ಶುಕ್ರವಾರ, ನವೆಂಬರ್ 15, 2019
27 °C

ಶಾಂತಿಯುತ ಮತದಾನಕ್ಕೆ ಸಹಕರಿಸಿ: ಐಜಿಪಿ

Published:
Updated:

ಕುಶಾಲನಗರ: ಮೇ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನ ಶಾಂತಿಯುತ ಮತದಾನಕ್ಕೆ ಸಹಕರಿಸಬೇಕು ಎಂದು ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಡಾ. ಕೆ.ರಾಮಚಂದ್ರ ರಾವ್ ಕೋರಿದರು.ಕುಶಾಲನಗರದ ಪೊಲೀಸ್ ಠಾಣೆಗೆ ಶುಕ್ರವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಚುನಾವಣೆ ವೇಳೆ ನಾಗರಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಜಿಲ್ಲೆಯಲ್ಲಿ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಎಂದು ಗುರುತಿಸಲಾದ ಮತಗಟ್ಟೆಗಳ ಬಗ್ಗೆ ನಿಗಾ ವಹಿಸಲು ತಿಳಿಸಲಾಗಿದೆ. ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.ಪರವಾನಗಿ ಮೂಲಕ ಕೋವಿ ಪಡೆದಿರುವ ಜಿಲ್ಲೆಯ ನಾಗರಿಕರು ತಮಗೆ ಅನಿವಾರ್ಯವಾದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಒಪ್ಪಿಗೆ ಮೇರೆಗೆ ಕೋವಿಗಳನ್ನು ತಮ್ಮಲ್ಲೇ ಇರಿಸಿಕೊಳ್ಳಬಹುದು ಎಂದೂ ಅವರು ತಿಳಿಸಿದರು.ಕುಶಾಲನಗರ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆದಂತೆ ಅಪರಾಧ ಪ್ರಕರಣಗಳೂ ಹೆಚ್ಚಾಗಿವೆ. ಕೆಲವೇ ವರ್ಷಗಳ ಹಿಂದೆ ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರ್ಷವೊಂದಕ್ಕೆ 60 ರಿಂದ 70 ಕೇಸುಗಳು ದಾಖಲಾಗುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ 350 ಕೇಸುಗಳು ದಾಖಲಾಗುತ್ತಿವೆ. ಹೀಗಾಗಿ ಕುಶಾಲನಗರಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಅವಶ್ಯಕತೆ ಇದ್ದು, ಈಗಾಗಲೇ ಸರ್ಕಾರಕ್ಕೆ ಈ ಕುರಿತು ಮನವಿ ಬರೆಯಲಾಗಿದೆ. ಮುಂದಿನ ಸರ್ಕಾರ ರಚನೆಯಾದ ನಂತರ ಗಮನ ಹರಿಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಚೇತ್, ಡಿವೈಎಸ್‌ಪಿ ಪೌಲ್ ಎಸ್. ವರ್ಮ, ಸಿಪಿಐ ಕೆ.ಎಲ್. ಗಣೇಶ್ ಇದ್ದರು.

ಪ್ರತಿಕ್ರಿಯಿಸಿ (+)