ಭಾನುವಾರ, ಡಿಸೆಂಬರ್ 15, 2019
26 °C

ಶಾಂತಗಿರಿಯ ರಿವಾಯ್ತ್ ಹುಡುಗರು

– ಅರುಣ್ ಜೋಳದಕೂಡ್ಲಿಗಿ Updated:

ಅಕ್ಷರ ಗಾತ್ರ : | |

ಶಾಂತಗಿರಿಯ ರಿವಾಯ್ತ್ ಹುಡುಗರು

ಮೊಹರಂ ಬಂತೆಂದರೆ ಶಾಂತಗಿರಿಯ ರಿವಾಯ್ತ್ ಹುಡುಗರ ಹೆಜ್ಜೆಗಳು ಹೈದರಾಬಾದ್ ಕರ್ನಾಟಕಕ್ಕೆ ನೆನಪಾಗುತ್ತವೆ. ಕೊಪ್ಪಳ ಸಮೀಪದ ಈ ಸಣ್ಣ ಹಳ್ಳಿಯ ರಿವಾಯ್ತ್ ಹಾಡು ಮತ್ತು ಕುಣಿತದಲ್ಲಿ ತೊಡಗಿಸಿಕೊಳ್ಳುವ ಯುವಕರಿಗೆ ಇದೊಂದು ವೃತ್ತಿಯೇನೂ ಅಲ್ಲ. ಮೊಹರಂ ಹೊತ್ತಿಗೆ ದೂರದೂರಿನಿಂದಲೂ ಬಂದು ರಿವಾಯ್ತ್‌ಗೆ ಸೇರಿಕೊಳ್ಳುವುದರಲ್ಲಿ ಅವರ ಅಭಿಮಾನ ಮತ್ತು ತ್ಯಾಗಗಳೆರಡೂ ಇವೆ.

ಶಾಂತಗಿರಿ ಪ್ರವೇಶಿಸಿದಾಗ ಆ ಊರಿಗೇ ಊರೇ ಅಲಾಯಿ ಹಬ್ಬದಲ್ಲಿ ಮಿಂದೆದ್ದಂತೆ ಸಂಭ್ರಮದಲ್ಲಿತ್ತು. ಹೊನಲು ಬೆಳಕಿನ ಗ್ರಾಮೀಣ ಕಬ್ಬಡಿ ಆಟಕ್ಕೆ ಅಖಾಡ ಸಜ್ಜಾಗುತ್ತಿತ್ತು. ಫ್ಲೆಕ್ಸುಗಳಲ್ಲಿ ಯುವಕರ ಫೋಟೊಗಳು, ಬಂಟಿಂಗ್‌ಗಳು ಊರಿಗೆ ರಂಗೇರಿಸಿದ್ದವು. ಫಕೀರರಾದ ನೂರಾರು ಬಾಲಕರು ಕೈಗೆ ಕೆಂಪನೆ ಲಾಡಿ ಕಟ್ಟಿಕೊಂಡು ಊರಲೆಯುತ್ತಿದ್ದರು. ‘ನೀವ್ ಸಾಂತಗಿರಿಗೋಗ್ರಿ ರಿವಾಯ್ತಿ ಹುಡುಗ್ರ ಹಿಂಡಾ ಐತಿ, ಈ ಸೀಮೆಗಾ ಬಾರಿ ಪೇಮಸ್ ಸರ್ ಅವ್ರು, ನೀವು ಹೋಗ್ ನೋಡ್ರಿ’ ಎಂಬ ಕಾಶಪ್ಪನವರು ನೀಡಿದ ಸಲಹೆ ನೆನಪಾಯಿತು.ಊರೊಳಗಿನ ಜನರ ಜತೆ ಮಾತಾಡಿದಾಗ ರಿವಾಯ್ತು ಮೇಷ್ಟ್ರು ಶರಣಪ್ಪ ಯಮನೂರಪ್ಪ ಹುಲ್ಲಣ್ಣವರ್ ಬಗ್ಗೆ ಮಾಹಿತಿ ಸಿಕ್ಕಿತು.

ಶಾಂತಗಿರಿಗೆ ಕೊಪ್ಪಳದ ಭಾಗದಿಂದ ಹೋಗುವುದಾದರೆ ಗಜೇಂದ್ರಗಡದಿಂದ ೨೦ ಕಿ.ಮೀ, ದೂರವಿದೆ. ಹುಬ್ಬಳ್ಳಿ ಗದಗ ಭಾಗದಿಂದ ಬಂದರೆ ರೋಣದ ಜಾಲಿಹಾಳ-ಬೇವೂರು ಕ್ರಾಸಿನಿಂದ ೩೦ ಕಿ.ಮೀ ಪ್ರಯಾಣಿಸಿದರೆ ಸಿಗುತ್ತದೆ. ರಿವಾಯ್ತು ಹುಡುಗರಿಂದ ಈ ಹಳ್ಳಿ ಸಾಂಸ್ಕೃತಿಕ ಜೀವಂತಿಕೆಯನ್ನು ಮೆರೆಯುತ್ತಿದೆ.ಶರಣಪ್ಪನವರನ್ನು ಮಾತನಾಡಿಸುತ್ತ ಕೂತಿರುವಾಗಲೇ ಅವರ ಮನೆಯ ಮುಂದೆ ರಿವಾಯ್ತ್ ಹುಡುಗರು ಹಾಜರಾದರು. ಹೂವಿನ ಚಡಿ ಹಿಡಿದು ಹೆಜ್ಜೆ ಹಾಕಲು ಸಜ್ಜಾದರು. ಅಪಘಾತದಲ್ಲಿ ಕಾಲು ಕಳೆದುಕೊಂಡ ಶರಣಪ್ಪನವರು ಎದ್ದು ಓಡಾಡುವಂತಿರಲಿಲ್ಲ. ಕುಳಿತಲ್ಲಿಯೇ ಕಾಲ ತಳ್ಳುತ್ತಿದ್ದಾರೆ. ಅವರನ್ನು ನಾಲ್ಕೈದು ಹಾಡಿಕೆ ಹುಡುಗರು ಮಗುವಿನಂತೆ ಎತ್ತಿಕೊಂಡು ಮನೆ ಮುಂದಣ ಅಂಗಳದಲ್ಲಿ ಕುರ್ಚಿಯೊಂದರಲ್ಲಿ ಕೂರಿಸಿದರು.ಅವರು ಹಾಡು ಹೇಳಲು ಅಣಿ ಮಾಡಿಕೊಳ್ಳುತ್ತಿದ್ದಂತೆ ಹುಡುಗರು ಹೆಜ್ಜೆ ಹಾಕಲು ತಯಾರಾದರು. ಹೀಗೆ ಶರಣಪ್ಪ ಏರು ಇಳಿವಿನ ರಿವಾಯ್ತನ್ನು ದೊಡ್ಡ ಧ್ವನಿಯಲ್ಲಿ ಹಾಡತೊಡಗಿದಂತೆ ಹುಡುಗರ ಹೆಜ್ಜೆ ಸದ್ದುಗಳು ಲಯಕ್ಕೆ ಸರಿಯಾಗಿ ಹೊಂದಿಕೆಯಾಗತೊಡಗಿದವು.

ಹಿರಿಯರಾದ ಈರಪ್ಪ ಯಲ್ಲಪ್ಪ ಪಿಳಿಗುಂಟರ್ ಅವರು ಹುಡುಗರು ಹೆಜ್ಜೆ ಸರಿಯಾಗಿ ಹಾಕುತ್ತಾರಾ? ಹಾಡಿನ ಲಯ ತಪ್ಪುತ್ತದೆಯೇ ಎಂದು ಗಮನಿಸುತ್ತಾ ಸಲಹೆ ನೀಡುತ್ತಿದ್ದರೆ, ತಂಡದ ಹಾಡುಗಾರ ಮಲ್ಲಪ್ಪ ನಿಂಗಪ್ಪ ಹುಲ್ಲನ್ನವರ್ ಶರಣಪ್ಪ ಅವರಿಗೆ ಧ್ವನಿಗೂಡಿಸುತ್ತಾರೆ.ಫಕ್ಕೀರಪ್ಪ ಪುಸ್ತಕ ಹಿಡಿದು ಪದ ಎತ್ತಿ ಕೊಡುತ್ತಾ, ಸಾಲು ತಪ್ಪದಂತೆ ನೋಡುತ್ತಿದ್ದರೆ, ಯಲ್ಲಪ್ಪ ಹೊಳೆಯಪ್ಪ ಪಿಳಿಬಂಟರ್, ಮುತ್ತಪ್ಪ ಹನುಮಪ್ಪ ಹುಲ್ಲಣ್ಣನವರ್ ರಿವಾಯ್ತಿನ ಲಯಕ್ಕೆ ತಕ್ಕ ಹಾಗೆ ಹಲಗೆ ಬಾರಿಸುತ್ತಾರೆ. ಈ ಹಲಗೆ ನಾದಕ್ಕೆ ನೋಡುಗರು ಕೂಡ ಅರಿವಿಲ್ಲದಂತೆ ಕಾಲು ಕುಣಿಸುತ್ತಾರೆ. ಹೀಗೆ ಇವರೆಲ್ಲಾ ರಿವಾಯ್ತು ಹುಡುಗರ ಲಯವನ್ನು ಹಿಡಿದು ಸರಿದೂಗಿಸುತ್ತಾರೆ. ಈ ಲಯಕ್ಕೆ ತಪ್ಪಿದರೆ ಕಣ್ಣಲ್ಲೆ ಸನ್ನೆ ಮಾಡುತ್ತಲೋ, ಸಿಡುಕಿನಿಂದ ಗದರುತ್ತಲೋ ಹುಡುಗರು ತಪ್ಪೆಜ್ಜೆ ಇಡದಂತೆ ಕಾವಲು ಕಾಯುತ್ತಾರೆ.ಮೊಹರಂ ಹೊತ್ತಿನಲ್ಲಿ ಇಡೀ ಊರಿಗೆ ಊರೇ ರಿವಾಯ್ತಿನ ಗುನುಗಿನಿಂದ ತುಂಬಿರುತ್ತದೆ. ಕುಷ್ಟಗಿ ತಾಲೂಕಿನ ಗೊನ್ನಾಗರದ ಮಾಸನಕಟ್ಟಿ ಶರಣಪ್ಪ ಎನ್ನುವ ಪ್ರಸಿದ್ಧ ಮೊಹರಂ ಕವಿಯ ಪದಗಳನ್ನು ಶಾಂತಗಿರಿಯವರು ಹಾಡುತ್ತಾರೆ. ಅಂತೆಯೇ ಪ್ರತಿ ವರ್ಷವೂ ಹಾಡು ಬದಲಿಸುತ್ತಾರೆ. ‘ವರ್ಸನೂ ಹೊಸ ಹಾಡ ಹಾಡ್ತೀವ್ರೀ... ಹೀಗೆ ಹಾಡು ಬದಲಿಸದೆ ಹಳಸಲು ಹಾಡು ಹಾಡಿದ್ರೆ, ಜನ ಕೇಳಲ್ರಿ, ನಾವು ಬೇರೇ ಊರಾಗಿನ ಹಾಡ್ಕೀ ಮಂದೀ ಹತ್ರ ಹೋಗಿ ಹೊಸ ಹಾಡ ತರ್ತೇೇವಿ, ನಮ್ ಹಾಡ ಅವರಿಗೆ ಕೊಡ್ತೇವಿ ಹಿಂಗ ಹಾಡ ಕೊಡುಕೊಳ್ಳಿ ಇದೇರಿ’ ಎಂದು ಶರಣಪ್ಪ ಹೇಳುತ್ತಾರೆ.ಹಾಡಿಕೆ ಹುಡುಗನೊಬ್ಬ ‘ನೀವು ಕವಿ ಅಂದ್ರೆಲ್ಲ ನಿಮ್ಮವು ಎರಡು ಹಾಡ ಇದ್ರ ಕೊಡ್ರಿ, ಹಾಡ್ತೇವಿ’ ಎಂದು ನನ್ನನ್ನು ಕೇಳಿದಾಗ ಕಕ್ಕಾಬಿಕ್ಕಿಯಾದೆ. ನಾನು ಬರೆದ ಕವಿತೆಗಳು ನಿಮಗ ಹಾಡಾಕ ಬರಲ್ರಿ ಎನ್ನೋಣ ಅಂದುಕೊಂಡೆ, ಆದರೆ ‘ಹಂಗಾರ ನೀವೆಂಗ ಕವಿ ಅಕ್ಕೀರಿ’ ಎಂದುಬಿಟ್ಟಾರು ಎಂಬ ಭಯದಲ್ಲಿ ಮಾತು ಬದಲಿಸಿದೆ. ಈ ಮಾತು ಶಿಷ್ಟ ಕಾವ್ಯವು ಜನರೊಳಗೆ ನುಗ್ಗುವ ಶಕ್ತಿ ಇರದ ಸತ್ಯವನ್ನು ಇರಿದು ತೋರಿದಂತಾಯಿತು.ಶಾಂತಗಿರಿಯಲ್ಲಿ ನಾಲ್ಕೈದು ರಿವಾಯ್ತ್ ತಂಡಗಳಿವೆ. ಇಲ್ಲಿ ಹಾಡ ಹೇಳುವವರು ಮಾತ್ರ ಹಿರಿಯರಿದ್ದು ಹಾಡ ಹೇಳುತ್ತಾ ಹೆಜ್ಜೆ ಹಾಕುವುದು ಸಾಮಾನ್ಯವಾಗಿ ೧೫ ರಿಂದ ೨೫ರ ವಯಸ್ಕ ಹುಡುಗರು. ವಾಲ್ಮೀಕಿ ತಂಡ, ಉಪ್ಪಾರ ತಂಡ, ಕುರುಬ ಸಮಾಜದ ಎರಡು ತಂಡಗಳಿವೆ. ಸರಿಸುಮಾರು ನೂರಕ್ಕೂ ಹೆಚ್ಚಿನ ಹುಡುಗರು ಈ ಊರಿನಲ್ಲಿ ರಿವಾಯ್ತು ಮಜಲಿನಲ್ಲಿ ಹೆಜ್ಜೆ ಹಾಕಿ ಪದ ಹೇಳುತ್ತಾರೆ. ಈ ಹುಡುಗರು ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿಯೇ ಓದಿಗೆ ವಿದಾಯ ಹೇಳಿದವರು. ಪೂರ್ಣ ಓದು ಬರಹ ಬರದ ಅನಕ್ಷರಸ್ಥ ಹುಡುಗರೂ ತಂಡದಲ್ಲಿದ್ದಾರೆ.ಹತ್ತಿರದ ಊರುಗಳ ಜಾತ್ರೆ, ಪರಿಷೆ, ಉರುಸುಗಳಿಗೆ ಹಾಡಲು ಈ ಹುಡುಗರಿಗೆ ವೀಳ್ಯಾ ಕೊಡುತ್ತಾರೆ. ಆಗ ಆಯಾ ಊರುಗಳಿಗೆ ಟಂ ಟಂ, ಟ್ರಾಕ್ಸ್ ಮುಂತಾದ ವಾಹನಗಳಲ್ಲಿ ತಂಡವೇ ಹೋಗುತ್ತದೆ. ಆ ಊರಿಗೆ ಹತ್ತಾರು ರಿವಾಯ್ತು ತಂಡಗಳು ಬಂದಿರುತ್ತವೆ. ಅಲ್ಲಿ ಹಾಡಿಕೆ ಸ್ಪರ್ಧೆ ನಡೆಯುತ್ತದೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಕಡೇವು ಕಟ್ಟಿರುತ್ತಾರೆ. ಒಂದೂರಿಗೆ ಹತ್ತು ಹನ್ನೆರಡು ಮೇಳ ಕೂಡಿರುತ್ತದೆ. ಒಂದು ಸಾವಿರದಿಂದ ಐದು ಸಾವಿರದವರೆಗೆ ಊರಿನ ದೂರವನ್ನು ಆಧರಿಸಿ ಸಂಭಾವನೆ ಕೊಡುತ್ತಾರೆ.ಇಂದು ಬಹುಪಾಲು ಜನಪದ ಕಲೆ ಮತ್ತು ಹಾಡುಗಾರಿಕೆಗೆ ಮಹಿಳೆಯರ ಪ್ರವೇಶವಾಗಿದೆ. ಆದರೆ ರಿವಾಯ್ತು ಹಾಡುಗಾರಿಕೆಯಲ್ಲಿ ಇಂತಹ ಪ್ರವೇಶ ಸಾದ್ಯವಾಗಿಲ್ಲ. ಈ ಹಾಡಿನ ಸಾಹಿತ್ಯದಲ್ಲೂ ಪುರುಷ ಪಾರಮ್ಯವೇ ಹೆಚ್ಚಿದೆ. ಪುರುಷರೇ ಹೆಚ್ಚಿರುವ ಡೊಳ್ಳಿನ ಹಾಡು ಪರಂಪರೆಯಲ್ಲಿ ಹದಿ ಹರೆಯದ ಹುಡುಗಿಯರ ಪ್ರವೇಶವಾಗಿದೆ. ಹಾಗೆ ನೋಡಿದರೆ ಹುಡುಗರ ಹಾಡುಗಾರಿಕೆಯ ಏಕಸ್ವಾಮ್ಯವನ್ನು ರಿವಾಯ್ತು ಈತನಕವೂ ಬಿಟ್ಟುಕೊಟ್ಟಂತಿಲ್ಲ. ಈ ಹಾಡುಗಾರಿಕೆಯ ಹೆಚ್ಚುಗಾರಿಕೆ ಇರುವುದು, ಹಿಂದು ಮುಸ್ಲಿಂ ಧಾರ್ಮಿಕ ತರತಮಗಳನ್ನು ಗುರುತಿಸಲಾರದಂತೆ ಈ ರಿವಾಯ್ತ್ ಹಾಡುಗಳು ಅಳಿಸಿ ಹಾಕಿರುವುದರಲ್ಲಿ. ಇಲ್ಲಿ ಬೀಬಿ ಪಾತೀಮ, ಹಸೇನ್ ಹುಸೇನರನ್ನು ನೆನೆಯುವಂತೆ, ಕಿತ್ತೂರ ರಾಣಿ ಚೆನ್ನಮ್ಮ, ಊರ ಹನುಮಂತನ ಹಾಡುಗಳು ರಿವಾಯ್ತಿನಲ್ಲಿ ಬೆರೆತಿವೆ. ಹಾಗಾಗಿ ಉತ್ತರ ಕರ್ನಾಟಕದ ಹಳ್ಳಿಗಳ ರಿವಾಯ್ತು ಹಾಡು ಪರಂಪರೆ ಧರ್ಮದ ಗಡಿಗಳನ್ನು ಅಳಿಸಿಹಾಕಿದೆ.ಹೂವಿನ ಚಡಿ ಹಿಡಿದು ಕಾಲಿಗೆ ಗೆಜ್ಜೆ ಕಟ್ಟಿ ಹುಡುಗರು ಹೆಜ್ಜೆ ಹಾಕುತ್ತಿದ್ದರೆ, ಇದನ್ನು ಹಳ್ಳಿಗರು ಸಂಭ್ರಮದಿಂದ ನೋಡಿ ಕಣ್ತುಂಬಿಕೊಳ್ಳುತ್ತಾರೆ. ಈ ತಂಡ ರೋಣ ತಾಲೂಕಿನ ಸುತ್ತಮುತ್ತಣ ಹಳ್ಳಿಗಳಲ್ಲಿ ಪ್ರದರ್ಶನ ಕೊಟ್ಟದ್ದು ಬಿಟ್ಟರೆ, ಗದಗ ಜಿಲ್ಲೆಯ ಸಂಸ್ಕೃತಿ ಇಲಾಖೆಯ ಕಣ್ಣಿಗೂ ಬಿದ್ದಿಲ್ಲ. ಹಾಗಾಗಿ ಕರ್ನಾಟಕದ ಬೇರೆ ಬೇರೆ ಕಡೆ ತಮ್ಮ ಹೆಜ್ಜೆಯ ಮಜಲನ್ನು ತೋರಿಸಲು ಸಾಧ್ಯವಾಗಿಲ್ಲ. ಇಂತಹ ಕಾರಣಕ್ಕಾಗಿ ರಿವಾಯ್ತಿನ ಕಂಚಿನ ಕಂಠದ ಈ ಹಾಡುಗಾರರು ಜಾನಪದ ಅಕಾಡೆಮಿಯ ಯಾವ ಪ್ರಶಸ್ತಿಯ ವ್ಯಾಪ್ತಿಗೂ ಈತನಕ ಬಂದಿಲ್ಲ. ಹಾಡಿ ಧ್ವನಿಬಿದ್ದ ಹಿರಿಯ ಗಾಯಕರು ಜನಪದ ಕಲಾವಿದರ ಮಾಶಾಸನಕ್ಕೆ ಅರ್ಜಿ ಹಾಕಲು ಯಾವುದೇ ಲಿಖಿತ ದಾಖಲೆಗಳನ್ನೂ ಇವರು ಸಂಪಾದಿಸಿಲ್ಲ.ಉತ್ತರ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಭಜನೆ, ಕೋಲಾಟ, ಡೊಳ್ಳಿನ ಹಾಡು, ಲಾವಣಿ ಮುಂತಾದ ಹಾಡಿಕೆ ಹುಡುಗರ ತಂಡಗಳಿವೆ. ಇದರಲ್ಲಿ ಬಹುಪಾಲು ಯುವಕರು ಅರೆ ವಿದ್ಯಾವಂತರು. ಹೊಲಮನಿ ಕೆಲಸಕ್ಕೆ ಹೊಂದಿಕೊಂಡ ಯುವಕರು, ಹತ್ತಿರದ ನಗರಗಳಿಗೆ ಕೆಲಸ ಅರಸಿ ಹೋಗುವವರಿದ್ದಾರೆ. ಇವರನ್ನು ಹೊರತುಪಡಿಸಿದರೆ, ಬೆಂಗಳೂರು, ಮಂಗಳೂರು, ಪುಣೆ, ಗೋವಾ, ಬಾಂಬೆ ಮುಂತಾದ ಕಡೆಗಳಿಗೆ ಕೆಲಸ ಹುಡುಕಿಕೊಂಡು ಹೋಗುವ ವಲಸಿಗ ಯುವಕರ ಸಂಖ್ಯೆ ದೊಡ್ಡದಿದೆ. ಹೀಗೆ ಹಳ್ಳಿ ಹುಡುಗರು ಹರಿದು ಹಂಚಿದ್ದಾರೆ. ದೂರದೂರುಗಳಿಗೆ ದುಡಿಯಲು ಹೋದ ಯುವಕರು ವರ್ಷಕ್ಕೆ ಎರಡುಮೂರು ಬಾರಿ ತಮ್ಮೂರುಗಳಿಗೆ ಮರಳುತ್ತಾರೆ. ಅಲೆ ಹಬ್ಬಕ್ಕೆ (ಮೊಹರಂ) ಕಡ್ಡಾಯವಾಗಿ ವಲಸಿಗರು ತಮ್ಮೂರು ಸೇರುತ್ತಾರೆ. ತಿಂಗಳು ಮುಂಚೆಯೇ ಬಂದವರು ರಿವಾಯ್ತು ತಾಲೀಮು ಮಾಡುತ್ತಾರೆ, ಹೊಸ ಹಾಡು ಕಲಿತು, ಮರೆತ ಹೆಜ್ಜೆಗಳ ಮತ್ತೊಮ್ಮೆ ಹೊಂದಿಸಿಕೊಂಡು ಹಬ್ಬ ಆಚರಿಸಿ ಮತ್ತೆ ದೂರದೂರುಗಳ ದಾರಿ ಹಿಡಿಯುತ್ತಾರೆ.ಬರೀ ಮೊಹರಂಗೆ ದೂರದೂರಿನಿಂದ ಬರುವ ಈ ಯುವಕರಿಗೆಲ್ಲಾ ಇಲ್ಲೇ ಒಂದು ನೆಲೆ ಸಿಕ್ಕರೆ ಒಳ್ಳೆಯದೆನಿಸುತ್ತದೆ. ಆದರೆ ಮಳೆ ಆಧಾರಿತ ಕೃಷಿಯ ಈ ಊರುಗಳಲ್ಲಿ ವರ್ಷದ ಅರ್ಧಕ್ಕೂ ಹೆಚ್ಚು ಕಾಲ ಉದ್ಯೋಗವೇ ಇರುವುದಿಲ್ಲ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ವೃತ್ತಿ ಆಧಾರಿತ ಸಮುದಾಯ ಕಾಲೇಜುಗಳನ್ನು ಆರಂಭಿಸುತ್ತಿದೆ. ಬಹುಶಃ ರಿವಾಯ್ತು ಹುಡುಗರಿಗೆ ಇಂಥ ಕಾಲೇಜುಗಳು ಹೊಸ ದಾರಿಯನ್ನು ತೋರಿಸಬೇಕಷ್ಟೇ. ಕಲೆಯನ್ನೂ ಉಳಿಸಿಕೊಂಡು ಹಸಿವನ್ನೂ ನಿವಾರಿಸಿ ಬದುಕನ್ನು ಕಟ್ಟಿಕೊಳ್ಳಬೇಕಿರುವ ಸವಾಲನ್ನು ಈ ಯುವ ಕಲಾವಿದರು ಎದುರಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)