ಮಂಗಳವಾರ, ಮೇ 18, 2021
30 °C

ಶರಣ ಶ್ರೇಷ್ಠ ಸಮಗಾರ ಹರಳಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಕಲ ಜೀವಾತ್ಮಗಳಿಗೆ ಲೇಸನ್ನೇ ಬಯಸಿದ 12ನೇ ಶತಮಾನದ ಬಸವಾದಿ ಶರಣರ ಸಿದ್ಧಾಂತ ಸರ್ವಕಾಲಿಕ ಸತ್ಯವಾಗಿದೆ. 12ನೇ ಶತಮಾನದಲ್ಲಿನ ಶರಣರ ಸಾಲಿನಲ್ಲಿ ಹಿರಿಯ ಶರಣರಾದ ಸಿದ್ಧಯೋಗಿ, ಕಾಯಕನಿಷ್ಠ ಸಮಗಾರ ಹರಳಯ್ಯನವರೂ ಒಬ್ಬರು.“ನಡೆ, ನುಡಿ ಒಂದಾದೆಡೆ ಇದೇ ಜನ್ಮ ಕಡೆ/ ಮತ್ತೆ ಹುಟ್ಟಿಬರುವ ಜಂಜಡ ಬೇಡ/ ಜೀವನ್ಮುಕ್ತಿ ಕಾಣಿರೋ/ ಮುಂದಿಟ್ಟ ಹೆಜ್ಜೆ ಹಿಂದೆ ಇಡಬೇಡ/ ಮಾನವ ಧರ್ಮದ ತತ್ವ ಬಿಡಬೇಡ/ ಸತ್ಯದ ಮಾತಿಗೆ ಮರಣದಂತ ಪ್ರಸಂಗ ಬಂದರೂ ಮರಣವೇ ಮಹಾನವಮಿ ಎಂದು ಸ್ವೀಕರಿಸಿರೆಂದ ನಮ್ಮ ಹರಳಲಿಂಗೇಶ್ವರ ಸಾಕ್ಷಿಯಾಗಿ ನಿಜ ಶರಣ ಸಮಗಾರ ಹರಳಯ್ಯ”.ಅನುಭವ ಮಂಟಪದಲ್ಲಿ ಇಂಥ ಮಾತುಗಳನ್ನಾಡಿ, ತತ್ವ ಸತ್ವಗಳು ಕೂಡಿಕೊಂಡಿರಬೇಕು. ಮಾತಿಗೆ ಜೀವಕಳೆ ತುಂಬಿರಬೇಕು. ವಚನಗಳೆಲ್ಲ ಪಚನ ಮಾಡಿಕೊಳ್ಳಬೇಕು. ತೋರಿಕೆಯ ಭಕ್ತಿ ಕೈ ಬಿಡಬೇಕು ಎಂದವರು ಹರಳಯ್ಯ. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು, ಗೌರವಿಸಬೇಕು. ಕಾಯಕನಿಷ್ಠೆಯಿಂದ ಕೈಲಾಸ ಕಾಣಬೇಕು ಎಂದ ಅವರು, ಶರಣ ಪರಂಪರೆಯ ಕೀರ್ತಿ ಕಳಸವಾಗಿದ್ದಾರೆ.ವಿಜಾಪುರ ಜಿಲ್ಲೆಯ ಕಲಿಗೂಡ ಎಂಬ ಗ್ರಾಮದಲ್ಲಿ ಶಿವಭಕ್ತರಾದ ಸಮಗಾರ ಕುಲದಲ್ಲಿನ ಶರಣ ದಂಪತಿ ಪರಮಯ್ಯ, ಹೊನ್ನಮ್ಮ ಅವರ ಮಗನಾಗಿ ಹರಳಯ್ಯ ಜನಿಸಿದರು. ತಂದೆ-ತಾಯಿ ಪೂಜಿಸುತ್ತಿದ್ದ ದೈವಿ ಹರಳನ್ನು ಹರಳಯ್ಯನೂ ಪೂಜಿಸುತ್ತಾರೆ. ಈ ಹರಳಿನ ಪೂಜೆಯಿಂದ ಅನೇಕ ಜನರಿಗೆ ಒಳ್ಳೆಯದಾಗುತ್ತದೆ. ಭಕ್ತಿ ಇದ್ದೆಡೆ ಶಕ್ತಿ. ಶಕ್ತಿಯ ರೂಪವೇ ಸತ್ಯ.  ಸತ್ಯದ ಸಂಕೇತವೇ ದೇವನ ಅನುಗ್ರಹ ಎನ್ನುವುದು ಹರಳಯ್ಯನವರ ತತ್ವವಾಗಿದ್ದು, ಇದನ್ನೇ ಅವರು ಜನತೆಗೆ ಬೋಧನೆ ಮಾಡಿದರು.ಹರಳಯ್ಯನವರು ಸುರಪುರದ ದೊರೆಗಳ ಮೂಲಕ ಕೆಂಭಾವಿಗೆ ಬರುತ್ತಾರೆ. ದೇವರ ದಾಸಿಮಯ್ಯ ಅವರ ಆಸ್ಥಾನಕ್ಕೆ ಭೇಟಿ ಭೇಟಿ ನೀಡುತ್ತಾರೆ. ಕಕ್ಕೇರಿಯಲ್ಲಿ ತನ್ನ ಭಕ್ತಿಯ ಪ್ರಭಾವ ಬೀರುತ್ತಾರೆ. ದೈವತ್ವ ಹೊಂದಿದ ಹರಳಯ್ಯ ಜನಕಲ್ಯಾಣಕ್ಕಾಗಿ ದೇಶ ಸಂಚಾರ ಆರಂಭಿಸುತ್ತಾರೆ. ಬಸವಕಲ್ಯಾಣದಲ್ಲಿನ ಅನುಭವ ಮಂಟಪದ ಕರೆ ಬಂದಾಗ ತ್ರಿಪುರಾಂತದ ಮೂಲಕ ಬಸವಕಲ್ಯಾಣ ಪ್ರವೇಶ ಮಾಡುತ್ತಾರೆ. ಅವರ ಕೀರ್ತಿಗೆ ಬಸವಣ್ಣನವರು ಮತ್ತು ಹೊಳಪು ಮೂಡಿಸುತ್ತಾರೆ.ಬಸವಣ್ಣನವರ ಚರಿತ್ರೆಯಲ್ಲಿ ಹರಳಯ್ಯನವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅಂತರಜಾತೀಯ ವಿವಾಹ ಎನ್ನುವುದನ್ನು ಮುಂದಿಟ್ಟುಕೊಂಡು, ವೈದಿಕ ಪುರೋಹಿತಶಾಹಿಗಳು ತಮ್ಮ ಬಲಪ್ರಯೋಗ ಮಾಡುತ್ತಾರೆ. ಕುತಂತ್ರದಿಂದ ಬಸವಣ್ಣನವರು ಕಟ್ಟಬಯಸಿದ ಸಮಾಜವನ್ನು ಹಾಳು ಮಾಡಲು ಪ್ರಯತ್ನಿಸುತ್ತಾರೆ.ಬಸವಾದಿ ಶರಣರ ಸಿದ್ಧಾಂತಗಳು ಎಂದಿಗೂ ಪ್ರಸ್ತುತವಾಗಿವೆ. ಏ. ರಂದು ನಾಡಿನಾದ್ಯಂತ ಹರಳಯ್ಯನವರ ಜಯಂತಿ ಆಚರಿಸಲಾಗುತ್ತದೆ. ಹರಳಯ್ಯನವರ ಪವಾಡ ಕ್ಷೇತ್ರಗಳಾದ ಮೈಸೂರು ಜಿಲ್ಲೆ, ಉತ್ತರ ಕನ್ನಡ, ಬೆಳಗಾವಿ, ವಿಜಾಪುರ, ಶಿವಮೊಗ್ಗ, ಹಾವೇರಿ, ಬೀದರ್, ಸೋಲಾಪುರ, ಉಳವಿ ಮತ್ತಿತರೆಡೆಗಳಲ್ಲಿ ಹರಳಯ್ಯನವರ ಪಲ್ಲಕ್ಕಿ ಉತ್ಸವ, ಮೆರವಣಿಗೆ, ತೊಟ್ಟಿಲು ತೂಗುವ ಕಾರ್ಯಕ್ರಮಗಳು ನಡೆಯಲಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.