`ಶಬ್ದ-ಅರ್ಥಗಳ ಸಮ್ಮಿಳನದಿಂದ ಉತ್ತಮ ಸಾಹಿತ್ಯ'

7

`ಶಬ್ದ-ಅರ್ಥಗಳ ಸಮ್ಮಿಳನದಿಂದ ಉತ್ತಮ ಸಾಹಿತ್ಯ'

Published:
Updated:

ಬೆಂಗಳೂರು: `ಶಬ್ದ ಮತ್ತು ಅರ್ಥಗಳು ಸಮಾನವಾಗಿ ಬೆರೆತರೆ ಮಾತ್ರ ಒಳ್ಳೆಯ ಸಾಹಿತ್ಯ ಸೃಷ್ಟಿಯಾಗುತ್ತದೆ' ಎಂದು ಹಿಂದಿ ಸಾಹಿತಿ ಡಾ.ನಾಮವರ್ ಸಿಂಗ್ ಹೇಳಿದರು.ಶಬ್ದ ಸಾಹಿತ್ಯಿಕ ಸಂಸ್ಥೆಯು ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಎರಡು ಸಾವಿರ ವರ್ಷಗಳ ಹಿಂದೆಯೇ ಸಾಹಿತ್ಯದ ಬಗ್ಗೆ ಸಂಸ್ಕೃತದ ಪಂಡಿತರು ವ್ಯಾಖ್ಯಾನ ಮಾಡಿದ್ದಾರೆ. ಶಬ್ದ ಮತ್ತು ಅರ್ಥದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಆ ಸಾಹಿತ್ಯ ಸರಿಯಾದ ರೂಪದಲ್ಲಿ ಮೂಡಿ ಬರುವುದಿಲ್ಲ' ಎಂದು ಅವರು ಅಭಿಪ್ರಾಯಪಟ್ಟರು.`ಸಾಹಿತ್ಯದಿಂದ ಆನಂದ ಉಂಟಾಗಬೇಕು. ಸಾಹಿತ್ಯದ ಮುಖ್ಯ ಉದ್ದೇಶ ಲೋಕ ಕಲ್ಯಾಣವಾಗಿರಬೇಕು. ಅತಿ ಸಾಮಾನ್ಯ ಜನರನ್ನು ಸಾಹಿತ್ಯವು ತಲುಪುವಂತಾಗಬೇಕು. ಆಗಲೇ ಸಾಹಿತ್ಯ ವಿಶ್ವವ್ಯಾಪಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ' ಎಂದರು.`ಸಾಹಿತ್ಯ ರಚನೆಯಲ್ಲಿ ಪುರುಷರಂತೆ ಸ್ತ್ರೀಯರು ಸಹ ಭಾಗಿಗಳಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸದೆ, ಅವರನ್ನು ಕೆಳಗೆ ತಳ್ಳುವ ಕಾರ್ಯವಾಗುತ್ತಿದೆ. ಆದರೆ, ಮಹಿಳಾ ಲೇಖಕರು ಎದೆಗುಂದದೆ, ತಮ್ಮ ವಿಚಾರಧಾರೆಗಳನ್ನು ಲೇಖನಿಯ ಮೂಲಕ ತೋರಿಸಬೇಕು. ಸಮಾಜದಲ್ಲಿರುವ ಲಿಂಗಭೇದವನ್ನು ಹೋಗಲಾಡಿಸಲು ಸಾಹಿತ್ಯದ ಮೂಲಕ ಪ್ರಯತ್ನಿಸಬೇಕು' ಎಂದು ಹೇಳಿದರು.`ಸಾಹಿತ್ಯವು ಸಮಾಜದಲ್ಲಿನ ಮೂಢನಂಬಿಕೆಗಳು, ಕಂದಾಚಾರ ಮತ್ತು ಅನಾಚಾರಗಳನ್ನು ತೊಡೆದು ಹಾಕಲು ಪ್ರಯತ್ನಿಸಬೇಕು. ಆಗಲೇ ಸಾಹಿತ್ಯವು ಸಾರ್ಥಕವಾಗುತ್ತದೆ' ಎಂದರು.`ಇಂದಿನ ಆಧುನಿಕ ಯುಗದಲ್ಲಿ ಸಾಹಿತ್ಯವು ಮರೆಯಾಗುತ್ತಿದೆ ಎಂಬ ಮಾತು ನಿಜವಾದರೂ ಅದು ಪೂರ್ಣ ಸತ್ಯವಲ್ಲ. ಏಕೆಂದರೆ, ಇಂದಿನ ಉದಯೋನ್ಮುಖ ಸಾಹಿತಿಗಳು ಹೊಸ ಆಶಾವಾದವನ್ನು ಬೆಳೆಸಿದ್ದಾರೆ. ಹೊಸ ರೀತಿಯ ಸಾಹಿತ್ಯ ಮಾದರಿಗಳು ಇತ್ತೀಚೆಗೆ ರೂಪುಗೊಳ್ಳುತ್ತಿವೆ' ಎಂದು ಹೇಳಿದರು.ಕನ್ನಡ ಮತ್ತು ಹಿಂದಿ ಸಾಹಿತಿ ಚಂದ್ರಕಾಂತ ಕೂಸನೂರು ಮಾತನಾಡಿ, `ನನ್ನ ಮಾತೃ ಭಾಷೆ ಕನ್ನಡ. ಆದರೆ, ಓದಿದ್ದು ಬರೆದಿದ್ದು ಹಿಂದಿಯಲ್ಲಿ. ಏಕಂದರೆ, ನನ್ನದು ಗುಲ್ಬರ್ಗ ಜಿಲ್ಲೆ. ಆಗ, ನಿಜಾಮರ ಆಡಳಿತವಿದ್ದ ಕಾರಣ. ಹಿಂದಿ, ಉರ್ದು ಭಾಷೆಗಳ ಅಭ್ಯಾಸ ಸಾಮಾನ್ಯವಾಗಿತ್ತು. ಮೊದಲು ಹಿಂದಿಯಲ್ಲಿ ಬರೆಯುತ್ತಿದ್ದ ನಾನು ನಂತರ ದ.ರಾ.ಬೇಂದ್ರೆಯವರ ಆಣತಿಯಂತೆ ಕನ್ನಡದಲ್ಲಿ ಸಾಹಿತ್ಯ ಕೃಷಿ ಆರಂಭಿಸಿದೆ. ಹಿಂದಿ ಭಾಷೆಯ ಬಗ್ಗೆ ಅಷ್ಟೊಂದು ತಾತ್ಸಾರವೇಕೆ ಎಂಬುದು ತಿಳಿಯುತ್ತಿಲ್ಲ. ಒಂದು ದೇಶವೆಂದಾದರೆ, ಅದಕ್ಕೆ ಒಂದು ದೇಶ ಭಾಷೆ ಬೇಕು. ಅದನ್ನು ಕೆಲವರು ಒಪ್ಪಿಕೊಳ್ಳುವುದಿಲ್ಲ. ಹಿಂದಿಯಲ್ಲಿ ಬರೆಯುವ ಲೇಖಕರಿಗೆ ದಕ್ಷಿಣ ಭಾರತದಲ್ಲಿ ಪ್ರೋತ್ಸಾಹ ಕಡಿಮೆ' ಎಂದು ಹೇಳಿದರು.`ಯಾವುದೇ ತಂದೆ-ತಾಯಿ ತಮ್ಮ ಮಕ್ಕಳು ಕಲಾವಿದ, ಚಿತ್ರಕಾರ ಅಥವಾ ಕವಿಯಾಗಲಿ ಎಂದು ಬಯಸುವುದಿಲ್ಲ. ಇನ್ನು ಶಿಕ್ಷಣ ಸಂಸ್ಥೆಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಯಲು ಪೂರಕವಾದ ವಾತಾವರಣವಿಲ್ಲ. ಸಾಹಿತ್ಯದ ಸೌಂದರ್ಯದ ಜತೆಗೆ ಶ್ರದ್ಧೆಯು ಬೆರೆತರೆ ಒಳ್ಳೆಯ ಸಾಹಿತ್ಯವು ಸೃಷ್ಟಿಯಾಗಲು ಸಾಧ್ಯ' ಎಂದರು.ಸಾಹಿತಿ ಚಂದ್ರಕಾಂತ ಕೂಸನೂರು ಅವರಿಗೆ `ಶಬ್ದ ಸಾಹಿತ್ಯ ಸನ್ಮಾನ' ಪ್ರಶಸ್ತಿ ಮತ್ತು ಸಾಹಿತಿಗಳಾದ ಪ್ರಭಾಶಂಕರ `ಪ್ರೇಮಿ', ಮಂಗಳ ಪ್ರಸಾದ್, ಮಥುರಾ ಕಲೌನಿ ಮತ್ತು ಶ್ರೀಕಾಂತ್ ಪರಾಶರ ಅವರಿಗೆ `ಶಬ್ದ ಸಮಾಜ ಸರೋಕಾರ್ ಸನ್ಮಾನ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry