ಶಾಲಾ ಕೈತೋಟಕ್ಕೆ ಕೈ ಜೋಡಿಸಿರುವ ಶಿಕ್ಷಕ!

7

ಶಾಲಾ ಕೈತೋಟಕ್ಕೆ ಕೈ ಜೋಡಿಸಿರುವ ಶಿಕ್ಷಕ!

Published:
Updated:

ಮೈಸೂರು: ಈರುಳ್ಳಿ, ಬೆಳ್ಳುಳ್ಳಿ ಹಾಗೂ ತರಕಾರಿಗಳ ದರ ಏರಿಕೆಯಿಂದ ಗ್ರಾಹಕರು ಸೇರಿದಂತೆ ಪ್ರಾಥಮಿಕ ಶಾಲೆಗಳ ಮಧ್ಯಾಹ್ನ ಬಿಸಿಯೂಟಕ್ಕೂ ‘ಬಿಸಿ’ ಮುಟ್ಟಿದೆ. ಈ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲೇ ತರಕಾರಿ ಸೊಪ್ಪು ಬೆಳೆಯುವ ಮೂಲಕ ‘ಬೆಲೆ ನಿಯಂತ್ರಣ’ಕ್ಕೆ ಇಲ್ಲಿನ ಶಿಕ್ಷಕರೊಬ್ಬರು ಮುಂದಾಗಿದ್ದಾರೆ.ಮೈಸೂರು ತಾಲ್ಲೂಕಿನ ಇಲವಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿದ್ದೇಗೌಡ ಅವರು ಶಾಲಾ ಆವರಣದಲ್ಲೇ ಶಾಲೆಗೆ ಬೇಕಾಗುವಷ್ಟು ತರಕಾರಿ ಸೊಪ್ಪು ಬೆಳೆ–ಯುತ್ತಿದ್ದಾರೆ. ಆಕಸ್ಮಿಕ ಘಟನೆಯೊಂದರಲ್ಲಿ ತಮ್ಮ ಬಲಗೈಯನ್ನು ಕಳೆದುಕೊಂಡಿರುವ ಈ ಶಿಕ್ಷಕ, ಮಕ್ಕಳ ‘ಕೈ’ಗೆ ಕೈಜೋಡಿಸುವ ಮೂಲಕ ತಮ್ಮ ನೋವನ್ನು ಮರೆಯಲು ಮುಂದಾಗಿದ್ದಾರೆ.ಈ ಶಾಲೆಯಲ್ಲಿ ಒಟ್ಟು 327 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಸರ್ಕಾರ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ 1ರಿಂದ 5ನೇ ತರಗತಿಯ ಒಬ್ಬ ವಿದ್ಯಾರ್ಥಿಗೆ 60 ಪೈಸೆ ಹಾಗೂ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ 90 ಪೈಸೆ ಹಣವನ್ನು ತರಕಾರಿ, ಸಾಂಬಾರು ಪುಡಿ ಖರೀದಿಸಲು ನೀಡುತ್ತಿದೆ. ಆದರೆ, ಈರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ತರಕಾರಿಗಳ ಬೆಲೆ ಈಚೆಗೆ ವಿಪರೀತ ಹೆಚ್ಚಾಗಿರುವುದರಿಂದ ತರಕಾರಿ ಖರೀದಿಸಲು ಕಷ್ಟವಾಗುತ್ತಿದೆ ಎಂಬುದು ಬಹುತೇಕ ಶಿಕ್ಷಕರ ಅಳಲು.ಈ ಹಿನ್ನೆಲೆಯಲ್ಲಿ ಯೋಚಿಸಿದ ಸಿದ್ದೇಗೌಡರು, ಏನಾದರೊಂದು ಪರಿಹಾರ ಕಂಡು ಹಿಡಿಯಬೇಕು ಎಂದಾಗ ನೆನಪಿಗೆ ಬಂದದ್ದೇ ಶಾಲಾ ಕೈತೋಟ. ತಕ್ಷಣ ಕಾರ್ಯಪ್ರವೃತ್ತರಾದ ಅವರು ಐದು ಲಾರಿ ಕೆಂಪು ಮಣ್ಣು ತರಿಸಿ, ಶಾಲಾ ಆವರಣದಲ್ಲೇ 30*40 ವಿಸ್ತೀರ್ಣದಲ್ಲಿ ವಿದ್ಯಾರ್ಥಿಗಳ ಸಹಾಯದೊಂದಿಗೆ ‘ಕೈ’ತೋಟ ಸಿದ್ಧಪಡಿಸಿದರು. ಶಾಲೆಯಲ್ಲಿ ಈ ಮುಂಚೆಯೇ ಬೋರ್‌ವೆಲ್ ವ್ಯವಸ್ಥೆ ಇದ್ದುದರಿಂದ ನೀರಿನ ಸಮಸ್ಯೆ ಇಲ್ಲದೆ, ಇದೀಗ ವರ್ಷದ ಎಲ್ಲ ತಿಂಗಳಲ್ಲೂ ತಾಜಾ ತರಕಾರಿ ಸೊಪ್ಪನ್ನು ಬೆಳೆಯುತ್ತಿದ್ದಾರೆ.ಈ ಕುರಿತು ಮಾತನಾಡಿದ ಮುಖ್ಯ ಶಿಕ್ಷಕ ಸಿದ್ದೇಗೌಡ, ‘ಸಬ್ಬಸಿಗೆ, ಮೆಂತೆ, ಬಸಳೆ ಸೊಪ್ಪು, ಮೂಲಂಗಿ ಸೇರಿದಂತೆ ಹಲವಾರು ಸೊಪ್ಪುಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ.ಪ್ರತಿ ನಿತ್ಯ ಕನಿಷ್ಠವೆಂದರೂ ಮಾರುಕಟ್ಟೆ ದರದಲ್ಲಿ ರೂ.60 ಬೆಲೆಯ ಸೊಪ್ಪನ್ನು ಶಾಲಾ ಕೈತೋಟದಿಂದಲೇ ಪಡೆಯುತ್ತಿದ್ದೇವೆ. ಬೆಲೆ ಏರಿಕೆಯಿಂದ ಹೊರಬರಲು ಹಾಗೂ ಶಾಲಾ ಮಕ್ಕಳಿಗೆ ವಿಟಮಿನ್‌ಯುಕ್ತ ಸೊಪ್ಪನ್ನು ಅಡುಗೆಯಲ್ಲಿ ಬಳಸಬೇಕು ಎನ್ನುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ. ಕಳೆದ ಜೂನ್‌ನಿಂದ ಇಲ್ಲಿಯವರೆಗೆ ಕನಿಷ್ಠ ರೂ.10 ಸಾವಿರ ಬೆಲೆಯ ಸೊಪ್ಪನ್ನು ಬಿಸಿಯೂಟಕ್ಕೆ ಬಳಸಿಕೊಂಡಿದ್ದೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.‘ಶಾಲಾ ಕೈತೋಟದಲ್ಲಿ ಬಿಡುವಿನ ವೇಳೆ 6 ಮತ್ತು 7ನೇ ತರಗತಿ ಮಕ್ಕಳೊಂದಿಗೆ ಕೆಲಸ ಮಾಡುತ್ತೇನೆ. ಇದರಿಂದ ಮಕ್ಕಳಿಗೆ ಚಟುವಟಿಕೆಯ ಜೊತೆಗೆ ತಮ್ಮ ಮನೆ, ಜಮೀನುಗಳಲ್ಲಿ ತಾವೂ ಇಂತಹ ಕೈತೋಟಗಳನ್ನು ಮಾಡಬೇಕು ಎನ್ನುವ ಉತ್ಸಾಹ ಮೂಡುತ್ತದೆ. ಜೊತೆಗೆ ಪ್ರತಿನಿತ್ಯ ಮಧ್ಯಾಹ್ನ ಊಟ ಮಾಡುತ್ತಿರುವಾಗ ತಾವು ಬೆಳೆದಿರುವ ಸೊಪ್ಪನ್ನೇ ಅಡುಗೆಗೆ ಬಳಸಾಗಿದೆ ಎಂಬ ಅಭಿಮಾನವೂ ಮಕ್ಕಳಲ್ಲಿ ಮೂಡುತ್ತದೆ’ ಎಂದು   ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry