ಬುಧವಾರ, ಮೇ 12, 2021
26 °C

ಶವ ಇಟ್ಟು ರಾಜಕೀಯ ಮಾಡುತ್ತಿರುವ ಶಶಿಧರ್: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ಸಮೀಪದ ಕೊಡ್ಲಿಪೇಟೆ ಹೋಬಳಿ ಹೇಮಾವತಿ ನದಿಪಾತ್ರದಲ್ಲಿ ಆಕಸ್ಮಿಕವಾಗಿ ಮೃತಪಟ್ಟ ವ್ಯಕ್ತಿಯ ಶವವನ್ನು ಮುಂದಿಟ್ಟುಕೊಂಡು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ವಿ.ಪಿ. ಶಶಿಧರ್ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಮರಳು ಗುತ್ತಿಗೆದಾರರು ಆರೋಪಿಸಿದ್ದಾರೆ.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗೆದಾರ ವಿನೂತ್ ಶಂಕರ್ ಮಾತನಾಡಿ ಆಕಸ್ಮಿಕವಾಗಿ ಮೃತಪಟ್ಟ ಕಾರ್ಮಿಕ ಪುಟ್ಟೇಗೌಡರ ಕುಟುಂಬಕ್ಕೆ ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಲು ನಿರ್ಧರಿಸಲಾಗಿತ್ತು.ಅಲ್ಲದೇ ವಿಮಾ ಸಂಸ್ಥೆಯಿಂದಲೂ ಸೂಕ್ತ ಪರಿಹಾರ ದೊರೆಯುತ್ತಿತ್ತು. ಆದರೆ, ವಿ.ಪಿ.ಶಶಿಧರ್ ತನ್ನ ರಾಜಕೀಯ ನೆಲೆಯನ್ನು ಕಂಡುಕೊಳ್ಳಲು ಗ್ರಾಮಸ್ಥರನ್ನು ಪ್ರಚೋದಿಸಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಮಾಡಿದ್ದಾರೆ. ಅವರ ವಿರುದ್ಧ ಗೂಂಡಾ ಕಾಯಿದೆ ಅನ್ವಯ ಪೊಲೀಸ್ ಇಲಾಖೆಯವರು ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.ಕೊಡ್ಲಿಪೇಟೆ ಹೋಬಳಿಯಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆಯು ಸಕ್ರಮವಾಗಿದ್ದು, ಸರಕಾರಕ್ಕೆ ಕಳೆದ ಮೂರು ತಿಂಗಳಲ್ಲಿ ಅತ್ಯಧಿಕ ಆದಾಯ ಬಂದಿದೆ. ಸರಕಾರದ ಹೊಸ ಮರಳು ನೀತಿಯಿಂದ ಜನತೆಗೆ ಕಡಿಮೆ ದರದಲ್ಲಿ ಮರಳು ದೊರೆಯುತ್ತಿದೆ. ಆದರೆ, ಹಾಸನ ಜಿಲ್ಲೆಯಲ್ಲಿ ಮರಳಿಗೆ ಯಾವುದೇ ನೀತಿ ನಿಯಮವಿಲ್ಲದೇ ಅಲ್ಲಿಯ ಜೆಡಿಎಸ್ ಕಾರ್ಯಕರ್ತರು ಹೇಮಾವತಿ ನದಿ ತೀರದಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ. ಇದರ ಬಗ್ಗೆ ವಿ.ಪಿ.ಶಶಿಧರ್ ಏಕೆ ಚಕಾರ ಎತ್ತುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರೊಬ್ಬರು ತಾಲೂಕಿನ ಯಲಕನೂರಿನಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಶಿರಂಗಾಲದಲ್ಲೂ ಮರಳು ಗಣಿಗಾರಿಕೆ ನಡೆಯುತ್ತಿದೆ.ಇವುಗಳ ಬಗ್ಗೆ ಪ್ರಶ್ನಿಸದ ಇವರು ಕೊಡ್ಲಿಪೇಟೆಯಲ್ಲಿ ಮೊಕ್ಕಾಂ ಹೂಡಲು ಕಾರಣವೇನು? ಶಶಿಧರ್‌ರವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾಗ ತಮ್ಮ  ಕ್ಷೇತ್ರ ವ್ಯಾಪ್ತಿಯಾದ ಕಲ್ಲೂರಿನಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದಾಗ ಯಾಕೆ ಮೌನ ವಹಿಸಿದ್ದರು ಎಂದು ಟೀಕಿಸಿದರು.ಶಶಿಧರ್ ಅವರ ಗೂಂಡಾ ವರ್ತನೆಯಿಂದಾಗಿ ಅಮಾಯಕ ಪೊಲೀಸರು ಹಲ್ಲೆಗೆ ಒಳಗಾಗಿದ್ದು, ಸರಕಾರಿ ಆಸ್ತಿಪಾಸ್ತಿಗೆ ನಷ್ಟವಾಗಿದೆ. ಈ ಹಿಂದಿನಿಂದಲೂ ಕ್ಷುಲ್ಲಕ ಹಾಗೂ ಗೂಂಡಾಗಿರಿ ರಾಜಕೀಯ ಮಾಡಿಕೊಂಡು ಬರುತ್ತಿರುವ ಶಶಿಧರ್‌ರವರು ಪ್ರಾದೇಶಿಕ ಪಕ್ಷವೊಂದರ ಜಿಲ್ಲಾಧ್ಯಕ್ಷರಾಗಲು ಯಾವುದೇ ನೈತಿಕ ಅರ್ಹತೆ ಹೊಂದಿಲ್ಲ ಎಂದು ಹೇಳಿದರು. ಗೋಷ್ಠಿಯಲ್ಲಿ ಮರಳು ಗಣಿಗಾರಿಕೆಯ ಗುತ್ತಿಗೆದಾರರಾದ ಬಾಬು ರಾಜೇಂದ್ರಪ್ರಸಾದ್, ಬಿ.ಎಸ್.ವಸಂತ್‌ಕುಮಾರ್, ಜಿ.ಬಿ.ಗಂಗಾಧರ್ ಹಾಗೂ ಲೋಕೇಶ್ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.