ಶಾರ್ಟ್ ಸರ್ಕಿಟ್; ಲಕ್ಷಾಂತರ ಮೌಲ್ಯದ ವಸ್ತು ಭಸ್ಮ

ಶುಕ್ರವಾರ, ಮೇ 24, 2019
22 °C

ಶಾರ್ಟ್ ಸರ್ಕಿಟ್; ಲಕ್ಷಾಂತರ ಮೌಲ್ಯದ ವಸ್ತು ಭಸ್ಮ

Published:
Updated:

ಬೆಂಗಳೂರು: ಕೋರಮಂಗಲದಲ್ಲಿರುವ `ರಿಲಯನ್ಸ್ ಫುಟ್‌ಪ್ರಿಂಟ್~ ಅಂಗಡಿಯ ದಾಸ್ತಾನು ಮಳಿಗೆಯಲ್ಲಿ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋದ ಘಟನೆ ಗುರುವಾರ ನಡೆದಿದೆ.ಅಂಗಡಿಯಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಹೊಗೆ ಕಾಣಿಸಿಕೊಂಡ ತಕ್ಷಣ ಅವರೆಲ್ಲ ಹೊರಗೆ ಓಡಿ ಬಂದಿದ್ದರಿಂದ ಪ್ರಾಣ ಹಾನಿ ಸಂಭವಿಸಿಲ್ಲ. ಭಾರಿ ಪ್ರಮಾಣದಲ್ಲಿ ಹೊಗೆ ಆವರಿಸಿದ್ದರಿಂದ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಕೋರಮಂಗಲದ ಐದನೇ ಬ್ಲಾಕ್‌ನ ಎಂಬತ್ತು ಅಡಿ ರಸ್ತೆಯಲ್ಲಿರುವ ನಾಲ್ಕು ಮಹಡಿ ಕಟ್ಟಡದ ಮೊದಲ ಮಹಡಿಯಲ್ಲಿ ಈ ಅಂಗಡಿ ಇದೆ. ಪಾದರಕ್ಷೆಗಳು, ಶಾಲಾ ಬ್ಯಾಗ್ ಮತ್ತಿತರ ವಸ್ತುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ.

ಅಂಗಡಿಯ ಒಂದು ಭಾಗದಲ್ಲಿರುವ ದಾಸ್ತಾನು ಮಳಿಗೆಯಲ್ಲಿ  ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಹೊಗೆ ಕಾಣಿಸಿಕೊಂಡಿತು. ಇದನ್ನು ಗಮನಿಸಿದ ಸಿಬ್ಬಂದಿ ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು.ಹದಿನೈದು ವಾಹನಗಳಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿ ಸತತ ಐದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಲೆದರ್ ಪಾದರಕ್ಷೆಗಳು, ಪ್ಲೈವುಡ್ ಬಾಕ್ಸ್‌ಗಳು ಇದ್ದಿದ್ದರಿಂದ ದಟ್ಟ ಹೊಗೆ ಆವರಿಸಿ ಕಾರ್ಯಾಚರಣೆಗೆ ತೊಡಗಾಗಿತ್ತು. ದೊಡ್ಡ ಗಾತ್ರದ ಸುತ್ತಿಗೆಗಳನ್ನು ಬಳಸಿ ಅಂಗಡಿಗೆ ಅಳವಡಿಸಿದ್ದ ಬೃಹತ್ ಗಾತ್ರದ ಗಾಜುಗಳನ್ನು ಒಡೆದರು.ಇದೇ ಕಟ್ಟಡದ ಎರಡು ಮತ್ತು ಮೂರನೇ ಮಹಡಿಯಲ್ಲಿ ಮಸಾಜ್ ಪಾರ್ಲರ್ ಇದೆ. ಆದರೆ ಬೆಂಕಿ ವ್ಯಾಪಿಸುವ ಮೊದಲೇ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

`ಶಾರ್ಟ್ ಸರ್ಕಿಟ್‌ನಿಂದ ಈ ಅನಾಹುತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ತನಿಖೆಯ ನಂತರ ಘಟನೆಗೆ ನಿಖರ ಕಾರಣ ಗೊತ್ತಾಗಲಿದೆ~ ಎಂದು ಅಗ್ನಿಶಾಮಕ ಇಲಾಖೆಯ ಡಿಜಿಪಿ ಎ.ಆರ್.ಇನ್ಫೆಂಟ್ ತಿಳಿಸಿದರು.ಈ ಮಳಿಗೆಯಲ್ಲಿ ಅಗ್ನಿ ಅನಾಹುತ ತಡೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಗ್ನಿ ಶಾಮಕ ಸಲಕರಣೆಗಳನ್ನು ಅಳವಡಿಸಿರಲಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕೋರಮಂಗಲ ಎಂಬತ್ತು ಅಡಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಐದು ಅಗ್ನಿಶಾಮಕ ವಾಹನಗಳು ರಸ್ತೆಯಲ್ಲಿ ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿ ಆಯಿತು. ಸಂಚಾರ ವಿಭಾಗದ ಪೊಲೀಸರು ಮೂರು ಗಂಟೆಯ ನಂತರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಕೆಲ ಮಾರ್ಗಗಳ ಬದಲಾವಣೆಯನ್ನೂ ಮಾಡಲಾಗಿತ್ತು.ಇನ್ನೊಂದು ಘಟನೆ: ಜೆ.ಪಿ. ನಗರದ ಆರನೇ ಹಂತದಲ್ಲಿರುವ ಅನ್ವರ್ ಬೆಡ್ಡಿಂಗ್ ಹೌಸ್ ಹೆಸರಿನ ಹಾಸಿಗೆ ಅಂಗಡಿಯಲ್ಲಿ ಗುರುವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿತ್ತು. ಎರಡು ವಾಹನಗಳಲ್ಲಿ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಮಧ್ಯಾಹ್ನ 3.30ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿತ್ತು.ಘಟನೆಗೆ ಕಾರಣ ಗೊತ್ತಾಗಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಚಿಕ್ಕ ಅಂಗಡಿ ಆಗಿದ್ದರಿಂದ ಸಾವಿರಾರು ರೂಪಾಯಿ ಬೆಲೆ ಬಾಳುವ ವಸ್ತುಗಳು ಸುಟ್ಟು ಹೋಗಿವೆ ಎಂದು ಅವರು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry