ಬುಧವಾರ, ಆಗಸ್ಟ್ 21, 2019
24 °C

`ಶಸ್ತ್ರಾಸ್ತ್ರ ಪೈಪೋಟಿ ನಿಲ್ಲಿಸಿ, ಸೇನಾ ವೆಚ್ಚ ಕಡಿತಗೊಳಿಸಿ'

Published:
Updated:

ಇಸ್ಲಾಮಾಬಾದ್ (ಪಿಟಿಐ): ಪ್ರಾದೇಶಿಕ ಸ್ಥಿರತೆ ಮತ್ತು ಶಾಂತಿ ಕಾಪಾಡಲು ಭಾರತ ಮತ್ತು ಪಾಕಿಸ್ತಾನ ಶಸ್ತ್ರಾಸ್ತ್ರ ಪೈಪೋಟಿ ಕೊನೆಗಾಣಿಸುವಂತೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮನವಿ ಮಾಡಿಕೊಂಡಿದ್ದಾರೆ. ಮೊದಲ ಹಂತವಾಗಿ ಉಭಯ ದೇಶಗಳು ತಮ್ಮ ಸೇನಾವೆಚ್ಚಗಳನ್ನು ಕಡಿತಗೊಳಿಸು ವಂತೆಯೂ ಅವರು ಸಲಹೆ ಮಾಡಿದ್ದಾರೆ.ಸೇನಾವೆಚ್ಚ ಕಡಿತಗೊಳಿಸುವ ದಿಸೆಯಲ್ಲಿ ಪಾಕಿಸ್ತಾನದ ಪ್ರಯತ್ನಕ್ಕೆ ಕೈಜೋಡಿಸುವಂತೆ ಷರೀಫ್ ಅವರು ಭಾರತವನ್ನು ಕೋರಿದ್ದಾರೆ. ಉಭಯ ದೇಶಗಳ ಶಶ್ತ್ರಾಸ್ತ್ರ ಪೈಪೋಟಿ, ಮಿತಿ ಮೀರಿದ ಸೇನಾವೆಚ್ಚ ಮತ್ತು ಯುದ್ಧಗಳಿಂದಾಗಿ ಎರಡೂ ದೇಶಗಳ ನಾಗರಿಕರು, ಜನಸಾಮಾನ್ಯರು ಬೆಲೆ ತೆರಬೇಕಾಗಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.ಸೌದಿ ಅರೇಬಿಯಾಕ್ಕೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿರುವ ಅವರು, ಭಾನುವಾರ ಜೆಡ್ಡಾದಲ್ಲಿ ತಮ್ಮನ್ನು ಭೇಟಿಯಾದ ಪಾಕಿಸ್ತಾನ ಪತ್ರಕರ್ತರ ನಿಯೋಗದ ಜತೆ ನಡೆಸಿದ ಸಂವಾದದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಎರಡೂ ರಾಷ್ಟ್ರಗಳ ನಡುವಿನ ಶಸ್ತ್ರಾಸ್ತ್ರ ಪೈಪೋಟಿ ಮತ್ತು ವಿಪರೀತ ಸೇನಾವೆಚ್ಚದಿಂದಾಗಿ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಸದಾ ಆತಂಕ ಎದುರಿಸು ವಂತಾಗಿದೆ. ಇದಕ್ಕೊಂದು ಕೊನೆ ಹಾಡಬೇಕು. ಈ ದಿಸೆಯಲ್ಲಿ ಪಾಕಿಸ್ತಾನದ ಜೊತೆ ಭಾರತ ಕೈಜೋಡಿಸಿದಾಗ ಮಾತ್ರ ಇದು ಸಾಧ್ಯ ಎಂದರು.ದಶಕಗಳಿಂದ ಉಭಯ ರಾಷ್ಟ್ರಗಳ ಮಧ್ಯೆ ಕಗ್ಗಂಟಾಗಿರುವ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಿ `ಸಮಗ್ರ ನೀತಿ'ಯೊಂದನ್ನು ರೂಪಿಸುವುದಾಗಿ ಹೇಳಿದರು. ನೆರೆ ಹೊರೆಯ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡದು. ಆಫ್ಘಾನಿಸ್ತಾನಕ್ಕೂ ಸಂಬಂಧಿಸಿದಂತೆ ಇದೇ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.ಆಫ್ಘಾನಿಸ್ತಾನದಲ್ಲಿ ಯಾವುದೇ ಒಂದು ನಿರ್ದಿಷ್ಟ ಗುಂಪಿನ ಬೆಂಬಲಕ್ಕೆ ಪಾಕಿಸ್ತಾನ ನಿಲ್ಲದು ಎಂದು ಅವರು ಸ್ಪಷ್ಟಪಡಿಸಿದರು.

Post Comments (+)