ಶಾಲಾ, ಕಾಲೇಜುಗಳಲ್ಲಿ ಖಾದಿ!

7

ಶಾಲಾ, ಕಾಲೇಜುಗಳಲ್ಲಿ ಖಾದಿ!

Published:
Updated:

‘ಖಾದಿಯ ಒಂದು ಯುಗ ಮುಗಿದಿದೆ. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಗಾಂಧೀಜಿ ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ನೀಡಲು, ಸ್ವದೇಶಿ ಉತ್ಪನ್ನಗಳ ಬಗ್ಗೆ ಜನರ ಗಮನ ಸೆಳೆಯಲು ಖಾದಿಯನ್ನು ಬಳಸಿಕೊಂಡಿದ್ದರು. ಗ್ರಾಮೀಣ ಬಡಜನರ ಆರ್ಥಿಕ ವಿಕಾಸಕ್ಕೆ ಖಾದಿಯ ಕೊಡುಗೆ ಅಪಾರ.ಗಾಂಧೀಜಿಯವರಿಗೂ ಖಾದಿಗೂ ಅವಿನಾಭಾವ ಸಂಬಂಧ. ಖಾದಿ ಸರಳ, ಪರಿಶುಭ್ರತೆ, ದೇಶ ಭಕ್ತಿ ಮತ್ತು ಪರಿಶ್ರಮದ ಸಂಕೇತ. ಖಾದಿ ರಾಜಕಾರಣಿಗಳ ಉಡುಪು ಎನ್ನುವಂತಾದ ನಂತರ ತನ್ನ ಖದರ್ ಕಳೆದುಕೊಂಡಿತು. ಈಗ ಖಾದಿ ಎಂದರೆ ಅನೇಕರಿಗೆ ಅಲರ್ಜಿ. ಆಧುನಿಕತೆಯ ಬೆನ್ನು ಹತ್ತಿದವರು ಖಾದಿಯತ್ತ ತಿರುಗಿಯೂ ನೋಡುವುದಿಲ್ಲ.ಇಂತಹ ಸಂದರ್ಭದಲ್ಲಿ ‘ಬೆಂಗಳೂರು ಎಜುಕೇಷನ್ ಸೊಸೈಟಿ’ ಹಾಗೂ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳು ತಮ್ಮ  ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಖಾದಿ ಉಡುಪನ್ನು ಸಮವಸ್ತ್ರವಾಗಿ ಮಾಡುವ ಮೂಲಕ ಖಾದಿಗೆ ಹೊಸ ಚೈತನ್ಯ ನೀಡಿವೆ.ಬಡವರು ಮತ್ತು ಕೆಳ ಮಧ್ಯಮ ವರ್ಗದವರೂ ಈಗ ಜೀನ್ಸ್ ಮತ್ತಿತರ ಆಧುನಿಕ ವಸ್ತ್ರಗಳತ್ತ ಆಕರ್ಷಿತರಾಗುತ್ತಿದ್ದಾರೆ. ಕಾಲ ಬದಲಾದಂತೆ ಖಾದಿಗೆ ಕಾಯಕಲ್ಪ ನೀಡುವ ಪ್ರಯತ್ನವೂ ನಡೆಯುತ್ತಲೇ ಇದೆ. ಆಧುನಿಕತೆಯನ್ನು ಇಷ್ಟಪಡುವ ಹಾಗೂ ಫ್ಯಾಷನ್ ಪ್ರಿಯರಿಗಾಗಿ ಖಾದಿ ಬದಲಾಗುತ್ತಿದೆ. ಈ ಕಾಲದ ಯುವ ಜನರಿಗೂ ಇಷ್ಟವಾಗುವ ಖಾದಿ ಬಟ್ಟೆ ಹಾಗೂ ಸಿದ್ಧ ಉಡುಪುಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ. ಸಂಗೀತ, ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಖಾದಿ ಉಡುಪು ತೊಟ್ಟವರು ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.ಬೆಂಗಳೂರಿನ ವಿಧಾಯಕ ಕಾಯಕರ್ತ ಹೊ.ಶ್ರೀನಿವಾಸಯ್ಯ ಅವರ ನೇತೃತ್ವದ ‘ಬೆಂಗಳೂರು ಎಜುಕೇಷನ್ ಸೊಸೈಟಿ ಹಾಗೂ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಖಾದಿ ಉಡುಪು ಧರಿಸುವ ದೀಕ್ಷೆ ತೊಟ್ಟಿದ್ದಾರೆ. ಒಂದನೇ ತರಗತಿಯ ಪುಟ್ಟ ಮಕ್ಕಳಿಂದ ಕಾನೂನು ಪದವಿ ವಿದ್ಯಾರ್ಥಿಗಳವರೆಗೂ ಇಲ್ಲಿ ಖಾದಿ ಸಮವಸ್ತ್ರ. ವಿದ್ಯಾರ್ಥಿಗಳು ಮಾತ್ರವಲ್ಲದೆ ಶಿಕ್ಷಕರು, ಉಪನ್ಯಾಸಕರು ಹಾಗೂ ಇತರ ಸಿಬ್ಬಂದಿ ಖಾದಿ ತೊಡುತ್ತಾರೆ. ಇಡೀ ಕ್ಯಾಂಪಸ್ ಈಗ ಖಾದಿಮಯವಾಗಿದೆ. ಸಂಸ್ಥೆಯ ಗೌರವ ಕಾರ್ಯದರ್ಶಿ  ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ವೂಡೇ ಪಿ.ಕೃಷ್ಣ ಈ ಬದಲಾವಣೆ ಹಿಂದಿನ ರೂವಾರಿ. ಅವರಿಗೆ  ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಜೆ.ಎಸ್.ಪಾಟೀಲ ಮಾರ್ಗದರ್ಶಕರು.ಬೆಂಗಳೂರು ಎಜುಕೇಷನ್ ಸೊಸೈಟಿಯ ಶಾಲೆಯ ನಾನ್ನೂರು ಮಕ್ಕಳು ಈಗ ಖಾದಿ ಸಮವಸ್ತ್ರ ಧರಿಸಿ ಶಾಲೆಗೆ ಬರುತ್ತಾರೆ. ಶಾಲೆಯ ಮಕ್ಕಳಿಗೆ ಹೊ. ಶ್ರೀನಿವಾಸಯ್ಯ ಅವರು ವಾರಕ್ಕೊಮ್ಮೆ ಖಾದಿ ಮಹತ್ವ ಮತ್ತು ಗಾಂಧೀಜಿ ಅವರ ಬದುಕಿನ ಬಗ್ಗೆ ಉಪನ್ಯಾಸ  ನೀಡುತ್ತಾರೆ. ಶಾಲೆಯ ಮಕ್ಕಳ ಸಮವಸ್ತ್ರಕ್ಕೆ ಬೇಕಾದ ಖಾದಿ ಬಟ್ಟೆಯನ್ನು ಪೂರೈಸುತ್ತಿರುವುದು  ಕರ್ನಾಟಕ ಖಾದಿ  ಗ್ರಾಮೋದ್ಯೋಗ ಸಂಯುಕ್ತ ಸಂಘ.ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಾದಿ ಸಮವಸ್ತ್ರವನ್ನು ವಾರಕ್ಕೆರಡು ಬಾರಿ ತೊಡುತ್ತಾರೆ. ಒಂದನೇ ತರಗತಿಯಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಬಿಳಿ ಶರ್ಟ್ ಹಾಗೂ ಚೆಡ್ಡಿ. ವಿದ್ಯಾರ್ಥಿನಿಯರಿಗೆ ಶರ್ಟ್ ಹಾಗೂ ಸ್ಕರ್ಟ್ ಸಮವಸ್ತ್ರವಾಗಿದೆ. ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಖಾದಿ ಶರ್ಟ್ ಹಾಗೂ ಪ್ಯಾಂಟ್, ವಿದ್ಯಾರ್ಥಿನಿಯರಿಗೆ ಚೂಡಿದಾರ್ ಸಮವಸ್ತ್ರ. ಸಂಸ್ಥೆಯ ಕಾನೂನು ಕಾಲೇಜು ವಿದ್ಯಾರ್ಥಿಗಳೂ ಖಾದಿ ತೊಡುತ್ತಿದ್ದಾರೆ.ಬಿಳಿ ಖಾದಿ ತೊಡುವುದು ನಿಯಮ ಪಾಲನೆಗಾಗಿ ಅಲ್ಲ. ಅದು ಗೌರವದ ಸಂಕೇತ. ಖಾದಿ ತೊಡುವುದು ಅತ್ಯಂತ ಹಿತವಾದ ಅನುಭವ. ಖಾದಿಗೂ ದೇಶದ ಸ್ವಾತಂತ್ರ್ಯ ಚಳವಳಿಗೂ ಇರುವ ಸಂಬಂಧವನ್ನು ನೆನಪು ಮಾಡಿಕೊಂಡರೆ ಖಾದಿ ತೊಡುವುದಕ್ಕೆ ಹೆಮ್ಮೆ ಅನ್ನಿಸುತ್ತದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸ್ವತಃ ಶಿಕ್ಷಣ ಸಂಸ್ಥೆಯೇ ಉಚಿತವಾಗಿ ಖಾದಿ ಸಮವಸ್ತ್ರ ವಿತರಿಸುತ್ತಿದೆ.    ಇದರಿಂದ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘಕ್ಕೆ ಮತ್ತು ಖಾದಿಯನ್ನೇ ಅವಲಂಬಿಸಿರುವ ಹಲವಾರು  ಶ್ರಮಜೀವಿಗಳಿಗೆ ಅನುಕೂಲವಾಗಿದೆ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ಎಸ್.ವಿ. ಸೋಮನಹಟ್ಟಿ.ಕಾನೂನು ವಿಶ್ವವಿದ್ಯಾಲಯದ ಕುಲಪತಿ ಎಸ್.ಎ. ಪಾಟೀಲರ ಸೂಚನೆ ಮೇರೆಗೆ ಮಂಡ್ಯ, ಚಿಕ್ಕಮಗಳೂರು, ಬೆಂಗಳೂರಿನ ಕೆಎಲ್‌ಇ ಸೊಸೈಟಿಯ ಕಾನೂನು ಕಾಲೇಜುಗಳು ಖಾದಿಯನ್ನು ಸಮವಸ್ತ್ರವನ್ನಾಗಿ ಅಳವಡಿಸಿಕೊಳ್ಳುವ ಉತ್ಸಾಹ ತೋರಿವೆ. ಈ ಬೆಳವಣಿಗೆ ಖಾದಿ ಶೈಕ್ಷಣಿಕ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry