ಬುಧವಾರ, ಮೇ 18, 2022
26 °C

ಶಾಲಾ ಪಠ್ಯದಲ್ಲಿ ಕೃಷಿ ವಿಷಯ ಸೇರ್ಪಡೆಗೆ ಸಲಹೆ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದ ವಿದ್ಯಾವಂತ ಯುವ ಸಮುದಾಯ ಕೃಷಿಗೆ ಬೆನ್ನು ತೋರಿಸುತ್ತಿರುವ ವೇಳೆ ಪ್ರೌಢಶಾಲೆ ಹಂತದಲ್ಲಿಯೇ ಕೃಷಿಯ ಮಹತ್ವ ಕುರಿತು ಪಾಠಗಳನ್ನು ಸೇರಿಸಿ, ಮಕ್ಕಳ ಮನಸ್ಸನ್ನು ವೈಜ್ಞಾನಿಕ ಕೃಷಿಯತ್ತ ಆಕರ್ಷಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.

ತಾಲ್ಲೂಕಿನ ಹೊಗಳಗೆರೆ ತೋಟಗಾರಿಕಾ ಸಂಶೋಧನೆ ಮತ್ತು ವಿಸ್ತರಣೆ ಕೇಂದ್ರದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತಾಲ್ಲೂಕು ತೋಟಗಾರಿಕೆ ಇಲಾಖೆ ವತಿಯಿಂದ `ಭಾಗ್ಯ' ನುಗ್ಗೆ ತಳಿ ಕ್ಷೇತ್ರೋತ್ಸವ ಹಾಗೂ ಸಮಗ್ರ ಕೃಷಿ ಪದ್ಧತಿ ಕುರಿತು ಈಚೆಗೆ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಅಂತರ್ಜಲ ಕೊರತೆ ಅನುಭವಿಸುತ್ತಿರುವ ಜಿಲ್ಲೆಯ ರೈತರು ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಸ್ಥಳೀಯ ತೋಟಗಾರಿಕಾ ಕ್ಷೇತ್ರದಲ್ಲಿ ಮೀನು ಸಾಕಾಣಿಕೆ ಆರಂಭಿಸಬಹುದು. ಮಾವಿನ ಕಾಯಿ ಬೆಲೆ ಕುಸಿತ ಉಂಟಾದಾಗ ದಾಸ್ತಾನು ಮಾಡಲು ಅಗತ್ಯವಾದ ಶೀತಲೀಕರಣ ಕೆಂದ್ರ ಸ್ಥಾಪಿಸಬೇಕು. ಉದ್ಯಾನ ಮತ್ತು ಈಜು ಕೊಳ ನಿರ್ಮಿಸಬೇಕು ಎಂದು ಹೇಳಿದರು.

ಕೃಷಿ ತಜ್ಞರಾದ ಡಾ.ಎಚ್.ಕೆ.ಶ್ರೀಕಂಠಪ್ಪ, ಡಾ.ಟಿ.ವಿ.ಮುನಿಯಪ್ಪ, ಡಾ.ಜೆ.ವೆಂಕಟೇಶ್, ಡಾ.ಎ.ಬಿ.ಪಾಟೀಲ್, ಡಾ.ಬಿ.ರಾಜು ತಾಲ್ಲೂಕು ಕೃಷಿಕ್ ಸಮಾಜದ ಅಧ್ಯಕ್ಷ ಸುರೇಶ್ ಮತ್ತಿತರರು ತೋಟಗಾರಿಕೆ ಕೃಷಿ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಮಾವು ಮತ್ತು ನುಗ್ಗೆ ಬೆಳೆಯ ತಂತ್ರಜ್ಞಾನ ಕೈಪಿಡಿ ಬಿಡುಗಡೆ ಮಾಡಲಾಯಿತು. ಮುಖಂಡರಾದ ದಿಂಬಾಲ ಅಶೋಕ್, ರಾಜೇಂದ್ರ ಪ್ರಸಾದ್, ಮುನಿರಾಜು, ಜಿ.ರಾಜಣ್ಣ, ನಾರಾಯಣಸ್ವಾಮಿ, ಗಂಗಾಧರ್, ಗೋಪಾಲ್, ಕುಮಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ತಾಲ್ಲೂಕು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎಂ.ಮಲ್ಲಿಕಾರ್ಜುನ ಬಾಬು ಸ್ವಾಗತಿಸಿದರು. ಡಾ.ಹೊನ್ನಬೈರಯ್ಯ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.