ಶರಣರು ಜಾತಿಗೆ ಸೀಮಿತ: ಬುಳ್ಳಾ ಬೇಸರ

7

ಶರಣರು ಜಾತಿಗೆ ಸೀಮಿತ: ಬುಳ್ಳಾ ಬೇಸರ

Published:
Updated:

ಗುಲ್ಬರ್ಗ: ಅಂದು 12ನೇ ಶತಮಾನದಲ್ಲಿ ಶರಣರು ಎಲ್ಲ ಜಾತಿಗಳನ್ನು ಒಗ್ಗೂಡಿಸಲು ಯತ್ನಿಸಿದರೆ, ಇಂದು ಜಾತಿಗೊಂದು ಶರಣರನ್ನು ಸೀಮಿತಗೊಳಿಸುವ ಕಾರ್ಯಕ್ರಮಗಳು ನಡೆಯುತ್ತಿವೆ ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಡಾ.ನಾಗಬಾಯಿ ಬಿ. ಬುಳ್ಳಾ ಬೇಸರ ವ್ಯಕ್ತಪಡಿಸಿದರು.ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ `ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ' ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.ಸಿದ್ಧರಾಮೇಶ್ವರ ಅಂತಹ ಮಹಾಶರಣರ ಶ್ರಮ, ಪರೋಪಕಾರ, ಭಾವೈಕ್ಯ, ಜಾತಿ-ಲಿಂಗ ಸಮಾನತೆ ಮತ್ತಿತರ ಮೌಲ್ಯಗಳನ್ನು ಅರಿಯಬೇಕು. ಅದರಂತೆ ನಡೆಯಬೇಕು. ಸಮಾಜದಲ್ಲಿನ ಸುಶಿಕ್ಷಿತರು ಉಳಿದವರಿಗೆ ಮಾರ್ಗದರ್ಶನ ನೀಡಬೇಕು ಎಂದ ಅವರು, `ಜಯಂತಿ' ಕಾರ್ಯಕ್ರಮದಲ್ಲಿ ಜೈಕಾರ ಹಾಕುವುದರ ಬದಲು, ಅಂಬೇಡ್ಕರ್ ಬೋಧಿಸಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟಕ್ಕೆ ಶೋಷಿತ ಸಮುದಾಯಗಳು ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.ಮುಸ್ಲಿಮರಿಗೆ ಮಸೀದಿ, ಕ್ರೈಸ್ತರಿಗೆ ಚರ್ಚ್, ಮೇಲ್ವರ್ಗದ ಹಿಂದೂಗಳಿಗೆ ಮಂದಿರ ಇದೆ. ಶೋಷಿತ-ದಲಿತರಿಗೆ ಒಂದೆಡೆ ಸೇರಲು ಸಮಾಜದಲ್ಲಿ ಏನಿದೆ? ಎಂದ ಅವರು, ಅದಕ್ಕಾಗಿಯೇ ವರ್ಣಾಶ್ರಮದ ದೇಗುಲಗಳನ್ನು ವಿರೋಧಿಸಿ ಇಷ್ಟಲಿಂಗಕ್ಕೆ ಶರಣರು ಆದ್ಯತೆ ನೀಡಿದರು. 2ನೇ ಶತಮಾನದಲ್ಲೇ ಏಕತೆ ಸಾರಿದರು. ಆದರೆ ಇನ್ನೂ ಜಾತಿ ಮತ ಭೇದಭಾವಗಳ ಮನಸ್ಥಿತಿ ಹೋಗಿಲ್ಲ. ದೇವರು ಮಾಡುವುದನ್ನು ಬಿಡಿ. ಸಮಾಜದ ಬಡವರು, ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿ ಎಂದು ಹೇಳಿದರು.ಬಾಹ್ಯ ಕಾರ್ಯದ ಜೊತೆ ಅಂತರಂಗದ ಶುದ್ಧಿಗೆ ಸಿದ್ಧರಾಮೇಶ್ವರ ಶರಣರು ಒತ್ತು ನೀಡಿದರು. 68 ಸಾವಿರ ವಚನಗಳನ್ನು ಬರೆದರು ಎಂಬ ಉಲ್ಲೇಖವಿದೆ. ಈ ಪೈಕಿ 1,679 ದೊರಕಿವೆ. ಅವರು ಲೋಕೋಪಯೋಗಿ ಕಾರ್ಯಗಳ ಕರ್ಮಯೋಗಿ ಆಗಿದ್ದರು. ವಚನಗಳು ಅನುಭವದ ಅಭಿವ್ಯಕ್ತಿ ಎಂದು ವಿವರಿಸಿದರು.ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತಿತರ ಮುಖಂಡರು ಇದ್ದರು. ಕಾರ್ಯಕ್ರಮಕ್ಕೂ ಮೊದಲು   ಮೆರವಣಿಗೆಯನ್ನು ನಡೆಯಿತು. ಸಮಾಜದ ರಾಘವೇಂದ್ರ ಲಷ್ಕರಿ, ಭೀಮಾಶಂಕರ, ರಾಜೂಸಿಂಧೆ ಮತ್ತಿತರರು ಪಾಲ್ಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry