ಶಸ್ತ್ರಚಿಕಿತ್ಸೆಗೆ ಹಣ ಪಡೆದ ವೈದ್ಯರಿಂದ ಹಣ ವಾಪಸ್

ಶನಿವಾರ, ಜೂಲೈ 20, 2019
22 °C
ಕಡೂರು ಸಾರ್ವಜನಿಕ ಆಸ್ಪತ್ರೆ

ಶಸ್ತ್ರಚಿಕಿತ್ಸೆಗೆ ಹಣ ಪಡೆದ ವೈದ್ಯರಿಂದ ಹಣ ವಾಪಸ್

Published:
Updated:

ಕಡೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆ ದಾಖಲಾದವರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆ ವೈದ್ಯರಿಗೆ ಮುತ್ತಿಗೆ ಹಾಕಿ ಅವರಿಂದ ಸಾರ್ವಜನಿಕರೇ ರೋಗಿಗಳಿಗೆ ಹಣ ವಾಪಸ್ ಮಾಡಿದ ಘಟನೆ ಗುರುವಾರ ನಡೆಯಿತು.ಕಡೂರು ತಾಲ್ಲೂಕು ತಂಗಲಿ ತಾಂಡ್ಯ (ವೆಂಕಟಲಕ್ಷ್ಮಮ್ಮ ನಗರ)ದ ಹೇಮಾವತಿ ಎಂಬ ವಿಧವೆ ಗರ್ಭಕೋಶದ ಶಸ್ತ್ರಚಿಕಿತ್ಸೆಗಾಗಿ ಕಡೂರು ಸಾರ್ವಜನಿಕ ಆಸ್ಪತ್ರೆಗೆ ಜೂನ್ 28ರಂದು ದಾಖಲಾಗಿದ್ದರು.ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಡಾ.ಜಗದೀಶ್ ಅವರು 8 ಸಾವಿರ ರೂಪಾಯಿ ನೀಡಿದರೆ ಚಿಕಿತ್ಸೆ ನೀಡುವುದಾಗಿಯೂ ಮುಂಗಡವಾಗಿ 5ಸಾವಿರ ರೂಪಾಯಿಯನ್ನು ಆಸ್ಪತ್ರೆ ಸಮೀಪದ ಖಾಸಗಿ ಮೆಡಿಕಲ್‌ಶಾಪ್ ಒಂದಕ್ಕೆ ನೀಡಿ ಅವರಿಂದ ಚೀಟಿ ತರುವಂತೆಯೂ ತಿಳಿಸಿದ್ದರು.ಕೂಲಿ ಮಾಡಿಕೊಂಡು ಜೀವನ ನಡೆಸುವ ಹೇಮಾವತಿ ಕಷ್ಟಪಟ್ಟು 5 ಸಾವಿರ ರೂಪಾಯಿ ಹೊಂದಿಸಿ ವೈದ್ಯರು ತಿಳಿಸಿದವರಿಗೆ ನೀಡಿ ಚೀಟಿ ತಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಶಸ್ತ್ರಚಿಕಿತ್ಸೆಯೂ ನಡೆದಿತ್ತು.ಸಮಸ್ಯೆಗೆ ಸ್ಪಂದಿಸದ ಸರ್ಕಾರಿ ವೈದ್ಯರ ಧೋರಣೆ ಕುರಿತು ಹೇಮಾವತಿ ಅವರು ಕಡೂರು ಶಾಸಕ ವೈ.ಎಸ್.ವಿ.ದತ್ತ ಅವರಿಗೆ ದೂರವಾಣಿ ಮೂಲಕ ಘಟನೆಯ ವಿವರ ನೀಡಿದರು. ಶಾಸಕ ವೈ.ಎಸ್.ವಿ.ದತ್ತ ವೈದ್ಯರಿಗೆ ಕರೆ ಮಾಡಿ ಸ್ಪಷ್ಟೀಕರಣ ಕೇಳಿದಾಗ ಡಾ.ಜಗದೀಶ್ ಅವರು ತಾವು ಯಾರಿಂದಲೂ ಹಣ ಪಡೆದಿಲ್ಲವೆಂದೂ, ಇದು ಸುಳ್ಳೆಂದೂ ಪ್ರತಿಪಾದಿಸಿದ್ದರು. ಶಾಸಕರು ಮತ್ತೊಮ್ಮೆ ಈ ರೀತಿ ದೂರು ಬಾರದಂತೆ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ತಾಕೀತು ಮಾಡಿದ್ದರು.ಹೇಮಾವತಿ ಅವರು ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಆಗಬೇಕಿತ್ತು. ಆದರೆ ಆಸ್ಪತ್ರೆಯ ಅಟೆಂಡರ್ ಒಬ್ಬರು ಬಾಕಿ ಹಣ ಮೂರು ಸಾವಿರ ರೂಪಾಯಿ ಪಾವತಿಸಿದರೆ ಮಾತ್ರ ಆಸ್ಪತ್ರೆಯಿಂದ ಬಿಡುಗಡೆ  ಮಾಡುವುದಾಗಿ ತಿಳಿಸಿದರು. ಇದರಿಂದ ರೋಷಗೊಂಡ ರೋಗಿಯ ಸಂಬಂಧಿಕರು ತಾ.ಪಂ. ಮಾಜಿ ಅಧ್ಯಕ್ಷ ಬಿ.ಟಿ.ಗಂಗಾಧರನಾಯ್ಕ ಅವರ ಗಮನಕ್ಕೆ ತಂದು ಅವರೊಡನೆ ಸೇರಿ ವೈದ್ಯರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಇದರ ನಡುವೆಯೂ ಹಣ ಪಡೆದಿರುವುದು ಸುಳ್ಳು ಎಂದು ಡಾ.ಜಗದೀಶ್ ಹೇಳಿದರು. ಈ ನಡುವೆ ಬಾಕಿ ಹಣ ನೀಡುವಂತೆ ಒತ್ತಾಯಿಸಿದ ಅಟೆಂಡರ್‌ನನ್ನು ಪ್ರಶ್ನಿಸಿದಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿದ. ಘಟನೆಯ ಬಳಿಕ ವೈದ್ಯರು ರೋಗಿಗಳಿಂದ ವಸೂಲು ಮಾಡಿದ ಹಣ ರೂ 40 ಸಾವಿರವನ್ನು ಸ್ಥಳದಲ್ಲಿಯೇ ಹಿಂದಿರುಗಿಸಿದರು.ಪ್ರತಿಭಟನಾಕಾರರು ಬಡವರಿಂದ ಹಣ ಸುಲಿಗೆ ಮಾಡುವ ಭ್ರಷ್ಟ ವೈದ್ಯ ಮತ್ತು ಸಿಬ್ಬಂದಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಅವರನ್ನು ವರ್ಗಾವಣೆ ಮಾಡಬೇಕು ಇಲ್ಲದಿದ್ದಲ್ಲಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.ಘಟನೆಯ ಕುರಿತು ಪ್ರತಿಕ್ರಿಯೆ ನಿಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರವಾಣಿ ಮೂಲಕ ಪ್ರಯತ್ನಿಸಿದರೆ ಅವರ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಪ್ರತಿಕ್ರಿಯೆ ನೀಡಲು ಡಾ.ಜಗದೀಶ್ ಕೂಡಾ ಲಭ್ಯವಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry