ಶಾಂತಿದೂತನ ಜನನವೇ ಮಹಾನವಮಿ

7

ಶಾಂತಿದೂತನ ಜನನವೇ ಮಹಾನವಮಿ

Published:
Updated:

ಹಾವೇರಿ: ಕ್ರೈಸ್ತ ಸಮಾಜ ಬಾಂಧವರು ಏಸುಕ್ರಿಸ್ತನ ಜನುಮ ದಿನವನ್ನು ಕ್ರಿಸ್‌ಮಸ್ ಹಬ್ಬವನ್ನಾಗಿ ಆಚರಿಸುತ್ತಾರೆ. ಆ ಸಮುದಾಯಕ್ಕೆ ಇದೊಂದು ಪ್ರವಿತ್ರ ಹಬ್ಬ. ಕ್ರಿಸ್ತಶಕ ಕ್ಯಾಲೆಂಡರ್ ಪ್ರಕಾರ ಡಿ. 25ರಂದು ಒಂದೇ ದಿನ ಈ ಕ್ರಿಸ್‌ಮಸ್ ಹಬ್ಬದ ಆಚರಣೆ ಮಾಡಲಾಗುತ್ತದೆ.ಕ್ರಿಸ್ತ ಸಮುದಾಯದಲ್ಲಿ ಕ್ಯಾಥೋಲಿಕ್ ಹಾಗೂ ಪ್ರೊಟೆಸ್ಟಂಟ್ ಎಂಬ ಎರಡು ಪಂಥಗಳಿವೆ. ಕ್ರಿಸ್‌ಮಸ್ ಆಚರಣೆಯ ಮಾತ್ರ ಒಂದೊಂದು ಪಂಥದಲ್ಲಿ ಒಂದೊಂದು ರೀತಿಯಾಗಿರುತ್ತದೆ. ಕ್ಯಾಥೋಲಿಕ್ ಸಮುದಾಯದವರು ವಿಗ್ರಹ ಪೂಜೆ ಮಾಡಿದರೆ, ಪ್ರೊಟೆಸ್ಟಂಟ್ ಪಂಥದವರು ಕೇವಲ ದೇವನಾಮ ಸ್ಮರಣೆಗೆ ಹೆಚ್ಚಿನ ಒತ್ತು ನೀಡುತ್ತಾರೆ.ಕ್ಯಾಥೋಲಿಕ್ ಪಂಥದವರು ಚರ್ಚ್‌ನಲ್ಲಿ ಕ್ರಿಸ್ತ ಹಾಗೂ ಮೇರಿ ಮೂರ್ತಿಗಳಿಗೆ ಪೂಜೆ ಹಾಗೂ ಅಲಂಕಾರ, ಪ್ರಾರ್ಥನೆ ಮಾಡುವುದರೊಂದಿಗೆ ಕ್ರಿಸ್‌ಮಸ್ ಆಚರಣೆ ಮಾಡಿದರೆ, ಪ್ರೊಟೆಸ್ಟಂಟ್ ಸಮುದಾಯದವರು ಮಾತ್ರ ಯಾವುದೇ ಮೂರ್ತಿಯನ್ನು ಇಡದೇ ಕೇವಲ ನಿರಾಕಾರಿಯಾದ ದೇವನಿಗೆ ಜ್ಞಾನದ ಸಂಕೇತವಾದ ಕ್ಯಾಂಡಲ್‌ಗಳನ್ನು ಬೆಳಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ, ಎರಡು ಸಮುದಾಯದಲ್ಲಿ ಬಡವ, ಬಲ್ಲಿದ ಎಂಬ ಬೇಧವಿಲ್ಲ. ಎಲ್ಲರೂ ಸಮಾನಾವಾಗಿ ಕುಳಿತು ದಯಾಮಯ ಏಸುನನ್ನು ಸಾಮೂಹಿಕ ಪ್ರಾರ್ಥನೆ (ಸರ್ವೇಸ್) ಮೂಲಕ ನೆನೆಯಲಾಗುತ್ತದೆ.ಗಮನ ಸೆಳೆಯುವ ಕ್ರಿಬ್: ಕ್ರಿಸ್‌ಮಸ್ ಮುನ್ನಾದಿನ ಡಿ. 24ರಂದು ಪ್ರತಿಯೊಂದು ಚರ್ಚ್ ಇಲ್ಲವೇ ವಿಶಾಲವಾದ ಮನೆಯಲ್ಲಿ ಏಸು ಕ್ರಿಸ್ತನ ಜನ್ಮ ವೃತ್ತಾಂತ ತಿಳಿಸುವ ಗೋದೋಳಿ(ದನದ ಹಟ್ಟಿ) ಅಥವಾ ಕ್ರಿಬ್ ನಿರ್ಮಿಸಲಾಗುತ್ತದೆ. ಈ ಗೋದೋಳಿಯಲ್ಲಿ ಬಾಲ ಏಸುವಿನ ಮೂರ್ತಿ, ತಾಯಿ ಮೇರಿ ಮೂರ್ತಿ, ದನಗಳು ಹಾಗೂ ಕುರುಬರು, ಕುರಿಗಳ ಚಿತ್ರಗಳನ್ನು ಇಡಲಾಗುತ್ತದೆಯಲ್ಲದೇ, ಏಸುವಿನ ಜನ್ಮವನ್ನು ತಿಳಿಸಲು ನಕ್ಷತ್ರಗಳು ದಾರಿ ತೋರಿದವು ಎನ್ನುವ ಪ್ರತೀತಿಗಾಗಿ ನಕ್ಷತ್ರಗಳನ್ನು ಎಳೆ ಬೀಡಲಾಗಿರುತ್ತದೆ. ಅದೇ ದಿನವನ್ನು ಮಕ್ಕಳ ಕ್ರಿಸ್‌ಮಸ್ ಎಂದು ಆಚರಣೆ ಮಾಡಲಾಗುತ್ತದೆ.ಅಂದು ಮಕ್ಕಳಿಗಾಗಿ ವಿಶಿಷ್ಟ ವೇಷಭೂಷಣ ಹಾಗೂ ಏಸುವಿನ ಹಾಡುಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಕೇಕ್, ಸಿಹಿ ತಿಂಡಿ, ಚುರಮರಿ ಹಾಗೂ ಕಾಣಿಕೆಗಳನ್ನು ನೀಡಲಾಗುತ್ತದೆ ಎಂದು ತಿಳಿಸುತ್ತಾರೆ ಕ್ರೈಸ್ತ ಸಮುದಾಯದ ಮುಖಂಡೆ ಮಾಧುರಿ ದೇವಧರ.ಸಾಮೂಹಿಕ ಪ್ರಾರ್ಥನೆ: ಕ್ರಿಸ್‌ಮಸ್ ದಿನದಂದು ಬೆಳಿಗ್ಗೆ ಬೇಗನೆ ಎದ್ದು, ಸ್ನಾನ ಮುಗಿಸಿ ಹಬ್ಬಕ್ಕಾಗಿ ಖರೀದಿಸಿದ ಹೊಸ ಡ್ರೆಸ್‌ಗಳನ್ನು ಹಾಕಿಕೊಂಡು ಚರ್ಚ್‌ಗಳಿಗೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ನಂತರ ಪರಸ್ಪರ ಕ್ರಿಸ್‌ಮಸ್ ಶುಭಾಷಯ ವಿನಿಮಯ ಮಾಡಿಕೊಳ್ಳುತ್ತಾರೆ. ಸಿಹಿ ತಿಂಡಿಗಳನ್ನು, ಕೇಕ್‌ಗಳನ್ನು ಪ್ರಸಾದದ ರೂಪದಲ್ಲಿ ನೀಡುತ್ತಾರೆ. ಆದರೆ, ಪ್ರೊಟೆಸ್ಟಂಟ್ ಸಮುದಾಯದ ಚರ್ಚ್‌ನ ಮುಖ್ಯಸ್ಥರಾದ ಬಿಸೆಫ್ ಇಲ್ಲವೇ ಪಾದ್ರಿಗಳು ಪ್ರತಿಯೊಬ್ಬರ ಸುಖ ದುಃಖಗಳನ್ನು ಆಲಿಸಿ ಅವರಿಗೆ ಇರುವ ಸಮಸ್ಯೆಯನ್ನು ನಿವಾರಣೆ ಮಾಡುವಂತೆ ಏಸುವಿನಲ್ಲಿ ಪ್ರಾರ್ಥಿಸುತ್ತಾರೆ. ಸಹೋದರರು ಅಕ್ಕ ತಂಗಿಯರಿಗೆ ಉಡುಗರೆಯನ್ನು ಕಳುಹಿಸಿ ಕೊಡುವುದು ಹಾಗೂ ಸಿರಿವಂತರು ಬಡವರಿಗೆ ಹಾಸಿಗೆ ಹೊದಿಕೆ, ಬಟ್ಟೆ ಬರೆಗಳನ್ನು ದಾನದ ರೂಪದಲ್ಲಿ ನೀಡುತ್ತಾರೆ.ವಾರದ ಹಿಂದೆಯೇ ಸಿದ್ಧತೆ: ಕ್ರಿಸ್‌ಮಸ್‌ಗೆ ಒಂದು ವಾರದ ಮುಂಚೆಯೇ ಕ್ರಿಸ್‌ಮಸ್ ಗಿಡವನ್ನು ತಯಾರಿಸಲಾಗು

ತ್ತದೆ. ಗಿಡಕ್ಕೆ ವಿವಿಧ ಬಣ್ಣದ ವಿದ್ಯುತ್ ದೀಪ, ಶುಭಾಷಯ ಪತ್ರ ಹಾಕಿ ಗಮನ ಸೆಳೆಯುವಂತೆ ಮಾಡಲಾಗುತ್ತದೆ.ಪ್ರತಿಯೊಬ್ಬ ಕ್ರೈಸ್ತ ಸಮುದಾಯದ ವ್ಯಕ್ತಿ ಹಬ್ಬಕ್ಕಾಗಿ ತನ್ನ ಮನೆಯನ್ನು ಸ್ವಚ್ಛಗೊಳಿಸಿ ಸುಣ್ಣ ಬಣ್ಣಗಳಿಂದ ಸಿಂಗರಿಸುತ್ತಾನೆ. ಸಮುದಾಯದ ಜನರು ಒಟ್ಟುಗೂಡಿ ಚರ್ಚ್‌ಗೂ ಸುಣ್ಣ ಬಣ್ಣದಿಂದ ಹೊಸರೂಪ ನೀಡುತ್ತಾರೆ. ಮಕ್ಕಳು ಸೇರಿದಂತೆ ಮನೆ ಮಂದಿಗಷ್ಟೇ ಅಲ್ಲದೆ, ದೂರದ ಸಂಬಂಧಿಕರಿಗೂ ಹೊಸ ಹೊಸ ಬಟ್ಟೆಗಳನ್ನು ಖರೀದಿ ಮಾಡುತ್ತಾರೆ. ಜತೆಗೆ ಮನೆಯಲ್ಲಿ ಮಹಿಳೆಯರು ಸೇರಿ ವಿಶಿಷ್ಟ ಹಾಗೂ ವಿಭಿನ್ನ ರುಚಿಯ ಕೇಕ್, ಕರ್ಚಿಕಾಯಿ, ತರತರಹದ ಲಾಡುಗಳು, ಚಕ್ಕುಲಿ, ಕೋಡಬಳೆ ಸೇರಿದಂತೆ ವಿವಿಧ ಭಕ್ಷ್ಯಬೋಜ್ಯಗಳನ್ನು ತಯಾರು ಮಾಡಿಟ್ಟುಕೊಳ್ಳುತ್ತಾರೆ. ಹಬ್ಬದ ದಿನ ಪರಸ್ಪರ ಹಂಚಿಕೆ ಮಾಡುವುದು ಹಬ್ಬದ ವಿಶೇಷಗಳಲ್ಲೊಂದು.

ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಸಕಲ ವಾದ್ಯಗಳೊಂದಿಗೆ ಲಯಬದ್ಧವಾಗಿ ಏಸುವಿನ ಹಾಡುಗಳನ್ನು ಹಾಡುವ ಮೂಲಕ ಹಬ್ಬಕ್ಕೆ ಜನರನ್ನು ಜಾಗೃತಿಗೊಳಿಸಲಾಗುತ್ತದೆ. ಇದಕ್ಕೆ ಆ ಸಮುದಾಯದಲ್ಲಿ ಕ್ಯಾರಲ್ ಸಿಂಗಿಂಗ್ ಪಾರ್ಟಿ ಎಂದು ಕರೆಯಲಾಗುತ್ತದೆ. ಆರೇಳು ಜನರ ತಂಡವೊಂದು ಕ್ರಿಸ್‌ಮಸ್‌ಗೂ ಒಂದು ವಾರ ಮುನ್ನವೇ ಕ್ರೈಸ್ತ ಸಮುದಾಯದ ಪ್ರತಿಯೊಬ್ಬರ ಮನೆಗೆ ತೆರಳಿ ಹಾಡುತ್ತಾರೆ. ಈ ತಂಡವು ವಿಶೇಷವಾಗಿ ಕ್ರಿಸ್ತನ ಸಂದೇಶಗಳನ್ನು ವಾದ್ಯ ಮೇಳಗಳೊಂದಿಗೆ ಲಯಬದ್ಧವಾಗಿ ಹಾಡುತ್ತದೆ. ಶಹರ ಪ್ರದೇಶಗಳಲ್ಲಿ ಅಷ್ಟೇ ಅಲ್ಲದೇ ಗ್ರಾಮಾಂತರ ಪ್ರದೇಶಕ್ಕೂ ತೆರಳಿ ಹಾಡುವುದು ಈ ತಂಡಗಳ ವಿಶೇಷತೆ.ಶಾಂತಿ ಸಂದೇಶ: ಪಾಪ ಕರ್ಮಾಧಿಗಳನ್ನು ಮಾಡಿ ಕ್ಷಮೆ ಬಯಸಿ ಬರುವ ಮಾನವರಿಗೆ ಕ್ಷಮೆ ನೀಡುವ ಮೂಲಕ ಅವರಿಗೆ ಹೊಸ ಬದುಕನ್ನು ಕಲ್ಪಿಸುವ ಕೊಡುವ ಶಾಂತಿ ಸಂದೇಶವನ್ನು ಕ್ರಿಸ್‌ಮಸ್ ದಿನದಂದು ಜನತೆಗೆ ನೀಡಲಾಗುತ್ತದೆ. ಹುಟ್ಟಿನಿಂದಲೂ ಪಾಪಿ ಸ್ವಭಾವದವನಾದ ಮನುಷ್ಯನ ಆತನ ಸ್ವಭಾವವನ್ನು ಹೋಗಲಾಡಿಸುವ ಮೂಲಕ ಅವರಿಗೆ ಕ್ಷಮೆ ನೀಡುವುದೇ ಕ್ರಿಸ್‌ಮಸ್ ಉದ್ದೇಶ ಎಂದು ಹೇಳುತ್ತಾರೆ ಹಾವೇರಿಯ ಸೇಂಟ್ ಆ್ಯನ್ಸ್ ಶಾಲೆಯ ಮುಖ್ಯ ಗುರುಮಾತೆ ಸೇರ‌್ಲಿನ್ ಥಾಮಸ್.ಯಾವುದೇ ದ್ವೇಷ, ಅಸೂಯೆ, ಸ್ವಾರ್ಥಗಳಿಗೆ ಜಾಗವೇ ಇಲ್ಲದ, ಶಾಂತಿ, ಪ್ರೀತಿ, ಕ್ಷಮೆ ಮತ್ತು ಭಕ್ತಿಭಾವದ ಸಮಾಗಮ ಅಲ್ಲಿರುತ್ತದೆ. ಗಂಡು, ಹೆಣ್ಣಿನ ನಡುವಿನ ಭೇದ ಮರೆತು ಪರಸ್ಪರ ಅನ್ಯೋನ್ಯತೆ, ಜೀವನಪ್ರೀತಿ, ಜೀವನೋತ್ಸಾಹ ತುಂಬುವ ದಿನವಾಗಿದೆ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry