ಶುಕ್ರವಾರ, ಜೂನ್ 18, 2021
28 °C
ರಸ್ತೆ ಮೇಲೆ ಹೊಲಸು ನೀರು

ಶಾಂತಿ ನಗರದ ಜನರಿಗೆ ಪ್ರಾಣಾಯಾಮ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ನಗರಸಭೆಯ 27ನೇ ವಾರ್ಡ್‌ಗೆ ಸೇರಿರುವ ಶಾಂತಿನಗರವು ಅವ್ಯವಸ್ಥೆಯ ಅಗರವಾಗಿದೆ. ಜನರು ಹಲವು ಬಾರಿ ಸಮಸ್ಯೆ ಪರಿಹರಿಸುವಂತೆ ನಗರಸಭೆ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.ಬಡಾವಣೆಯ 5ನೇ ಅಡ್ಡರಸ್ತೆಯಲ್ಲಿ ಚರಂಡಿ ನಿರ್ಮಾಣದ ಸಂದರ್ಭದಲ್ಲಿ ಆಳವಾದ ಗುಂಡಿಯಾಗಿದೆ. ಒಳಚರಂಡಿಯ ಪೈಪ್ ಶಿಥಿಲಗೊಂಡಿದ್ದು ಹೊಲಸು ನೀರು ರಸ್ತೆಯಲ್ಲಿ ಹರಿಯುತ್ತಿದೆ. ಗಬ್ಬು ವಾಸನೆಯಿಂದಾಗಿ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ ಎಂದು ನಾಗರೀಕರು ಆರೋಪಿಸುತ್ತಾರೆ.ಬಡಾವಣೆಯಲ್ಲಿ ಚರಂಡಿ ಮತ್ತು ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ. ರಸ್ತೆಯಲ್ಲಿರುವ ಕೆಲವು ಪ್ರಭಾವಿಗಳ ಮನೆಗಳ ಮೆಟ್ಟಿಲು, ಕಾಂಪೌಂಡ್ ರಸ್ತೆಗೆ ಚಾಚಿರುವುದರಿಂದ ನಗರಸಭೆ ಅಧಿಕಾರಿಗಳು ಕಾಮಗಾರಿ ನಡೆಸಲು ಹಿಂಜರಿಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.ಚರಂಡಿ ಕಾಮಗಾರಿಯ ಗುಣಮಟ್ಟ ಸಹ ಕಳಪೆಯಾಗಿದೆ ಎಂದು ಜನರು ದೂರಿದ್ದಾರೆ. ತಳಭಾಗಕ್ಕೆ ಬಹಳ ತೆಳುವಾಗಿ ಕಾಂಕ್ರಿಟ್‌ ಬೆಡ್‌ ಹಾಕಲಾಗುತ್ತಿದೆ. ಸರಿಯಾದ ಪ್ರಮಾಣದಲ್ಲಿ ನೀರು ಹಾಯಿಸಿ ಕ್ಯೂರಿಂಗ್ ಮಾಡುತ್ತಿಲ್ಲ. ಗುಣಮಟ್ಟ ಸುಧಾರಿಸದಿದ್ದರೆ, ಹಾಕಿರುವ ಕಾಂಕ್ರಿಟ್ ಕೆಲವೇ ದಿನದಲ್ಲಿ ಮುಂದುವರಿಯುವ ಸಾಧ್ಯತೆ ಇದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.ಬಡಾವಣೆಯ ಕೆಲವು ರಸ್ತೆಗಳಲ್ಲಿ ಚರಂಡಿ ನಿರ್ಮಾಣಕ್ಕಾಗಿ ರಸ್ತೆಯ ಇಕ್ಕೆಲಗಳಲ್ಲಿ ಕಾಲುವೆ ತೋಡಿ ತಿಂಗಳು ಕಳೆದಿದ್ದರೂ ಕೆಲಸ ಮಾತ್ರ ಆರಂಭವಾಗಿಲ್ಲ. ರಸ್ತೆಯಿಂದ ಮನ ತಲುಪಲೂ ಜನ ಪರದಾಡುವಂತಾಗಿದೆ.ಬೈಪಾಸ್‌ ರಸ್ತೆ ಸಮೀಪ ಕಸದ ಸಂಗ್ರಹಣೆಗಾಗಿ ಕಂಟೈನರ್‌ ಇಟ್ಟಿದ್ದರೂ, ಜನ ಅದರೊಳಗೆ ಕಸ ಹಾಕುತ್ತಿಲ್ಲ. ಕಂಟೈನರ್ ಸುತ್ತಲೂ ಕಸ ಹಾಕುವ ಕಾರಣ ಸುತ್ತಮುತ್ತಲ ನಿವಾಸಿಗಳು ದುರ್ವಾಸನೆ ಅನುಭವಿಸುವಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.