಣ ಪುಟ್ಟ ಅನುಮಾನಗಳನ್ನು ಕೂಡ ಅವರು ಬಗೆಹರಿಸಿಕೊಂಡರು.ಈ ನೆನಪನ್ನು ಖುದ್ದು ರೇಣುಕುಮಾರ್ ಹರಡಿ ಕೂತರು. ಸಕಲೇಶಪುರ ಹತ್ತಿರದ ಹೊಸಹಳ್ಳಿಗೆ ಚಿತ್ರತಂಡವನ್ನು ಕಟ್ಟಿಕೊಂಡು ಹೋಗಿ, ಕಷ್ಟಪಟ್ಟು ಕೆಲಸ ಮಾಡಿ ಅವರು ಮರಳಿದ್ದಾರೆ. ‘ಶಬ್ದಮಣಿ’ ಎಂಬುದು ಚಿತ್ರದ ಹೆಸರು. ಯೋಧನ ಕುರಿತ ಕಥೆಯನ್ನು ಅಡಗಿಸಿಟ್ಟುಕೊಂಡ ಚಿತ್ರವಿದು.

ಎಂಟು ದಿನ ಚಿತ್ರೀಕರಣದಲ್ಲಿ ಪಾಲ್ಗೊಂಡ ಕಾರ್ನಾಡರಿಗೆ ಚಿತ್ರದಲ್ಲಿ ಸೇಡು, ಮುಯ್ಯಿ ಎಂಬ ಧೋರಣೆ ಇಲ್ಲದಿರುವುದು ಇಷ್ಟವಾಗಿದೆ.‘ಭಾರತದಲ್ಲಿ ಭದ್ರತೆ ಚೆನ್ನಾಗಿಯೇ ಇದೆ’ ಎಂದ ಅವರು, ದೇಶ ಕಾಯುವ ಕೆಲಸ ಈಗ ಯೋಧರದ್ದಷ್ಟೇ ಆಗಿಲ್ಲವೆಂಬುದನ್ನು ಸೂಚ್ಯವಾಗಿ ತಿಳಿಸಿದರು.ತಾವು ಷೋಡಶಿಯಾಗಿದ್ದಾಗಲೇ ಮೂರು ಮಕ್ಕಳ ತಾಯಿಯ ಪಾತ್ರದಲ್ಲಿ ನಟಿಸಿದ ನೆನಪನ್ನು ತೆಗೆದ ಶ್ರುತಿ ಚಿತ್ರದಲ್ಲಿ ಕಾರ್ನಾಡರ ಪತ್ನಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ಈ ಚಿತ್ರದ ಮೂಲಕ ನಾನು ಅಜ್ಜಿಯಾಗಿದ್ದೇನೆ’ ಎಂದು ಅವರು ನಗು ತುಳುಕಿಸಿದರು. ಇನ್ನು ಮುಂದೆ ಅಜ್ಜಿ ಪಾತ್ರಗಳ ಆಫರನ್ನು ನಿರ್ದೇಶಕರು ತಮ್ಮ ಮುಂದೆ ಇಡಬಹುದು ಎಂಬ ಆತಂಕ ಕೂಡ ಅವರಿಗಿದೆ. ಪಾತ್ರದ ತೂಕದ ಕಾರಣಕ್ಕಷ್ಟೇ ಅವರು ಬಣ್ಣಹಚ್ಚಿದರಂತೆ.ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹರ್ಷ ಚಿತ್ರದಲ್ಲಿ ಯೋಧನ ಪಾತ್ರಧಾರಿ. ಕಾರ್ನಾಡರು ಹಾಗೂ ಶ್ರುತಿ ತರಹದ ಅನುಭವಿಗಳ ಜೊತೆ ಅಭಿನಯಿಸಿದ ಖುಷಿ ಅವರದ್ದು. ‘ಸಿಂಡ್ರೆಲ್ಲಾ’, ‘ಹೋರಿ’ ಚಿತ್ರಗಳಲ್ಲಿ ನಟಿಸಿರುವ ಸುಷ್ಮಾ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ.ಜಿ.ಶ್ರೀನಿವಾಸ್ ಛಾಯಾಗ್ರಹಣವಿರುವ ಚಿತ್ರಕ್ಕೆ ಶ್ಯಾಮ್ ಶಿವಮೊಗ್ಗ ಸಂಭಾಷಣೆ ಬರೆದಿದ್ದಾರೆ. ‘ವಂದೇ ಮಾತರಂ’ ಎಂಬ ಹಾಡನ್ನು ರೇಣುಕುಮಾರ್ ಬರೆದಿದ್ದು, ಈ ಗೀತರಚನೆಗೆ ವರ್ಷಗಳೇ ಹಿಡಿದಿದೆಯಂತೆ. ಅದನ್ನು ಚಿತ್ರಕ್ಕೆ ಬಳಸಿಕೊಂಡಿರುವುದಲ್ಲದೆ 26 ಭಾಷೆಗಳಲ್ಲಿ ಹಾಡಿಸಿದ್ದಾರೆ. ವಿವಿಧ ಸಾಹಿತಿಗಳು ಹಾಗೂ ಗಾಯಕರ ಸಾಥ್ ಅವರಿಗೆ ಸಿಕ್ಕಿದೆ.ಈ ಹಾಡನ್ನೇ ಪ್ರತ್ಯೇಕ ಆಲ್ಬಂ ರೂಪದಲ್ಲಿ ಹೊರತರುವ ಯೋಚನೆ ಅವರದ್ದು. ಅಂದಹಾಗೆ, ಇಷ್ಟೆಲ್ಲಾ ಕನಸುಗಳನ್ನಿಟ್ಟು ರೇಣುಕುಮಾರ್ ಸಂಗೀತವನ್ನೂ ಹಾಕಿ, ಸಿನಿಮಾ ಮಾಡಿರುವುದು ತಮ್ಮದೇ ಖರ್ಚಿನಲ್ಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.