ಶಾರ್ಟ್ ಸರ್ಕಿಟ್: ತಾಯಿ ಮಗು ಸಾವು

7

ಶಾರ್ಟ್ ಸರ್ಕಿಟ್: ತಾಯಿ ಮಗು ಸಾವು

Published:
Updated:
ಶಾರ್ಟ್ ಸರ್ಕಿಟ್: ತಾಯಿ ಮಗು ಸಾವು

ಬೆಂಗಳೂರು:  ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದಾಗಿ ಸ್ಟೌ ಸ್ಫೋಟಗೊಂಡು ಸಂಭವಿಸಿದ ಅಗ್ನಿ ದುರಂತದಲ್ಲಿ ತಾಯಿ ಹಾಗೂ ಆರು ತಿಂಗಳ ಮಗು ಸಾವನ್ನಪ್ಪಿದ ದಾರುಣ ಘಟನೆ ಜಯನಗರ ಬಳಿಯ ರಾಗಿಗುಡ್ಡದ ಸಮೀಪದ ಕೊಳೆಗೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಕೊಳೆಗೇರಿ ನಿವಾಸಿ ಬಾಬು ಅವರ ಪತ್ನಿ ನಿಶಾ  (21) ಹಾಗೂ ಮಗು ತಾಹಿರ್ ಮೃತಪಟ್ಟವರು. ಪೇಂಟರ್ ಕೆಲಸ ಮಾಡುತ್ತಿದ್ದ ಬಾಬು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ಬಾಬು ಅವರ ತಂದೆ ರಜಾಕ್ ಹಾಗೂ ತಾಯಿ ಹಫೀಜಾ ಕೂಡ ಇವರೊಂದಿಗೆ ಶೆಡ್‌ನಲ್ಲಿ ವಾಸವಾಗಿದ್ದು, ಅವರೂ ಸಹ ಕೆಲಸಕ್ಕೆ ಹೋಗಿದ್ದರು. ಹತ್ತು ಗಂಟೆ ಸುಮಾರಿಗೆ ಹಾಲು ಬಿಸಿ ಮಾಡಲು ಹೋದ ನಿಶಾ ವಿದ್ಯುತ್ ಸ್ಟೌ ಅನ್ನು ಹೊತ್ತಿಸಿದಾಗ ಸ್ಪೋಟಗೊಂಡು ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.

ಘಟನೆಯಿಂದ ದಟ್ಟ ಹೊಗೆ ಬರುತ್ತಿದ್ದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಒಂದು ವಾಹನದಲ್ಲಿ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ನಿಶಾ ಅವರು ಸಂಪೂರ್ಣ ಸುಟ್ಟು ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯ ಸಾವನ್ನಪ್ಪಿದೆ ಎಂದರು.

ಸ್ಥಳಕ್ಕೆ ಬಂದು ಪರಿಶೀಲಿಸಿದ ಜಂಟಿ ಪೊಲೀಸ್ ಆಯುಕ್ತ ಪ್ರಣವ್ ಮೊಹಂತಿ, ಡಿಸಿಪಿ ಸೋನಿಯಾ ನಾರಂಗ್ ಘಟನೆ ಸಂಬಂಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು, ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯರ ಆಕ್ರೋಶ: `ನಲವತ್ತು ವರ್ಷಗಳಿಂದ ಜೆಪಿ ನಗರ ನಾಲ್ಕನೇ ಹಂತದಲ್ಲಿರುವ ಕೊಳಗೇರಿಯಲ್ಲಿ ವಾಸವಾಗಿದ್ದ ನಮಗೆ ಅಪಾರ್ಟ್‌ಮೆಂಟ್ ನಿರ್ಮಿಸಿ ವಸತಿ ಸೌಲಭ್ಯ ಕಲ್ಪಿಸುವುದಾಗಿ ಸರ್ಕಾರ ಅಲ್ಲಿಂದ ನಮ್ಮನ್ನು ತೆರವುಗೊಳಿಸಿ, ಈ ಕೊಳೆಗೇರಿಯಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟಿತ್ತು. ಅಪಾರ್ಟ್‌ಮೆಂಟ್ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಮನೆಗಳು ನಿರ್ಮಾಣವಾಗಿದ್ದರೂ, ಒಂದಿಲ್ಲೊಂದು ನೆಪ ಹೇಳಿ ಇದೇ ಶೆಡ್‌ಗಳಲ್ಲಿ ವಾಸಿಸುವಂತೆ ಮಾಡಿದ್ದಾರೆ. ಸರ್ಕಾರ ನೀಡಿದ್ದ ಭರವಸೆಯಂತೆ ಜನವರಿ ತಿಂಗಳಲ್ಲಿ ಮನೆಗಳನ್ನು ನೀಡಿದ್ದರೆ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ನಾವು ಯಾವುದೇ ಶುಲ್ಕವನ್ನು ಸಂಗ್ರಹಿಸುತ್ತಿಲ್ಲ, ಕೊಳಗೇರಿ ನಿವಾಸಿಗಳಿಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರ ಹೇಳಿಕೆಗೆ ಆಕ್ರೋಶಗೊಂಡ ಸ್ಥಳೀಯರು `ಈ ಕೊಳೆಗೇರಿಯಲ್ಲಿ ಸುಮಾರು 300 ಕುಟುಂಬಗಳು ವಾಸವಾಗಿದ್ದು, ಪ್ರತಿ ಕುಟುಂಬದಿಂದ ತಿಂಗಳಿಗೆ ನೂರು ರೂಪಾಯಿಯಂತೆ, 30 ಸಾವಿರ ರೂಪಾಯಿಯನ್ನು ವಿದ್ಯುತ್ ಶುಲ್ಕವೆಂದು ಪಡೆಯುತ್ತಿದ್ದಾರೆ. ಇದಕ್ಕೆ ಯಾವುದೇ ರಶೀದಿ ನೀಡುವುದಿಲ್ಲ. ಇಲ್ಲಿನ ಒಂದು ಮನೆಗೂ ಮೀಟರ್ ಅನ್ನು ಅಳವಡಿಸಿಲ್ಲ~ ಎಂದು ಅವರು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry