ಸೋಮವಾರ, ಮೇ 10, 2021
26 °C
ಅಗಡಿ ಅಕ್ಕಿಮಠದಲ್ಲಿ ಇಂದು ಅಂತ್ಯಕ್ರಿಯೆ

ಶರಣ ಸಂಸ್ಕೃತಿ ಬಿತ್ತಿದ ಚನ್ನಬಸವ ಶ್ರೀಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಧಾರ್ಮಿಕ ಕ್ಷೇತ್ರದ ಶ್ರೇಯೋಭಿವೃದ್ಧಿ ಜತೆಗೆ ಕನ್ನಡ ನೆಲ, ಜಲ ರಕ್ಷಣೆಗಾಗಿ ಸುಮಾರು ನಾಲ್ಕು ದಶಕಗಳ ಕಾಲ ತಾಲ್ಲೂಕಿನ ಅಗಡಿ ಅಕ್ಕಿಮಠದ ಹಾಗೂ ಅಥಣಿ ಗಚ್ಚಿನಮಠದ ಚನ್ನಬಸವ ಸ್ವಾಮಿಗಳು ಅವಿರತ ಹೋರಾಟ ನಡೆಸಿದದ ಮಹಾನ್ ಶ್ರೀಗಳು.ಅಗಡಿ ಹಾಗೂ ಅಥಣಿಯಲ್ಲಿ ಧರ್ಮ ಜಾಗೃತಿಯನ್ನುಂಟು ಮಾಡುವುದರ ಮೂಲಕ ಶರಣ ಸಂಸ್ಕೃತಿಯನ್ನು ಪರಿಣಾಮಕಾರಿಯಾಗಿ ಬಿತ್ತುವ ಕೆಲಸ ಮಾಡಿದ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದ್ದರು.ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಖಾಜಿ ಬೀಳಗಿಯಲ್ಲಿ ನವಂಬರ್ 2, 1947ರಲ್ಲಿ ತಂದೆ ಶಿವಲಿಂಗಯ್ಯ, ತಾಯಿ ನೀಲಾಂಬಿಕಾ ಉದರದಲ್ಲಿ ಜನಿಸಿದರು. ಚಿಕ್ಕವಯಸ್ಸಿನಲ್ಲಿಯೇ ಚಿತ್ರದುರ್ಗದ ಮಲ್ಲಿಕಾರ್ಜುನ ಶ್ರೀಗಳ ಕೃಪಾಶೀರ್ವಾದ ಪಡೆದ ಶ್ರೀಗಳು, ಹುಟ್ಟೂರಲ್ಲಿ ಪ್ರಾಥಮಿಕ ಶಿಕ್ಷಣ ಅಭ್ಯಸಿಸಿ ನಂತರ ಮಲ್ಲಿಕಾರ್ಜುನ ಶ್ರೀಗಳ ಅಪ್ಪಣೆಯಂತೆ ಹೊಸಮಠದಲ್ಲಿದ್ದುಕೊಂಡು ಏಳನೇ ವರ್ಗದ ಶಿಕ್ಷಣವನ್ನು ಹಾವೇರಿಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರಲ್ಲಿ ಪಡೆದಿದ್ದರು.ಹೊಸಮಠದ ಮಲ್ಲಿಕಾರ್ಜುನ ಶ್ರೀಗಳ ಸಾಮಿಪ್ಯ ಅವರನ್ನು ಶರಣರ ವಚನಗಳತ್ತ ಆಕರ್ಷಿತರನ್ನಾಗಿ ಮಾಡಿದವಲ್ಲದೇ, ಹೊಸಮಠದ ಉತ್ತಮ ಸಂಸ್ಕಾರ ಅವರಲ್ಲಿ ಸರಳ, ಸಜ್ಜನಿಕೆ, ಭಕ್ತಿ, ವಿನಯದಂತ ಗುಣಗಳನ್ನು ಬೆಳೆಸಿದವು. ನಂತರ 1985ರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ಗುರುಕಾಂತ ಸ್ವಾಮೀಜಿ ಅವರಲ್ಲಿ ಎಂಟು ವರ್ಷಗಳ ಕಾಲ ವೈದಿಕ ಹಾಗೂ ಜೋತಿಷ್ಯ ಅಧ್ಯಯನ ಪಡೆದಕೊಂಡಿದ್ದರು.ಅಕ್ಕಿಮಠಕ್ಕೆ ನೇಮಕ:  ಹಾವೇರಿ ತಾಲ್ಲೂಕಿನ ಅಗಡಿಯ ಅಕ್ಕಿಮಠಕ್ಕೆ ಚನ್ನಬಸವರನ್ನು 1965ರಲ್ಲಿ ಉತ್ತರಾಧಿಕಾರಿಯಾಗಿ ನೇಮಕಗೊಂಡರಲ್ಲದೇ 18 ವರ್ಷ ಅಕ್ಕಿಮಠದಲ್ಲಿ ಕಾರ್ಯ ನಿರ್ವಹಿಸಿದ ಮೇಲೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ರೂಪಿಸಿ ಶ್ರೀಮಠವನ್ನು ಶರಣ ತತ್ವಗಳ, ಶರಣ ಸಂಸ್ಕೃತಿಯ ಕೇಂದ್ರವನ್ನಾಗಿ ಬೆಳಸಿದರು.ಅಥಣಿಯ ಗಚ್ಚಿನಮಠಕ್ಕೆ: ಚಿತ್ರದುರ್ಗದ ಮಲ್ಲಿಕಾರ್ಜುನ ಶ್ರೀಗಳ ಅಪ್ಪಣೆಯಂತೆ 1985ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯ ಗಚ್ಚಿನಮಠದ ಜವಾಬ್ದಾರಿ ಹೊಣೆ ಹೊತ್ತುಕೊಂಡರು. ಗಚ್ಚಿನಮಠದಲ್ಲಿ  ಕಲ್ಯಾಣಮಂಟಪ, ಸಾಂಸ್ಕೃತಿಕ ಮುಕ್ತವೇದಿಕೆ ನಿರ್ಮಾಣ, ಅಕ್ಷರದಾಸೋಹ ಬಿಸಿಯೂಟ, ಮಾಸಿಕ ಶಿವಾನುಭವ, ಶೈಕ್ಷಣಿಕ ಕಾರ್ಯ, ವಿವಿಧ ಸಂಘ ಸಂಸ್ಥೆಗಳ ಸ್ಥಾಪನೆ, ಕಾರ್ಯ ಚಟುವಟಿಕೆ ಮಾಡುವುದರ ಮೂಲಕ ಶ್ರಿಗಳು ಭಕ್ತರ ಜನ ಮನ್ನಣೆಗೆ ಪಾತ್ರರಾಗಿದ್ದರು.ಮನನೋಯಿಸಿದ ಘಟನೆಗಳು :ಸುಮಾರು ನಾಲ್ಕು ದಶಕಗಳ ಕಾಲ ಅಗಡಿಯ ಅಕ್ಕಿಮಠದಲ್ಲಿ, ಸುಮಾರು 28 ವರ್ಷಗಳ ಕಾಲ ಅಥಣಿಯ ಗಚ್ಚಿನಮಠದಲ್ಲಿ ಧಾರ್ಮಿಕ ಸೇವೆ ಸಲ್ಲಿಸಿದ ಚನ್ನಬಸವ ಶ್ರೀಗಳ ಅಂತಿಮ ದಿನಗಳು ಸುಖಕರವಾಗಿರಲಿಲ್ಲ. ಮಠದಲ್ಲಿ ನಡೆದ ಘಟನಾವಳಿಗಳು ಅವರ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದ್ದವು.ಕೆಲವು ದಿನಗಳ ಹಿಂದೆ, ಮಠದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಪೀಠಾಧ್ಯಕ್ಷ ಸ್ಥಾನದಿಂದ ಚನ್ನಬಸವ ಸ್ವಾಮೀಜಿ ಅವರನ್ನು ಪದಚ್ಯುತಿಗೊಳಿಸಲಾಗಿತ್ತಲ್ಲದೇ, ಬಿಡದಿಯ ನಿತ್ಯಾನಂದ ಸ್ವಾಮಿಯನ್ನು ಸಂಪರ್ಕಿಸಿ ಮಠವನ್ನು ಮಾರಾಟ ಮಾಡಲು ಯತ್ನಿಸಿದ್ದಾರೆ.ಮಠಕ್ಕೆ ಬಂದ ಅನುದಾನಗಳನ್ನು ಸರಿಯಾಗಿ ವಿನಿಯೋಗಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ರಾಜ್ಯದ ಹಲವಾರು ಮಠಾಧೀಶರ ಸಂಧಾನದ ನಂತರ ಮಠಕ್ಕೆ ನೂತನ ಉತ್ತರಾಧಿಕಾರಿಯನ್ನು ನೇಮಿಸಲಾಗಿತ್ತು. ಇತ್ತೀಚೆಗೆ ಆರೋಗ್ಯದಲ್ಲಿ ಕಂಡ ಏರುಪೇರಿನಿಂದಾಗಿ ಶ್ರೀಗಳು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಾಗಿದ್ದರು. ಜೂ.13 ರಂದು ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.ಅಗಡಿಯಲ್ಲಿ ಅಂತ್ಯಕ್ರಿಯೆ ಇಂದು: ಗುರುವಾರ ಬೆಳಗಾವಿಯಲ್ಲಿ ಲಿಂಗ್ಯಕ್ಯರಾದ ಚನ್ನಬಸಚ ಸ್ವಾಮೀಜಿ ಪಾರ್ಥಿವ ಶರೀರವನ್ನು ಗುರುವಾರ ರಾತ್ರಿ ಹಾವೇರಿ ತಾಲ್ಲೂಕಿನ ಅಗಡಿಯ ಅಕ್ಕಿಮಠಕ್ಕೆ ತರಲಾಗಿದ್ದು, ಅವರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ 12.00 ಗಂಟೆಗೆ ಅಗಡಿಯ ಅಕ್ಕಿಮಠದಲ್ಲಿ ವೀರಶೈವ ಲಿಂಗಾಯತ ಧರ್ಮದ ವಿಧಿವಿಧಾನಗಳ ಮೂಲಕ ನಡೆಸಲಾಗುತ್ತದೆ ಎಂದು ಗ್ರಾಮದ ಭಕ್ತಾದಿಗಳು ತಿಳಿಸಿದ್ದಾರೆ.ಚನ್ನಬಸವ ಶ್ರೀಗಳ ಪಾರ್ಥಿವ ಶರೀರವನ್ನು ಬೆಳಿಗ್ಗೆ 10 ಗಂಟೆಗೆ ಮೆರವಣಿಗೆ ಗ್ರಾಮದಲ್ಲಿ ನಡೆಯಲಿದೆ. ಅಂತ್ಯಕ್ರಿಯೆಯಲ್ಲಿ ನಾಡಿನ ಹರಗುರು ಚರಮೂರ್ತಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ.ಸ್ವಾಮೀಜಿ ನಿಧನಕ್ಕೆ ಗಣ್ಯರ ಸಂತಾಪ

ಹಾವೇರಿ: ತಾಲ್ಲೂಕಿನ ಅಗಡಿ ಹಾಗೂ ಬೆಳಗಾವಿ ಜಿಲ್ಲೆ ಅಥಣಿ ಗಚ್ಚಿನಮಠದ ಪೀಠಾಧಿಪತಿಗಳಾದ ಚನ್ನಬಸವ ಸ್ವಾಮಿಗಳ ನಿಧನಕ್ಕೆ ಜಿಲ್ಲೆಯ ಗಣ್ಯರು ಹಾಗೂ ಮಠಾಧೀಶರು ತೀವ್ರ ಸಂತಾಪ ಸೂಚಿಸಿದ್ದಾರೆ.ಶ್ರೀಗಳು ಸುಮಾರು ನಾಲ್ಕು ದಶಕಗಳ ಕಾಲ ಜಿಲ್ಲೆಯ ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುವುದರ ಜತೆಗೆ ಭಕ್ತರ ಜತೆ ಉತ್ತಮ ಒಡನಾಟ ಹೊಂದಿದ್ದರು. ಅವರ ಅಕಾಲಿಕ ಅಗಲಿಕೆಯಿಂದ ಧಾರ್ಮಿಕ ಕ್ಷೇತ್ರಕ್ಕೆ ಅದರಲ್ಲೂ ಅಗಡಿಯ ಅಕ್ಕಿಮಠದ ಭಕ್ತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹುಕ್ಕೇರಿಮಠದ ಸದಾಶಿವ ಶ್ರೀಗಳು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.ಅದೇ ರೀತಿ ಚನ್ನಬಸವ ಶ್ರೀಗಳ ನಿಧನದಿಂದ ಜಿಲ್ಲೆಯ ಧಾರ್ಮಿಕ ಕ್ಷೇತ್ರ ಬಡವಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಕೋರಿಶೆಟ್ಟರ್ ಹೇಳಿದ್ದಾರೆ.ಅಗಡಿಯ ಅಕ್ಕಿಮಠದ ಚನ್ನಬಸವ ಶ್ರೀಗಳ ನಿಧನಕ್ಕೆ ಹೊಸರಿತ್ತಿಯ ಗುದ್ದಲೀಶ್ವರ ಶ್ರೀಗಳು, ಅಗಡಿ-ಗುತ್ತಲದ ಸಂಗನಬಸವ ಶ್ರೀಗಳು, ಹೊಸಮಠದ ಬಸವಶಾಂತಲಿಂಗ ಶ್ರೀಗಳು, ಆನಂದವನದ ಶ್ರೀಗಳು, ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕರಾದ ನೆಹರೂ ಓಲೇಕಾರ, ಶಿವರಾಜ ಸಜ್ಜನರ, ಜಿ,ಪಂ.ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ ಹೊಸಮನಿ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ನಗರಸಭೆ ಮಾಜಿ ಸದಸ್ಯ ನಾಗೇಂದ್ರ ಕಟೋಳ, ನಿಜಣ್ಣ ಬಸೇಗಣ್ಣಿ, ಹನುಮಂತಗೌಡ ಗೊಲರ‌್ಲ, ಮಂಜಣ್ಣ ಬಸೇಗಣ್ಣಿ, ಹನುಮಂತರಾವ ಕುಲಕರ್ಣಿ, ನಾಗರಾಜ ಬಸೇಗಣ್ಣಿ, ಫಕ್ಕೀರಸ್ವಾಮಿ ನಿರ್ವಾಣಿಮಠ, ಪರಶರಾಮ ಇಳಗೇರ, ಶಿವಪುತ್ರಪ್ಪ ಶಿವಣ್ಣವರ, ಉಳಿವೆಪ್ಪ ಹಳ್ಳಳ್ಳಿ, ಪ್ರಭು ಪಟ್ಟಣಶೆಟ್ಟಿ, ಪುಟ್ಟಪ್ಪ ಮಾಗೋಡ, ಕರಿಯಪ್ಪ ಹುಚ್ಚಣ್ಣನವರ ಅಲ್ಲದೇ ಅನೇಕ ಮಠಾಧೀಶರು, ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.