ಸೋಮವಾರ, ಜೂನ್ 14, 2021
23 °C

ಶಾರ್ಟ್ ವೇವ್ ರೇಡಿಯೊ ಎಲ್ಲಿ ಮಾಯವಾಯಿತು?

ಎಸ್.ಆರ್.ರಾಮಕೃಷ್ಣ Updated:

ಅಕ್ಷರ ಗಾತ್ರ : | |

`ಕ್ಚೀಬೋ~ ಅನ್ನುವ ಚೈನೀಸ್ ರೇಡಿಯೊ ಮನೆಗೆ ತಂದು, ತಾರಸಿಯ ಮೇಲೆ ಆಂಟೆನಾ ಸಿಗಿಸಿ, ಏನೇನೋ ಸರ್ಕಸ್ ಮಾಡಿ ಶಾರ್ಟ್ ವೇವ್‌ನ ಹಳೆಯ ಮ್ಯೋಜಿಕ್ ಮತ್ತೆ ಮರಳಿ ಬರಬಹುದೇ ಎಂದು ನೋಡಿದೆ. ಅದೇನೋ ಒಂದಿಷ್ಟು ಶಬ್ದ ಬಂತು. ಆದರೆ ಯಾವ ಸ್ಟೇಶನ್ನೂ ಕೇಳುವಷ್ಟು ಸ್ಪಷ್ಟವಾಗಿರಲಿಲ್ಲ. ಅರ್ಥವಾಗದ ಯಾವುದೋ ಭಾಷೆಗಳಲ್ಲಿ ಮಾತು ಹಾಡು ಕೇಳುವ ಸಂಭ್ರಮವೂ ಮತ್ತೆ ಬರಲಿಲ್ಲ.ಮೊನ್ನೆ ಶಾರ್ಟ್ ವೇವ್ ರೇಡಿಯೊ ಕೇಳುವ ಆಸೆ ಮೈ ಮೇಲೆ ಬಂದು ಎಲೆಕ್ಟ್ರಾನಿಕ್ ಅಂಗಡಿಗಳನ್ನೆಲ್ಲ ಜಾಲಾಡಿಬಿಟ್ಟೆ. ಎಷ್ಟೋ ಅಂಗಡಿಯವರು ಶಾರ್ಟ್ ವೇವ್ ಅಂದರೇನು ಎಂದು ಕೇಳಿದರು. ಈಗ ಬರುವ ರೇಡಿಯೊಗಳಲ್ಲಿ ಎಎಂ ಮತ್ತು ಎಫ್‌ಎಂ ಇರುತ್ತೆ.ಎಸ್‌ಡಬ್ಲ್ಯೂ (ಅಂದರೆ ಶಾರ್ಟ್ ವೇವ್) ಇರುವುದಿಲ್ಲ. ಮೊಬೈಲ್ ಫೋನ್‌ನಲ್ಲಿ ರೇಡಿಯೊ ಕೇಳುವ ಹುಡುಗರಿಗೆ ಶಾರ್ಟ್ ವೇವ್ ಬಗ್ಗೆ ಗೊತ್ತೇ ಇರುವುದಿಲ್ಲ. ಇಂದು ರೇಡಿಯೊ ಒಂದನ್ನೇ ಬಿಡಿಯಾಗಿ ಕೊಳ್ಳುವವರೂ ತೀರ ಕಡಿಮೆ.ಎಫ್‌ಎಂ ರೇಡಿಯೊ ಬರೋದಕ್ಕೆ ಮುಂಚೆ ರೇಡಿಯೊ ಕೇಳುತ್ತಿದ್ದ ತಲೆಮಾರಿನವರಿಗೆ ಶಾರ್ಟ್ ವೇವ್ ಪರಿಚಯ ಚೆನ್ನಾಗಿತ್ತು. ಮೀಡಿಯಂ ವೇವ್ (ಅಂದರೆ ಈಗಿನ ಎಎಂ)ನಲ್ಲಿ ಆಕಾಶವಾಣಿಯ ವಾಹಿನಿಗಳು ಬಂದರೆ ಶಾರ್ಟ್ ವೇವ್‌ನಲ್ಲಿ ಬಿಬಿಸಿ, ವಾಯ್ಸ ಆಫ್ ಅಮೆರಿಕದಂಥ ವಿದೇಶಿ ಚಾನಲ್‌ಗಳು ಬರುತ್ತಿದ್ದವು.

 

ಆಸ್ಟ್ರೇಲಿಯಾದಲ್ಲೋ ಇಂಗ್ಲೆಂಡ್‌ನಲ್ಲೋ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದರೆ ಶಾರ್ಟ್ ವೇವ್‌ನಲ್ಲಿ ಕಾಮೆಂಟರಿ ಕೇಳುವವರು ಬೆಂಗಳೂರಿನಲ್ಲಿ ತುಂಬಾ ಇದ್ದರು. ವಾಲ್ವ್ ರೇಡಿಯೊಗಳ ಕಾಲದಿಂದ ಟ್ರಾನ್ಸಿಸ್ಟರ್‌ಗಳ ಕಾಲಕ್ಕೆ ತಂತ್ರಜ್ಞಾನ ಕಾಲಿಟ್ಟ ಮೇಲೂ ಶಾರ್ಟ್ ವೇವ್ ವಾಹಿನಿಗಳು ಕಿವಿಗೆ ಬೀಳುತ್ತಿದ್ದವು.ಅಮೆರಿಕ, ರಷ್ಯಾ, ಜರ್ಮನಿಯಂಥ ದೇಶಗಳ ಕಾರ್ಯಕ್ರಮಗಳನ್ನು ಕೇಳುವುದೇ ಒಂದು ಸಾಹಸವಾಗಿತ್ತು (ಬಿನಾಕ ಗೀತ್‌ಮಾಲ ಎಂಬ ಕಾರ್ಯಕ್ರಮ ಮಾಡಿ ಶ್ರೀಲಂಕಾದ ರೇಡಿಯೊ ಸ್ಟೇಶನ್ ಭಾರತದಲ್ಲಿ ತುಂಬಾ ಜನಪ್ರಿಯವಾಗಿತ್ತು). ಅವುಗಳನ್ನು ಟ್ಯೂನ್ ಮಾಡುವುದೇ ಮೊದಲ ಸವಾಲಾಗಿರುತ್ತಿತ್ತು.

 

`ಸೈನ್ಸ್ ಫಿಕ್ಷನ್~ ಸಿನಿಮಾಗಳಲ್ಲಿ ಬರುವಂಥ ಶಬ್ದ ಶಾರ್ಟ್ ವೇವ್ ಟ್ಯೂನ್ ಮಾಡಲು ಹೋದಾಗ ಬರುತ್ತಿತ್ತು! ಮನೆ ಹೊರಗೆ ಆಂಟೆನಾ ಅಳವಡಿಸಿದರೆ ದೂರದಿಂದ ಬರುವ ಸಿಗ್ನಲ್‌ಗಳು ಸ್ವಲ್ಪ ಸ್ಪಷ್ಟವಾಗುತ್ತಿದ್ದವು.ಇಂಟರ್ನೆಟ್‌ನಲ್ಲಿ ನೋಡಿದಾಗ ಗೊತ್ತಾಗಿದ್ದು: ಶಾರ್ಟ್ ವೇವ್ ರೇಡಿಯೊಗಳು ಇಂದಿಗೂ ಮಾರಾಟವಾಗುತ್ತಿವೆ. ಜರ್ಮನಿಯ ಗ್ರಂಡಿಗ್ ಮತ್ತು ಜಪಾನ್‌ನ ಸೋನಿ ತುಂಬಾ ಒಳ್ಳೆಯ ಶಾರ್ಟ್ ವೇವ್ ರೇಡಿಯೊ ರೆಸೀವರ್‌ಗಳನ್ನು ಮಾಡುತ್ತವಂತೆ. ಬೆಲೆ ಹೆಚ್ಚೂ ಕಡಿಮೆ ಇನ್ನೂರು ಡಾಲರ್, ಅಂದರೆ ಸುಮಾರು ಹತ್ತು ಸಾವಿರ ರೂಪಾಯಿ.ದೊಡ್ಡ ದೊಡ್ಡ ಅಂಗಡಿಗಳಲ್ಲಿ ಕೇಳಿ, ಎಲ್ಲೂ ಶಾರ್ಟ್ ವೇವ್ ರೇಡಿಯೊ ಸಿಗದೆ ಕೊನೆಗೆ ಎಸ್.ಪಿ. ರೋಡ್‌ಗೆ ಹೋದೆ. ಎಸ್.ಪಿ ರೋಡ್ ಪುರಭವನದ ಹತ್ತಿರ ಇರುವ ಸಗಟು ಎಲೆಕ್ಟ್ರಾನಿಕ್ ಮಾರುಕಟ್ಟೆ.

 

ಅಲ್ಲಿ ಯಾವುದೋ ಅಂಗಡಿಯಲ್ಲಿ `ಕ್ಚೀಬೋ~ ಅನ್ನುವ ಚೈನೀಸ್ ರೇಡಿಯೊ ಒಂದು ಸಿಕ್ಕಿತು. ಅದರಲ್ಲಿ ಶಾರ್ಟ್ ವೇವ್ ಇತ್ತು. ಬೆಲೆ ನಾನೂರ ಐವತ್ತು ರೂಪಾಯಿ. ಮನೆಗೆ ತಂದು, ತಾರಸಿಯ ಮೇಲೆ ಆಂಟೆನಾ ಸಿಗಿಸಿ, ಏನೇನೋ ಸರ್ಕಸ್ ಮಾಡಿ ಶಾರ್ಟ್ ವೇವ್‌ನ ಹಳೆಯ ಮ್ಯೋಜಿಕ್ ಮತ್ತೆ ಮರಳಿ ಬರಬಹುದೇ ಎಂದು ನೋಡಿದೆ.ಅದೇನೋ ಒಂದಿಷ್ಟು ಶಬ್ದ ಬಂತು. ಆದರೆ ಯಾವ ಸ್ಟೇಶನ್ನೂ ಕೇಳುವಷ್ಟು ಸ್ಪಷ್ಟವಾಗಿರಲಿಲ್ಲ. ಅರ್ಥವಾಗದ ಯಾವುದೋ ಭಾಷೆಗಳಲ್ಲಿ ಮಾತು ಹಾಡು ಕೇಳುವ ಸಂಭ್ರಮವೂ ಮತ್ತೆ ಬರಲಿಲ್ಲ.ಕೊನೆಗೆ ಇಂಟರ್ನೆಟ್‌ನಲ್ಲೇ ನನ್ನ ಈ ಹುಚ್ಚಿಗೆ ಮದ್ದು ಇತ್ತು. ಇಂಟರ್ನೆಟ್ ರೇಡಿಯೊಗಳು ಇಂದು ಸದಾ ಬಿತ್ತರವಾಗುತ್ತಿರುತ್ತವೆ. `ಐ-ಟ್ಯೂನ್ಸ್~ಗೆ ಹೋಗಿ ರೇಡಿಯೊ ಅಂತ ಕ್ಲಿಕ್ ಮಾಡಿದರೆ ಬೇರೆ ಬೇರೆ ನಮೂನೆಯ ನೂರಾರು ಚಾನೆಲ್‌ಗಳ ಆಯ್ಕೆ ಬರುತ್ತವೆ. ಅದರಲ್ಲಿ ಕೆಲವಾದರೂ ನಿಮ್ಮ ಆಸಕ್ತಿ ಕೆರಳಿಸಬಹುದು. ಬ್ರಾಡ್ ಬ್ಯಾಂಡ್ ಇದ್ದರೆ ವಿದೇಶಿ ರೇಡಿಯೊ ವಾಹಿನಿಗಳನ್ನು ಕೇಳೋದು ಸುಲಭ.ಆದರೆ ಎಲ್ಲ ಚಾನೆಲ್‌ಗಳೂ ಚೆನ್ನಾಗಿರುತ್ತವೆ ಅಂತ ಹೇಳೋದಿಕ್ಕೆ ಆಗಲ್ಲ. ಸೊಗಸಾದ ಭಾರತೀಯ ಶಾಸ್ತ್ರೀಯ ಸಂಗೀತ ಪ್ರಸಾರ ಮಾಡುತ್ತೇವೆ ಎಂದು ಹೇಳಿಕೊಂಡ `ಕಾಂ ರೇಡಿಯೊ~ ಕ್ಲಿಕ್ ಮಾಡಿದಾಗ ಯಾವುದೋ ಹಳೆಯ ಸಿನಿಮಾ ಹಾಡಿನಂತಿದ್ದ ತಮಿಳು ರಚನೆ ಕೇಳಿಬಂತು.ಒಟ್ಟಿನಲ್ಲಿ, ಇಂಟರ್ನೆಟ್‌ನಲ್ಲಿ ನೀವು ತುಂಬಾ ವೈವಿಧ್ಯವಾದ ಸಂಗೀತವನ್ನು ಕೇಳಬಹುದು. ಹಿಂದೆ ಶಾರ್ಟ್ ವೇವ್ ಮಾಡುತ್ತಿದ್ದ ಪ್ರಸಾರ ಸೇವೆ ಇಂದು ಇಂಟರ್ನೆಟ್ ಮಾಡುತ್ತಿದೆ. ಶಾರ್ಟ್ ವೇವ್‌ನ ಭೂತ-ಪ್ರೇತದ ಸೌಂಡ್ ಎಫೆಕ್ಟ್ ಇಲ್ಲದೆಯೇ ಹಾಡು ಕೇಳಬಹುದು. ಆದರೆ ನಮಗೆ ಪ್ರಿಯವಾದ ಶಾರ್ಟ್ ವೇವ್ ಸ್ಟೇಶನ್ ಹಿಡಿದೇಬಿಟ್ಟೆವು ಅನ್ನುವ ರೋಮಾಂಚನ ಇಲ್ಲ, ಅಷ್ಟೇ.  ಕಾಲೇಜ್‌ನ ಪ್ರಕಟಣಾ ಕೆಲಸಕ್ರೈಸ್ಟ್ ಕಾಲೇಜ್ ಕನ್ನಡ ಸಂಘ ಮಾಡುತ್ತಿರುವ ಪ್ರಕಟಣಾ ಕೆಲಸ ಸಾಹಿತ್ಯಾಸಕ್ತರಿಗೆಲ್ಲ ಗೊತ್ತಿರುತ್ತದೆ. ಹಾಗೆಯೇ ಮತ್ತೊಂದು ಕಾಲೇಜ್ ಇಂಥದೇ ಕೆಲಸ ಮಾಡಿಕೊಂಡು ಬಂದಿದೆ. ಸಂತ ಜೋಸೆಫ್ ವಾಣಿಜ್ಯ ಕಾಲೇಜು ಬುಧವಾರ ಜ.ನಾ. ತೇಜಶ್ರೀ ಅವರ ಖಂಡ ಕಾವ್ಯ `ಅವನರಿವಲ್ಲಿ~ (ರೂ 80) ಬಿಡುಗಡೆ ಮಾಡಿತು. ಇಬ್ಬರು ಜ್ಞಾನಪೀಠ ಪುರಸ್ಕತರು ತೇಜಶ್ರೀ ಅವರ ಕಾವ್ಯದ ಬಗ್ಗೆ ಮಾತಾಡಿದರು.

 

ಕಂಬಾರರು ಅವರನ್ನು ಅಕ್ಕ ಮಹಾದೇವಿಯ ನಂತರದ ನಿಜವಾದ ಹೆಣ್ಣು ದನಿ ಎಂದು ಕರೆದರು. ಅನಂತಮೂರ್ತಿಯವರು ದೇಹವನ್ನು ಕೆಂದ್ರವಾಗಿಟ್ಟುಕೊಂಡ ಕಾವ್ಯದ ಮಹತ್ವದ ಬಗ್ಗೆ ಮಾತಾಡಿದರು.ಹಾಸನದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿರುವ ತೇಜಶ್ರೀಯವರು ಈಚೆಗೆ ಬೆನ್ನುಹುರಿಗೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ತುಂಬಾ ನೋವನ್ನು ಅನುಭವಿಸಿದವರು. ನೋವಿಗೂ ಬರೆಯುವ ಪ್ರಕ್ರಿಯೆಗೂ ಇರುವ ನಂಟನ್ನು ವೀಣೆ ನುಡಿಸುವ ಪ್ರತಿಮೆಯನ್ನು ಬಳಸಿ ಮಾತಾಡಿದರು.

 

ಸಂತ ಜೋಸೆಫ್ ವಾಣಿಜ್ಯ ಕಾಲೇಜಿನವರು ವರ್ಷಕ್ಕೊಂದರಂತೆ ಪುಸ್ತಕವನ್ನು ಪ್ರಕಟ ಮಾಡುತ್ತಾ ಬಂದಿದ್ದಾರೆ. ಬ್ರಿಗೇಡ್ ರಸ್ತೆಯ ಇಂಗ್ಲಿಷ್ ವಾತಾವರಣದ ಕಾಲೇಜಿಗೂ ಹೊರಗಿನ ಜಗತ್ತಿಗೂ ಇಂಥ ಚಟುವಟಿಕೆ ಕೊಂಡಿಯಾಗಿದೆ ಎಂದು ಕನ್ನಡ ವಿದ್ವಾಂಸರಾದ ಫಾದರ್ ಸ್ಟಾನಿ ಡಿಸೋಜ ಹೇಳಿದ ಮಾತಿಗೆ ಅಲ್ಲಿ ಸೇರಿದ್ದ ಕನ್ನಡ ರಂಗಕರ್ಮಿಗಳ ಹಾಗೂ ಸಾಹಿತಿಗಳ ಸಮ್ಮತಿ ಇತ್ತು. ಆಫರ್, ಸೇಲ್‌ಗಳ ಕಣ್ಕಟ್ಟುಯುಗಾದಿ ಸಮಯಕ್ಕೆ ಸರಿಯಾಗಿ ಸೇಲ್‌ಗಳು ಎಲ್ಲೆಲ್ಲೂ ಕಾಣುತ್ತವೆ. ಈ ಇಳುವರಿ ಆಕರ್ಷಣೆಯ ವಿಷಯದಲ್ಲಿ ಒಂದು ಅನುಭವ. ದೊಡ್ಡ ಮಳಿಗೆಯೊಂದರಲ್ಲಿ ಮೊನ್ನೆವರೆಗೂ ಒಂದು ಆಫರ್ ಇತ್ತು. ಹಳೆ ಫರ್ನಿಚರ್ ಕೊಟ್ಟರೆ ಅದಕ್ಕೆ ಒಳ್ಳೆ ಬೆಲೆ ಕೊಡುವಂತೆ ಕೂಪನ್ ಕೊಡುತ್ತಿದ್ದರು. ಕೂಪನ್‌ನ ಮೊತ್ತ ರೂ. 2000 ಇದ್ದರೆ ನೀವು ಎಂಟು ಸಾವಿರದ ವಸ್ತುವನ್ನು ಖರೀದಿಸಿ, ಶೇಕಡಾ 25ರಷ್ಟು ರಿಯಾಯಿತಿ ಪಡೆಯಬಹುದಿತ್ತು.ಹೀಗೆ ಒಬ್ಬರು ಟೇಬಲ್ ಒಂದನ್ನು ಕೊಟ್ಟು ಡೈನಿಂಗ್ ಟೇಬಲ್ ಕೊಂಡರು. ಹತ್ತು ಸಾವಿರ ಬೆಲೆ ಇದ್ದ ಅದು ಏಳುವರೆ ಸಾವಿರಕ್ಕೆ ಸಿಕ್ಕಿತು. ಆದರೆ ಅವರ ಖುಷಿ ಒಂದೇ ದಿನದಲ್ಲಿ ಮಾಯವಾಯಿತು. ಹೊಸ ಟೇಬಲ್ ಮನೆಗೆ ಬರುವುದರೊಳಗೆ ಅದೇ ಅಂಗಡಿಯ ಇನ್ನೊಂದು ಜಾಹೀರಾತು ಎಲ್ಲ ಪತ್ರಿಕೆಗಳಲ್ಲೂ ಬರತೊಡಗಿತು.

 

ಅದೇ ಡೈನಿಂಗ್ ಟೇಬಲ್ ರೂ. 6999ಗೆ ಮಾರಾಟಕ್ಕಿತ್ತು. ಹಳೆ ವಸ್ತುವನ್ನೇನೂ ಕೊಡಬೇಕಾಗಿರಲಿಲ್ಲ. ಹಳೆ ವಸ್ತುಗಳಿಗೆ ಒಳ್ಳೆಯ ಬೆಲೆ ಕೊಟ್ಟಂತೆ ಕಣ್ಕಟ್ಟು ಮಾಡಿ ಹೊಸದನ್ನು ಮಾರುವ ಮಾರ್ಕೆಟಿಂಗ್ ಜನರ ಬುದ್ಧಿವಂತಿಕೆಯನ್ನು ಸಾಮಾನ್ಯ ಗ್ರಾಹಕರು ಅರ್ಥಮಾಡಿಕೊಳ್ಳುವುದು ಬಲು ಕಷ್ಟ!ರೆಸಾರ್ಟ್ ರಾಜಕೀಯಮೊನ್ನೆ ಎಂದಿನಂತೆ ದೆಹಲಿ ನಾಯಕರನ್ನು ಹೆದರಿಸಲು ಯಡಿಯೂರಪ್ಪನವರು ತಮ್ಮ ಬೆಂಬಲಿಗ ಎಮ್ಮೆಲ್ಯೆಗಳನ್ನು ರೆಸಾರ್ಟ್ ಒಂದಕ್ಕೆ ಕರೆದುಕೊಂಡು ಹೋಗಿದ್ದರು. ಅದರ ಹೆಸರು ಗೋಲ್ಡನ್ ಪಾಮ್ಸ ಅಂತೆ. ಆ ಹೆಸರಿನ ಬದಲು `ಗ್ರೀಸಿಂಗ್ ಪಾಮ್ಸ~ ಅಂತ ಇದ್ದಿದ್ದರೆ ಇನ್ನೂ ಸೂಕ್ತವಾಗಿರುತ್ತಿತ್ತು, ಅಲ್ಲವೇ? srramakrishna@gmail.com

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.