ಭಾನುವಾರ, ನವೆಂಬರ್ 17, 2019
23 °C
ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ

ಶಾಂತಿ, ಸುವ್ಯವಸ್ಥೆ ಕಾಪಾಡುವವರಿಗಿಲ್ಲ ನೆಮ್ಮದಿ

Published:
Updated:

ನಾಪೋಕ್ಲು: ಗಡಿಯಲ್ಲಿ ಸೈನಿಕರು, ನಾಡಿನಲ್ಲಿ ಪೊಲೀಸರು ಸದಾ ನಮ್ಮ ಕಾವಲು. ಗಡಿಯಲ್ಲಿ ಸೈನಿಕರು ಇಲ್ಲದಿದ್ದರೆ ದೇಶದ ಭದ್ರತೆಗೆ ಆಪತ್ತು. ಒಳಗೆ ಪೊಲೀಸರು ಇಲ್ಲದಿದ್ದರೆ ಶಾಂತಿ- ಸುವ್ಯವಸ್ಥೆಗೆ ಕುತ್ತು. ಪೊಲೀಸರು ಇಲ್ಲದಿದ್ದರೆ ಸಾಮಾಜಿಕ ಸುವ್ಯವಸ್ಥೆ ಹಾಗೂ ಸುಗಮ ಸಂಚಾರ ಕಷ್ಟಸಾಧ್ಯ. ಇದಕ್ಕೆ ತಕ್ಕ ಉದಾಹರಣೆ ಎಂದರೆ ನಾಪೋಕ್ಲು ಪಟ್ಟಣ.ಹೌದು. ಪೊಲೀಸ್ ಸಿಬ್ಬಂದಿಯ ಕೊರತೆಯಿಂದಾಗಿ ನಾಪೋಕ್ಲು ಪಟ್ಟಣ ಇನ್ನಿಲ್ಲದ ಸಮಸ್ಯೆಗಳನ್ನು ಎದುರಿಸುತ್ತಿದೆ. ಪಟ್ಟಣದ ಜನ ಹಾಗೂ ವಾಹನ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಸಂಚಾರ ನಿಯಂತ್ರಣ ಮಾಡಿ, ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡಲು ಅಗತ್ಯದಷ್ಟು ಪೊಲೀಸರೇ ಇಲ್ಲ! ಇದರಿಂದ ಇರುವ ಸಿಬ್ಬಂದಿ ಹಗಲು ರಾತ್ರಿ ದುಡಿದು ನೆಮ್ಮದಿಯನ್ನೇ ಕಳೆದುಕೊಳ್ಳುವಂತಾಗಿದೆ.ನಿಮಗೆ ಎಲ್ಲಿ ಬೇಕಾದರೂ ಕೇಳಿದ ತಕ್ಷಣ ಪೊಲೀಸರ ನೆರವು ಸಿಗಬಹುದು. ಆದರೆ, ನಾಪೋಕ್ಲು ಪಟ್ಟಣದಲ್ಲಿ ಅದು ಕಷ್ಟಸಾಧ್ಯ. ಏಕೆಂದರೆ ಈ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇದೆ. ಜೊತೆಗೆ ವಾಹನ ದಟ್ಟಣೆ ನಿಯಂತ್ರಣಕ್ಕೆ ಬರುವ ಪೊಲೀಸರಿಗೆ ಪಟ್ಟಣದಲ್ಲಿ ವಾಹನ ನಿಯಂತ್ರಿಸಲು ಒಂದು ವ್ಯವಸ್ಥಿತ ಬಸ್ ನಿಲ್ದಾಣವೇ ಇಲ್ಲ. ಇರುವ ಕಿರಿದಾದ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡಲು ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ವಾಹನ ಚಾಲಕರೇ ಪೊಲೀಸರ ವಿರುದ್ಧ ತಿರುಗಿ ಬೀಳುವ ಸ್ಥಿತಿ ಇದೆ.ಎಷ್ಟೆಲ್ಲ ಹೊಣೆಗಾರಿಗೆ

ದೈನಂದಿನ ಜೀವನದಲ್ಲಿ ಏನೇ ಏರುಪೇರಾದರೂ ಪೊಲೀಸರಿಗೆ ಕರೆ ಮಾಡಿದರೆ ಅಲ್ಲಿನ ಸಿಬ್ಬಂದಿ ತಕ್ಷಣ ಸ್ಪಂದನೆ ಕಷ್ಟ ಎಂಬ ಪರಿಸ್ಥಿತಿ ಇದೆ. ಇದೀಗ ಚುನಾವಣಾ ಅವಧಿ. ಎಲ್ಲೆಂದರಲ್ಲಿ ಸಭೆ, ಸಮಾರಂಭಗಳು. ಅವುಗಳ ವ್ಯವಸ್ಥಿತ ನಿರ್ವಹಣೆಯ ಜವಾಬ್ದಾರಿ ಪೊಲೀಸರದ್ದು. ಇದರ ಜೊತೆಗೆ ಬಂದೋಬಸ್ತ್, ಪರೀಕ್ಷಾ ಕೇಂದ್ರಗಳ ಭದ್ರತೆ, ಹಬ್ಬ, ಉತ್ಸವ, ಉರುಸ್‌ಗಳಿಗೆ ಬಂದೋಬಸ್ತ್, ಸೂಕ್ಷ್ಮ ಪ್ರದೇಶಗಳ ಮೇಲಿನ ನಿಗಾ ಮತ್ತು ಐಷಾರಾಮಿ ರೆಸಾರ್ಟ್‌ಗಳಿಗೆ ತಂಗಲು ಬರುವ ವಿಐಪಿಗಳಿಗೆ ಭದ್ರತೆ ನೀಡುವುದು ಪೊಲೀಸರ ಹೊಣೆ.ಸಿಬ್ಬಂದಿ ಸಂಖ್ಯೆ ಎಷ್ಟು?

ಮಡಿಕೇರಿ ತಾಲ್ಲೂಕಿನ ಎರಡನೇ ದೊಡ್ಡ ಪಟ್ಟಣವಾಗಿರುವ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಈ ಠಾಣೆಯಲ್ಲಿ ಒಟ್ಟು 27 ಮಂದಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಆದರೆ ಈಗ ಇರುವುದು ಕೇವಲ 19 ಜನ ಮಾತ್ರ. ಇತ್ತೀಚೆಗೆ ವಾಹನ ದಟ್ಟಣೆ ಕೂಡ ಹೆಚ್ಚಿದೆ. ಪಟ್ಟಣದಲ್ಲಿ ಕಿರಿದಾದ ರಸ್ತೆಗಳಿಂದ ಸಂಚಾರಕ್ಕೆ ಅಡೆತಡೆ ಹೆಚ್ಚಾಗಿದೆ. ಪಟ್ಟಣ ಮಾತ್ರವಲ್ಲ; ಈ ಠಾಣೆಯ ವ್ಯಾಪ್ತಿಗೆ ಬರುವ 24 ಗ್ರಾಮಗಳ ಉಸ್ತುವಾರಿಯೂ ಇದೇ ಪೊಲೀಸರ ಕರ್ತವ್ಯವಾಗಿದೆ. ಈಗ ಇರುವ 19 ಸಿಬ್ಬಂದಿಯಿಂದ ಎಲ್ಲವನ್ನೂ ಏಕಕಾಲಕ್ಕೆ ನಿರ್ವಹಿಸುವುದು ಆಗುತ್ತಿಲ್ಲ. ಇನ್ನು 8 ಸಿಬ್ಬಂದಿ ಇಲ್ಲಿ ಅಗತ್ಯವಿದ್ದಾರೆ.ಈಗ ಇರುವ 19 ಸಿಬ್ಬಂದಿಯಲ್ಲಿ ವಾರೆಂಟ್ ಮತ್ತು ಸಮನ್ಸ್‌ಗಾಗಿ ಇಬ್ಬರು, ಕೋರ್ಟ್‌ಗೆ ಒಬ್ಬರು, ಖಜಾನೆಗೆ ಒಬ್ಬರು, ಚೆಕ್‌ಪೋಸ್ಟ್‌ಗೆ ಇಬ್ಬರು, ಠಾಣೆಯ ಕರ್ತವ್ಯಕ್ಕೆ ಇಬ್ಬರು, ಟ್ರಾಫಿಕ್‌ಗೆ ಇಬ್ಬರು.. ಹೀಗೆ  ನಿಯೋಜನೆಗೊಂಡರೆ ಉಳಿದವರಷ್ಟೇ ಇನ್ನಿತರ ಕಡೆ ಕರ್ತವ್ಯ ನಿರ್ವಹಿಸಬೇಕಾಗಿದೆ. ಕಡಿಮೆ ಸಂಖ್ಯೆಯ ಸಿಬ್ಬಂದಿ ಏಕಕಾಲದಲ್ಲಿ ಎಲ್ಲೆಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯ ಎಂಬುದು ಸಾರ್ವಜನಿಕರನ್ನು ಕಾಡುತ್ತಿರುವ ಪ್ರಶ್ನೆ.ವಾಹಣ ದಟ್ಟಣೆ ನಿಯಂತ್ರಣವೇ ದೊಡ್ಡ ಸಮಸ್ಯೆಯಾಗಿದೆ. ಇಬ್ಬರೇ ಪೊಲೀಸರು ಇಡೀ ಪಟ್ಟಣದ ವಾಹನ ಸಂಚಾರವನ್ನು ಹೇಗೆ ನಿಯಂತ್ರಿಸಲು ಸಾಧ್ಯ? ಕೆಲವೊಮ್ಮೆ ಟ್ರಾಫಿಕ್‌ಜಾಮ್ ಆದರಂತೂ ಗಂಟೆಗಟ್ಟಲೇ ಕಾಯಬೇಕು. ಅದನ್ನು ತೆರವುಗೊಳಿಸಲು ಪೊಲೀಸ್ ಕಾನ್‌ಸ್ಟೇಬಲ್ ಹರಸಾಹಸ ಮಾಡಬೇಕಾದ ಸ್ಥಿತಿ.ಈಚೆಗಷ್ಟೇ ವರ್ಗಾವಣೆಯಾಗಿ ಬಂದ ಪಿಎಸ್‌ಐ ಷಣ್ಮುಗಂ ಅವರು ಪಟ್ಟಣದ ಅವ್ಯವಸ್ಥೆಗಳ ಸುಧಾರಣೆಗೆ ಪ್ರಯತ್ನಿಸಿದ್ದಾರೆ. ಆದರೆ, ಸಿಬ್ಬಂದಿ ಕೊರತೆಯಿಂದ ಅವರ ಪ್ರಯತ್ನಕ್ಕೂ ಹಿನ್ನಡೆಯಾದಂತಾಗಿದೆ.ಅವ್ಯವಸ್ಥಿತ ವಸತಿಗೃಹಗಳು

ಇಷ್ಟೆಲ್ಲ ಹರಸಾಹಸ ಮಾಡಿ ಬೇಸತ್ತುಹೋದ ಪೊಲೀಸರು ಮನೆಗೆ ಹೋಗಿ ನೆಮ್ಮದಿಯಿಂದ ಕಾಲುಚಾಚಲೂ ಆಗದ ಸ್ಥಿತಿ ಇದೆ. ಸಿಬ್ಬಂದಿ ಕೊರತೆಯಷ್ಟೇ ಗಂಭೀರವಾದ ಸಮಸ್ಯೆ ಇಲ್ಲಿನ ಪೊಲೀಸ್ ವಸತಿಗೃಹಗಳು ಚಿಕ್ಕದಾಗಿರುವುದು.ಸದ್ಯ ಪೊಲೀಸರಿಗೆ ಕಟ್ಟಿರುವ ವಸತಿಗೃಹಗಳು ಉತ್ತಮ ಗುಣಮಟ್ಟದಲ್ಲಿಲ್ಲ. ಅತಿ ಕಿರಿದಾಗಿದ್ದು, ಒಂದು ತುಂಬು ಕುಟುಂಬ ವಾಸಿಸಲು ಕಷ್ಟಸಾಧ್ಯ, ಅಗತ್ಯವಿರುವ ಮನೆ ಸಾಮಗ್ರಿ, ಪೀಠೋಪಕರಣಕ್ಕೆ ಸ್ಠಳಾವಕಾಶವೇ ಇಲ್ಲ.ಇತ್ತಿಚೆಗೆ ಉದ್ಯೋಗ ಪಡೆದುಕೊಂಡ ಯುವ ಆರಕ್ಷಕರು ತಮ್ಮ ಒತ್ತಡದ ಕೆಲಸದ ನಡುವೆ ಬಿಡುವು ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿದ್ದಾರೆ. ನಾಲ್ಕಾರು ದಿನಗಳು ಒಟ್ಟಾಗಿ ಕೆಲಸ ನಿರ್ವಹಿಸಿ ವಸತಿಗೃಹಗಳಿಗೆ ತೆರಳುವ ಸಿಬ್ಬಂದಿಗೆ ಇಕ್ಕಟ್ಟಾದ ಕೊಠಡಿಗಳು ಮತ್ತಷ್ಟು ಸುಸ್ತು ಉಂಟು ಮಾಡುತ್ತಿದೆ.ಇಲ್ಲಿನ ಸಮಸ್ಯೆಗಳ ಬಗ್ಗೆ ಹಿರಿಯ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳಿಗೆ ಮಾಹಿತಿಯೇ ಇಲ್ಲವೆ? ಅಥವಾ ಸಮಸ್ಯೆ ಪರಿಹರಿಸುವ ಗೋಜಿಗೇ ಹೋಗಿಲ್ಲವೇ ಎಂಬುದು ನಾಗರಿಕರ ಪ್ರಶ್ನೆ.

ಪ್ರತಿಕ್ರಿಯಿಸಿ (+)