ಬುಧವಾರ, ಮೇ 12, 2021
26 °C

ಶರಣ್‌ರ 3ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆಯಲ್ಲಿ ನಿಂತು ಕೇಳಿದ ಕತೆ ಇಷ್ಟವಾಗಿದ್ದೇ ತಡ ಅದನ್ನು ಸಿನಿಮಾ ಮಾಡುವ ಹಂಬಲಕ್ಕೆ ಬಿದ್ದರಂತೆ ನಟ ಶರಣ್. ಆ ಚಿತ್ರವನ್ನು ತಾವೇ ನಿರ್ಮಿಸಿ, ನಾಯಕನಾಗಿಯೂ ನಟಿಸಿ ಇದೀಗ ಕೊನೆಯ ಹಂತ ತಲುಪಿದ್ದಾರೆ.ಚಿತ್ರದ ಹೆಸರು `ರ‌್ಯಾಂಬೊ~. ಹೆಸರು ಕೇಳಿದಾಕ್ಷಣ ಆಕ್ಷನ್ ಚಿತ್ರ ಎನಿಸುವುದು ಖರೆ. ಆದರೆ ತಮ್ಮದು ಕಾಮಿಡಿ ಬೆರೆತ ಥ್ರಿಲ್ಲರ್ ಎನ್ನುತ್ತಾರೆ ಶರಣ್. ಚಿತ್ರದ ಪೋಸ್ಟರ್‌ನಲ್ಲಿ `3ಡಿ~ ಎಂಬ ಬರಹವಿದೆ. ಸಿನಿಮಾದಲ್ಲಿ 3ಡಿ ತಂತ್ರಜ್ಞಾನ ಬಳಸಲಾಗಿದೆಯೇ? ಎಂಬ ಪ್ರಶ್ನೆ ಏಳುತ್ತಿದ್ದಂತೆಯೇ ಪೋಸ್ಟರ್‌ನ ತುದಿಯಲ್ಲಿ ಡುಬಾಕೋರ್, ಡೌ ರಾಜ, ಡಗಲ್‌ಬಾಜಿ ಎಂಬ ಮೂರು `ಡಿ~ ಸೇರಿ `3ಡಿ~ ಆಗಿದೆ ಎಂದರು.`ನಾನು ಕಲಾವಿದನಾಗಿ ಎಷ್ಟೋ ವರ್ಷವಾಗಿದ್ದರೂ ಅದನ್ನು ಜೀರ್ಣಿಸಿಕೊಳ್ಳಲು ಆಗುತ್ತಿರಲಿಲ್ಲ. ಇದೀಗ ನಿರ್ಮಾಪಕನಾಗಿದ್ದೇನೆ. ಅದನ್ನೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ~ ಎನ್ನುತ್ತಾ ಮಾತಿಗೆ ಮೊದಲಾದರು ಶರಣ್.`ನನ್ನ ಮಾರುಕಟ್ಟೆ ಮಿತಿ ಆಧರಿಸಿ ಚಿತ್ರ ಮಾಡಿದ್ದೇನೆ. ಅಟ್ಲಾಂಟಾ ನಾಗೇಂದ್ರ ಅವರೊಂದಿಗೆ ಕೈಜೋಡಿಸಿ ಬಂಡವಾಳ ಹೂಡಿದ್ದೇನೆ. ಕಾಮಿಡಿ ಜೊತೆ ಥ್ರಿಲ್ಲರ್ ಬೆರೆಸಿರುವ ಕತೆ ಕೇಳಿದ್ದು ಇದೇ ಮೊದಲು. ಗೆಳೆಯ ತರುಣ್ ಸುಧೀರ್ ಮೂಲಕ ನಿರ್ದೇಶಕ ಎಂ.ಎಸ್. ಶ್ರೀನಾಥ್ ಪರಿಚಯವಾದರು. ಅವರ ಕತೆಯನ್ನು ಮೆಚ್ಚಿಕೊಂಡೆ. ಅದು ಗಾಂಧಿನಗರವನ್ನು ತಲುಪುವ ಮೊದಲು ನಾನು ಹಿಡಿಯಬೇಕು ಎಂದುಕೊಂಡು ತಕ್ಷಣ ಅಡ್ವಾನ್ಸ್ ಕೊಟ್ಟೆ.ಮೈಸೂರು ಮತ್ತು ಬೆಂಗಳೂರಿನಲ್ಲಿ ಒಟ್ಟು 50 ದಿನ ಚಿತ್ರೀಕರಣ ಮಾಡಿದೆ. ಕೃಷ್ಣ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ನನಗೆ ಚಿತ್ರದಲ್ಲಿ ಸಂದರ್ಭಕ್ಕೆ ತಕ್ಕಂತೆ ಕೆಲವು ಗೆಟಪ್‌ಗಳಿವೆ. ಒಬ್ಬ ಹಾಸ್ಯ ನಟನಿಗೆ ನಾಯಕಿಯಾಗುವ ಮೂಲಕ ಮಾಧುರಿ ಅವರು ಸಾಹಸವನ್ನೇ ಮಾಡಿದ್ದಾರೆ. ನನ್ನ ಸಿನಿಮಾ ಮುಗಿಯಲು ಸಹಕರಿಸಿದ ಕಲಾವಿದರು ಮತ್ತು ತಂತ್ರಜ್ಞರಿಗೆ ವಂದನೆಗಳು~ ಎಂದರು.ಅಂದು ಚಿತ್ರದ ಕೊನೆಯ ಹಾಡೊಂದರ ಚಿತ್ರೀಕರಣ ನಡೆಯುತ್ತಿತ್ತು. ಹಾಸ್ಯ ನಟರಾದ ಚಾರ್ಲಿ ಚಾಪ್ಲಿನ್, ಲಾರೆಲ್- ಹಾರ್ಡಿ, ಜಾನಿ ವಾಕರ್, ತಾಯ್‌ನಾಗೇಶ್, ರೇಲಂಗಿ ವೆಂಕಟರಾಮಯ್ಯ, ನರಸಿಂಹರಾಜು, ಬಾಲಕೃಷ್ಣ ಮುಂತಾದವರ ದೊಡ್ಡ ದೊಡ್ಡ ಭಾವಚಿತ್ರಗಳನ್ನು ಅಲ್ಲಲ್ಲಿ ಇಡಲಾಗಿತ್ತು.

 

ಆ ಭಾವಚಿತ್ರಗಳ ನಡುವೆ `ರ‌್ಯಾಂಬೊ~ ಚಿತ್ರಕ್ಕಾಗಿ ದುಡಿದ ಕಲಾವಿದರು ಮತ್ತು ತಂತ್ರಜ್ಞರು ಬಂದು ನಟಿಸುವ ವಿಶಿಷ್ಟ ಹಾಡು ಅದು. `ಚಿತ್ರದ ಕತೆಗೂ ಈ ಹಾಡಿಗೂ ಯಾವುದೇ ಸಂಬಂಧವಿಲ್ಲ. ಆದರೆ ಇಂಥದೊಂದು ಅಪರೂಪದ ಹಾಡನ್ನು ನನ್ನ ಚಿತ್ರದ ಕಲಾವಿದರು, ತಂತ್ರಜ್ಞಾನಗಾಗಿ ಅರ್ಪಿಸಬೇಕೆಂದೇ ಮಾಡುತ್ತಿರುವೆ~ ಎಂದು ಕಣ್ಣು ಅರಳಿಸಿದರು ಶರಣ್.ಹಿರಿಯ ನಟಿ ಉಮಾಶ್ರೀ ಅವರಿಗೆ ಚಿತ್ರದಲ್ಲಿ ತಾಯಿಯ ಪಾತ್ರವಂತೆ. ಆದರೆ ಎಲ್ಲಿಯೂ ಅಳುವುದಿಲ್ಲ, ಅಳಿಸುವುದಿಲ್ಲ ಎಂದು ಭರವಸೆಯ ಧಾಟಿಯಲ್ಲಿ ಹೇಳಿದ ಅವರು, `ಮಧ್ಯಮದ ವರ್ಗದ ತಾಯಿಯ ಪಾತ್ರ ಇದು. ಮಗನ ಅಭ್ಯುದಯ ಬಯಸುವ ಸಿಡುಕಿನ ತಾಯಿ ಅವಳು. ಭಾವನೆಗಳು ಸಹಜವಾಗಿ ಮೂಡಿಬಂದಿವೆ. ಶರಣ್, ತರುಣ್ ಅವರಂಥ ಯುವಕರು ಮಾಡುತ್ತಿರುವ ಈ ಸಿನಿಮಾ ಯಶಸ್ಸಾಗಲೇ ಬೇಕು~ ಎಂದು ಆಶಿಸಿದರು.`ಚಿತ್ರ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ಕತೆಗೆ ಪೂರಕವಾಗಿ ಹಾಸ್ಯದ ಸನ್ನಿವೇಶಗಳಿವೆ. ಉಮಾಶ್ರೀ ಅವರ ಸೋದರನಾಗಿ ಚಿತ್ರದಲ್ಲಿ ನಟಿಸಿದ್ದೇನೆ~ ಎಂದು ಚುಟುಕಾಗಿ ಹೇಳಿ ಕುಳಿತರು ತಬಲಾ ನಾಣಿ.ನಿರ್ದೇಶಕ ಎಂ.ಎಸ್.ಶ್ರೀನಾಥ್ ಅವರಿಗೆ ಕನ್ನಡ ಬಾರದ ಕಾರಣ ತಮಿಳಿನಲ್ಲಿಯೇ ಕಲಾವಿದರು ಮತ್ತು ತಂತ್ರಜ್ಞರಿಗೆ ವಂದಿಸಿದರು. ಹಿರಿಯ ನಟ `ಸಂಕೇತ್~ ಕಾಶಿ ಮಾತನಾಡಿ, ಮಾಡಬಾರದ್ದನ್ನು ಮಾಡುವ ತರ‌್ಲೆಗಳ ಸಿನಿಮಾ ಇದು, ತುಂಬಾ ಕುತೂಹಲಕಾರಿ ಕತೆ ಇದೆ ಎಂದರು.ನಾಯಕಿ ಮಾಧುರಿ ಅವರ ಮುಖದಲ್ಲಿ ಈ ಚಿತ್ರದಲ್ಲಿ ಮೊದಲ ಬಾರಿಗೆ ಹೋಮ್ಲಿ ಪಾತ್ರ ಸಿಕ್ಕಿದ ಸಂತಸ ಕಾಣುತ್ತಿತ್ತು. ಸಿನಿಮಾ ಚಿತ್ರೀಕರಣಕ್ಕೆ ಬರುವಾಗ ಉತ್ಸಾಹದಿಂದ ಬರುತ್ತಿದ್ದುದನ್ನು ನೆನಪಿಸಿಕೊಂಡ ಅವರು ಚಿತ್ರತಂಡಕ್ಕೆ ವಂದಿಸಿದರು.ಶರಣ್ ಸೋದರಿ ಶ್ರುತಿ ಅವರೂ ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಕುಟುಂಬ ಚಿತ್ರರಂಗಕ್ಕೆ ಬಂದು 22 ವರ್ಷ ತುಂಬಿದ್ದನ್ನು ನಂಬಲೇ ಆಗುತ್ತಿಲ್ಲ ಎಂದ ಅವರು, `ಕರ್ಪೂರದ ಗೊಂಬೆ~ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದ ತಮ್ಮ ಅಣ್ಣ ದೊಡ್ಡ ಹಾಸ್ಯ ನಟನಾಗುವ ಕಲ್ಪನೆಯೇ ಇರಲಿಲ್ಲ ಎಂದರು. ಚಿತ್ರದಲ್ಲಿ ಅವರಿಗೆ ಜಿಲ್ಲಾಧಿಕಾರಿ ಪಾತ್ರವಂತೆ.  

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.