ಶವ ಸಂಸ್ಕಾರಕ್ಕೆ ತಂತ್ರಜ್ಞಾನದ ಮೊರೆ ಹೋದ ಪಾರ್ಸಿಗಳು

7

ಶವ ಸಂಸ್ಕಾರಕ್ಕೆ ತಂತ್ರಜ್ಞಾನದ ಮೊರೆ ಹೋದ ಪಾರ್ಸಿಗಳು

Published:
Updated:
ಶವ ಸಂಸ್ಕಾರಕ್ಕೆ ತಂತ್ರಜ್ಞಾನದ ಮೊರೆ ಹೋದ ಪಾರ್ಸಿಗಳು

ಪಾ  ರ್ಸಿ ಸಮುದಾಯದಲ್ಲಿ ಶವ ಸಂಸ್ಕಾರ ಬಹಳ ವಿಭಿನ್ನ. ಗಾಳಿ, ನೀರು ಮತ್ತು ಪೃಥ್ವಿಯಲ್ಲಿ ಮಾಲಿನ್ಯ ಉಂಟಾಗದಂತೆ ಅಂತ್ಯಕ್ರಿಯೆ ನೆರವೇರಿಸಬೇಕು ಎನ್ನುವ ಕಟ್ಟಳೆ ಅವರಲ್ಲಿದೆ.ಅಂತ್ಯಕ್ರಿಯೆಯ ವಿಧಾನ ಈಗ ಅವರಿಗೆ ಸವಾಲಿನದ್ದಾಗಿದೆ. ಶವವನ್ನು ಸುಡುವಂತಿಲ್ಲ, ಹೂಳುವಂತಿಲ್ಲ. ಅಂತ್ಯಸಂಸ್ಕಾರದ ಸ್ಥಳದಲ್ಲಿ ಭೂಮಿಯ ಒಳಗೆ ಆಳವಾದ ಬಾವಿಯಂತಹ ರಚನೆ ಇರುತ್ತದೆ. ಅದರ ಮೇಲೆ ಸುರುಳಿ ಸುತ್ತಿದಂತೆ ಉಕ್ಕಿನ ತಗಡುಗಳನ್ನು ಇರಿಸಿ ಅದರ ಮೇಲೆ ಶವ ಇಡುತ್ತಾರೆ. ರಣಹದ್ದುಗಳಿಗೆ ಆ ಕಳೇಬರ ಆಹಾರವಾಗುತ್ತದೆ. ಅವರಲ್ಲಿರುವ ಶವಸಂಸ್ಕಾರದ ವಿಧಾನಕ್ಕೆ ಶತಮಾನಗಳ ಇತಿಹಾಸ ಇದೆ. ಆದರೆ, ಈಗ ರಣಹದ್ದುಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿರುವುದರಿಂದ ಆ ಸಮುದಾಯದವರು ಅನಿವಾರ್ಯವಾಗಿ ಅನ್ಯ ಮಾರ್ಗ ಕಂಡುಕೊಂಡಿದ್ದಾರೆ.ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದ್‌ನಲ್ಲಿ 1200 ಜನ ಪಾರ್ಸಿ ಸಮುದಾಯದವರು ಇದ್ದಾರೆ. ಅವರು, ಸೌರಶಕ್ತಿ ಸಾಂದ್ರೀಕರಣ  ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಅದರ ಮೂಲಕ ಮೃತದೇಹದ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ.ಕಳೆದ 15 ವರ್ಷಗಳಲ್ಲಿ ಭಾರತದಲ್ಲಿ ರಣಹದ್ದುಗಳು ಬಹುತೇಕ ನಾಪತ್ತೆಯಾಗಿವೆ. ಸುಮಾರು ಮೂರು ವರ್ಷಗಳಿಂದ ಆಂಧ್ರ ಪ್ರದೇಶದಲ್ಲಿ ಒಂದೇ ಒಂದು ರಣಹದ್ದು ಕಣ್ಣಿಗೆ ಗೋಚರಿಸಿಲ್ಲ. ಹಸು, ಎಮ್ಮೆಗಳಿಗೆ ಕೃಷಿಕರು ನೋವು ನಿವಾರಕ ಡೈಕ್ಲೊಫಿನಾಕ್‌ ಔಷಧ ನೀಡುತ್ತಾರೆ. ಆ ಔಷಧ ಒಳಗೊಂಡ ಸತ್ತ ಪ್ರಾಣಿಗಳ ಮಾಂಸ ತಿಂದು ಅಸಂಖ್ಯ ರಣಹದ್ದುಗಳು ಸಾವನ್ನಪ್ಪಿರುವುದೇ ಇದಕ್ಕೆ ಕಾರಣ. ಈ ಔಷಧಿ ಅವುಗಳ ಪಾಲಿಗೆ ಮಾರಣಾಂತಿಕ. 2006ರಿಂದ ಭಾರತ, ನೇಪಾಳ ಮತ್ತು ಪಾಕಿಸ್ತಾನದಲ್ಲಿ ಪಶುಗಳಿಗೆ ಡೈಕ್ಲೊಫಿನಾಕ್‌ ಔಷಧ ನೀಡುವುದರ ಮೇಲೆ ನಿಷೇಧ ಹೇರಲಾಗಿದೆ. ಆದರೂ ಕಾನೂನುಬಾಹಿರವಾಗಿ ಇದರ ಮಾರಾಟ ಮತ್ತು ಬಳಕೆ ಇಂದಿಗೂ ನಿಲ್ಲದಿರುವುದರಿಂದ ರಣಹದ್ದು ಸೇರಿದಂತೆ ಇತರ ಪಕ್ಷಿಗಳಿಗೆ ಮಾರಕವಾಗಿ ಪರಿಣಮಿಸಿದೆ.‘ಗಾಳಿ, ನೀರು ಮತ್ತು ಭೂಮಿ ಮೇಲೆ ಮಾಲಿನ್ಯ ಉಂಟಾಗದಂತೆ ಶವವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬೇಕೆಂದು ಧರ್ಮಗ್ರಂಥಗಳು ಕಟ್ಟಳೆ ವಿಧಿಸಿವೆ’ ಎನ್ನುತ್ತಾರೆ ಚಿನಾಯ್‌ ಅಗ್ನಿ ದೇವಸ್ಥಾನದ ಮುಖ್ಯ ಅರ್ಚಕ ಎ. ಎಚ್‌. ಭರೂಚ್‌.‘ರಣಹದ್ದುಗಳ ಅನುಪಸ್ಥಿತಿಯಲ್ಲೂ ಎಂಟು ಸಾವಿರ ವರ್ಷಗಳಿಂದ ನಡೆದುಕೊಂಡು ಬಂದಿರುವ ಶವಗಳ ವಿಲೇವಾರಿ ಮಾಡುವ ನಮ್ಮ ಪದ್ಧತಿ ನಿಂತಿಲ್ಲ. ಒಂದು ವೇಳೆ ಮತ್ತೆ ಅವುಗಳು ಕಾಣಿಸಿಕೊಂಡರೆ ನಮಗೆ ಬಹಳ ಸಂತಸ’ ಎಂದು ಅವರು ಹೇಳಿದ್ದಾರೆ.

 

‘ಒಂದು ವೇಳೆ ರಣಹದ್ದುಗಳ ಸಂಖ್ಯೆ ಹೆಚ್ಚಿದರೆ, ಸೌರಶಕ್ತಿ ಸಾಂದ್ರೀಕರಣ ವ್ಯವಸ್ಥೆಯಿಂದ ದೂರ ಉಳಿಯುತ್ತೇವೆ. ರಣಹದ್ದುಗಳು ಶವದ ಮಾಂಸವನ್ನು ಒಂದು ಅಥವಾ ಎರಡು ಗಂಟೆಗಳಲ್ಲಿ ತಿಂದು ಮುಗಿಸುತ್ತವೆ. ಆದರೆ, ಸೌರಶಕ್ತಿ ಸಾಂದ್ರೀಕರಣದಿಂದ ಹಲವು ದಿನಗಳೇ ಬೇಕಾಗುತ್ತವೆ. ಬೇಸಿಗೆಯಲ್ಲಿ ಸ್ವಲ್ಪ ಬೇಗ ಮುಗಿಯಬಹುದು. ಅದೇ ಚಳಿಗಾಲದಲ್ಲಿ ಸುದೀರ್ಘ ಅವಧಿ ತೆಗೆದುಕೊಳ್ಳುತ್ತದೆ’ ಎಂದು ಪಾರ್ಸಿ ಒಮಿನ್‌ ದೆಬ್ರಾ ಅಭಿಪ್ರಾಯಪಟ್ಟಿದ್ದಾರೆ.ರಣಹದ್ದುಗಳು ಕಣ್ಮರೆಯಾಗಿರುವುದರಿಂದ ಹೊಸ ವಿಧಾನವನ್ನು ಅಳವಡಿಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎನ್ನುತ್ತಾರೆ ಉದಾರವಾದಿಗಳು. ಇನ್ನೂ ಕೆಲವರು ವಿದ್ಯುತ್ ಶವಾಗಾರ ಬಳಸುವುದಕ್ಕೂ ಸಲಹೆ ಮಾಡುತ್ತಾರೆ.‘ನಮ್ಮದು ಪ್ರಗತಿಪರ ಸಮುದಾಯ. ಆದರೆ, ನಮ್ಮ ಆಚರಣೆಯಿಂದ ದೂರ ಉಳಿಯಲು ಸಾಧ್ಯವಿಲ್ಲ. ಸಾಂಪ್ರದಾಯಿಕ ವಿಧಾನದಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಬೇಕು ಎನ್ನುವುದು ನಮ್ಮಲ್ಲಿನ ಬಹುತೇಕರ ಅಭಿಪ್ರಾಯ’ ಎಂದು ಪಾರ್ಸಿ ಅಂಜುಮನ್‌ ಅಧ್ಯಕ್ಷ ಗುಲ್‌ಬಾನು ಯಾದಗರ್‌ ಚಿನಾಯ್‌ ಹೇಳುತ್ತಾರೆ. ಇದೇ ವೇಳೆ ಪಾರ್ಸಿ ಸಮುದಾಯದಲ್ಲೇ ಕೆಲವರು, ಶವಗಳನ್ನು ಹೂಳುತ್ತಿದ್ದಾರೆ.‘ದೇಹ ತಿನ್ನುವುದಕ್ಕೆ ರಣಹದ್ದುಗಳೇ ಇಲ್ಲದಿದ್ದಾಗ ತಿಂಗಳುಗಟ್ಟಲೇ ಶವವನ್ನು ಹಾಗೆಯೇ ಕೊಳೆಯಲು ಬಿಡುವುದು ಆ ವ್ಯಕ್ತಿಗೆ ಮಾಡುವ ಅಪಮಾನವೇ ಸರಿ’ ಎನ್ನುತ್ತಾರೆ ಪರಿಸರವಾದಿ ಹಾಗೂ ಅದೇ ಸಮುದಾಯಕ್ಕೆ ಸೇರಿದ ಫರೀದಾ ತಂಪಾಲ್‌.ಆದರೆ, ಎಂ.ಜಿ. ರಸ್ತೆಯ ಅಗ್ನಿ ದೇವಸ್ಥಾನದ ಅರ್ಚಕ ಕೇಕಿ ದಸ್ತೂರ್‌ ಇದು ಯಾವುದನ್ನೂ ಒಪ್ಪುವುದಿಲ್ಲ. ‘ಪವಿತ್ರ ಎಂದು ಭಾವಿಸಲಾಗುವ ದೇಹಕ್ಕೆ ಅಗ್ನಿಸ್ಪರ್ಶ ಮಾಡಿ ಅದಕ್ಕೆ ಅವಮಾನಿಸಬಾರದು. ಅದನ್ನು ಹೂಳು­ವುದ­ರಿಂದ ಭೂಮಿ ಮತ್ತು  ನೀರು ಮಾಲಿನ್ಯಕ್ಕೆ ಒಳಗಾಗುತ್ತದೆ’ ಎನ್ನುತ್ತಾರೆ.ಈ ಎಲ್ಲ ವಾದ ವಿವಾದಗಳ ನಡುವೆ, ‘ಬಾಂಬೆ ಪಾರ್ಸಿ ಪಂಚಾಯತ್’ ಇನ್ನೊಂದು ದಾರಿ ಕಂಡುಕೊಂಡಿದೆ. ‘ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿ’ ಜೊತೆ ಒಡಂಬಡಿಕೆ ಮಾಡಿಕೊಂಡಿರುವ ಅದು, ಮುಂಬೈನ ಟವರ್‌ ಆಫ್‌ ಸೈಲೆನ್ಸ್‌ ಪ್ರದೇಶದಲ್ಲಿ ರಣಹದ್ದುಗಳ ಪೋಷಣೆಗೆ ಮುಂದಾಗಿದೆ. ನೆಹರು ಪ್ರಾಣಿ ಸಂಗ್ರಹಾಲಯದಲ್ಲಿರುವ ಉದ್ದೇಶಿತ ರಣಹದ್ದುಗಳ ಪೋಷಣೆಯ ಕೇಂದ್ರ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ.

ರಣಹದ್ದುಗಳ ಪೋಷಣೆ ಕೇಂದ್ರಗಳ ಬೆನ್ನು ಹತ್ತಿ ಹೋದರೆ ಹರಿಯಾಣದ ಪಿಂಜೋರ್‌ ಕೇಂದ್ರದ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಕೇಂದ್ರೀಯ ಪ್ರಾಣಿ ಪ್ರಾಧಿಕಾರಕ್ಕೆ 2010ರಲ್ಲಿ 41 ಲಕ್ಷ ರೂಪಾಯಿ ಅನುದಾನ ನೀಡಲಾಗಿತ್ತು. ಕಾರ್ಯಕ್ರಮ ಜಾರಿಯಾಗಿ ಸುಮಾರು ನಾಲ್ಕು ವರ್ಷ ಕಳೆದರೂ ಫಲಿತಾಂಶ ಮಾತ್ರ ತೃಪ್ತಿಕರವಾಗಿಲ್ಲ.ಅಷ್ಟು ಸುಲಭವಲ್ಲ: ‘ಮರಿ ರಣಹದ್ದುಗಳ ಪೋಷಣೆಗೆ ಸಂಬಂಧಿಸಿದಂತೆ ಸಣ್ಣ ಆಸೆ ಚಿಗುರೊಡೆದಿತ್ತು. ಆದರೆ, ಹುಟ್ಟಿನಿಂದಲೇ ಅವುಗಳಲ್ಲಿ ದೋಷ ಕಾಣಿಸಿಕೊಂಡು ಮರಿಗಳು ಸಾವನ್ನಪ್ಪುತ್ತಿದ್ದರಿಂದ ಪ್ರಾಣಿ ಸಂಗ್ರಹಾಲಯದ ಕೇಂದ್ರದಲ್ಲಿ ಅವುಗಳ ಪೋಷಣೆ ಸಾಧ್ಯವಾಗಿಲ್ಲ. ಮರಿಗಳನ್ನು ರಕ್ಷಿಸಿ ಪೋಷಿಸುವ ಕೆಲಸ ಅಷ್ಟು ಸುಲಭವಾಗಿರಲಿಲ್ಲ’ ಎನ್ನುತ್ತಾರೆ ಹೈದರಾಬಾದಿನ ನೆಹರೂ ಮೃಗಾಲಯದ ಅಧಿಕಾರಿಗಳು.ಮರಿಗಳ ಪೋಷಣೆ ಕೇಂದ್ರದಲ್ಲಿ ಮೊದಲ ಬಾರಿಗೆ ರಣಹದ್ದು ಇಟ್ಟಿದ್ದ ಮೊಟ್ಟೆ ಗೂಡಿನಿಂದ ನೆಲಕ್ಕೆ ಬಿದ್ದು ಹೋಯಿತು ಎಂದು ಅವರು ವಿವರಿಸುತ್ತಾರೆ.‘ಹೆಣ್ಣು ರಣಹದ್ದು ಆಹಾರ ಹುಡುಕಿಕೊಂಡು ಹೋಗುವಾಗ, ಗಂಡು ರಣಹದ್ದು ಗೂಡಿನಲ್ಲಿದ್ದ ಒಣಗಿದ ರೆಂಬೆ ಎಳೆದಾಡಿತು. ಇದರಿಂದ ಗೂಡಿನಲ್ಲಿರುವ ಮೊಟ್ಟೆ ನೆಲದ ಮೇಲೆ ಬಿದ್ದು ಒಡೆದು ಹೋಯಿತು’ ಎಂದು ಪ್ರಾಣಿ ಸಂಗ್ರಹಾಲಯದ ಅಧಿಕಾರಿ ಶೇಖರ್‌ ರೆಡ್ಡಿ ತಿಳಿಸಿದ್ದಾರೆ.

ಮೊದಲ ಮೊಟ್ಟೆಗೆ ಹಾನಿಯಾದರೆ, ರಣಹದ್ದು ಇನ್ನೊಂದು ಮೊಟ್ಟೆ ಇಡುತ್ತದೆ. ಆದರೆ, ಇದು ಈ ಪ್ರಾಣಿ ಸಂಗ್ರಹಾಲಯದಲ್ಲಿ ಆಗಲಿಲ್ಲ ಎನ್ನುತ್ತಾರೆ ತಜ್ಞರು.ಸೆಂಟರ್‌ ಫಾರ್‌ ಸೆಲ್ಯುಲಾರ್‌ ಅಂಡ್‌ ಮೈಕ್ರೊಬಯಲಾಜಿ (ಸಿ.ಸಿ.ಎಂ.ಬಿ) ಸಹಭಾಗಿತ್ವದಲ್ಲಿ ಹೈದರಾಬಾದ್‌ನಲ್ಲಿ ರಣಹದ್ದು ಪೋಷಣೆ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರದಲ್ಲಿ 20 ವರ್ಷ ವಯಸ್ಸಿನ ಎರಡು ಗಂಡು ಮತ್ತು ಮೂರು ಹೆಣ್ಣು ರಣಹದ್ದುಗಳಿವೆ. ಮುಂಬರುವ ಅಕ್ಟೋಬರ್‌ನಲ್ಲಿ ಮೊಟ್ಟೆ ಇಡುವುದಕ್ಕೆ ಪೂರಕ ವಾತಾವರಣ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಹಲವು ರಣಹದ್ದುಗಳನ್ನು ಗುಜರಾತ್‌ನಿಂದ ಹೈದರಾಬಾದ್‌ನ ನೆಹರೂ ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸಿಕೊಡಲು ಉದ್ದೇಶಿಸಲಾಗಿದೆ’ ಎಂದು ಸಿ.ಸಿ.ಎಂ.ಬಿ. ಉಪ ನಿರ್ದೇಶಕ ಎಸ್‌. ಶಿವಾಜಿ ತಿಳಿಸಿದ್ದಾರೆ.ಏಷ್ಯಾದಲ್ಲಿ ಅಳಿವಿನ ಅಂಚಿನಲ್ಲಿರುವ ರಣಹದ್ದುಗಳ ಸಂರಕ್ಷಣಾ  ಸಂಘಟನೆ (ಸೇವ್‌) ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಒಂದುಗೂಡಿ ರಣಹದ್ದುಗಳ ರಕ್ಷಣೆಗೆ ಅಭಿಯಾನ ಮತ್ತು ಆ ಕಾರ್ಯಕ್ಕೆ ದೇಣಿಗೆ ಸಂಗ್ರಹಿಸುತ್ತಿವೆ. 15 ವರ್ಷಗಳ ಹಿಂದೆ ಸಾವಿರಾರು ರಣಹದ್ದುಗಳು ಇದ್ದವು. ಆದರೆ, ಈಗ ಅವುಗಳು ಬಹುತೇಕ ಇಲ್ಲವಾಗಿವೆ. ‘ರಣಹದ್ದುಗಳು ನೋಡಲಿಕ್ಕೆ ಅಷ್ಟೇನೂ ಸುಂದರವಾದ ಪಕ್ಷಿಯಲ್ಲ. ಆದರೆ, ಅವುಗಳು ಸಂಪೂರ್ಣವಾಗಿ ಅಳಿಸಿ ಹೋಗಲು ಬಿಡುವುದು ಸೂಕ್ತವೇ’ ಎಂದು ‘ಸೇವ್‌’ ಪ್ರಶ್ನಿಸಿದೆ.ಏಷ್ಯಾ ಉಪಖಂಡದಲ್ಲಿ ಮಾತ್ರ ಕಾಣಿಸಿಕೊಳ್ಳುವ ಮೂರು ಜಾತಿಯ ರಣಹದ್ದುಗಳಲ್ಲಿ ಶೇ 97ರಷ್ಟು ಈಗಾಗಲೇ ಅವನತಿ ಕಂಡಿವೆ. ಇವುಗಳ ಪೈಕಿ ಒಂದಂತೂ ಶೇ 99.9ರಷ್ಟು ಕಣ್ಮರೆಯಾಗಿದೆ. ಇತರ ಪಕ್ಷಿಗಳಿಗೆ ಹೋಲಿಸಿದರೆ ರಣಹದ್ದುಗಳು ಬಹಳ ಬೇಗ ಅಗೋಚರವಾಗಿವೆ. ರಣಹದ್ದುಗಳು ಕಣ್ಮರೆಯಾಗಿರುವುದರಿಂದ ನಾಯಿಗಳು ಸತ್ತ ಪ್ರಾಣಿಗಳ ಮಾಂಸ ತಿಂದು ರೇಬಿಸ್‌ನಂತಹ ರೋಗ ಹರಡುವುದಕ್ಕೆ ಕಾರಣವಾಗಿದೆ ಎಂದು ‘ಸೇವ್‌’ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry