ಶರಣಭೂಪಾಲರಡ್ಡಿ ದಂಪತಿ ಕಾಂಗ್ರೆಸ್‌ಗೆ ವಿದಾಯ

7

ಶರಣಭೂಪಾಲರಡ್ಡಿ ದಂಪತಿ ಕಾಂಗ್ರೆಸ್‌ಗೆ ವಿದಾಯ

Published:
Updated:

ಯಾದಗಿರಿ: ಕಾಂಗ್ರೆಸ್‌ನ ಪ್ರಭಾವಿ ಮುಖಂಡ ಡಾ. ಶರಣಭೂಪಾಲರಡ್ಡಿ ಹಾಗೂ ಅವರ ಪತ್ನಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಡಾ. ಶೈಲಜಾ ಶರಣಭೂಪಾಲರಡ್ಡಿ ಕಾಂಗ್ರೆಸ್‌ಗೆ ವಿದಾಯ ಹೇಳಿದ್ದಾರೆ.ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಡಾ. ಶರಣಭೂಪಾಲರಡ್ಡಿ, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು. ಪಕ್ಷದಲ್ಲಿನ ಅವ್ಯವಸ್ಥೆಗೆ ಬೇಸತ್ತು ನಾನು ರಾಜೀನಾಮೆ ನೀಡುತ್ತಿದ್ದೇನೆ.ಯಾವುದೇ ನಾಯಕರನ್ನು ದೂಷಿಸುವುದಿಲ್ಲ ಎಂದ ಅವರು, 1989 ರಿಂದ ಇಲ್ಲಿಯವರೆಗೆ ಸುಮಾರು 23 ವರ್ಷಗಳಿಂದ ಪಕ್ಷದ ಸಾಮಾನ್ಯ ಕಾರ್ಯಕತನಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ಇಲ್ಲಿಯವರೆಗೂ ಪಕ್ಷದ ಯಾವುದೇ ಘಟಕದ ಪದಾಧಿಕಾರಿ ಆಗಿ ನೇಮಕಗೊಂಡಿಲ್ಲ. ಆಗದೇ ಇರುವುದಕ್ಕೆ ನನಗೆ ಅಸಮಾಧಾನವೂ ಇಲ್ಲ. ಪಕ್ಷದ ಏಳ್ಗೆಗಾಗಿ ನನ್ನ ಪತ್ನಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ  ಡಾ. ಶೈಲಜಾ ಕೂಡ ಅಪಾರ ಸೇವೆ ಸಲ್ಲಿಸಿದ್ದಾರೆ. ಇಬ್ಬರು ವೈದ್ಯಕೀಯ ವೃತ್ತಿ ಬಿಟ್ಟು, ಪಕ್ಷಕ್ಕಾಗಿ ದುಡಿದಿದ್ದೇವೆ. ಇದೀಗ ಇಬ್ಬರು ರಾಜೀನಾಮೆ ನೀಡುತ್ತಿದ್ದೇವೆ ಎಂದು ಹೇಳಿದರು.

ಎರಡನೇ ಹಂತ ನಾಯಕರಿಗೆ ರಾಜಕೀಯವಾಗಿ ಪ್ರಾತಿನಿದ್ಯ ನೀಡುವುದಾಗಿ ಹೇಳುವ ರಾಜ್ಯದ ನಾಯಕರು ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದಾರೆ. ಅವರೇ ಕಚ್ಚಾಟದಲ್ಲಿ ನಿರತರಾಗಿದ್ದಾರೆ. ನನ್ನಂತೆ ಎಷ್ಟೋ ಯುವ ನಾಯಕರು ಮತ್ತು ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ಇದನ್ನು ಒಂದು ಹಂತದವರೆಗೂ ಸಹಿಸಿಕೊಂಡು ಇರಬಹುದು. ಸಹನೆಗೂ ಮಿತಿ ಇದೆ ಎಂದರು.ಕಾಂಗ್ರೆಸ್‌ನಲ್ಲಿನ ಭಿನ್ನಾಭಿಪ್ರಾಯ, ಸ್ವಜನ ಪಕ್ಷಪಾತ, ಆಂತರಿಕ ಕಚ್ಚಾಟ, ಗುಂಪುಗಾರಿಕೆಗಳು ಮಿತಿ ಮೀರಿ ಬೆಳೆಯುತ್ತಿವೆ. ಪಕ್ಷಕ್ಕಾಗಿ ದುಡಿಯುವ ಪ್ರಾಮಾಣಿಕರಿಗೆ ಕಿಮ್ಮತ್ತಿಲ್ಲದಂತಾಗಿದೆ. ಇಂತಹ ವ್ಯವಸ್ಥೆಯಿಂದ ದೂರ ಇರುವ ನಿರ್ಧಾರ ಮಾಡಿ, ಬೇಸರದಿಂದಲೇ ಪಕ್ಷ ತೊರೆಯುತ್ತಿದ್ದೇನೆ ಎಂದರು. ಎಲ್ಲ ಹಂತದ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದೇನೆ. ಆದರೂ ಪಕ್ಷ ನನಗೆ ಯಾವುದೇ ಪ್ರಾಶಸ್ತ್ಯ ನೀಡಲಿಲ್ಲ.ಇದರಿಂದಾಗಿ ಮನಸ್ಸಿಗೆ ನೋವಾಗಿದೆ ಎಂದು ತಿಳಿಸಿದರು.  ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವರಾದ ಡಾ. ಎ.ಬಿ. ಮಾಲಕರಡ್ಡಿ ಹಾಗೂ ಶರಣಬಸಪ್ಪಗೌಡ ದರ್ಶನಾಪುರ ಅವರ ಅನುಯಾಯಿಯಾಗಿ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ ಎಂದ ಅವರು, ಪಕ್ಷದ ಜಿಲ್ಲಾಮಟ್ಟದ ನಾಯಕರು ಕೂಡ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡರು. ಎಷ್ಟೇ ತೊಂದರೆಯಾದರೂ ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಅದು ಹುಸಿಯಾಗಿದೆ. ಸ್ವಾಭಿಮಾನಕ್ಕೆ ಧಕ್ಕೆ ಬಂದ ಕಡೆ ಇರುವುದು ಸೂಕ್ತವಲ್ಲ ಎಂದರು.ಮುಂಬರುವ ದಿನಗಳಲ್ಲಿ ಹಿತೈಶಿಗಳು, ಕಾರ್ಯಕರ್ತರು ಮತ್ತು ಬೆಂಬಲಿಗರು ಸಭೆ ನಡೆಸಲಾಗುವುದು. ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆಯೋ ಅದಕ್ಕೆ ನಾನು ಬದ್ಧನಾಗಿದ್ದು, ಪ್ರಾದೇಶಿಕ ಪಕ್ಷದತ್ತ ನನ್ನ ಒಲವಿದೆ. ಪ್ರಾದೇಶಿಕ ಪಕ್ಷವೊಂದರಿಂದ ಆಹ್ವಾನ ಬಂದಿದೆ. ಆದರೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬೆಂಬಲಿಗರ ತೀರ್ಮಾನವೇ ಅಂತಿಮ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry