ಶುಕ್ರವಾರ, ಮೇ 14, 2021
29 °C
ಉನ್ನತ ಶಿಕ್ಷಣ ಪರಿಷತ್ ಹುದ್ದೆ

ಶರ್ಮಾ, ಕಾವೇರಿಯಪ್ಪ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮ್ಮ ನೇಮಕಾತಿಯ ಬಗ್ಗೆಯೇ ವಿವಾದಕ್ಕೆ ಸಿಲುಕಿದ್ದ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಡಾ.ಎಸ್.ಸಿ.ಶರ್ಮಾ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕೆ.ಎಂ.ಕಾವೇರಿಯಪ್ಪ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ.ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಸ್ಥಾನಗಳಿಗೆ ಸದ್ಯದಲ್ಲೇ ಹೊಸಬರನ್ನು ನೇಮಕ ಮಾಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.ತುಮಕೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ (ಕಳೆದ ಏಪ್ರಿಲ್‌ನಲ್ಲಿ ನಿವೃತ್ತಿ) ಶರ್ಮಾ ಅವರನ್ನು 2010ರ ಅಕ್ಟೋಬರ್ 25ರಂದು ಆರು ತಿಂಗಳ ಅವಧಿಗೆ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಇದಾದ ನಂತರ 2011ರ ಮಾರ್ಚ್ 26ರಂದು ಒಂದು ವರ್ಷದ ಅವಧಿಗೆ ಮುಂದುವರಿಸಲಾಗಿತ್ತು. ಈ ಅವಧಿ ಪೂರ್ಣಗೊಳ್ಳುವ ಮೊದಲೇ ಅಂದರೆ 2012 ರ ಫೆಬ್ರುವರಿ 25ರಂದು ಮತ್ತೊಂದು ಆದೇಶ ಹೊರಡಿಸಿದ ಸರ್ಕಾರ 2012ರ ಏಪ್ರಿಲ್ 27ರಿಂದ ಜಾರಿಗೆ ಬರುವಂತೆ ಒಂದು ವರ್ಷದ ಅವಧಿಗೆ ಮುಂದುವರಿಸಲಾಗಿತ್ತು. 2013ರ ಏಪ್ರಿಲ್ 27ರವರೆಗೆ ಇವರ ಅವಧಿ ಇತ್ತು. ಆದರೂ, ಹಿಂದಿನ ಬಿಜೆಪಿ ಸರ್ಕಾರ 2012ರ ನವೆಂಬರ್ 30 ರಂದೇ ಆದೇಶ ಹೊರಡಿಸಿ 2013ರ ಏಪ್ರಿಲ್ 27ರಿಂದ 2015ರ ಅಕ್ಟೋಬರ್ 24ರವರೆಗೆ ಅವರ ಅವಧಿಯನ್ನು ಮುಂದುವರಿಸಿತ್ತು.ಮುಖ್ಯಮಂತ್ರಿಗಳ ಒಪ್ಪಿಗೆ ಇಲ್ಲದೆ ಆಗಿನ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಅವರು ಕಾನೂನುಬಾಹಿರವಾಗಿ ಶರ್ಮಾ ಅವರ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ ಎಂಬ ವಿಷಯ 3 ದಿನದ ಹಿಂದೆ ಪರಿಷತ್‌ನಲ್ಲಿ ಪ್ರಸ್ತಾಪವಾಗಿತ್ತು. ಇದಾದ ಬೆನ್ನಲ್ಲೇ ಶರ್ಮಾ ರಾಜೀನಾಮೆ ನೀಡಿದ್ದಾರೆ.ಉನ್ನತ ಶಿಕ್ಷಣ ಪರಿಷತ್ ಕಾಯ್ದೆ ಪ್ರಕಾರ 65 ವರ್ಷ ತುಂಬಿದವರು ಕಾರ್ಯನಿರ್ವಾಹಕ ನಿರ್ದೇಶಕರಾಗುವಂತಿಲ್ಲ. ಕಾವೇರಿಯಪ್ಪ ಅವರಿಗೆ 2011ರಲ್ಲೇ 65 ವರ್ಷ ಆಗಿದೆ. ಆದರೂ ಅವರನ್ನು ಸೇವೆಯಲ್ಲಿ ಮುಂದುವರಿಸಿರುವುದು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಹಿಂದಿನ ಸರ್ಕಾರ ತಾನೇ ಮಾಡಿದ ಕಾಯ್ದೆಯನ್ನು ಧಿಕ್ಕರಿಸಿ ಇವರಿಬ್ಬರನ್ನು ಸೇವೆಯಲ್ಲಿ ಮುಂದುವರಿಸಿದ್ದು ಶೈಕ್ಷಣಿಕ ವಲಯದಲ್ಲಿ ವಿವಾದಕ್ಕೆ ಒಳಗಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.