ಶುಕ್ರವಾರ, ನವೆಂಬರ್ 22, 2019
23 °C

ಶರಣಾಗತಿ: ಸಂಜಯ್‌ಗೆ ನಾಲ್ಕು ವಾರಗಳ ಕಾಲಾವಕಾಶ

Published:
Updated:

ನವದೆಹಲಿ (ಪಿಟಿಐ): 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆರೆವಾಸ ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರ ಶರಣಾಗತಿಗೆ ಸುಪ್ರೀಂಕೋರ್ಟ್ ಬುಧವಾರ `ಮಾನವೀಯತೆ' ಆಧಾರದ ಮೇಲೆ ನಾಲ್ಕು ವಾರಗಳ ಕಾಲಾವಕಾಶ ನೀಡಿದ್ದು, ಇದರಿಂದ ಸಂಜಯ್ ಕೊಂಚ ನಿರಾಳರಾಗಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಸಂಜಯ್ ಅವರಿಗೆ ಐದು ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಿತ್ತು. ಆದರೆ ಸಂಜಯ್ ಅವರು ಈಗಾಗಲೇ ಅದರಲ್ಲಿ ಒಂದೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರಿಂದಾಗಿ ಇನ್ನುಳಿದ ಮೂರುವರೆ ವರ್ಷಗಳ ಶಿಕ್ಷೆ ಬಾಕಿ ಇದ್ದು ಅದನ್ನು ಅನುಭವಿಸಲು ಅವರ ಶರಣಾಗತಿಗೆ ಗುರುವಾರ ಅಂತಿಮ ದಿನವಾಗಿತ್ತು.ಶರಣಾಗತಿಗೂ ಮುನ್ನ ಕೋರ್ಟ್ ಮೊರೆಹೋದ ಸಂಜಯ್ ಅವರು ಚಿತ್ರರಂಗದಲ್ಲಿ ತಮ್ಮನ್ನು ನಂಬಿ ಸುಮಾರು 278 ಕೋಟಿಗೂ ಅಧಿಕ ಬಂಡವಾಳ ಹೂಡಲಾಗಿದ್ದು, ಏಳು ಚಿತ್ರಗಳ ನಿರ್ಮಾಣ ಕುರಿತಂತೆ ಅನೇಕ ಕಾರ್ಯಗಳು ಬಾಕಿಯಿದ್ದು, ಆದ್ದರಿಂದ ಶರಣಾಗತಿಗೆ ಆರು ತಿಂಗಳ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು.ಸಂಜಯ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಸದಾಶಿವಂ ಹಾಗೂ ಬಿ.ಎಸ್.ಚೌಹಾಣ್ ಅವರ ನೇತೃತ್ವದ ಪೀಠವು ಮನವಿಯಲ್ಲಿನ ಅಂಶಗಳನ್ನು ಪರಿಗಣಿಸಿ ಮಾನವೀಯತೆ ಆಧಾರದ ಮೇಲೆ ಶರಣಾಗತಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿದ್ದು, ಅವರ ಮನವಿಯಂತೆ ಆರು ತಿಂಗಳ ಕಾಲಾವಕಾಶ ವಿಸ್ತರಿಸಲು ಸಾಧ್ಯವಿಲ್ಲ. ಅಲ್ಲದೇ ಮುಂದೆಯೂ ಹೆಚ್ಚಿನ ಕಾಲಾವಕಾಶ ಕೋರಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿತು.

ಪ್ರತಿಕ್ರಿಯಿಸಿ (+)