ಭಾನುವಾರ, ಮೇ 9, 2021
26 °C

ಶಹಾಪುರ: ಬರದಲ್ಲೂ ಕೃಷಿ ಕಾರ್ಯ...!

ಪ್ರಜಾವಾಣಿ ವಾರ್ತೆ/ ಟಿ. ನಾಗೇಂದ್ರ Updated:

ಅಕ್ಷರ ಗಾತ್ರ : | |

ಶಹಾಪುರ: ಬಿಸಿಲಿನ ಕೆಂಡದುಂಡೆಯ ಜೊತೆ ಜೀವನ ಸಾಗಿಸುತ್ತಾ ಕಳೆದ ವರ್ಷ ಮಳೆಯಿಂದ ಕಂಗೆಟ್ಟ ರೈತರು ಮತ್ತೆ ಹಲವಾರು ನಿರೀಕ್ಷೆಗಳನ್ನು ಹೊತ್ತುಕೊಂಡು ಬಿಸಿಲಿನ ತಾಪವನ್ನು ಲೆಕ್ಕಿಸದೆ  ಮುಂಗಾರು ಬಿತ್ತನೆ ಪೂರ್ವ ತಯಾರಿಯಾಗಿ ಟ್ರ್ಯಾಕ್ಟರ್ ಮೂಲಕ ಹೊಲವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.ಗ್ರಾಮೀಣ ಕೃಷಿ ಚುಟುವಟಿಕೆಯ ಬೆನ್ನೆಲುಬು ಎತ್ತುಗಳು. ತೀವ್ರ ನೀರಿನ ಬರದ ಹಾಗೂ ಮೇವಿನ ಕೊರತೆಯಿಂದ ಜೀವಕ್ಕಿಂತಲೂ ಹೆಚ್ಚಾಗಿ ಸಾಕಿ ಬೆಳೆಸುತ್ತಿದ್ದ ಜಾನುವಾರುಗಳ ಮಾರಾಟದ ಹಾದಿ ತುಳಿದು ಸದ್ಯ ಆಧುನಿಕತೆಯ ಕೃಷಿ ಭಾಗವಾದ ಟ್ರ್ಯಾಕ್ಟರ್‌ಗೆ ಮೊರೆ ಹೋಗಿದ್ದಾರೆ.ಟ್ರ್ಯಾಕ್ಟರ್ ಮೂಲಕ ಮಣ್ಣನ್ನು ಹದ ಮಾಡುತ್ತಿದ್ದಾರೆ. ಮಳೆ ಬಂದರೆ ನೀರು ಇಂಗಿಸಿಕೊಳ್ಳಲು ಇದು ಸಹಕಾರಿಯಾಗುತ್ತದೆ. ತುಸು ಹೆಚ್ಚು ವೆಚ್ಚವಾದರು ಚಿಂತೆಯಿಲ್ಲ ಎನ್ನುತ್ತಾರೆ ರೈತ ಶಿವಪ್ಪ.ಅದರಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹತ್ತಿ, ಮೆಣಸಿನಕಾಯಿ, ಜೋಳ, ತೊಗರಿ ಬಿತ್ತನೆ ಮಾಡಿದ ಜಮೀನುಗಳಲ್ಲಿ ಸಾಕಷ್ಟು ರಸಗೊಬ್ಬರ ಹಾಕಿದ್ದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತಲಿದೆ. ಅನಿವಾರ್ಯವಾಗಿ ನೇಗಿಲು ಹೊಡೆಯಬೇಕು. ಕುರಿ ಹಟ್ಟಿಯನ್ನು ಜಮೀನಿಗೆ ಹಾಕಿ ಫಲವತ್ತತೆ ಹೆಚ್ಚಿಸುವ ಕಸರತ್ತು ಕೂಡಾ ಸಾಗಿದೆ.ಕಳೆದ ವರ್ಷ ಮುಂಗಾರು ಕೈಕೊಟ್ಟಿದ್ದು ಪ್ರಸಕ್ತ ವರ್ಷವಾದರು  ಮುಂಗಾರಿನಲ್ಲಿ ಉತ್ತಮ ಮಳೆಯಾದರೆ ಅಲ್ಪಾವಧಿ ಬೆಳೆಯಾದ ಹೆಸರು ಬೆಳೆಯನ್ನು ಜೂನ್ ಮೊದಲ ವಾರದಲ್ಲಿ ಬಿತ್ತನೆ ಮಾಡುವ ಯೋಚನೆಯೂ ಇದೆ ಎನ್ನುತ್ತಾರೆ ರೈತ ಸಿದ್ದಪ್ಪ.ಗುಳೆ: ಗ್ರಾಮೀಣ ಪ್ರದೇಶಗಳು ಸದ್ಯ ಹಾಳು ಕೊಂಪೆಯಂತಾಗಿದೆ. ವೃದ್ಧರು, ಮಕ್ಕಳು, ಅಂಗವಿಕಲರು ಇಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹೆಚ್ಚಿನ ಬಡ ಕೂಲಿಕಾರ್ಮಿಕರು ಗುಳೆ ಹೋಗಿದ್ದಾರೆ. ಕೃಷಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಟ್ರ್ಯಾಕ್ಟರ್‌ಗೆ ರೈತರು ಮುಗಿ ಬಿದ್ದಿದ್ದಾರೆ.ಆಂಧ್ರ ವಲಸಿಗರು: ಬೆಳೆ ಪದ್ಧತಿ ಉಲ್ಲಂಘನೆ ಮಾಡಿ ಫಲವತ್ತಾದ ಭೂಮಿಯನ್ನು ನಾಶಗೊಳಿಸಿ ವಿನಾಶದ ಅಂಚಿಗೆ ತಂದೊಡ್ಡಿದ್ದ ಆಂಧ್ರ ವಲಸಿಗರು ಕಾಲುವೆ ನೀರು ಸಮರ್ಪವಾಗಿ ಲಭಿಸದೆ ಹೈರಾಣಗೊಂಡರು. ಬೇಸಿಗೆ ಬೆಳೆ ಸಂಪೂರ್ಣವಾಗಿ ವಿಫಲವಾದ ಪರಿಣಾಮ ಮತ್ತೆ ತಮ್ಮೂರಿನತ್ತ ಆಂಧ್ರ ವಲಸಿಗರು ಮುಖ ಮಾಡಿದ್ದಾರೆ.ತಾವು ನೆಲೆಸಿದ್ದ ಗುಡಿಸಲುಗಳ ರಕ್ಷಣೆಗೆ ಒಬ್ಬ ವ್ಯಕ್ತಿಯನ್ನು ನೇಮಿಸಿ ತೆರಳಿದ್ದಾರೆ. ಕಾಲುವೆಗೆ ನೀರು ಬಂದ ಬಳಿಕ ಮರಳುವ ಇರಾದೆ ಅವರದು.ಲೀಜ್: ಹೆಚ್ಚಿನ ಭೂಮಿ ಹೊಂದಿದ್ದ ರೈತರು ತಮ್ಮ ಜಮೀನುಗಳನ್ನು ಆಂಧ್ರ ವಲಸಿಗರಿಗೆ ಲೀಜ್ ರೂಪದಲ್ಲಿ ಕೊಟ್ಟು ಆರಾಮವಾಗಿ ಕಾಲ ಕಳೆಯುತ್ತಾ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದ ಅಭಿವೃದ್ಧಿ ಯೋಜನೆಯಲ್ಲಿ ಮಗ್ನರಾಗಿರುತ್ತಿದ್ದರು. ಮುಂಗಾರು ಹಾಗೂ ಬರದಿಂದ ಕಂಗೆಟ್ಟವರು ಸಾಕಪ್ಪ ಲೀಜ್ ಸಹವಾಸ ಎನ್ನುವಂತಾಗಿದೆ. ಬೆವರು ಸುರಿಸಿ ಬಿತ್ತನೆ ಮಾಡಿದ ಬೆಳೆಯಿಂದ ಒಂದಿಷ್ಟು ಲಾಭವಿಲ್ಲ.

ಉಲ್ಟಾ ಸಾಲದ ಸುಳಿಯಲ್ಲಿ ಸಿಲುವಂತಾಗಿದೆ. ಇನ್ನೂ ಪ್ರತಿ ಎಕರೆಗೆ 6ರಿಂದ8 ಸಾವಿರ ರೂಪಾಯಿ ಹಣ ಎಲ್ಲಿಂದ ನೀಡಬೇಕು ಎನ್ನುವುದು ನಾರಾಯಣರಡ್ಡಿಯ ಪ್ರಶ್ನೆ.ಇಷ್ಟೆಲ್ಲ ರಗಳೆಗಳ ನಡುವೆ ಮತ್ತೆ ಭರವಸೆಯ ಬದುಕಿಗಾಗಿ ರೈತರು ಮುಂಗಾರು ಬಿತ್ತನೆಗೆ ಇನ್ನೂ 40 ದಿನಗಳು ತಡವಾಗಿದ್ದರು ಕೂಡಾ ಕೃಷಿ ಚುಟವಟಿಕೆಯಲ್ಲಿ ನಿರತರಾಗಿದ್ದಾರೆ. ಅವರು ಸೋನಾ ಮಳೆಯ ನಿರೀಕ್ಷೆಯಲ್ಲಿದ್ದಾರೆ.        

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.