ಶರೀಫರ ಗಿರಿ ಮೊಮ್ಮಗನ ತತ್ವಪದ...

7

ಶರೀಫರ ಗಿರಿ ಮೊಮ್ಮಗನ ತತ್ವಪದ...

Published:
Updated:

ಹುಬ್ಬಳ್ಳಿ: ನವರಾತ್ರಿ ಉತ್ಸವದ ಅಂಗವಾಗಿ ನಗರದ ಗ್ರೀನ್ ಗಾರ್ಡನ್‌ನ ಕರಿಯಮ್ಮ ದೇವಾಲಯದಲ್ಲಿ ಬುಧವಾರ ರಾತ್ರಿ ಮೊಳಗಿದ ಶಿಶುನಾಳ ಶರೀಫರ ತತ್ವಪದಗಳು ಜನರನ್ನು ಭಕ್ತಿಯ ಅಲೆಯಲ್ಲಿ ತೇಲಿಸಿದವು.ಶಿಶುನಾಳಧೀಶನ ತತ್ವಪದಗಳನ್ನು ಹೇಳಿದವರು ಬೇರಾರೂ ಅಲ್ಲ, ಶರೀಫರ ಗಿರಿ ಮೊಮ್ಮಗ ಹುಸೇನಸಾಬ್ ಹಜರತ್‌ಸಾಬ್ ಶರೀಫ. ಸದಾ ಶಿಶುನಾಳ ಶರೀಫರ ತತ್ವಪದಗಳನ್ನೇ ಉಸಿರಾಡುವ ಅವರು ಪ್ರವಚನ, ಗಾಯನ ಪ್ರಸ್ತುತ ಪಡಿಸಿದರು. ಸಮಾಜದ ಅಂಕು- ಡೊಂಕುಗಳನ್ನು ತಿದ್ದುವ ಶರೀಫರ ತತ್ವಗಳನ್ನು ಅವರು ಜನರಿಗೆ ತಿಳಿ ಹೇಳಿದರು.`ತಂದೆ ತಾಯಂದಿರನ್ನು ದೇವರಂತೆ ನೋಡಿಕೊಳ್ಳಬೇಕು. ಅವರನ್ನು ಮಮ್ಮಿ, ಡ್ಯಾಡಿ ಮುಂತಾದ ಪಶ್ಚಿಮದ ಪದಗಳಿಂದ ಮಾತನಾಡಿಸದೆ ನಮ್ಮ ತಾಯಿ ಭಾಷೆಯಿಂದಲೇ ಕರೆಯಬೇಕು. ಅವರನ್ನು ವೃದ್ಧಾಶ್ರಮಗಳಿಗೆ ಕಳಿಸದೆ ದೇವರಂತೆ ನೋಡಿಕೊಳ್ಳಬೇಕು. ಮಾನವ ಮಾನವನಂತೆ ಬದುಕಬೇಕು, ಎಂದಿಗೂ ಮೃಗವಾಗಬಾರದು~ ಎಂದು ಹೇಳಿದರು. ಆ ಕುರಿತ `ತಂದೆ- ತಾಯಿಯ ಸೇವೆಯ ಮಾಡ~ ತತ್ವಪದವನ್ನು ಹಾಡಿದರು.`ಎಂಥದೇ ಕಷ್ಟ ಬಂದರೂ ಚಿಂತೆ ಮಾಡದೆ ದೇವರಲ್ಲಿ ಶರಣಾಗಬೇಕು. ಆ ಗುರು ಗೋವಿಂದ ಶಿಶುನಾಳಧೀಶನಲ್ಲಿ ಶರಣಾದರೆ ಎಂತಹ ಕಷ್ಟ ಬಂದರೂ ಕ್ಷಣದಲ್ಲಿ ಮಾಯವಾಗುತ್ತವೆ~ ಎಂದು ಹೇಳಿದರು.ಈ ತತ್ವ ಹೇಳುವ ಶರೀಫರ `ಎಂತೆಂಥಾ ಕಷ್ಟ ಎಲ್ಲಾನೂ ಬರಲಿ, ಚಿಂತಿ ಎಂಬುದು ನಿಜವಾಗಿರಲಿ~ ತತ್ವಪದ ಹಾಡಿದರು. ಜೊತೆಗೆ ಅರ್ಥವಿಲ್ಲದ ಓದು ಬೇಡ, ಅನುಭವ ಇಲ್ಲದ ಮಾತು ಬೇಡ, ಶರೀಫಜ್ಜ ಗುರುಗೋವಿಂದ, ಚೇಳು ಕಡಿದೈತಿ ಮುಂತಾದ ಶರೀಫರ ತತ್ವಪದಗಳನ್ನು ಹಾಡಿದರು.ಶರೀಫರ `ಧರ್ಮದಂಡದ~ ಹಿರಿಮೆ

ಶಿಶುನಾಳ ಶರೀಫ ಅವರು ಬಳಸುತ್ತಿದ್ದ ಧರ್ಮದಂಡದಿಂದ ಪ್ರವಚನದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಹುಸೇನಸಾಬ್ ಹಜರತ್‌ಸಾಬ್ ಶರೀಫ ಆಶೀರ್ವಾದ ಮಾಡಿದರು.ತಮ್ಮ ಪಾದಕ್ಕೆರಗಲು ಮುಗಿಬಿದ್ದಿದ್ದ ಭಕ್ತರಿಗೆ ಧರ್ಮದಂಡದಿಂದ ಸ್ಪರ್ಶಿಸಿ, ಭಸ್ಮ ನೀಡಿ ಆಶೀರ್ವಾದ ಮಾಡಿದರು. ಶಿಶುನಾಳ ಶರೀಫ ಅವರ ವಂಶದ ನಾಲ್ಕನೇ ತಲೆಮಾರಿನವರಾದ ಅವರು, ತಮ್ಮ ಅಜ್ಜ ಬಳಸುತ್ತಿದ್ದ ಧರ್ಮದಂಡದ ಹಿರಿಮೆಯನ್ನು ಈ ಸಂದರ್ಭದಲ್ಲಿ ಭಕ್ತರಿಗೆ ಹೇಳಿದರು.ಪ್ರವಚನದ ನಂತರ ಮಹಿಳೆಯರು ದಾಂಡಿಯಾ ನೃತ್ಯ ಪ್ರದರ್ಶಿಸಿದರು. ಮಕ್ಕಳು ಕೋಲಾಟ ಆಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry