ಶಹಾಪುರ: ಚರಬಸವೇಶ್ವರ ಸಂಸ್ಥೆಯಿಂದ ಒತ್ತುವರಿ!

7

ಶಹಾಪುರ: ಚರಬಸವೇಶ್ವರ ಸಂಸ್ಥೆಯಿಂದ ಒತ್ತುವರಿ!

Published:
Updated:

ಶಹಾಪುರ: ಪಟ್ಟಣದ ಚರಬಸವೇಶ್ವರ ವಿದ್ಯಾ ಸಂಸ್ಥೆಯವರು ಪುರಸಭೆಯ ಕೋಟ್ಯಂತರ ಮೌಲ್ಯದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇಂದಿಗೂ ಪಹಣಿ ಪತ್ರಿಕೆಯಲ್ಲಿ ಪುರಸಭೆ ಹೆಸರಿನಲ್ಲಿದೆ. ಹಂಚಿಕೆ ಹಾಗೂ ವರ್ಗಾವಣೆ ವಿಷಯವಾಗಿ ನಿಯಮ ಪಾಲಿಸಿಲ್ಲ.ಯಾವುದೇ ಅಧಿಕೃತ ಪರವಾನಗಿ ಪಡೆಯದೆ ವಾಣಿಜ್ಯ ಮಳಿಗೆ ನಿರ್ಮಿಸಿದ್ದಾರೆ. ಶಿಕ್ಷಣ ಸಂಬಂಧ ಬಿಟ್ಟು ಲಾಭದಾಯಕ ಉದ್ದೇಶಕ್ಕಾಗಿ ವಾಣಿಜ್ಯ ಮಳಿಗೆ ನಿರ್ಮಿಸಿ ಗುತ್ತಿಗೆ ನೀಡಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಇಷ್ಟು ಸಾಲದು ಎನ್ನುವಂತೆ ಪುರಸಭೆ ಮೇಲೆ ದಾವೆ ಹಾಕಿರುವುದು ಸಹ ಕಾನೂನು ಬಾಹಿರವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎನ್. ಮಾಧವಿಯವರು 2012 ಮಾರ್ಚ್ 20ರಂದು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಬಹಿರಂಗಪಡಿಸಿದ್ದಾರೆ.ಪುರಸಭೆ ಸಾರ್ವಜನಿಕ ಆಸ್ತಿಯಾದ ಎರಡು ಎಕರೆ ಭೂಮಿಯನ್ನು ಚರಬಸವೇಶ್ವರ ವಿದ್ಯಾ ಸಂಸ್ಥೆಯವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರಿಂದ ವ್ಯಾಪಕವಾಗಿ ದೂರುಗಳು ಕೇಳಿ ಬಂದವು. ಕೋರ್ಟ್‌ನ ಆದೇಶದಂತೆ ಕಡತವನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದ್ದರು.ಹಿನ್ನೆಲೆ: 1974 ಅಕ್ಟೋಬರ್ 16ರಂದು ಪುರಸಭೆ ಆಡಳಿತಾಧಿಕಾರಿಯಾಗಿದ್ದ ತಹಸೀಲ್ದಾರರು, ಕಾರ್ಯದರ್ಶಿಗಳು ಚರಬಸವೇಶ್ವರ ವಿದ್ಯಾ ಸಂಸ್ಥೆಯ ಕೋರಿಕೆಯ ಮೇರೆಗೆ ಪ್ರತಿ ಚದರ ಯಾರ್ಡಿಗೆ ರೂ.1.00 ರಂತೆ 2 ಎಕರೆಯನ್ನು ಹೆಣ್ಣು ಮಕ್ಕಳ ಶಾಲಾ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಿದ್ದರು.1984 ಮೇ 25ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಭಿಪ್ರಾಯ ಪಡೆದು ಮಂಜೂರಾತಿ ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.ಸಾರ್ವಜನಿಕರು ಸರ್ಕಾರಕ್ಕೆ ತಕರಾರು ಅರ್ಜಿ ಸಲ್ಲಿಸಿ ತನಿಖೆ ನಡೆಸುವಂತೆ ಪ್ರಾದೇಶಿಕ ಆಯಕ್ತರಿಗೆ ಮನವಿ ಮಾಡಿದ್ದರು. ಆಗ ತಾಲ್ಲೂಕು ದಂಡಾಧಿಕಾರಿಯವರು ತನಿಖೆ ಕೈಗೊಂಡಿದ್ದರು. ಆಗ ಸಂಸ್ಥೆಗೆ ಕೊಟ್ಟ ಜಾಗವನ್ನು ಪುರಸಭೆಯಿಂದ ಬೈ ನಂಬರ್ ಕೊಟ್ಟಿದ್ದಾರೆ. ಆಸ್ತಿ ಕರ ಕಟ್ಟಿದ್ದೇವೆ. ಪುರಸಭೆಯಲ್ಲಿ ಆಸ್ತಿ ವರ್ಗಾವಣೆಯಾಗಿದ್ದರಿಂದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಜಾಗದಲ್ಲಿ ಮಳಿಗೆ ಕಟ್ಟಿಸಿ ಬೇರೆಯವರಿಗೆ ಮಾರಾಟ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.ಸಂಸ್ಥೆಯ ಹಾಗೂ ಖರೀದಿ ಮಾಡಿದ ಆರು ಜನರು ಸ್ಥಳೀಯ ಕೋರ್ಟ್‌ನಲ್ಲಿ ಜಂಟಿಯಾಗಿ ದಾವೆ ಹೂಡಿದ್ದರು. ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆಯನ್ನು ತೆರವುಗೊಳಿಸಿತು. ನಂತರ ಮೇಲ್ಮನವಿ ಸಲ್ಲಿಸಿದಾಗ ಕೋರ್ಟ್ ದಾವೆ ಸಲ್ಲಿಸಿದ ವ್ಯಕ್ತಿಗಳ ವಿರುದ್ಧ ಕಾನೂನು ಪ್ರಕಾರ ಅವರನ್ನು ಖಬ್ಜಾದಿಂದ ವಿಮುಕ್ತಿಗೊಳಿಸಬಹುದು ಎಂದು ಆದೇಶ ಮಾಡಿದೆ ಎಂದು ವಿವರಿಸಿದ್ದಾರೆ. ಸಂಸ್ಥೆಯವರು ಶಾಲೆ ನಡೆಸಲು ಮಾತ್ರ 2 ಎಕರೆ ಭೂಮಿ ಕೇಳಿದ್ದರು. ಅಲ್ಲದೆ ಷರತ್ತುಗಳನ್ನು ಹಾಕಿ ಹೆಣ್ಣು ಮಕ್ಕಳ ಶಾಲೆಗಾಗಿ ಕಟ್ಟಡ ಕಟ್ಟಲು ಅನುಮತಿ ನೀಡಿರುತ್ತಾರೆ. ಪುರಸಭೆ ಕಾಯ್ದೆಯ ಪ್ರಕಾರ ಯಾವುದೇ ಪುರಸಭೆ ಸ್ಥಿರ ಆಸ್ತಿಯನ್ನು ಬೇರೆಯವರಿಗೆ ಯಾವುದೇ ರೀತಿಯಿಂದ ಸರ್ಕಾರದ ಅನುಮತಿ ಇಲ್ಲದೆ ವರ್ಗಾವಣೆ ಅಥವಾ ಮಾರಾಟ ಮಾಡಲು ಬರುವುದಿಲ್ಲ. ಒಂದು ವೇಳೆ ಅದನ್ನು ಉಲ್ಲಂಘಿಸಿ ಮಾಡಿದರೆ ಕಾನೂನು ಬಾಹಿರವಾಗುತ್ತದೆ ಎಂದು ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.ಶಾಲೆ ನಡೆಸುವ ಸಲುವಾಗಿ ಮಾತ್ರ ನಿರ್ಣಯಿಸಿ ಗೊತ್ತುವಳಿ ಮಾಡಿರುವರು. ಆದರೆ ಜಾಗದ ಮಾಲೀಕತ್ವ ಇಲ್ಲವೆ ಸಂಪೂರ್ಣವಾಗಿ  ಜಾಗದ ಹಕ್ಕು ಸಂಸ್ಥೆಗೆ ವಹಿಸಿಕೊಡುವಂತೆ ಎಲ್ಲಿಯೂ ತಿಳಿಸಿರುವುದಿಲ್ಲ. ಆದ್ದರಿಂದ ಸಂಸ್ಥೆಯ ಜಾಗವು ಇಂದಿಗೂ ಪುರಸಭೆ ಮಾಲೀಕತ್ವಕ್ಕೆ ಒಳಪಟ್ಟಿರುತ್ತದೆ.ಅಲ್ಲದೆ 25-5-1984 ಗೊತ್ತುವಳಿ ಮತ್ತು 16-10-1974ರಂದು ಆಡಳಿತಾಧಿಕಾರಿಯ ಆದೇಶವು ಪುರಸಭೆ ಕಾಯ್ದೆಯ ಉಲ್ಲಂಘನೆಯಾಗಿರುವುದು ಎಂದು ವರದಿಯಲ್ಲಿ ನಮೂದಿಸಿದ್ದಾರೆ.ಪುರಸಭೆ ಖಾತಾದಲ್ಲಿ ಮಾಲೀಕರ ಹೆಸರು ಸೇರ್ಪಡೆ ಮಾಡಿರುವುದು.ಬೈ ನಂಬರ್ ಕೊಟ್ಟಿರುವುದು. ಕಟ್ಟಡ ಪರವಾನಗಿ ಕೊಟ್ಟಿರುವುದು. ಅಲ್ಲದೆ ವಾಣಿಜ್ಯ ಮಳಿಗೆ ನಿರ್ಮಿಸಿದ್ದು ಎಲ್ಲವು ಪುರಸಭೆ ಕಾಯ್ದೆ ವಿರುದ್ಧವಿರುತ್ತದೆ. ಅಲ್ಲದೆ 2002-03ರಲ್ಲಿ ಬೇರೆಯವರಿಗೆ ಮಾರಾಟ ಮಾಡಿದ್ದು ಅಕ್ಷಮ್ಯ ಅಪರಾಧವಾಗಿರುತ್ತದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.ಪುರಸಭೆ ಕಾಯ್ದೆ ಪ್ರಕಾರ ಸರ್ಕಾರವು  ಸೂಕ್ತ ಕ್ರಮ ತೆಗೆದುಕೊಂಡು ಸದರಿ ಆದೇಶ ಮತ್ತು ಗೊತ್ತುವಳಿಯನ್ನು ರದ್ದುಪಡಿಸಿದರೆ ಕಾನೂನು ಪ್ರಕಾರ ಸಂಸ್ಥೆಯ ಜಾಗವನ್ನು ಮರಳಿ ಪುರಸಭೆ ಕಬ್ಜಾ ಪಡೆಯಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.ಆಗ್ರಹ: ಜಿಲ್ಲಾಧಿಕಾರಿಯವರು ಸಾರ್ವಜನಿಕರ ಹಿತದೃಷ್ಟಿಯಿಂದ ಕೋಟ್ಯಂತರ ಮೌಲ್ಯದ ಪುರಸಭೆ ಆಸ್ತಿಯನ್ನು ಮರಳಿ ಪಡೆಯಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry