ಗುರುವಾರ , ನವೆಂಬರ್ 14, 2019
18 °C

ಶರಣಾಗತಿಗೆ ಕಾಲಾವಕಾಶ: ಸಂಜಯ್ ಮನವಿ ಬುಧವಾರ ವಿಚಾರಣೆ

Published:
Updated:

ನವದೆಹಲಿ (ಐಎಎನ್‌ಎಸ್): 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸೆರೆವಾಸದ ಶಿಕ್ಷೆಗೆ ಗುರಿಯಾಗಿರುವ ನಟ ಸಂಜಯ್ ದತ್ ಅವರು, ತೀರ್ಪನ್ನು ಪ್ರಶ್ನಿಸಿ, ಶರಣಾಗತಿಗೆ ಇನ್ನೂ ಆರು ತಿಂಗಳು ಕಾಲಾವಕಾಶ ನೀಡುವಂತೆ ಕೋರಿ ಸಲ್ಲಿಸಿದ ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರಕ್ಕೆ ಮುಂದೂಡಿದೆ.`ಟಾಡಾ ಕಾಯ್ದೆಯ ಅಡಿಯಲ್ಲಿ ಸಂಜಯ್ ದತ್ ಅವರಿಗೆ ಶಿಕ್ಷೆ ವಿಧಿಸಿದ ದ್ವಿಸದಸ್ಯ ಪೀಠವೇ ಸಂಜಯ್ ದತ್ ಅರ್ಜಿಯ ವಿಚಾರಣೆ ನಡೆಸುವುದು ಎಂದು ನ್ಯಾಯಮೂರ್ತಿ ಸದಾಶಿವಂ ನೇತೃತ್ವದ ಪೀಠವು ಮಂಗಳವಾರ ತಿಳಿಸಿತು. ನ್ಯಾಯಮೂರ್ತಿ ಸದಾಶಿವಂ ಮತ್ತು ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ಅವರನ್ನು ಒಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿತ್ತು.

ಚಿತ್ರೀಕರಣಗೊಂಡಿರುವ ತಮ್ಮ ಅನೇಕ ಚಿತ್ರಗಳ ಡಬ್ಬಿಂಗ್ ಕಾರ್ಯ ಬಾಕಿ ಉಳಿದಿರುವುದರಿಂದಾಗಿ ನ್ಯಾಯಾಲಯಕ್ಕೆ ಶರಣಾಗಲು ಇನ್ನೂ ಆರು ತಿಂಗಳು ಕಾಲಾವಕಾಶ ನೀಡಬೇಕೆಂದು ಸಂಜಯ್ ದತ್ ಅವರು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿಕೊಂಡಿದ್ದರು.

1993ರ  ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪಕ್ಕಾಗಿ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಸುಪ್ರೀಂ ಕೋರ್ಟ್ ಈ ಹಿಂದೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳು ನಾಲ್ಕು ವಾರದೊಳಗೆ ನ್ಯಾಯಾಲಯಕ್ಕೆ ಶರಣಾಗಬೇಕೆಂದು ತಾಕೀತು ಮಾಡಿತ್ತು.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ದತ್ ಅವರು ಒಂದೂವರೆ ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದು, ಇನ್ನೂ ಮೂರೂವರೆ ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕಿದೆ.

ಪ್ರತಿಕ್ರಿಯಿಸಿ (+)