ಭಾನುವಾರ, ಏಪ್ರಿಲ್ 18, 2021
32 °C

ಶರಣತತ್ವ ರಕ್ತಗತವಾಗಲಿ-ಸಿದ್ಧೇಶ್ವರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಸುಮ್ಮನೆ ಉಣ್ಣುವುದು ಬೇಡ. ತಿಂದರೆ ಜೀರ್ಣ ಆಗಬೇಕು. ಜಾನುವಾರುಗಳು ತಿಂದ ಮೇಲೆ ಮೆಲುಕು ಹಾಕುತ್ತವೆ. ಹಾಗೆ ಮಾಡಿದರೆ ತಿಂದ ಆಹಾರ ರಕ್ತಗತ ಆಗುತ್ತದೆ. ಅದರಂತೆ ವಚನಗಳನ್ನು ಮೆಲುಕು ಹಾಕಬೇಕು. ಅವು ರಕ್ತಗತ ಆಗಬೇಕು ಎಂದು ವಿಜಾಪುರ ಜ್ಞಾನಯೋಗ ಆಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.ಇಲ್ಲಿನ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಭಾನುವಾರ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರವಚನ ಹೇಳಿದರು.ಶರಣತತ್ವದಂತೆ ನಡೆದರೆ ಮೈ ಸಶಕ್ತ ಆಗುತ್ತದೆ. ಜೀವನ ಸಮೃದ್ಧಗೊಳ್ಳುತ್ತದೆ. ಯಾವುದೇ ಆಕರ್ಷಣೆಗೆ ಒಳಗಾಗದಂತೆ ಸಿರಿವಂತ ಆಗುತ್ತದೆ. ಸ್ವಚ್ಛ, ಸುಂದರ, ಸಮರ್ಥವಾಗಿ ರೂಪುಗೊಳ್ಳುತ್ತದೆ. ಯಾವುದೇ ಆಮೀಷಗಳಿಗೆ ಸೋಲುವುದಿಲ್ಲ. ಕೆಲವರು ಬೇಕು ಅಂತಾರೆ. ಬರೀ ಬೇಕು ಅಲ್ಲ; ಬೇಕೇ ಬೇಕು ಅಂತಾರೆ. ಎಲ್ಲವೂ ನನಗೆ ಬೇಕು ಅನ್ನುವವರಿದ್ದಾರೆ. ಅಂಥವರಿಗೆ ಎಂದೂ ಸಮಾಧಾನ ಆಗುವುದಿಲ್ಲ.ಮನಸ್ಸನ್ನು ಸಶಕ್ತಗೊಳಿಸುವುದಕ್ಕಾಗಿ 12 ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿದರು. ಅದು ಅಂದಿನ ದೊಡ್ಡ ಶಿಕ್ಷಣ ಕೇಂದ್ರವಾಗಿತ್ತು.ಅಲ್ಲಿದ್ದ ಅಕ್ಕಮಹಾದೇವಿಯ ವಚನಗಳು ದಿವ್ಯ ಸಂದೇಶ ಕೊಡುತ್ತವೆ. ಆಕೆಯ ಮಾತು, ವೈರಾಗ್ಯ, ಭಕ್ತಿಯ ಪಾರಮ್ಯಕ್ಕೆ ಅಲ್ಲಿದ್ದ ಎಲ್ಲರೂ ತಲೆಬಾಗಿದ್ದರು. ಉತ್ತರ ಭಾರತದ ಮೀರಾಬಾಯಿ, ಮಹಾರಾಷ್ಟ್ರದ ಕಾನ್ಹೋಪಾತ್ರದಂತಹ ವ್ಯಕ್ತಿತ್ವ ಆಕೆಯದ್ದು, ಅವರ 365 ವಚನಗಳನ್ನು ದಿನಕ್ಕೊಂದರಂತೆ ಹೇಳಬೇಕು.  ಅದರಿಂದ ಸಾಕಷ್ಟು ಜ್ಞಾನ ದೊರೆಯುತ್ತದೆ.`ಬೆಟ್ಟದ ಮೇಲ್ಗಿಚ್ಚು ಸುಟ್ಟಿತ್ತು ಕಾನನವ..~ ಎಂಬ ಅಕ್ಕಮಹಾದೇವಿಯ ವಚನ ಮನಸ್ಸಿನಲ್ಲಿನ ಕಾಮನೆಗಳ ಕಾಡನ್ನು ಸುಟ್ಟು ಹಾಕಬೇಕು. ಅಂತರಂಗವನ್ನು ಶುದ್ಧಗೊಳಿಸಬೇಕು. ಜ್ಞಾನ, ಸತ್ಯ, ಶಾಂತಿಯ ಜ್ಯೋತಿಯನ್ನು ಬೆಳಗಬೇಕು.

ವಿವೇಕ ಬೆಳೆಸಿಕೊಳ್ಳಬೇಕು ಎಂದು ಹೇಳುತ್ತದೆ. ಕಾಮ, ಕ್ರೋಧ, ಮದವೆಂಬ ಮುಳ್ಳಿನ ಕಾಡಿನಿಂದ ಸುಗಂಧ, ಸಮಾಧಾನ ದೊರೆಯುವುದಿಲ್ಲ ಎಂಬುದು ಇದರರ್ಥ.ಬಸವಣ್ಣ ಹೇಳಿದಂತೆ `ಹೊಸ್ತಿಲಲ್ಲಿ ಹುಲ್ಲು, ಮನೆಯೊಳಗೆ ರಜ ತುಂಬಿ..~ ಒಳಗೊಂದು ಹೊರಗೊಂದು ಇದ್ದರೆ ಜೀವನ ಉದ್ಧಾರ ಆಗುವುದಿಲ್ಲ. ಆದ್ದರಿಂದ ಅಂತರಂಗ ಮತ್ತು ಬಹಿರಂಗ ಎರಡೂ ಶುದ್ಧವಾಗಿರಬೇಕು. ಹಿಟ್ಲರ್‌ನಂಥವರು ಬರುತ್ತಾರೆ.ಜಗತ್ತನ್ನು ಎಬ್ಬಿಸಿ ಬೆಂಕಿ ಇಡುತ್ತಾರೆ. ಅವರಂತಾಗದೆ ಶ್ರೇಷ್ಠ ಜ್ಞಾನಿಗಳ, ಮಹಾನುಭಾವರ ತತ್ವ ಪಾಲಿಸಬೇಕು. ಆಗ ಭೂಮಿ ನಂದನವನ ಆಗುತ್ತದೆ ಎಂದು ಹೇಳಿದರು.ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಮುಚಳಂಬ ಪ್ರಣವಾನಂದ ಸ್ವಾಮೀಜಿ, ಹುಲಸೂರ ಶಿವಾನಂದ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಕಾಶಪ್ಪ ಬಾಲಕಿಲೆ ಮಾತನಾಡಿದರು.ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ, ನ್ಯಾಯಾಧೀಶರಾದ ಎಂ.ಎಸ್.ಮಠಪತಿ, ಮಾಜಿ ಶಾಸಕ ಎಂ.ಜಿ.ಮುಳೆ, ಯುವ ಮುಖಂಡ ಸುನಿಲ ಪಾಟೀಲ, ಶಿವರಾಜ ನರಶೆಟ್ಟಿ, ಸದಾನಂದ ಮಠ ಟ್ರಸ್ಟ್ ಅಧ್ಯಕ್ಷ ಎಂ.ಜಿ.ಮಹಾಜನ ಉಪಸ್ಥಿತರಿದ್ದರು.ವಿಕಾಸ ಅಕಾಡೆಮಿ ತಾಲ್ಲೂಕು ಅಧ್ಯಕ್ಷ ಬಸವರಾಜ ವರಕಾಲೆ ಸ್ವಾಗತಿಸಿದರು. ಪ್ರೊ.ವೆಂಕಣ್ಣ ದೊಣ್ಣೆಗೌಡ್ ನಿರೂಪಿಸಿದರು. ಪ್ರೊ.ಶಾಂತಲಿಂಗ ಮಠಪತಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.