ಸೋಮವಾರ, ಏಪ್ರಿಲ್ 19, 2021
32 °C

ಶವ ಸಂಸ್ಕಾರಕ್ಕೆ ಅಂಗೈ ಅಗಲ ಜಾಗ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ- ಸುರಪುರ ರಾಜ್ಯ ಹೆದ್ದಾರಿಯ ಮೇಲೆ ಕೊಂಗಂಡಿ (ಎಸ್.ಆರ್) ಗ್ರಾಮವಿದೆ.  ಸುತ್ತಲು ಸಮೃದ್ಧಿ ಭತ್ತದ ಬೆಳೆ ಹಸಿರಿನಿಂದ ಕಂಗೊಳಿಸಿ ಕಣ್ಣಿಗೆ ತಂಪು ನೀಡುತ್ತದೆ. ಗ್ರಾಮಕ್ಕೆ ಹೊಂದಿಕೊಂಡೆ ಹಳ್ಳದ ನೀರು ಜೀನುಗುತ್ತದೆ. ಗ್ರಾಮಸ್ಥರು ಎಷ್ಟೊಂದು ಧನ್ಯರು ಎಂದು ಉದ್ಘಾರ ತೆಗೆಯದೆ ಇರ ಲಾರರು. ದುರಂತವೆಂದರೆ ಹೆಣ ಹೂಳಲು ಜಾಗವಿಲ್ಲದ ಸ್ಥಿತಿ ಅಲ್ಲಿದೆ.ಹತ್ತಿಗುಡೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕೊಂಗಂಡಿ (ಎಸ್.ಆರ್) ಗ್ರಾಮ ಒಳಪಟ್ಟಿದೆ. ಸುಮಾರು 350 ಕುಟುಂಬ ಗಳಿವೆ. ಕುಗ್ರಾಮವಂತೂ ಅಲ್ಲ. ಶಹಾಪುರ- ಸುರಪುರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿ ರುವ ಗ್ರಾಮ ಇದಾಗಿದೆ. ಗ್ರಾಮದ ಪಕ್ಕದಲ್ಲಿ ಹಳ್ಳ ಹರಿಯುತ್ತದೆ ಜೊತೆಗೆ ಕಾಲುವೆ ನೀರು ಬೇರೆಯಿದೆ.

ಹಸಿರಿನಿಂದ ಕಾಣುವ ಪುಟ್ಟ ದ್ವೀಪದಂತೆ ಇಲ್ಲಿನ ಪ್ರದೇಶದಲ್ಲಿ ಕುಡಿಯುವ ನೀರಿನ ಬರವಿದೆ.ಎರಡು ವರ್ಷದ ಹಿಂದೆ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಜಲ ನಿರ್ಮೂಲನೆ ಯೋಜನೆ ಅಡಿಯಲ್ಲಿ 15 ಲಕ್ಷರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಅಧಿಕಾರಿ ಗಳು ಹಾಗೂ ಗ್ರಾಮದ ಮಖಂಡರು ಪಕ್ಷಬೇಧ ಮರೆತು ಇಡೀ ಯೋಜನೆಯನ್ನು ನುಂಗಿ ಹಾಕಿದರು. ನೀರು ಸರಬರಾಜು ಮಾಡುವ  ಟ್ಯಾಂಕ್‌ಗೆ ಹನಿ ನೀರು ಹರಿಸಲಿಲ್ಲ. ಇಡೀ ಯೋಜನೆ ಕಣ್ಣು ಮುಚ್ಚಿತು. ಚರಂಡಿ, ರಸ್ತೆ, ನಮಗೆ ಗಗನ ಕುಸುಮವಾಗಿವೆ. ಗ್ರಾಮದ ಸುತ್ತಲು ಭತ್ತದ ಗದ್ದೆಯಿದ್ದು ವಿಪರೀತ ಸೊಳ್ಳೆಗಳ ಕಾಟವಿದೆ ಎನ್ನುತ್ತಾರೆ ಗ್ರಾಮದ ಯುವ ಮುಖಂಡ ಹೇಮರಡ್ಡಿ ಸೂಗರಾಳ.ಗ್ರಾಮದ ಹೊರವಲಯದ ಎರಡು ಕಿ.ಮೀ.ದೂರದಲ್ಲಿ ಕಿರು ನೀರು ಸರಬರಾಜು ಯಂತ್ರವನ್ನು ಹಾಕಿ ಅಲ್ಲಿಂದ ಕುಡಿಯಲು ನೀರು ಹರಿಸಲಾಗುತ್ತಿತ್ತು. ಅಂತರ್ಜಲಮಟ್ಟ ಕುಸಿತ ದಿಂದ ಬೊರವೆಲ್‌ನಲ್ಲಿ ನೀರು ಇಲ್ಲದೆ ಕಣ್ಣು ಮುಚ್ಚಿತು.ಸದ್ಯ ಎರಡು ಬೋರವೆಲ್ ಇವೆ ಅವು ತುಕ್ಕು ಹಿಡಿದು ನಿಂತಿವೆ. ಒಂದು ಸೇದಿ ಬಾವಿಯಿದೆ ಅಲ್ಲಿನ ನೀರು ಕುಡಿಯಲು ಯೋಗ್ಯವಿಲ್ಲ. ಸುತ್ತಲು ಸಮೃದ್ಧಿ ನೀರು ಇದ್ದರು ಸಹ ಕುಡಿ ಯಲು ಹನಿ ನೀರಿಗೆ ನಾವು ಪರದಾಡಬೇಕು. ಇಂಥ ಗೋಳು ಎಲ್ಲಿಯೂ ಇಲ್ಲ ಎಂದು ಹಲುಬುತ್ತಾರೆ ಮಾನಪ್ಪ ಹೊಸ್ಮನಿ.ಒಂದು ಕೊಡ ಕುಡಿಯುವ ನೀರಿಗೆ ನಾವು ಎರಡು ಕಿ.ಮೀ. ದೂರ ಕ್ರಮಿಸಿ ಆಂಧ್ರ ವಲಸಿಗರ ಗುಡಿಸಲು ಬಳಿ ಹಾಕಲಾದ ಬೋರವೆಲ್‌ನಿಂದ ಹೊತ್ತುಕೊಂಡು ಬರುವ ದುಸ್ಥಿತಿ ಬಂದಿದೆ. ಜಾನುವಾರುಗಳಂತೆ ಹಳ್ಳದ ಇಲ್ಲವೆ ಕಾಲುವೆ ನೀರು ಸೇವೆನೆ ಮಾಡುವ ದುಸ್ಥಿತಿ ಬಂದಿದೆ. ಕಲುಷಿತ ನೀರು ಸೇವನೆಯಿಂದ ಕಾಲರ ರೋಗ ಬರುವ ಭೀತಿ ನಮ್ಮನ್ನು ಸದಾ ಕಾಡುತ್ತದೆ ಎನ್ನುತ್ತಾರೆ ಗ್ರಾಮದ ಮಹಿಳೆ ದ್ಯಾವಮ್ಮ.ಇವೆಲ್ಲಕ್ಕಿಂತ ಮಿಗಿಲಾಗಿ ಕಾಲುವೆ ನೀರು ಗ್ರಾಮಸ್ಥರಿಗೆ ಶಾಪವಾಗಿದೆ. ಗ್ರಾಮದ ಸುತ್ತಲು ಭತ್ತದ ಗದ್ದೆಗಳಿವೆ ಅಂಗೈ ಅಗಲ ಜಾಗಕ್ಕೂ ಇಲ್ಲಿ ಚಿನ್ನದ ಬೆಲೆಯಿದೆ.

ಕೆಲ ವ್ಯಕ್ತಿಗಳ ಅತಿಯಾದ ದುರಾಸೆಯಿಂದ ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಒತ್ತುವರಿ ಮಾಡಿಕೊಂಡು ಭತ್ತದ ಗದ್ದೆ ತಲೆ ಎತ್ತಿದೆ. ಗೈರಾಣ ಭೂಮಿ ಉಳ್ಳವರ ಪಾಲಾಗಿದೆ. ಗ್ರಾಮದಲ್ಲಿ ಯಾರಾದರು ಮೃತಪಟ್ಟರೆ ಹಿಡಿ ಮಣ್ಣು ಹಾಕಿ ಹೆಣ ಹೂಣಲು ಜಾಗವಿಲ್ಲ. ಹಳ್ಳದ ಪಕ್ಕದಲ್ಲಿ ಇಲ್ಲವೆ ಗದ್ದೆಯ ಹೊಲದಲ್ಲಿ ಹೆಣ ಹೂಣಲು ಗುಂಡಿ ತೊಡಿದರೆ ನೀರು ಚಿಮ್ಮುತ್ತದೆ. ಆಯಾ ಸಮುದಾಯದವರು ಅನಿವಾರ್ಯವಾಗಿ ಅದೇ ನೀರಿನ ಮಡುವಿನಲ್ಲಿ ಹೆಣವನ್ನು ದಫನ್ ಮಾಡುತ್ತಾರೆ. ಇನ್ನೂ ಜಮೀನು ಇಲ್ಲದವರು ಹಳ್ಳದಲ್ಲಿ ಎಸೆಯುವ ದುಸ್ಥಿತಿ ಬಂದಿದೆ ಎನ್ನುತ್ತಾರೆ ಗ್ರಾಮಸ್ಥರು.ಕುಡಿಯುವ ನೀರಿನಷ್ಟೇ ಸಮಸ್ಯೆಯು ಸ್ಮಶಾನ ಜಾಗಕ್ಕಾಗಿ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಇತ್ತ ಗಮನರಿಸಬೇಕೆಂದು ಮನವಿ ಮಾಡಿದ್ದಾರೆ.ಊರಿನಿಂದ ಬೇರೆಡೆ ಹೋಗಬೇಕು ಎಂದರೆ ಸಮರ್ಪಕ ರಸ್ತೆಯೇ ಇಲ್ಲ. ಜನಪ್ರತಿನಿಧಿಗಳು ಚುನಾವಣೆ ಬಿಟ್ಟರೆ ಮತ್ತೆ ಸುಳಿಯುವುದೇ ಇಲ್ಲ  ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.