ಗುರುವಾರ , ನವೆಂಬರ್ 21, 2019
20 °C

`ಶಾಂತಿ' ಸಾರುವ ಸಂಚಾರಿ ಪುಸ್ತಕಾಲಯ

Published:
Updated:

ಗುಲ್ಬರ್ಗ: ಶಾಂತಿ ಸಂಚಾರಿ ಪುಸ್ತಕಾಲಯ ಎರಡು ದಿನದಿಂದ ಗುಲ್ಬರ್ಗ ನಗರದಲ್ಲಿ ಸಂಚರಿಸುತ್ತಿದೆ. ಕನ್ನಡ ಜನತೆಯ ಮನೆ ಬಾಗಿಲಿಗೆ ಶಾಂತಿ ಪ್ರಕಾಶನದ ಪುಸ್ತಕಗಳನ್ನು ತಲುಪಿಸುತ್ತಿದೆ. ಇಲ್ಲಿ ಎಲ್ಲ ಪುಸ್ತಕಗಳು ಕನ್ನಡದಲ್ಲಿಯೇ ಇರುವುದು ವಿಶೇಷ.ದೂರದ ಪುಸ್ತಕದ ಅಂಗಡಿಗೆ ಹೋಗಿ ಪುಸ್ತಕ ಕೊಳ್ಳುವುದು ಪುಸ್ತಕ ಪ್ರಿಯರಿಗೆ ಅನಿವಾರ್ಯ. ಗ್ರಂಥಾಲಯಕ್ಕೆ ಭೇಟಿ ನೀಡಿ ಅಧ್ಯಯನ ಮಾಡುವುದು ದುಸ್ತರ. ಆದರೆ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸುವ ಕಾರ್ಯವನ್ನು ಶಾಂತಿ ಸಂಚಾರಿ ಪುಸ್ತಕಾಲಯ ಮಾಡುತ್ತಿದೆ.ತಾತ್ವಿಕ ಚಿಂತನೆ, ತಾರ್ಕಿಕ ವಿಶ್ಲೇಷಣೆ, ವಿಷಯ ಸಮಗ್ರತೆ, ಪ್ರಬುದ್ಧ ದೃಷ್ಟಿಕೋನ, ಗೊಂದಲದ ಗೂಡಾದ ಮಾನವ ಮನಸ್ಸಿಗೆ ಸಾಂತ್ವನದ ಸಿಂಚನ. ಮಾನವನ ಧಾರ್ಮಿಕ, ಸಾಮಾಜಿಕ, ರಾಜಕೀಯ ಆರ್ಥಿಕ, ವೈಚಾರಿಕ, ಆಧ್ಯಾತ್ಮಿಕ ಗೊಂದಲಕಾರಿ ಪ್ರಶ್ನೆಗಳಿಗೆ ತತ್ವದರ್ಶಿ ಮಾರ್ಗದರ್ಶನ, ಪ್ರಚಲಿತ ಚರ್ಚಾ ವಿಷಯಗಳ ವಸ್ತುನಿಷ್ಠ ವಿಶ್ಲೇಷಣೆಯಂತಹ ಪುಸ್ತಕಗಳು ಇಲ್ಲಿವೆ.ಮಕ್ಕಳಿಗಾಗಿ ಕಥೆ, ನೀತಿ ಕಥೆ ತಿಳಿಸುವಂತಹ, ಮಕ್ಕಳ ಮನಸ್ಸು ಅರಳಲು, ಅವರ ಬುದ್ಧಿ ವಿಕಾಸಕ್ಕಾಗಿ, ವಿವಿಧ ರೀತಿಯ ಆಟಗಳಿರುವ ಕಾಂಪ್ಯಾಕ್ಟ್ ಡಿಸ್ಕ್‌ಗಳು ಇಲ್ಲಿ ಲಭ್ಯ. ಸುಮಾರು 250 ನಮೂನೆಯ ಪುಸ್ತಕಗಳು ಇಲ್ಲಿವೆ. ಇಂಗ್ಲಿಷ್, ಹಿಂದಿ ಭಾಷೆಯ ಪುಸ್ತಕಗಳೂ ದೊರೆಯುತ್ತವೆ.ಈ ಸಂಸ್ಥೆ ಸ್ಥಾಪನೆಯಾಗಿ 12 ವರ್ಷವಾಗಿದೆ. `ಸನ್ಮಾರ್ಗ' ವಾರಪತ್ರಿಕೆ ಹಾಗೂ ಮಹಿಳೆಯರಿಂದ ಮಹಿಳೆಯರಿಗಾಗಿ `ಅನುಪಮಾ' ಮಾಸ ಪತ್ರಿಕೆಗಳನ್ನು ಮಂಗಳೂರಿನ ಶಾಂತಿ ಪ್ರಕಾಶನದ ವತಿಯಿಂದ ಪ್ರಕಟಿಸುತ್ತಿದೆ.ಇಸ್ಲಾಂ ಧರ್ಮ ಮಾನವ ಕುಲದ ಸರ್ವತೋಮುಖ ಏಳ್ಗೆಗೆ ಪೂರಕ ಮೌಲ್ಯ ಹೊಂದಿದೆ. ಕನ್ನಡ ಬಲ್ಲ ಮುಸ್ಲಿಂ ಹಾಗೂ ಮುಸ್ಲಿಮೇತರ ಬಾಂಧವರಿಗೆ ಇಸ್ಲಾಮಿನ ಚಿರಂತನ ಮೌಲ್ಯ ಪರಿಚಯಿಸುವುದಕ್ಕಾಗಿ `ಶಾಂತಿ ಪ್ರಕಾಶನ' ಸಂಸ್ಥೆ ಆರಂಭಿಸಲಾಗಿದೆ. ಕನ್ನಡಿಗರಾದ ಮುಸ್ಲಿಮರಿಗೆ ಧಾರ್ಮಿಕ ಶಿಕ್ಷಣ ಪಡೆಯುವ ಅನುಕೂಲ ಒದಗಿಸುವುದು ಮತ್ತು ಮುಸ್ಲಿಮೇತರ ಬಾಂಧವರಲ್ಲಿ ಇಸ್ಲಾಮಿನ ಬಗೆಗಿರುವ ಪೂರ್ವಗ್ರಹ ಮತ್ತು ತಪ್ಪು ತಿಳಿವಳಿಕೆ ನಿವಾರಿಸುವ ಇಸ್ಲಾಮಿ ಕೃತಿಗಳನ್ನು ಪ್ರಕಟಿಸಿ ಪ್ರಚಾರ ಮಾಡುವುದು ಇದರ ಮುಖ್ಯ ಉದ್ದೇಶ.`ಧರ್ಮ ಪ್ರಚಾರಕ್ಕೆ ಈ ಪ್ರದರ್ಶನ ಅಲ್ಲ. ಮುಸ್ಲಿಂ ಧರ್ಮದಲ್ಲಿ ಇರುವಂತಹವರಿಗೂ ಕನ್ನಡ, ಉರ್ದು ತಿಳಿದಿರುವುದಿಲ್ಲ. ಅದನ್ನು ತಿಳಿಸುವುದಕ್ಕಾಗಿ ಪುಸ್ತಕ ಮಾರಾಟ ಮತ್ತು ಪ್ರದರ್ಶನ ನೀಡಲಾಗುತ್ತಿದೆ' ಎಂದು ಶಾಂತಿ ಸಂಚಾರಿ ಗ್ರಂಥಾಲಯದ ವ್ಯವಸ್ಥಾಪಕ ಅಬ್ದುಲ್ ರೌಫ್ `ಪ್ರಜಾವಾಣಿ'ಗೆ ತಿಳಿಸಿದರು.ಈ ಪುಸ್ತಕಗಳ ಪ್ರದರ್ಶನಕ್ಕಾಗಿ ಶಾಂತಿ ಪ್ರಕಾಶನ ಸಂಸ್ಥೆಯು ಎರಡು ಮಿನಿ ಬಸ್ ವ್ಯವಸ್ಥೆ ಕಲ್ಪಿಸಿದೆ. ಒಂದು ಉತ್ತರ ಕರ್ನಾಟಕ, ಮತ್ತೊಂದು ದಕ್ಷಿಣ ಕರ್ನಾಟಕ ಭಾಗದಲ್ಲಿ ಸಂಚರಿಸುತ್ತಿವೆ. ಮೂರು ವರ್ಷಕ್ಕೊಮ್ಮೆ ಗುಲ್ಬರ್ಗ ಜಿಲ್ಲೆಗೆ ಭೇಟಿ ನೀಡಲಾಗುತ್ತಿದೆ. ಒಂದು ಜಿಲ್ಲೆಯ ಸಂಪೂರ್ಣ ಸಂಚಾರಕ್ಕೆ 5ರಿಂದ 6ತಿಂಗಳು ಸಮಯ ಹಿಡಿಯುತ್ತದೆ.ಗುಲ್ಬರ್ಗ ಜಿಲ್ಲೆಯ ವಾಡಿ, ಶಹಾಬಾದ ಇನ್ನಿತರ ಪಟ್ಟಣಗಳಲ್ಲಿ ಪುಸ್ತಕ ಮಾರಾಟ ಮಾಡಲಾಗಿದೆ. ಇನ್ನೂ ಹದಿನೈದು ದಿನಗಳ ಕಾಲ ನಗರದಲ್ಲಿ ಸಂಚಾರ ಮಾಡಲಾಗುತ್ತದೆ ಎನ್ನುತ್ತಾರೆ ಪುಸ್ತಕಾಲಯ ವಾಹನ ಚಾಲಕ ತನ್‌ವೀರ ಅಹ್ಮದ್.`ರಕ್ತದಾನ ಮಾಡಿ, ಮತ್ತೊಬ್ಬರಿಗೆ ಬದುಕು ನೀಡಿ', `ನಾವೆಲ್ಲ ಮಾನವರು ಪರಸ್ಪರ ಸಹೋದರರು, ಗರ್ಭಪಾತ ಮಾಡಿಸಿಕೊಳ್ಳುವುದರಿಂದ ನೀವು ಗರ್ಭ ರಹಿತರಾಗುವುದಿಲ್ಲ ಬದಲು, ಭ್ರೂಣದಲ್ಲೇ ಬರ್ಬರ ಹತ್ಯೆಗೈಯಲ್ಪಟ್ಟ ಮುಗ್ಧ ಮಗುವೊಂದರ ಕೊಲೆಪಾತಕಿ ತಾಯಿಯಾಗುತ್ತೀರಿ' ಎಂದು ಜನರ ಜೀವನ ದರ್ಶನ ಮಾಡಿಸುವ ಕೆಲ ನುಡಿಮುತ್ತುಗಳನ್ನು ಈ ಸಂಚಾರಿ ಪುಸ್ತಕಾಲಯದಲ್ಲಿ  ಕಾಣಬಹುದು.`ಶಾಂತಿ ಸಂಚಾರಿ ಪುಸ್ತಕಾಲಯ ಒಳ್ಳೆಯ ಪುಸ್ತಕಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಎಲ್ಲರೂ ನಗರ ಕೇಂದ್ರ ಗ್ರಂಥಾಲಯಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ನಗರ, ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ, ಪುಸ್ತಕ ಪ್ರಿಯರಿಗೆ ಪುಸ್ತಕ ತಲುಪಿಸುವಂತಹ ಕಾರ್ಯ ಶ್ಲಾಘನೀಯ' ಎನ್ನುತ್ತಾರೆ ಪುಸ್ತಕ ಖರೀದಿಸಲು ಆಗಮಿಸಿದ್ದ ವಿನೋದ್ ಕಲಾಲ್.ಹೆಚ್ಚಿನ ಮಾಹಿತಿಗಾಗಿ ಶಾಂತಿ ಸಂಚಾರಿ ಪುಸ್ತಕಾಲಯದ ವ್ಯವಸ್ಥಾಪಕ ಅಬ್ದುಲ್ ರೌಫ್ (99808 38698) ಇವರಿಗೆ ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)