ಸೋಮವಾರ, ಆಗಸ್ಟ್ 26, 2019
27 °C
ಕನಕಪುರ: ತೆರವಾಗಿದ್ದ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಉಪ ಚುನಾವಣೆ

ಶಾಂತಿಯುತ ಮತದಾನ-7ರಂದು ಫಲಿತಾಂಶ

Published:
Updated:
ಶಾಂತಿಯುತ ಮತದಾನ-7ರಂದು ಫಲಿತಾಂಶ

ಕನಕಪುರ: ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಮುಳ್ಳಳ್ಳಿ ಮತ್ತು ಮರಳವಾಡಿ ಹೋಬಳಿಯ ಚಿಕ್ಕಮರಳವಾಡಿ ಗ್ರಾಮದಲ್ಲಿ ತೆರವಾಗಿದ್ದ ಗ್ರಾಮ ಪಂಚಾಯಿತಿಯ ಸ್ಥಾನಗಳಿಗೆ ಭಾನುವಾರ ಉಪಚುನಾವಣೆ ನಡೆಯಿತು.ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾದ ಮತದಾನ ಪ್ರಕ್ರಿಯೆ ಸಂಜೆ 5 ಗಂಟೆಯವರೆಗೂ ಬಿರುಸಿನಿಂದ ನಡೆಯಿತು.

ವಾರ್ಡಿನಲ್ಲಿ ಒಟ್ಟು 923 ಮತದಾರರಿದ್ದು ಅದರಲ್ಲಿ 470 ಪುರುಷ ಹಾಗೂ 453 ಮಹಿಳಾ ಮತದಾರರಾಗಿದ್ದಾರೆ. 809 ಮತದಾರರು ಮತ ಚಲಾಯಿಸಿದ್ದು ಶೇಕಡ 87.6 ರಷ್ಟು ಮತದಾನ ದಾಖಲಾಯಿತು.ಚುನಾವಣಾ ಅಧಿಕಾರಿಯಾಗಿ ಜಲಾನಯನ ಅಧಿಕಾರಿ ಹುಚ್ಚಪ್ಪ, ಸಹಾಯಕ ಚುನಾವಣಾ ಅಧಿಕಾರಿಯಾಗಿ ಶಿಕ್ಷಣ ಇಲಾಖೆಯ ಪ್ರಕಾಶ್, ತಿಪ್ಪೇಸ್ವಾಮಿ, ನಾಗರಾಜನಾಯ್ಕ, ಮಂಚೇಗೌಡ ಚುನಾವಣಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದರು.ಕಾಂಗ್ರೆಸ್ ಪರವಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಇಕ್ಬಾಲ್ ಹುಸೇನ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಲೋಕೇಶ್, ಉಮೇಶ್, ಮುಖಂಡರಾದ ಏಳಗಳ್ಳಿ ರವಿ, ಶೆಟ್ಟಿಕೆರೆ ದೊಡ್ಡಿ ಗೂಸಪ್ಪ, ಸಿದ್ದವೀರ್, ರಾಘವೇಂದ್ರ, ಲೋಕೇಶ್, ಬಸವರಾಜು, ಶಿವರಾಜು ಮೊದಲಾದವರು ಹಾಜರಿದ್ದರು.ಜೆ.ಡಿ.ಎಸ್ ಪರವಾಗಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲನರಸಿಂಹೇ ಗೌಡ, ಮುಖಂಡರಾದ ಮುಳ್ಳಳ್ಳಿ ಮಹೇಶ್, ಹೂಕುಂದ ಪಂಚಲಿಂಗೇಗೌಡ, ಸುಂದರ್‌ರಾಜು ಇತರರು ಇದ್ದರು.ಮುಳ್ಳಳ್ಳಿ ಗ್ರಾಮದಲ್ಲಿ ಕುಮಾರ್ ಎಂಬ ಸದಸ್ಯರ ಅಕಾಲಿಕ ಮರಣದಿಂದ ಅವರ ಸ್ಥಾನ ತೆರವಾಗಿತ್ತು.  ಈ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಎಂ.ಬಿ.ಸತೀಶ್ ಸ್ಪರ್ಧೆಯಲ್ಲಿದ್ದರೆ ಜೆ.ಡಿ.ಎಸ್. ಬೆಂಬಲಿತ ಅಭ್ಯರ್ಥಿಯಾಗಿ ಎಂ.ಸಿ. ಶಿವಶಂಕರ್ ಎಂಬುವರು ಸ್ಪರ್ಧಿಸಿದ್ದರು.ಭದ್ರತೆ: ಮುಳ್ಳಳ್ಳಿ ವಾರ್ಡು ಅತ್ಯಂತ ಸೂಕ್ಷ್ಮ ಮತಗಟ್ಟೆ ಕೇಂದ್ರ ಎಂದು ಪರಿಗಣಿಸಿದ್ದರಿಂದ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಸಶಸ್ತ್ರ ಮೀಸಲು ಪೊಲೀಸ್ ತುಕಡಿ ಹಾಗೂ ಹೆಚ್ಚಿನ ಸಂಖ್ಯೆ ಪೋಲಿಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತ ಮತದಾನ ನಡೆಯಿತು. ಚಿಕ್ಕಮರಳವಾಡಿ: ತಾಲ್ಲೂಕಿನ ಮರಳವಾಡಿ ಹೋಬಳಿ ಚಿಕ್ಕಮರಳವಾಡಿ ವಾರ್ಡಿನ ಸದಸ್ಯೆ ಮಮತಾ ಎಂಬುವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಈ ಸ್ಥಾನ ತೆರವಾಗಿತ್ತು. ಕಾಂಗ್ರೆಸ್ ಬೆಂಬಲಿತರಾಗಿ ನಾಗರತ್ನಮ್ಮ, ಜೆ.ಡಿ.ಎಸ್. ಬೆಂಬಲಿತರಾಗಿ ಸರಸ್ವತಿ ಕಣದಲ್ಲಿದ್ದರು.  ಬೆಳಗ್ಗೆ 7 ಗಂಟೆಯಿಂದ ಪ್ರಾರಂಭಗೊಂಡ ಚುನಾವಣೆ ಶಾಂತಿಯುತವಾಗಿ ಜರುಗಿತು. ಮಧ್ಯಾಹ್ನದ ನಂತರ ಚುನಾವಣೆ ಬಿರುಸುಗೊಂಡಿತು. ಸಂಜೆ 5ರ ವೇಳೆಗೆ 632 ಮತದಾರರು ಮತ ಚಲಾಯಿಸಿದರು. ಚಿಕ್ಕಮರಳವಾಡಿ ವಾರ್ಡಿನಲ್ಲಿ 362 ಪುರಷರು, 408 ಮಹಿಳೆಯರು ಒಟ್ಟು 770 ಮತದಾರರು ಇದ್ದಾರೆ.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎನ್.ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಬ್ದರ್ ಹುಸೇನ್, ಹೋಬಳಿ ಮುಖಂಡ ಚಿಕ್ಕಸಾದೇನಹಳ್ಳಿ ಈಶ್ವರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಯೂಬ್ ಪಾಷಾ, ಮಾಜಿ ಅಧ್ಯಕ್ಷೆ ಪ್ರೇಮಾ ಸಿದ್ದರಾಜು ಹಾಗೂ ಇತರ ಮುಖಂಡರು ಕಾಂಗ್ರೆಸ್ ಪರವಾಗಿ ಹಾಜರಿದ್ದರು.ಎರಡೂ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆ ಬುಧವಾರ (ಆ.7) ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ನಡೆಯಲಿದೆ' ಎಂದು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಜಲಾನಯನ ಅಧಿಕಾರಿಯಾದ ಹುಚ್ಚಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

Post Comments (+)