ಭಾನುವಾರ, ಅಕ್ಟೋಬರ್ 20, 2019
27 °C

ಶವಾಗಾರ ಸ್ಥಳಾಂತರಕ್ಕೆ ಒತ್ತಾಯಿಸಿ ಪ್ರತಿಭಟನೆ

Published:
Updated:

ಹಿರಿಯೂರು: ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಶವಾಗಾರವನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ಗುರುವಾರ ವಂದೇಮಾತರಂ ಜಾಗೃತಿ ವೇದಿಕೆಯ ವಿದ್ಯಾರ್ಥಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ಶವಾಗಾರಕ್ಕೆ ಹೊಂದಿಕೊಂಡು ಸರ್ಕಾರಿ ಪಿಯು ಕಾಲೇಜಿನ ಕಟ್ಟಡವಿದೆ. 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಒಮ್ಮಮ್ಮೆ  ಅಪರಿಚಿತ ವ್ಯಕ್ತಿಗಳ ಶವಗಳನ್ನು ತಂದು ಹಾಕಿದರೆ 2-3 ದಿನ ಮರಣೋತ್ತರ ಪರೀಕ್ಷೆ ನಡೆಸುವುದಿಲ್ಲ. ಆ ಸಂದರ್ಭದಲ್ಲಿ ಶಾಲೆಯಲ್ಲಿ ಕುಳಿತು ಪಾಠ ಕೇಳಲು ಸಾಧ್ಯವೇ ಇಲ್ಲ. ಈ ಬಗ್ಗೆ ಆರೇಳು ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಮನವಿಯಲ್ಲಿ ದೂರಿದ್ದಾರೆ.ಶವಾಗಾರದ ತ್ಯಾಜ್ಯವನ್ನು ಕಾಲೇಜು ಪಕ್ಕದಲ್ಲಿ ಹರಿದು ಹೋಗುವ ಚರಂಡಿಗೆ ಹಾಕುವ ಕಾರಣ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಜತೆಗೆ ಆಸ್ಪತ್ರೆಯ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದ ಕಾರಣ ಆಸ್ಪತ್ರೆ ಆವರಣಕ್ಕೆ ಹೊಂದಿರುವ ಕೊಠಡಿಗಳಲ್ಲಿ ಬೋಧಿಸುವುದ ಮತ್ತು ಕೇಳುವುದು ಎರಡೂ ದುಸ್ತರ. ಈ ಬಗ್ಗೆ ಸಂಬಂಧಿಸಿದವರಿಗೆ ಸೂಚನೆ ನೀಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಪ್ರತಿಭಟನೆಯಲ್ಲಿ ಟಿ. ಪ್ರಸನ್ನ, ನವೀನ್‌ಕುಮಾರ್, ವೀರಭದ್ರಪ್ಪ, ನಾಗರಾಜು, ಆರ್. ರಮೇಶ್, ನೂತನ್, ಗಿರೀಶ್, ಶ್ರೀಧರ್, ಚಂದ್ರು ಪಾಲ್ಗೊಂಡಿದ್ದರು.

 

Post Comments (+)