ಶಾಲಾ ಕಾಲೇಜುಗಳ ಅನುದಾನಕ್ಕೆ ಸಿ.ಎಂ ಸಮ್ಮತಿ

7

ಶಾಲಾ ಕಾಲೇಜುಗಳ ಅನುದಾನಕ್ಕೆ ಸಿ.ಎಂ ಸಮ್ಮತಿ

Published:
Updated:

ಬೆಂಗಳೂರು: ರಾಜ್ಯದಲ್ಲಿ 1991ರಿಂದ 95ರ ಅವಧಿಯಲ್ಲಿ ಆರಂಭವಾಗಿರುವ 1950 ಖಾಸಗಿ ಶಾಲಾ-ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸಮ್ಮತಿಸಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ತಿಳಿಸಿದರು.1987ರಿಂದ 95ರವರೆಗೆ ಆರಂಭವಾಗಿರುವ ಶಾಲಾ-ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿತ್ತು. ಆದರೆ 2009ರಲ್ಲಿ 14 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾದ ಪರಿಣಾಮ ಆರ್ಥಿಕ ಇಲಾಖೆ ಮಿತವ್ಯಯ ಜಾರಿ ಮಾಡಿತು. ಇದರಿಂದಾಗಿ 1991ರ ನಂತರ ಆರಂಭವಾಗಿರುವ ಶಾಲಾ-ಕಾಲೇಜುಗಳಿಗೆ ಅನುದಾನ ನೀಡಲು ಸಾಧ್ಯವಾಗಿರಲಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.91ಕ್ಕೂ ಮುನ್ನ ಆರಂಭವಾಗಿರುವ ಸುಮಾರು 1000 ಶಿಕ್ಷಣ ಸಂಸ್ಥೆಗಳನ್ನು ಈಗಾಗಲೇ ಅನುದಾನಕ್ಕೆ ಒಳಪಡಿಸಲಾಗಿದ್ದು, ಆರು ಸಾವಿರ ಶಿಕ್ಷಕರಿಗೆ ಅನುಕೂಲವಾಗಿದೆ. 250 ಬೋಧಕೇತರ ಸಿಬ್ಬಂದಿಗೂ ಇದರ ಪ್ರಯೋಜನ ದೊರೆತಿದೆ ಎಂದು ಅವರು ತಿಳಿಸಿದರು.ಬಜೆಟ್‌ನಲ್ಲಿ ಪ್ರಕಟಿಸಿರುವಂತೆ 94-95ರ ಶೈಕ್ಷಣಿಕ ಸಾಲಿನವರೆಗೆ ಆರಂಭವಾಗಿರುವ ಶಾಲಾ-ಕಾಲೇಜುಗಳಿಗೂ ಅನುದಾನ ನೀಡಲು ನಿರ್ಧರಿಸಲಾಗಿದ್ದು, ಹಣಕಾಸು ಇಲಾಖೆಗೆ ಪ್ರಸ್ತಾವ ಕಳುಹಿಸಿ ಅನುದಾನಕ್ಕೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಬೊಕ್ಕಸಕ್ಕೆ ವಾರ್ಷಿಕ 200 ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದು ಹೇಳಿದರು.ಪ್ರತಿಯೊಂದು ಸಂಸ್ಥೆಯಲ್ಲಿ 6-7 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಅವರು ಇದರ ಪ್ರಯೋಜನ ಪಡೆಯಲಿದ್ದಾರೆ. ಇವರೆಲ್ಲ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಮೀಸಲಾತಿ ಪಾಲನೆ ಆಗದಿದ್ದರೂ ಎಲ್ಲರನ್ನು ಅನುದಾನಕ್ಕೆ ಒಳಪಡಿಸಲಾಗುವುದು. ಆದರೆ ಮುಂದೆ ತೆರವಾಗುವ ಹುದ್ದೆಗಳನ್ನು ಭರ್ತಿ ಮಾಡುವಾಗ ಮೀಸಲಾತಿಯನ್ನು ಪಾಲಿಸಬೇಕಾಗುತ್ತದೆ ಎಂದರು.ಬೋಧಕರ ಹುದ್ದೆಗಳನ್ನು ಮಾತ್ರ ಸದ್ಯ ಅನುದಾನಕ್ಕೆ ಒಳಪಡಿಸಲಾಗುತ್ತಿದ್ದು, ಮುಂದೆ `ಡಿ~ ಗ್ರೂಪ್ ಹುದ್ದೆಗಳನ್ನು ಒಳಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry