ಸೋಮವಾರ, ಏಪ್ರಿಲ್ 19, 2021
31 °C

ಶರಣ ಮಾರ್ಗದಲ್ಲಿ ನಡೆದವಂಗೆ ಸಾವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಆಯಕ್ತರಾಗಿದ್ದ ಕಾಶಿನಾಥ ಗೋಖಲೆ ಬುಧವಾರ ಭಾಲ್ಕಿಯಲ್ಲಿ ನಡೆಯಬೇಕಿದ್ದ ಲಿಂ.ಡಾ. ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಹಾಗೂ ಶರಣ ಸಮ್ಮೇಳನಕ್ಕೆ ಚಾಲನೆ ನೀಡಿ ಧ್ವಜಾರೋಹಣ ನೆರವೇರಿಸಬೇಕಿತ್ತು.ಆದರೆ ತಾನೊಂದು ಬಗೆದರೆ ದೈವ ಬೇರೊಂದು ಬಗೆದಿತ್ತು. ಮೊನ್ನೆ ಏ.14ರಂದು ಕಲ್ಯಾಣದಲ್ಲಿ ನಡೆದ ಡಾ. ಅಂಬೇಡ್ಕರ್ ಜಯಂತಿಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅವರಿಗೆ ತೀವ್ರ ಹೃದಯಾಘಾತವಾಗಿ ಮೃತಪಟ್ಟರು. ಅವರ ಸ್ಮರಣೆ ಬುಧವಾರ ಮತ್ತೊಮ್ಮೆ ಶೋಕದಲ್ಲಿ ತೇಲಿಸಿತು.ಕಾಶಿನಾಥ ಗೋಖಲೆಯವರ ಬದಲಿಗೆ ಅವರ ಧರ್ಮಪತ್ನಿ ಶಾಂತಾದೇವಿ ಕೆ. ಗೋಖಲೆ ಅವರು ಭಾರವಾದ ಹೃದಯದಿಂದ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಸಭೆಯಲ್ಲಿ 2ನಿಮಿಷ ಮೌನಾಚರಣೆಯ ಮೂಲಕ ಶೃದ್ಧಾಂಜಲಿಯೂ ನಡೆಯಿತು.ಸಾನಿಧ್ಯ ವಹಿಸಿದ್ದ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಕಾಶಿನಾಥ ಗೋಖಲೆಯವರು ಭಾಲ್ಕಿಯಲ್ಲಿ ತಹಸೀಲ್ದಾರರಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಚನ್ನಬಸವ ಪಟ್ಟದ್ದೇವರು ಮತ್ತು ಮಠದೊಂದಿಗೆ ಸತತ ಸಂಪರ್ಕವಿತ್ತು. ಅವರು ಬಸವಕಲ್ಯಾಣಕ್ಕೆ ಆಯುಕ್ತರಾಗಿ ಬಂದ ಮೇಲೆ ಸಾಕಷ್ಟು ಶರಣಸೇವೆ ಮಾಡಿದ್ದಾರೆಂದು ಸ್ಮರಿಸಿದರು.

ಎಮ್ಮವರಿಗೆ ಸಾವಿಲ್ಲ. ಲಿಂಗದಲ್ಲಿ ಹುಟ್ಟಿ ಲಿಂಗದಲ್ಲಿ ಉದಯವಾದರು ನಮ್ಮ ಶರಣರು ಎನ್ನುವ ಹಾಗೆ ಗೋಖಲೆಯವರು ಬಸವಾದಿ ಶರಣರ ಕಾಯಕ ಸ್ಥಳದ ಬಯಲಿನಲ್ಲಿ ಬಯಲಾಗುವ ಮೂಲಕ ಅಮರರಾಗಿದ್ದಾರೆಂದು ಹೇಳಿದರು.‘ಬಸವ ಮಾರ್ಗ’ದ ಸಂಪಾದಕ ಲಿಂಗಣ್ಣ ಸತ್ಯಂಪೇಟೆ ಮಾತನಾಡಿ, ಶರಣರಿಗೆ ಸಾವು ಬಾರದು. ಬಸವಮಾರ್ಗದಲ್ಲಿ ನಡೆದಾತಂಗೆ ಮರಣವೇ ಮಹಾನವಮಿ ಎಂದು ನುಡಿದರು. ಡಾ. ಚನ್ನಬಸವ ಪಟ್ಟದ್ದೇವರಿಂದಲೇ ಉದ್ಘಾಟನೆಗೊಂಡ ಮೊದಲ ಶರಣ ಸಮ್ಮೇಳನ ಈಗ  ಕಲ್ಯಾಣ ನಾಡಿನ 24ನೇ ಸಮ್ಮೇಳನವಾಗಿ ಭಾಲ್ಕಿಯಲ್ಲಿ ನಡೆಯುತ್ತಿರುವದು ಸಂತಸ ತಂದಿದೆ ಎಂದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಚಪ್ಪ ಪಾಟೀಲ ಬಸವಗುರು ಪೂಜೆ ನೆರವೇರಿಸಿದರು. ಪುರಸಭೆ ಅಧ್ಯಕ್ಷೆ ಜಯಶ್ರೀ ಮಾನಕಾರಿ, ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ, ಎಸ್.ಬಿ. ಬಿರಾದಾರ, ಔರಾದ್‌ನ ರವೀಂದ್ರ ಮೀಸೆ ಮುಂತಾದವರು ಇದ್ದರು. ಬಸವಾನಂದ ಶರಣರು ನಿರ್ವಹಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.