ಶಾಂತಿ ಮತ್ತು ಪಾರಿವಾಳ

7

ಶಾಂತಿ ಮತ್ತು ಪಾರಿವಾಳ

Published:
Updated:
ಶಾಂತಿ ಮತ್ತು ಪಾರಿವಾಳ

ಎರಡನೆ ಜಾಗತಿಕ ಯುದ್ಧದ ಕೊನೆಯಲ್ಲಿ (1945), ಹಿರೋಷಿಮಾ ಹಾಗೂ ನಾಗಾಸಾಕಿ ನಗರಗಳ ಮೇಲೆ ನಡೆದ ಬಾಂಬ್ ದಾಳಿಯ ಕರಾಳ ನೆನಪುಗಳು ಜಪಾನ್ ದೇಶಕ್ಕೆ ಭೇಟಿಕೊಡುವವರನ್ನು ಇಂದಿಗೂ ಕಾಡುತ್ತವೆ. ಎರಡು ವರ್ಷಗಳ ಹಿಂದೆ, ಜಪಾನಿನ ಸಾಂಸ್ಕೃತಿಕ ನಗರ ಕ್ಯೋಟೋದಲ್ಲಿ `ವಿಶ್ವ ಸಂಸ್ಕೃತ ಸಮ್ಮೇಳನ~ದಲ್ಲಿ ಭಾಗವಹಿಸಲು ಜಪಾನಿಗೆ ತೆರಳಿದ್ದ ನಾನು ಸಮ್ಮೇಳನದ ನಂತರ ಮೊದಲು ಹೊರಟಿದ್ದು ಹಿರೋಷಿಮಾದೆಡೆಗೆ. ಅಲ್ಲಿ ನಮ್ಮ ಹಂಪೆಯಂತಹ ನೋಟವಿರಬಹುದು ಎನ್ನುವ ಭಾವನೆ ನಮ್ಮಲ್ಲಿತ್ತು. ಆದರೆ, ಅಲ್ಲಿ ಕಂಡದ್ದು ಆಧುನಿಕ, ಜನನಿಬಿಡ ನಗರ. ಎಂತಹ ದುರಂತವನ್ನೂ ಎದುರಿಸುವ ಛಾತಿಯುಳ್ಳ ಜಪಾನೀಯರು ಹಿರೋಷಿಮಾ - ನಾಗಾಸಾಕಿಗಳಲ್ಲಿ ನಿರ್ಮಿಸಿರುವ ಬಹತ್ ಕೈಗಾರಿಕಾ ಘಟಕಗಳು, ಗಗನಚುಂಬಿ ಕಟ್ಟಡಗಳು, ಸುಂದರ ತೋಟಗಳು ಪ್ರವಾಸಿಗರನ್ನು ಅಚ್ಚರಿಗೊಳಿಸುತ್ತವೆ.`ಶಾಂತಿ ಸ್ಮಾರಕ ಉದ್ಯಾನ~ ಹಿರೋಷಿಮಾದ ಪ್ರಮುಖ ಆಕರ್ಷಣೆ. ನಗರದ ಮಧ್ಯಭಾಗದಲ್ಲಿ ಇರುವ ಅಣುಬಾಂಬ್ ಗುಮ್ಮಟವನ್ನು ಬಳಸಿಕೊಂಡು ಬರುವಾಗ, ಪಕ್ಕದಲ್ಲಿಯೇ ಹರಿಯುವ ಮೊಟೊಯಾಸು ನದಿಯ ಆಚೆಯ ದಡದಲ್ಲಿರುವುದೇ 1.2 ಲಕ್ಷ ಚ.ಮೀ. ವಿಸ್ತೀರ್ಣದಲ್ಲಿ ಹರಡಿರುವ ಹಿರೋಷಿಮಾ ಶಾಂತಿ ಸ್ಮಾರಕ ಉದ್ಯಾನ. 1954ರಲ್ಲಿ ನಿರ್ಮಿತವಾದ ಹಾಗೂ ವಿಶ್ವ ಪಾರಂಪರಿಕ ಸ್ಮಾರಕವಾಗಿರುವ ಈ ಉದ್ಯಾನದಲ್ಲಿರುವ ಅನೇಕ ಸ್ಮಾರಕಗಳು, ಮ್ಯೂಸಿಯಮ್‌ಗಳು ಹಾಗೂ ಬೋಧನಾ ಕೇಂದ್ರಗಳು ವಿಶ್ವದೆಲ್ಲೆಡೆಯಿಂದ ಬರುವ ಪ್ರವಾಸಿಗರಿಗೆ ಅಣುಬಾಂಬ್ ದಾಳಿಯ ವಿವಿಧ ಮುಖಗಳನ್ನು ತೆರೆದು ತೋರುತ್ತವೆ.ಪ್ರತಿ ವರುಷ ಆಗಸ್ಟ್ 6ರಂದು, ಹಿರೋಷಿಮಾದಲ್ಲಿ ಅಣುಬಾಂಬ್ ದಾಳಿಗೆ ತುತ್ತಾದ ಸುಮಾರು 1.6 ಲಕ್ಷ ದುರ್ದೈವಿಗಳನ್ನು ಸ್ಮರಿಸುತ್ತಾ, ಈ ಉದ್ಯಾನದಲ್ಲಿ `ಶಾಂತಿ ಸಂಸ್ಮರಣಾ ದಿನಾಚರಣೆ~ ಆಚರಿಸಲಾಗುತ್ತದೆ. ಈ ಆಚರಣೆಯಲ್ಲಿ ವಿಶ್ವದ ಅನೇಕ ದೇಶಗಳ ಜನರು ಹಾಗೂ ದುರಂತದಲ್ಲಿ ಮಡಿದವರ ಕುಟುಂಬವರ್ಗದವರು ಪಾಲ್ಗೊಳ್ಳುತ್ತಾರೆ. ಅಣುಬಾಂಬ್ ಅಲ್ಲಿ ಬಿದ್ದ ಸಮಯ, ಬೆಳಗಿನ ಜಾವ 8-15ಕ್ಕೆ ಸರಿಯಾಗಿ ಒಂದು ನಿಮಿಷ ಮೃತರ ಕುಟುಂಬದವರ ಒಬ್ಬ ಪ್ರತಿನಿಧಿ ಹಾಗೂ ಮಕ್ಕಳ ಓರ್ವ ಪ್ರತಿನಿಧಿ ಬೃಹತ್ ಶಾಂತಿ ಘಂಟೆಯನ್ನು ಬಾರಿಸುತ್ತಾರೆ. ಮೌನಾಚರಣೆ ನಂತರ ನಗರದ ಮೇಯರ್ ಶಾಂತಿ ಪ್ರತಿಜ್ಞಾವಿಧಿ ಭೋಧಿಸುತ್ತಾರೆ ಹಾಗೂ ಶಾಂತಿಯ ಪ್ರತೀಕವಾಗಿ ನೂರಾರು ಪಾರಿವಾಳ ಹಾರಿಬಿಡುತ್ತಾರೆ.ಬಾಂಬ್ ದಾಳಿಗೆ ಸಿಕ್ಕಿ ಅಸ್ಥಿಪಂಜರದಂತೆ ಆಗಿರುವ ಅಂದಿನ ವೈಭವೋಪೇತ ಕೈಗಾರಿಕಾ ಅಭಿವೃದ್ಧಿ ಸಭಾಂಗಣದ ಈ ಕಟ್ಟಡವನ್ನು ಯುನೆಸ್ಕೋ ವಿಶ್ವಪಾರಂಪರಿಕ ಸ್ಮಾರಕವೆಂದು ಘೋಷಿಸಿದೆ. ಬಹುಪಾಲು ಶಿಥಿಲಗೊಂಡಿದ್ದರೂ ಭಾಗಶಃ ಇನ್ನೂ ನಿಂತಿರುವ ಈ ಕಟ್ಟಡವನ್ನು  ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ.ಕಾಗದದ ಹಕ್ಕಿ!

ಉದ್ಯಾನದ ಮಧ್ಯಭಾಗದಲ್ಲಿ ಮಕ್ಕಳ ಶಾಂತಿ ಸ್ಮಾರಕವಿದೆ. ದುರಂತದಲ್ಲಿ ಮಡಿದ ಮಕ್ಕಳ ಸ್ಮರಣಾರ್ಥವಾಗಿ ನಿರ್ಮಿಸಿರುವ ಗೋಪುರದ ಮೇಲೆ ಕೈಗಳೆರಡನ್ನೂ ಹೊರಚಾಚಿರುವ ಸಡೊಕೋ ಸಸಾಕಿ ಎಂಬ ಹುಡುಗಿಯ ಶಿಲಾಮೂರ್ತಿ ಇದೆ. ಅವಳ ತಲೆಯ ಮೇಲೆ ಕಾಣುವ  ಮಕ್ಕಳಿಗೆ ಪ್ರಿಯವಾದ ಪೇಪರ್ ಹಕ್ಕಿಯ ಕೆತ್ತನೆ ಮನ ಸೆಳೆಯುತ್ತದೆ. ಅಣುಬಾಂಬ್‌ನ ವಿಕಿರಣದಿಂದ ಮೃತಪಟ್ಟ ಆ ಹುಡುಗಿ 1000 ಪೇಪರ್ ಹಕ್ಕಿಗಳನ್ನು ತಾನು ಮಾಡಿದಾಗ, ತನಗೆ ಬಂದಿರುವ ಭೀಕರ ಕಾಯಿಲೆಯಿಂದ ಪಾರಾಗುವುದಾಗಿ ನಂಬಿದ್ದಳು. ಇಂದಿಗೂ ಅವಳ ನೆನಪಿನಲ್ಲಿ ಪ್ರಪಂಚದಾದ್ಯಂತ ಮಕ್ಕಳು ಈ ರಾಷ್ಟ್ರೀಯ ಶಾಂತಿ ಉದ್ಯಾನಕ್ಕೆ ಕಳುಹಿಸುವ ಪೇಪರ್ ಹಕ್ಕಿಗಳ ಸಂಗ್ರಹವನ್ನು ಈ ಸ್ಮಾರಕದ ಬಳಿ ಕಾಣಬಹುದು. ಇದರ ಹತ್ತಿರದಲ್ಲಿಯೇ ಇರುವ ದೊಡ್ಡ ಶಾಂತಿ ಘಂಟೆಯನ್ನು ಪ್ರವಾಸಿಗರೆಲ್ಲರೂ ಶಾಂತಿಯ ಪ್ರತಿಪಾದನೆಯ ಸಂಕೇತವಾಗಿ  ಬಾರಿಸುವ ಧ್ವನಿ ಅಲ್ಲಿ ಅನುರಣಿಸುತ್ತಿರುತ್ತದೆ. ಈ ಗಂಟೆಯ ಮೇಲಿನ ಭಾಗದಲ್ಲಿರುವ ವಿಶ್ವಭೂಪಟದ ಮೇಲೆ ಗ್ರೀಕ್, ಜಪಾನಿ ಹಾಗೂ ಸಂಸ್ಕೃತ ಭಾಷೆಗಳಲ್ಲಿ `ನಿನ್ನನ್ನು ನೀನು ಅರಿತುಕೋ~ ಎನ್ನುವ ಅರ್ಥದ ಘೋಷವಾಕ್ಯವಿದೆ.ರಾಷ್ಟ್ರೀಯ ಶಾಂತಿ ಸ್ಮಾರಕದ ಕಟ್ಟಡ ನೆಲಮಟ್ಟದಲ್ಲಿದ್ದು ಅದರ ಕೆಳಗಡೆ ಎರಡು ಅಂತಸ್ತುಗಳಿವೆ. ಅಲ್ಲಿ ಗ್ರಂಥಾಲಯ ಹಾಗೂ 360 ಡಿಗ್ರಿ ವರ್ತುಲಾಕಾರದಲ್ಲಿ ನಿರ್ಮಿಸಿರುವ ಸಭಾಂಗಣಗಳಿವೆ. ಕಟ್ಟಡದ ಮಧ್ಯೆ ನಿಂತಾಗ ವೀಕ್ಷಕರಿಗೆ ತಾವು ಕಾಲಯಂತ್ರದಲ್ಲಿ ಹಿಂದೆ ಸರಿದು, 1945ರಲ್ಲಿ ಬಾಂಬ್ ದಾಳಿಗೆ ತುತ್ತಾದ ಹಿರೋಷಿಮಾ ನಗರದ ನಡುವೆ ನಿಂತಂತಹ ಅನುಭವವಾಗುತ್ತದೆ.ದುರಂತದಲ್ಲಿ ಮಡಿದವರೆಲ್ಲರ ಫೋಟೋಗಳನ್ನು ಕಂಪ್ಯೂಟರ್ ಹಾಗೂ ಬೃಹತ್ ಪರದೆಯಲ್ಲಿ ನೋಡುವ ವ್ಯವಸ್ಥೆ ಇಲ್ಲಿದೆ. ಅಣುಬಾಂಬ್ ಸಮಾಧಿ ಸ್ಮಾರಕ ಹುಲ್ಲುಹಾಸಿನ ದಿಣ್ಣೆಯಾಕಾರದಲ್ಲಿ ನಿರ್ಮಿತವಾಗಿದ್ದು, ಅದರಡಿಯಲ್ಲಿ ದಾಳಿಗೆ ತುತ್ತಾದ 70,000 ಗುರುತು ಸಿಗದ ನತದೃಷ್ಟರ ಚಿತಾಭಸ್ಮದ ಸಂಗ್ರಹವಿದೆ.ಶಾಂತಿ ಸ್ಮಾರಕ ವಸ್ತು ಸಂಗ್ರಹಾಲಯ

1955ರಲ್ಲಿ ಸ್ಥಾಪಿತವಾದ ಈ ಸಂಗ್ರಹಾಲಯದ ಮೂಲ ಉದ್ದೇಶ ಅಣುಬಾಂಬ್ ದಾಳಿಯ ಭೀಕರತೆಯನ್ನು ಪ್ರದರ್ಶಿಸುವುದು ಹಾಗೂ ವಿಶ್ವಶಾಂತಿಯ ಪ್ರತಿಪಾದನೆ. ಅಣುಶಸ್ತ್ರಾಸ್ತ್ರ ಮುಕ್ತ ವಿಶ್ವಶಾಂತಿಗಾಗಿ ಜಪಾನ್ ನಡೆಸುತ್ತಿರುವ ಆಂದೋಲನದ ಬಗ್ಗೆ ಸವಿವರ ಮಾಹಿತಿ ಇಲ್ಲಿ ಸಿಗುತ್ತದೆ. ದಾಳಿಯ ಸಮಯ ಬೆಳಗಿನ 8-15ಕ್ಕೆ ತಟಸ್ಥಗೊಂಡ ಗಡಿಯಾರಗಳು ಮನಸ್ಸನ್ನು ತಲ್ಲಣಗೊಳಿಸುತ್ತವೆ. ದಾಳಿಗೆ ಸಂಬಂಧಪಟ್ಟ ಚಲನಚಿತ್ರಗಳ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಬಹುತೇಕ ಎಲ್ಲಾ ದೇಶಗಳ ಭಾಷೆಗಳ ವಿವರಣೆಯೊಂದಿಗೆ ದೊರೆಯುತ್ತದೆ. ದಾಳಿಗೆ ತುತ್ತಾದವರು ಧರಿಸಿದ್ದ ಬಟ್ಟೆ, ಗಡಿಯಾರಗಳು, ಬೂಟು, ಕೂದಲು ಮುಂತಾದವುಗಳನ್ನು ಸಂಗ್ರಹಿಸಿಡಲಾಗಿದೆ. ಅಣುಬಾಂಬ್ ಮುಕ್ತ ಭೂಮಿಯನ್ನು ಕಾಣುವಂತಾಗಲೆಂಬ ಆಶಯಹೊತ್ತು ನಿರಂತರವಾಗಿ ಉರಿಯುತ್ತಿರುವ ಶಾಂತಿಜ್ಯೋತಿ ಹಾಗೂ ಅದರ ಸಮೀಪದಲ್ಲಿಯೇ ಇರುವ ಅಣುಬಾಂಬ್ ಗುಮ್ಮಟವನ್ನು ಎದೆತುಂಬಿಕೊಂಡರೆ ಚರಿತ್ರೆಯ ಕರಾಳ ಪುಟಗಳೊಂದಿಗೆ ನಾಳೆಯ ಭವಿಷ್ಯದ ಕುರಿತ ಚಿಂತನೆಗಳೂ ಒಮ್ಮೆಗೇ ನಮ್ಮನ್ನು ಆವರಿಸುತ್ತವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry