ಬುಧವಾರ, ಮಾರ್ಚ್ 3, 2021
19 °C
ವಿಶ್ವ ಛಾಯಾಗ್ರಹಣ ದಿನ

ಶವದ ಎದುರು ಕ್ಯಾಮೆರಾ ಹಿಡಿದು

ಹರವು ಸ್ಫೂರ್ತಿ Updated:

ಅಕ್ಷರ ಗಾತ್ರ : | |

ಶವದ ಎದುರು ಕ್ಯಾಮೆರಾ ಹಿಡಿದು

ಛಾಯಾಗ್ರಹಣದಲ್ಲಿ ಹಲವು ಬಗೆ. ಆದರೆ ಶವಗಳ ಛಾಯಾಗ್ರಹಣ ಮಾಡುವುದು ವಿಭಿನ್ನ ವೃತ್ತಿ. ದಶಕಗಳಿಂದ ಬೆಂಗಳೂರಿನಲ್ಲಿ ಶವಗಳ ಛಾಯಾಗ್ರಹಣ ಮಾಡುತ್ತಿದ್ದಾರೆ ಹಿರಿಯ ಛಾಯಾಗ್ರಾಹಕ ನಿಕೊಲಸ್. ಈ ವೃತ್ತಿಯ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.* ಮೊದಲು ಯಾವಾಗ ಶವದ ಛಾಯಾಗ್ರಹಣ ಮಾಡಿದ್ದು? ತೀರ ಅಪರೂಪದ ಈ ಪ್ರಕಾರದ ಛಾಯಾಗ್ರಹಣಕ್ಕೆ ಹೇಗೆ ಬಂದಿರಿ?

25 ವರ್ಷಗಳ ಹಿಂದೆ ಆರಂಭಿಸಿದ್ದು. ಆಕಸ್ಮಿಕವಾಗಿ ಶುರುವಾಯಿತು ಈ ವೃತ್ತಿ. ನಾನು ಕಲಾಸಿಪಾಳ್ಯದ ನಮ್ಮ ಸ್ಟುಡಿಯೊದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಪೊಲೀಸರು ಬಂದು ಒಂದು ಫೋಟೊ ತೆಗೆದುಕೊಡಲು ಕೇಳಿಕೊಂಡರು. ಅವರ ಜೊತೆ ವಿಕ್ಟೋರಿಯಾ ಆಸ್ಪತ್ರೆಗೆ ಹೋದೆ.ಅಲ್ಲಿಗೆ ಹೋದಾಗ ತಿಳಿಯಿತು. ಶವದ ಫೋಟೊ ತೆಗೆಯಬೇಕೆಂದು. ಯಾವ ಪ್ರಕರಣದಲ್ಲಿ ಮೃತಪಟ್ಟಿದ್ದರು ಎಂದು ನೆನಪಿಲ್ಲ. ಛಾಯಾಚಿತ್ರ ತೆಗೆದು ಬಂದೆ. ನಾನು ಮೊದಲ ಬಾರಿ ಹೀಗೆ ಆಕಸ್ಮಿಕವಾಗಿ ಶವದ ಫೋಟೊ ತೆಗೆದಿದ್ದು. 25 ವರ್ಷಗಳಿಂದ ಇಂದಿಗೂ ಇದೇ ವೃತ್ತಿಯಲ್ಲಿ ಇದ್ದೀನಿ.* ಮೊದಲ ಬಾರಿ ಶವದ ಛಾಯಾಗ್ರಹಣ ಮಾಡಿದ ಅನುಭವ ಹೇಳಿ?

ಮೊದಲು ನಾನು ಫೋಟೊ ತೆಗೆಯಲು ಹೋದಾಗ ತೀರ ವಿಚಿತ್ರ ಎನಿಸಿತು. ಎಷ್ಟರಮಟ್ಟಿಗೆ ಎಂದರೆ ನನ್ನ ಮನಸ್ಸಿನಲ್ಲಿ ಯಾವ ಭಾವನೆಯೂ ಮೂಡಲಿಲ್ಲ. ಸಿನಿಮಾಗಳಲ್ಲಿ ನೋಡಿದ್ದೆ. ನಾನು ಈ ಬಗೆಯ ಛಾಯಾಗ್ರಹಣ ಕೆಲಸ ಮಾಡುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ಪೊಲೀಸರು ಹೇಗೆ ಫೋಟೊ ತೆಗೆಯಬೇಕು ಎಂಬ ಬಗ್ಗೆ ಹೇಳಿದರು. ಅವರು ಹೇಳಿದ ಕೋನಗಳಲ್ಲಿ ಚಿತ್ರ ತೆಗೆದೆ.* ಮೃತದೇಹದ ಛಾಯಾಗ್ರಹಣ ಮಾಡುವಾಗ ನಿಮಗೆ ಬೇಜಾರು ತರಿಸಿದ ಘಟನೆ ಏನಾದರೂ ಇದೇಯೇ? ಅಂತಹ ಸಂದರ್ಭಗಳನ್ನು ಹೇಗೆ ನಿಭಾಯಿಸುತ್ತೀರಿ?

ಇಷ್ಟು ವರ್ಷದ ಅನುಭವದಲ್ಲಿ ನನಗೆ ಬೇಜಾರಾಗಿಲ್ಲ. ಕೆಲವೊಂದು ಪ್ರಕರಣಗಳಲ್ಲಿ ನೋವಾಗಿದೆ. ಒಮ್ಮೆ ಆಟವಾಡುತ್ತಿದ್ದ ಮಗು ಬಿಸಿ ನೀರಿನಲ್ಲಿ ಬಿದ್ದು ಮೃತಪಟ್ಟಿತ್ತು. ಈ ಪ್ರಕರಣದ ಛಾಯಾಗ್ರಹಣ ಮಾಡಲು ಹೋಗಿದ್ದೆ, ಮಗು ಸ್ಥಿತಿ ನೋಡಿ ತುಂಬಾ ಬೇಜಾರಾಗಿತ್ತು.ಪೊಲೀಸರು ಮತ್ತು ವೈದ್ಯರು ಕೂಡ ತುಂಬಾ ಕುಗ್ಗಿ ಹೋಗಿದ್ದರು. ಮೃತಪಟ್ಟವರ  ಛಾಯಾಚಿತ್ರವೇನೋ ತೆಗೆದು ಬರುತ್ತೇನೆ. ಆದರೆ ಅವರ ಮನೆಯವರನ್ನು ನೋಡಲು ಮಾತ್ರ ಸಾಧ್ಯವಿಲ್ಲ. ಫೋಟೊ ತೆಗೆಯುವ ಸಂದರ್ಭದಲ್ಲಿ ಅವರು ಗೋಳಾಡುವುದು ನಿಜಕ್ಕೂ ಸಂಕಟವೆನಿಸುತ್ತದೆ. ನಾನು ಮೌನವಾಗಿ ಹೋಗಿ ತೆಗೆದು ಚಿತ್ರ ತೆಗೆದು ಬಂದು ಬಿಡುತ್ತೇನೆ.* ನೀವು ಸೂಕ್ಷ್ಮವಾಗಿ ಅವಲೋಕಿಸಿ ತೆಗೆದ ಚಿತ್ರಗಳು ನಿಮ್ಮ ಮನಸ್ಸಿನಲ್ಲಿ ಕೂತು ಕಾಡುವುದಿಲ್ಲವೇ?

ಹೌದು, ನಾವು ಯಾವುದೇ ವಿಷಯದಲ್ಲಿ ಛಾಯಾಗ್ರಹಣ ಮಾಡುವ ಸಂದರ್ಭದಲ್ಲಿ ವಸ್ತುವನ್ನು ತೀಕ್ಷ್ಣವಾಗಿ ಲೆನ್ಸ್ ಮೂಲಕ ನೋಡುತ್ತಿರುತ್ತೇವೆ. ಶವಗಳನ್ನು ಹೀಗೆ ಫೋಕಸ್ ಮಾಡುತ್ತಾ ಇರುತ್ತೇನೆ.ಆದರೆ ಫೋಟೊ ತೆಗೆದು ಮನೆಗೆ ಬಂದ ನಂತರ ಎಲ್ಲವನ್ನು ಮರೆತು ಬಿಡುತ್ತೇನೆ. ಕೊನೆಗೂ ಅನಿಸುವ ಭಾವ ಅವರೂ ಮನುಷ್ಯರು ನಾವೂ ಮನುಷ್ಯರು, ಅವರಿಗೆ ಪ್ರಾಣವಿರುವುದಿಲ್ಲ ಅಷ್ಟೆ.* ಶವಗಳ ಫೋಟೊ ತೆಗೆಯುವಾಗ ಯಾವ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡಿರುತ್ತೀರಿ?

ಇದು ಹೂವಿನ ಚಿತ್ರ ತೆಗೆದ ಹಾಗೆ ಅಲ್ಲ. ಇಲ್ಲಿ ಭಾವಕ್ಕಿಂತ ಘಟನೆಯ ವಿವರ ಮುಖ್ಯ. ಆತ್ಮಹತ್ಯೆ, ಕೊಲೆ, ಅಪಘಾತ, ಕೊಳೆತ ಶವ, ಸುಟ್ಟ ಶವ ಹೀಗೆ ಹಲವು ಬಗೆಯ ಶವಗಳ ಫೋಟೊ ತೆಗೆದಿದ್ದೇನೆ. ತುಂಬಾ ಜಾಗರೂಕರಾಗಿ ಚಿತ್ರ ತೆಗೆಯಬೇಕು.ಒಂದು ಕೊಲೆಯಾದ ಶವದ ಚಿತ್ರ ತೆಗೆಯುತ್ತಿದ್ದರೆ, ಶವ ಎಲ್ಲಿ ಇದೆ. ಕೊಲೆ ಮಾಡಲು ಬಳಸಿದ ಚಾಕು ಅಥವಾ ಗನ್ ಎಷ್ಟು ದೂರದಲ್ಲಿ ಇದೆ, ದೇಹದ ಯಾವ ಭಾಗಕ್ಕೆ ಹಾನಿಯಾಗಿದೆ, ದೇಹ ಯಾವ ಸ್ಥಿತಿಯಲ್ಲಿ ಇದೆ, ದೇಹದ ಇತರೆ ಭಾಗಕ್ಕೆ ಏನಾದರೂ ಗಾಯಗಳಾಗಿದ್ದಾವಾ? ಎಷ್ಟು ಬಾರಿ ದೇಹದ ಮೇಲೆ ಆಯುಧದಿಂದ ದಾಳಿಯಾಗಿದೆ ಎಂಬ ಎಲ್ಲಾ ವಿವರವನ್ನು ಸೂಕ್ಷ್ಮವಾಗಿ ಗಮನಿಸಿ ಚಿತ್ರ ಸೆರೆಹಿಡಿಯಬೇಕು.ಅಲ್ಲದೆ ಪೊಲೀಸರೂ ಚಿತ್ರ ಹೇಗೆ ಬೇಕು ಎಂಬುದನ್ನೂ ಹೇಳುತ್ತಾರೆ. ಕೆಲ ಬಾರಿ ನಾವೂ ಸೂಕ್ಷ್ಮವಾಗಿ ಇರಬೇಕಾಗುತ್ತದೆ. ಇಂಥ ಪೋಟೊಗಳಿಂದಲೇ ಹಲವು ಸಾಕ್ಷಿಗಳು ಸಿಕ್ಕಿವೆ. ಪೊಲೀಸರಿಗೂ ಇದು ತೂಗುಕತ್ತಿಯ ಮೇಲಿನ ಕೆಲಸವೇ. ಒಂದು ಚಿಕ್ಕ ಸಂಗತಿ ಮಿಸ್ ಆದರೂ ಇಡೀ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತದೆ. ಬಹಳ ಜವಾಬ್ದಾರಿ ಕೆಲಸವಿದು.* ಕುಟುಂಬದವರು ನಿಮ್ಮ ವೃತ್ತಿಯ ಬಗ್ಗೆ ಏನು ಹೇಳುತ್ತಾರೆ?

ನಾನು ಶವಗಳ ಫೋಟೊಗ್ರಫಿ ಮಾಡುತ್ತೇನೆ ಎನ್ನುವುದಷ್ಟೇ ನಮ್ಮ ಮನೆಯವರಿಗೆ ಗೊತ್ತು. ಉಳಿದ ವಿವರಗಳು ಗೊತ್ತಿಲ್ಲ. ನಾನು ಆ ಬಗ್ಗೆ ಮನೆಯಲ್ಲಿ ಏನು ಮಾತನಾಡುವುದೂ ಇಲ್ಲ. ಅವರಿಗೂ ಗಾಬರಿಯಾಗಬಾರದು ಎಂಬುದು ನನ್ನ ಕಾಳಜಿ.ಮದುವೆ ಛಾಯಾಗ್ರಹಣ ಎಂದರೆ ಯಾರು ಬೇಕಾದರೂ ಹೋಗುತ್ತಾರೆ. ಆದರೆ ಶವಗಳ ಫೋಟೊ ತೆಗೆಯುವುದೆಂದರೆ ಹಿಂದೇಟು ಹಾಕುವುದೇ ಹೆಚ್ಚು. ಬೆಂಗಳೂರಿನಲ್ಲಿ ಮೂರ್ನಾಲ್ಕು ಜನ ಶವಗಳ ಚಿತ್ರ ತೆಗೆಯುವವರಿದ್ದೇವಷ್ಟೆ.* ಇದುವರೆಗಿನ ನಿಮ್ಮ ಛಾಯಾಗ್ರಹಣದಲ್ಲಿ ವಿಶೇಷ ಅನುಭವ ಹೇಳಿ?

ಈ ಬಗ್ಗೆ ನಾನು ಮಾತನಾಡಲೇಬೇಕು. ಎಲ್ಲರೂ ನನ್ನ ಬಳಿ ಭಯವಾಗುವುದಿಲ್ಲವಾ? ಎಂದು ಕೇಳುತ್ತಾರೆ ಅಷ್ಟೆ. ಆದರೆ ಇದರ ಹಿಂದೆ ಹಲವು ರೋಚಕ ಕಥೆಗಳಿವೆ. ಬೀದಿ ಬದಿ ಹಲವು ಬಾರಿ ಅನಾಥ ಶವಗಳು ಸಿಕ್ಕಿವೆ. ನಾನು ಅವುಗಳ ಚಿತ್ರ ತೆಗೆದು ಪೊಲೀಸರನ್ನು ಕರೆಸಿದ್ದೇನೆ. ಇಂಥ ಚಿತ್ರಗಳು ಎಷ್ಟೋ ಜನರ ಸಂಬಂಧಿಕರನ್ನು ಹುಡುಕಲು ಸಹಾಯ ಮಾಡಿದೆ. ನಾನೇ ಸ್ವತಃ ಹಲವು ಮೃತದೇಹದ ಸಂಬಂಧಿಕರನ್ನು ಹುಡುಕಿದ್ದೇನೆ.ನಾನು ಮಾಡುತ್ತಿರುವುದು ವೃತ್ತಿಯೊಂದಿಗೆ ಮಾನವೀಯ ಕೆಲಸ ಅಷ್ಟೆ. ನನ್ನ ಹಲವು ಫೋಟೊಗಳಿಂದ ತನಿಖೆಗೆ ಹೊಸ ಆಯಾಮವೇ ಸಿಕ್ಕಿದೆ. ಈ ಬಗ್ಗೆ ಹಲವು ಬಾರಿ ಪೊಲೀಸರು ಪ್ರಶಂಸಿಸುವಾಗ ನಾನು ಮಾಡುವ ಕೆಲಸದ ಬಗ್ಗೆ ಇನ್ನೂ ಆತ್ಮವಿಶ್ವಾಸ ಮೂಡುತ್ತದೆ. ಇದುವರೆಗೆ ಥೂ... ನಾನು ಯಾಕೆ ಈ ವೃತ್ತಿಗೆ ಬಂದೆ ಎಂದೆನಿಸಿಯೇ ಇಲ್ಲ. ಇಲ್ಲೂ ಒಂದು ಬಗೆಯ ಸಾರ್ಥಕತೆ ಇದೆ.* ಈ ವೃತ್ತಿಯಲ್ಲಿ ಜೀವನ ನಿರ್ವಹಣೆಗೆ ಬೇಕಾಗುವಷ್ಟು ಆದಾಯ ಇದೆಯೇ?

ಈ ವೃತ್ತಿಗೆ ರಾತ್ರಿ–ಹಗಲು ಭೇದ ಇಲ್ಲ. ಎಷ್ಟು ಹೊತ್ತಿಗೆ ಪೊಲೀಸರು ಫೋನ್ ಮಾಡಿದರೂ ಹೋಗಬೇಕು. ಎಲ್ಲಿಗೆ ಬರಲು ತಿಳಿಸುತ್ತಾರೋ ಅಲ್ಲಿಗೆ ನನ್ನ ಸ್ವಂತ ವಾಹನದಲ್ಲಿ ತಲುಪುತ್ತೇನೆ. ಕೆಲವೊಮ್ಮೆ ಪೊಲೀಸರು ಒಂದಿಷ್ಟು ಹಣ ಕೊಡುತ್ತಾರೆ ಅಥವಾ ಮೃತರ ಸಂಬಂಧಿಕರು ಕೊಡುತ್ತಾರೆ. ನಾನು ಎಂದೂ ಒಂದು ರೂಪಾಯಿ ಕೇಳಿಲ್ಲ. ಆ ಶೋಕದ ನಡುವೆ ಹಣ ಮುಖ್ಯ ಅನಿಸುವುದೇ ಇಲ್ಲ.ಒಂದು ಫೋಟೊಗೆ ₹200ರಿಂದ ₹300 ಸಿಗುತ್ತದೆ. ಆಕಸ್ಮಿಕವಾಗಿ ಈ ವೃತ್ತಿಗೆ ಬಂದೆ. ಸೇವಾ ಮನೋಭಾವದಿಂದ ಇದೇ ವೃತ್ತಿಯಲ್ಲಿ ಮುಂದುವರಿಯುತ್ತಿದ್ದೇನೆ. ನನ್ನದೇ ಸ್ಟುಡಿಯೊ ಇದೆ. ಅದರಿಂದ ಬರುವ ಆದಾಯ ಜೀವನಕ್ಕೆ ಆಗುತ್ತಿದೆ. ಅಲ್ಲದೆ ನಮ್ಮ ಸ್ಟುಡಿಯೊ ಹತ್ತಿರ ಪಾರಿವಾಳ, ಕಾಗೆಗಳು ಬರುತ್ತವೆ. ಶವ ಛಾಯಾಗ್ರಹಣ ಮಾಡಿದ ಹಣದಲ್ಲಿ ಇವುಗಳಿಗೆ ಆಹಾರ ತರುತ್ತೇನೆ. ವಾರಕ್ಕೆ 20 ಕೆ.ಜಿ. ಗೋಧಿ ಬೇಕು.* ಶವದ ಛಾಯಾಗ್ರಹಣದ ತಾಂತ್ರಿಕ ಅಂಶಗಳ ಬಗ್ಗೆ ಹೇಳಿ?

ಶವದ ಛಾಯಾಗ್ರಹಣ ಮಾಡುವುದಕ್ಕೂ ಸಾಮಾನ್ಯ ಜ್ಞಾನ ಇರಬೇಕು. ಕತ್ತಲ ಸಮಯದಲ್ಲಿ ಹೇಗೆ ಕ್ಯಾಮೆರಾವನ್ನು ಬಳಕೆ ಮಾಡುತ್ತೀರಿ. ಅಪರ್ಚರ್, ಶಟರ್ ವೇಗ ಹೇಗೆ ಸೆಟ್ ಮಾಡಿಕೊಂಡಿದ್ದೀರಿ. ಎಲ್ಲಿ, ಯಾವ ಸಂದರ್ಭದಲ್ಲಿ ಫ್ಲ್ಯಾಶ್ ಬಳಸಬೇಕು ಎಂಬ ಬಗ್ಗೆ ಅರಿವಿರಬೇಕು.ಕೆಲವು ಆ್ಯಂಗಲ್‌ನಿಂದ ಚಿತ್ರ ತೆಗೆದರೆ ದೇಹದ ಗಾತ್ರ, ಆಕಾರವೇ ಬೇರೆ ರೀತಿಯಲ್ಲಿ ಕಾಣುತ್ತದೆ. ಇಂತಹ ವಿಚಾರಗಳ ಬಗ್ಗೆ ಮುನ್ನೆಚ್ಚರಿಕೆ ಇದ್ದರೆ ಒಳ್ಳೆಯದು. ಇಲ್ಲವಾದಲ್ಲಿ ಉತ್ತಮ ಫೋಟೊ ಸೆರೆಹಿಡಿಯಲು ಸಾಧ್ಯವಾಗುವುದಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.