ಬುಧವಾರ, ನವೆಂಬರ್ 13, 2019
21 °C

ಶರದ್ ಯಾದವ್ ಪುನರಾಯ್ಕೆ

Published:
Updated:

ನವದೆಹಲಿ (ಪಿಟಿಐ): ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿ ಶರದ್ ಯಾದವ್ ಅವರು ಭಾನುವಾರ ಸತತ 3ನೇ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದು, ಎನ್‌ಡಿಎ ಜೊತೆ ಮೈತ್ರಿ ಕಾಪಾಡಿಕೊಳ್ಳುವಂತೆ ಪಕ್ಷದ ಮುಖಂಡರಿಗೆ ಮನವಿ ಮಾಡಿದರು.ರಾಷ್ಟ್ರೀಯ ಕಾರ್ಯಕಾರಿಣಿ ಉದ್ದೇಶಿಸಿ ಮಾತನಾಡಿದ ಅವರು, `ಪಕ್ಷದ ಬಲವರ್ಧನೆಗಾಗಿ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ನನ್ನ ಮೇಲೆ ನಂಬಿಕೆ ಇರಿಸಿ, ದೊಡ್ಡ ಜವಾಬ್ದಾರಿ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ತಿಳಿಸಿದರು.ಎರಡು ಅವಧಿಗೆ ಮಾತ್ರ ಅಧ್ಯಕ್ಷರ ಆಯ್ಕೆಗೆ ಅವಕಾಶವಿದ್ದ ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತಂದ ಬಳಿಕ ಶರದ್ ಯಾದವ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ 20 ರಾಜ್ಯ ಘಟಕಗಳು ಶರದ್ ಯಾದವ್ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಿಸಿದವು. ಇದನ್ನು ಸಭೆ ಸರ್ವಾನುಮತದಿಂದ ಅಂಗೀಕರಿಸಿತು. ಆದಾಗ್ಯೂ ಅಧ್ಯಕ್ಷ ಸ್ಥಾನಕ್ಕೆ ಯಾದವ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಪುನರಾಯ್ಕೆ ಸುಲಭವಾಯಿತು.ಬಿಹಾರದ ಮಾಧೇಪುರ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸತ್ ಪ್ರವೇಶಿಸಿರುವ ಶರದ್ ಯಾದವ್ ಅವರು 2006ರಿಂದ ಜೆಡಿಯು ಅಧ್ಯಕ್ಷರಾಗಿ  ಕಾರ್ಯನಿರ್ವಹಿಸುತ್ತಿರುವರು.2014ನೇ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿಯು ಹೆಚ್ಚು ಬಿಂಬಿಸುತ್ತಿರುವ ಹಿನ್ನೆಲೆಯಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಜೆಡಿಯು ಉಳಿಯುವುದೋ ಅಥವಾ ಹೊರಬರುವುದೋ ಎಂಬ ಜಿಜ್ಞಾಸೆ ಚಿಗುರೊಡೆದಿತ್ತು.ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಜೆಪಿಯು ಮೋದಿ ಅವರನ್ನು ಬಿಂಬಿಸುತ್ತಿರುವುದಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಜೆಡಿಯು ಪಕ್ಷದ ಹಲವರು ವಿರೋಧ ವ್ಯಕ್ತಪಡಿಸಿದ್ದರು.

ಪ್ರತಿಕ್ರಿಯಿಸಿ (+)